” ಸಂಕಲ್ಪ ಶಕ್ತಿ “

ಈ ಸಕಲಚರಾಚರ ಸೃಷ್ಟಿಯಲ್ಲಿ ಮನುಷ್ಯರಾದ ನಾವು ಮಾತ್ರವೇ ವಿಕಾಸದ ಹಾದಿಯಲ್ಲಿ ಇತರ ಪ್ರಾಣಿಗಳಿಗಿಂತ ಉನ್ನತವಾದ ಸ್ಥಾನದಲ್ಲಿದ್ದೇವೆ. ಅದಕ್ಕೆ ಕಾರಣ ನಮಗಿರುವ “ಆಲೋಚನಾ ಶಕ್ತಿ”.

ಸೃಷ್ಟಿಯ ಆಕರ್ಷಣಾ ಸಿದ್ಧಾಂತವನ್ನು ಅನುಸರಿಸಿ .. ನಮ್ಮ ಜೀವನದಲ್ಲಿ ಸಂಭವಿಸುವ ಪ್ರತಿಯೊಂದು ಘಟನೆ ಸಹ ತನ್ನದೇ ಆದ ಒಂದು ಚೈತನ್ಯಶಕ್ತಿ ತರಂಗವನ್ನು ಉಂಟುಮಾಡುತ್ತದೆ. ಪ್ರತಿದಿನ ನಾವು ಹೊಂದುತ್ತಿರುವ ಅನುಭವ ಜ್ಞಾನದ ಆಧಾರವಾಗಿ ನಾವು ಮಾಡುವ ಆಲೋಚನೆಗಳನ್ನು ಅನುಸರಿಸಿ ಅದು ವಿವಿಧ ಹಂತಗಳಾಗಿ ರೂಪಾಂತರ ಹೊಂದುತ್ತಾ ಇರುತ್ತದೆ. ಹೀಗೆ ಅನೇಕಾನೇಕ ಘಟನೆಗಳ ಸಮೂಹವಾದ ನಮ್ಮ ಜೀವನವೆಲ್ಲಾ ಕೂಡಾ ನಾವು ಮಾಡುವ ಆಲೋಚನೆಗಳ ಮೇಲೆ ಆಧಾರಪಟ್ಟಿದೆ ಎನ್ನುವ ವಿಷಯಗಳನ್ನು ನಮಗೆ ವಿಸ್ತಾರವಾಗಿ ತಿಳಿಸುವುದೇ “ಆಲೋಚನಾಶಾಸ್ತ್ರ”.

ಯಾವಾಗ ನಾವು ಈ “ಆಲೋಚನಾಶಾಸ್ತ್ರ”ದ ರೀತಿ ನೀತಿಗಳನ್ನು ಚೆನ್ನಾಗಿ ಅರಿತುಕೊಳ್ಳುತ್ತೇವೋ .. ಆಗಲೇ ನಾವು “ಸಂಕಲ್ಪಶಾಸ್ತ್ರ”ದಲ್ಲಿ ಕೂಡಾ ನಿಷ್ಣಾತರಾಗುತ್ತೇವೆ ಮತ್ತು ನಮ್ಮ ಜೀವನಗಳನ್ನು ನಾವೇ ಹೊಸರೀತಿಯಲ್ಲಿ ನಡೆಸಿಕೊಳ್ಳಬಲ್ಲವರಾಗುತ್ತೇವೆ. ನಮ್ಮ ಸಂಕಲ್ಪಶಕ್ತಿಯಿಂದಲೇ ನಮ್ಮ ಸುತ್ತಲು ಇರುವ ವಾತಾವರಣದ ಶಕ್ತಿ ಕೂಡಾ ಆಧಾರಪಟ್ಟಿರುತ್ತದೆ. ಆದ್ದರಿಂದ, ನಮ್ಮ ಸುತ್ತಾ ಇರುವ ಪ್ರಪಂಚದಲ್ಲಿ ನಾವು ಹಾಯಾಗಿ ಬದುಕಬೇಕಾದರೆ .. ನಾವು ನಮ್ಮ ಸಂಕಲ್ಪಶಕ್ತಿಯನ್ನು ಕುರಿತು ವಿವರವಾಗಿ ತಿಳಿದುಕೊಳ್ಳಬೇಕು.

“ಆಲೋಚನಾಶಾಸ್ತ್ರ”

ಸಾಧಾರಣವಾಗಿ ನಾವು ನಮ್ಮ ಮಾನಸಿಕ ಪ್ರಪಂಚದಲ್ಲಿ ಸೃಷ್ಟಿಸಿಕೊಳ್ಳುವ ಯಾವುದಾದರು ಒಂದು ಆಲೋಚನೆ .. ಭೌತಿಕ ಪ್ರಪಂಚದಲ್ಲಿ ಕಾರ್ಯರೂಪ ತಾಳುವುದಕ್ಕಿಂತಾ ಮುಂಚೆ ಅಂದು ದ್ವಂದ್ವಪೂರಿತ ಘರ್ಷಣೆಗೆ ಗುರಿಯಾಗುತ್ತದೆ. ಆ ಘರ್ಷಣೆಯ ಪ್ರಭಾವದಿಂದ ಉತ್ಪನ್ನವಾಗುವ ಶಕ್ತಿತರಂಗಗಳು ನಮ್ಮ ಸುತ್ತಲಿರುವ ವಾತಾವರಣದ ಮೇಲೆ ತಮ್ಮ ಪ್ರಭಾವವನ್ನು ತೋರಿಸುತ್ತಾ .. ಅವುಗಳ ಶಕ್ತಿತರಂಗದ ಹಂತಗಳಿಗೆ ಅನುಸಾರ ಹೊರಪ್ರಪಂಚದಲ್ಲಿ ಬಗೆಬಗೆಯ ವಾಸ್ತವಗಳನ್ನು ಸೃಷ್ಟಿಸುತ್ತಿರುತ್ತವೆ.
ಹೇಗೆ ನಮ್ಮ ಆಲೋಚನೆ ಎಂಬುವುದೇ ನಮ್ಮ ಸುತ್ತಲಿನ ಇರುವ ಪ್ರಪಂಚದಲ್ಲಿ ಎಲ್ಲಾ ವಾಸ್ತವಗಳನ್ನು ಸೃಷ್ಟಿಸುತ್ತಿರುತ್ತದೆ. ಆದ್ದರಿಂದ, .. “ಮೇಲೆ ಆಕಾಶದಲ್ಲಿರುವ ಯಾವುದೋ ದೇವರು ಬಂದು ನಮ್ಮನ್ನು ಉದ್ಧಾರ ಮಾಡುತ್ತಾನೆ” ಎನ್ನುವ ತಪ್ಪುಕಲ್ಪನೆಯಿಂದ ಮೊದಲು ನಾವು ಹೊರಬರಬೇಕು. ನಮ್ಮ “ಆಲೋಚನೆಗಳ ಆಯ್ಕೆ”ಯಲ್ಲಿ ಅತ್ಯಂತ ಶಾಸ್ತ್ರೀಯತೆಯಿಂದ ಕೂಡಿರುವ ಜಾಗರೂಕತೆಯನ್ನು ನಾವು ಹೊಂದಿದ್ದರೆ, ನಮ್ಮ ವಾಸ್ತವಗಳು ಕೂಡಾ ಅಷ್ಟೇ ಸೂಕ್ಷ್ಮತೆಯನ್ನು, ಕುಶಲತೆಯನ್ನು ಸಂಪಾದಿಸಿಕೊಳ್ಳುತ್ತಾ ಇರುತ್ತವೆ ಎನ್ನುವ ಸಂಗತಿಯನ್ನು ಗ್ರಹಿಸಬೇಕು.

ಉದಾಹರಣೆಗೆ .. ನಾವು ಒಬ್ಬ ದೊಡ್ಡ ಸಂಗೀತಗಾರನ ಕಚೇರಿಗೆ ಹೋಗಿ ಚೆನ್ನಾಗಿ ಆತನ ಹಾಡುಗಳನ್ನು ಆಸ್ವಾದನೆ ಮಾಡಿದ್ದೇವೆಂದುಕೊಳ್ಳೋಣ. ಆಗ ನಮಗೆ “ನಾನು ಸಹ ಹಾಗೆ ಅದ್ಭುತವಾಗಿ ಹಾಡಿದರೆ ಎಷ್ಟು ಚೆನ್ನಾಗಿರುತ್ತದೆ” ಎನ್ನುವ ಆಲೋಚನೆ ಬರುತ್ತದೆ. ಹೃದಯ ಸ್ಪಂದಿಸಿದ ಆ ಸಂಗೀತ ಕಾರ್ಯಕ್ರಮದ ಬಗ್ಗೆ ಪದೇ ಪದೇ ಪ್ರಭಾವಿತಕ್ಕೊಳಗಾದ ನಮ್ಮ ಆಲೋಚನೆ .. ಪದೇ ಪದೇ ನಮ್ಮ ಮನಸ್ಸಿನಲ್ಲಿರುವ ಚೈತನ್ಯವನ್ನು ತಟ್ಟಿ ಎಬ್ಬಿಸುತ್ತಿರುತ್ತದೆ. ಆಗ ಅದು ಒಂದು ದೊಡ್ಡ “ಬಯಕೆ” ಆಗಿ ರೂಪಾಂತರ ಪಡೆದು ಇನ್ನು ನಮ್ಮನ್ನು ನಿಲ್ಲಲು ಬಿಡದೇ, ಕುಳಿತುಕೊಳ್ಳಲು ಬಿಡದೇ, ಸಂಗೀತವನ್ನು ಕಲಿತುಕೊಳ್ಳುವಂತೆ ನಮ್ಮ ಅಂತರಂಗವನ್ನು ಪ್ರೋತ್ಸಾಹಿಸುತ್ತಿರುತ್ತದೆ. ಹೀಗೆ ನಮ್ಮ “ಆಲೋಚನಾ ಶಕ್ತಿ” ಎಷ್ಟು ಪ್ರಬಲವಾಗುತ್ತದೆಯೋ, .. ಅಷ್ಟೇ ಬೇಗ ನಮಗೆ ಸಂಗೀತ ಹೇಳಿಕೊಡುವವರೋ, ಸಂಗೀತ ಸಾಧನೆ ಮಾಡುವವರೋ ನಮಗೆ ಸಿಗುತ್ತಿರುತ್ತಾರೆ.

ಹಾಗೆಯೆ, ಯಾವುದಾದರೊಂದು ಆಟವನ್ನು ಕುರಿತು ಕೂಡಾ, ನಾವು ಪದೇ ಪದೇ ಆ ಆಟಕ್ಕೆ ಸಂಬಂಧಿಸಿದ ಆಲೋಚನೆಯನ್ನು ಮನಸ್ಸಿನಲ್ಲೇ ನೆನಸುತ್ತಿದ್ದರೆ ಆಲೋಚನೆ ಇನ್ನು ಹೆಚ್ಚು ಬಲವನ್ನು ಪಡೆದು ಶಕ್ತಿಯುತವಾಗುತ್ತಾ “ಇಷ್ಟ”ವಾಗಿ ಬದಲಾಗಿ ಯಾವುದೊ ಒಂದು ದಿನ ನಮ್ಮನ್ನು ಒಬ್ಬ ದೊಡ್ಡ ಆಟಗಾರನನ್ನಾಗಿ ರೂಪಿಸುತ್ತದೆ.

ಆಧ್ಯಾತ್ಮಿಕತೆಗೆ ಸಂಬಂಧಿಸಿದ ವಿಷಯದಲ್ಲಿ ಕೂಡಾ ಅಷ್ಟೇ. “ಜೀಸಸ್ ಕ್ರೈಸ್ಟ್” ಪ್ರವಚನಗಳನ್ನು ಕೇಳಿಸಿಕೊಳ್ಳುತ್ತಿರುವಾಗ ಆ ಸಮಸ್ತ ಜ್ಞಾನವೆಲ್ಲಾ ಕೂಡಾ ನಮ್ಮ ಮನಸ್ಸಿನಲ್ಲಿ ತುಂಬಿದೆ ಎಂದುಕೊಳ್ಳೋಣ. ಆಗ ನಮಗೆ ಸಹ “ಜೀಸಸ್ ಹಾಗೆ ಇದ್ದುಬಿಡಬೇಕು” ಎಂದೆನಿಸುತ್ತದೆ. ಆದ್ದರಿಂದ, ನಾವು ಏಸುಕ್ರಿಸ್ತರ ದಿವ್ಯಲಕ್ಷಣಗಳಾದ ದಯೆ, ಕರುಣಗಳಿಂದ ಕೂಡಿದ ಗುಣಗಳ ಸಹಿತ ಎಲ್ಲೆಡೆ ತಿರುಗುತ್ತಾ ಅವರಿಂದ ಜ್ಞಾನವನ್ನು ಹೊಂದುತ್ತಿರುತ್ತೇವೆ. ಏಸುಕ್ರಿಸ್ತರ ಹಾಗೆ ಧ್ಯಾನಮಾಡುತ್ತಾ ಅವರ ಹಾಗೆ ದೇವರ ರಾಜ್ಯದಲ್ಲಿ ಪ್ರವೇಶಿಸಿ ಪುನೀತರಾಗುತ್ತಿರುತ್ತೇವೆ. ಹೀಗೆ, ನಾವು ಅಖಂಡ ದೀಕ್ಷೆಯಿಂದ ಸಾಧನೆ ಮಾಡುತ್ತಿದ್ದರೆ, ಕಾಲಕ್ರಮೇಣ, ನಾವು ಸಹ ಖಂಡಿತವಾಗಿಯು ಏಸುಕ್ರಿಸ್ತನ ಹಾಗೆ ಬದಲಾಗುತ್ತೇವೆ.

* * *

ಕಪಿಲವಸ್ತುವಿನ ರಾಜಕುಮಾರನಾಗಿದ್ದ ಗೌತಮಬುದ್ಧನು ಅದುವರೆಗೂ ಸಮಸ್ತ ರಾಜಭೋಗಗಳನ್ನು ಅನುಭವಿಸುತ್ತಿದ್ದರೂ ಕೂಡಾ ರಾಜಭವನದಿಂದ ಹೊರಬಂದ ತಕ್ಷಣ .. ದುಃಖವನ್ನೂ, ಬಾಧೆಯನ್ನೂ ನೊಡಿ ವಿಚಲಿತಮನಸ್ಕನಾದನು. ನಿಜಕ್ಕೂ ಈ ದುಃಖಕ್ಕೆ ಮೂಲಕಾರಣವೇನು; ಇದರಿಂದ ನನ್ನ ಪ್ರಜೆಗಳನ್ನು ಹೇಗೆ ವಿಮುಕ್ತಿಗೊಳಿಸಬೇಕು ಎನ್ನುವ ಆಲೋಚನೆ ಆತನ ಮನಸ್ಸಿನಲ್ಲಿ ಪ್ರಾರಂಭವಾಯಿತು.

ಆತನು ಅದುವರೆಗೂ ತಾನು ಅನುಭವಿಸುತ್ತಿರುವ ಸಕಲ ರಾಜಭೋಗಗಳನ್ನು ತೃಣಪಾಯವಾಗಿ ತ್ಯಜಿಸಿ .. ತನ್ನ ಮನಸ್ಸಿನಲ್ಲಿರುವ ದೃಢವಾದ ಆಲೋಚನೆಯನ್ನು ಅನುಸರಿಸುತ್ತಾ ಹೋಗಿ .. ತನ್ನಹಾಗೆ ಸತ್ಯಾನ್ವೇಷಣೆಯಲ್ಲಿ ಮಗ್ನವಾಗಿರುವ ಅನೇಕಾನೇಕ ಗುರುಗಳನ್ನು ಭೇಟಿಯಾದನು. ಅವರ ಜೊತೆ ಸ್ನೇಹ ಬೆಳಸಿ ಅವರಿಂದ ಎಷ್ಟು ಕಲಿತುಕೊಳ್ಳಬೇಕೋ ಅಷ್ಟೇ ಕಲಿತುಕೊಂಡು .. ಅದನ್ನು ಸಾಧನೆ ಮಾಡಿ ತನ್ನ ಅನುಭವೈಕ್ಯ ಜ್ಞಾನವನ್ನಾಗಿಸಿಕೊಂಡನು. ಆ ಸಾಧನೆಯ ಹಾದಿಯಲ್ಲೇ ಆತನು ಅನೇಕಾನೇಕ ವಿಶ್ವರಹಸ್ಯಗಳನ್ನು ಭೇದಿಸಿದನು.

ಸಂಕಲ್ಪ ಮಾತ್ರದಿಂದಲೇ ಮಾನವರೆಲ್ಲಾ ಕರ್ಮಪರಂಪರೆಯಲ್ಲೂ, ಜನ್ಮಪರಂಪರೆಯಲ್ಲೂ ಬಿದ್ದು ಹೇಗೆ ಕೊಚ್ಚಿಕೊಂಡುಹೋಗುತ್ತಿದ್ದಾರೋ ತಿಳಿದುಕೊಂಡಿದ್ದಾನೆ. ಸಂಕಲ್ಪಕ್ಕೆ ಇರುವ ಅನಂತಶಕ್ತಿಗೆ ಇರುವ ಪರಿಧಿಯನ್ನು ಅರಿತುಕೊಂಡಿದ್ದಾನೆ. ಸಂಕಲ್ಪದ ದಿಸೆಯನ್ನು ಬದಲಾಯಿಸುವುದರಿಂದ ಬದಲಾಗುವ ಕಾರ್ಯಕಾರಣ ಸಿದ್ಧಾಂತ ಮತ್ತು ಪುನರ್ಜನ್ಮ ಸಿದ್ಧಾಂತಗಳ ಬೃಹತ್ ಸ್ವರೂಪಗಳನ್ನು ಅರ್ಥಮಾಡಿಕೊಂಡಿದ್ದಾನೆ. ಈ ದಿವ್ಯಪ್ರಣಾಳಿಕೆಯನ್ನು ಎಲ್ಲವನ್ನೂ ವಿವರವಾಗಿ ಅರ್ಥಮಾಡಿಕೊಂಡು ದಿವ್ಯಜ್ಞಾನ ಪ್ರಕಾಶದಿಂದ ಪೂರ್ಣಗೊಂಡು ಬುದ್ಧನಾದನು.

ಗೌತಮ ಬುದ್ಧನು ಅರಮನೆಯಲ್ಲಿ ಇರುವವರೆಗೂ ಆತನು ಯಾವ ಜನ್ಮಕಾರಣದಿಂದ ಹುಟ್ಟಿದ್ದಾನೊ ಅದನ್ನು ಕನಿಷ್ಠಪಕ್ಷ ನೆನಪಿನಲ್ಲಿ ಕೂಡಾ ತಂದುಕೊಳ್ಳಲಾರದೆ ಹೋದನು. ಆದರೆ, ಯಾವಾಗ ಅತನು ತನ್ನ ರಾಜಭೋಗಗಳ ಮಾಯೆಯನ್ನು ಭೇದಿಸಿಕೊಂಡು ಹೊರಬಂದನೊ .. ಆಗ ತನಗೆ ಬೇಕಾಗಿರುವುದೆಲ್ಲವನ್ನೂ ಕೂಡಾ ಅತಿ ಕಡಿಮೆ ಸಮಯದಲ್ಲೇ ಪಡೆದು ತನ್ನ ಜನ್ಮವನ್ನು ಸಾರ್ಥಕ ಮಾಡಿಕೊಂಡು .. ಲೋಕಕ್ಕೆಲ್ಲಾ ಮಾರ್ಗದರ್ಶನ ನೀಡಿ ಬುದ್ಧನಾದನು.

ಆದ್ದರಿಂದ, ನಮ್ಮ ಸಂಕಲ್ಪಶಕ್ತಿ ಎಷ್ಟು ಬಲಿಷ್ಠವಾಗಿದೆಯೋ, ಎಷ್ಟು ಅಂಕಿತಭಾವದಿಂದ ಕೂಡಿಕೊಂಡಿದೆಯೋ, ಅಷ್ಟಷ್ಟು ಖಂಡಿತವಾಗಿ ನಾವು ಅಂದುಕೊಂಡ ಗಮ್ಯಕ್ಕೆ ತಲುಪುತ್ತೇವೆ. ಇದನ್ನೇ ನಾವು ನಿರ್ಣಯಾತ್ಮಕ ಶಕ್ತಿಯಿಂದ ಕೂಡಿದ ಸಂಕಲ್ಪಶುದ್ಧಿ ಎನ್ನುತ್ತೇವೆ.

* * *

ಕೆಲವು ಸಲ ನಾವು ಯಾವ ಆಲೋಚನೆ ಮಾಡುತ್ತೇವೊ .. ಅದಕ್ಕೆ ಪರಸ್ಪರ ವಿರುದ್ಧವಾದ ಅನೇಕಾನೇಕ ವಿಕಲ್ಪಗಳು ಕೂಡಾ ಹುಟ್ಟುಕೊಂಡು ಬಂದು .. ನಾವು ಮುಂಚಿತವಾಗಿ ಮಾಡಿದ ಆಲೋಚನೆಗಳನ್ನು ನಿರ್ವೀರ್ಯ(ನಿಷ್ಫಲ) ಗೊಳಿಸುತ್ತಿರುತ್ತವೆ. ಇದರಿಂದ ನಮ್ಮ ಮನಸ್ಸು ಅಲ್ಲೋಲಕಲ್ಲೋಲಕ್ಕೆ ಗುರಿ ಆಗಿ .. ನಮ್ಮನ್ನು ಅಯೋಮಯಕ್ಕೆ, ಅಶಾಂತಿಗೆ ಗುರಿಮಾಡುತ್ತದೆ. ಇದನ್ನೇ ನಾವು ನಕರಾತ್ಮಕ ಆಲೋಚನಾ ವಿಧಾನ ಎನ್ನುತ್ತೇವೆ.

ಇಂತಹ ಅಶಾಂತಿಮಯವಾದ ಆಲೋಚನಾ ವಿಧಾನದಿಂದ ನಾವು ಹೊರ ಬರಬೇಕಾದರೆ ನಮ್ಮ ಆಲೋಚನೆಗಳನ್ನು ಕುರಿತು ನಾವು ವಿಶೇಷವಾದ ಸ್ಪಷ್ಟತೆಯನ್ನು ಹೊಂದಿರಬೇಕು. ಅಪ್ರಯೋಜಕವಾದ ಆಲೋಚನೆಗಳ ಬಗ್ಗೆ ನಿರ್ಲಕ್ಷ್ಯ, ಉಪೇಕ್ಷೆ ಹೊಂದಿದವರಾಗಬೇಕು. ನಮ್ಮ ಹೃದಯವು ಸಂಪೂರ್ಣವಾಗಿ ಅನುಮೋದಿಸಿದ ಆಲೋಚನೆಯನ್ನೇ ನಮ್ಮ ಮನಸ್ಸಿನಲ್ಲಿ ಧಾರಣೆ ಮಾಡಬಲ್ಲವರಾಗಬೇಕು. ವಿಕಲ್ಪಗಳಿಂದ ಕೂಡಿದ ಸಂಕಲ್ಪಗಳು ಎಂದಿಗೂ ನೆರವೇರುವುದಿಲ್ಲ .. ಮತ್ತು ಅವು ನಮ್ಮ ಶಕ್ತಿಯನ್ನು ಕ್ಷೀಣಿಸುವಹಾಗೆ ಮಾಡಿ ನಮ್ಮ ಜೀವನವನ್ನು ಅಸ್ತವ್ಯಸ್ತಗೊಳಿಸುತ್ತಾ .. ನಮ್ಮ ಜೀವನ ನಮ್ಮ ಕೈಯಲ್ಲಿ ಇರದೇ ಇರುವ ಹಾಗೆ ಮಾಡುತ್ತವೆ. ಆದ್ದರಿಂದ, ಒಂದು ಹೆಜ್ಜೆ ಮುಂದಕ್ಕೆ ಮತ್ತು ನಾಲ್ಕು ಹೆಜ್ಜೆಗಳು ಹಿಂದಕ್ಕೂ ಹಾಕುವ ವಿಕಲ್ಪಗಳಿಂದ ಕೂಡಿದ ಆಲೋಚನಾ ವಿಧಾನದಿಂದ ನಮಗೆ ಸ್ವಲ್ಪವೂ ಒಳತನ್ನು ಮಾಡುವುದಿಲ್ಲ ಎನ್ನುವ ಸಂಗತಿಯನ್ನು ನಾವು ತಿಳಿದುಕೊಳ್ಳಬೇಕು.

ನಮ್ಮ ಈ ಜನ್ಮವನ್ನು ಸಹ ನಾವು ನಮ್ಮ ಸ್ವ-ಇಚ್ಛೆಯಿಂದ ಕೂಡಿದ ಸಂಕಲ್ಪದಿಂದಲೇ ಆಯ್ಕೆ ಮಾಡಿಕೊಂಡು ಹುಟ್ಟುತ್ತೇವೆ. ನಮಗೆ ಎಂತಹ ದೇಹ ಬೇಕೊ, ಎಂತಹ ಸಮಾಜದಲ್ಲಿ, ಕುಟುಂಬದಲ್ಲಿ, ಎಂತಹ ತಂದೆ ತಾಯಂದಿರಿಗೆ ನಾವು ಹುಟ್ಟಬೇಕೊ ಎಲ್ಲಾ ಸಹ ನಮ್ಮ ಆಲೋಚನೆ ಪ್ರಕಾರವೇ, ಸೂಕ್ಷ್ಮಲೋಕಗಳಲ್ಲಿ ಸಂಕಲ್ಪಿಸಿಕೊಂಡು, ನಾವು ಹುಟ್ಟುತ್ತೇವೆ. ಆತ್ಮವಿಕಾಸಕ್ಕಾಗಿ “ನೂತನ ಅನುಭವಗಳನ್ನು ಪಡೆಯಲಿಕ್ಕಾಗಿ ಇದಕ್ಕೂ ಮುಂಚೆ ಇದ್ದ ಜನ್ಮಗಳಿಗಿಂತಾ ಇದೇ ಸರಿಯಾದ ಜನ್ಮ” ಎಂದು ನಿರ್ಣಯಿಸಿಕೊಂಡು .. ಆ ನಿರ್ಣಯಕ್ಕೆ ತಕ್ಕಹಾಗೆ ಭೂಲೋಕದಲ್ಲಿ ಬೇಕಾದ ಪರಿಸ್ಥಿತಿಗಳನ್ನು, ಸಹಚರರನ್ನು ಕೂಡಾ ನಮ್ಮ ಸ್ವ-ಇಚ್ಛೆಯ ಪ್ರಕಾರವೇ ಆಯ್ಕೆ ಮಾಡಿಕೊಳ್ಳುತ್ತೇವೆ.

ನೀನು ಹೀಗೆಯೇ ಹುಟ್ಟು ಎಂದು ಯಾರೂ ಸಹ ನಮ್ಮನ್ನು ನಿರ್ದೇಶಿಸುವುದಿಲ್ಲ. ಕೇವಲ ನಮ್ಮ ಸಂಪೂರ್ಣ ಸ್ವ-ಇಷ್ಟದ ಪ್ರಕಾರವೇ ಈ ಭೂಮಿಯ ಮೇಲೆ ಜನ್ಮಪಡೆಯುತ್ತೇವೆ. ಈ ಭೂಮಿಯ ಮೇಲೆ ಇದುವರೆಗೂ ಯಾರೂ ಸಹ ಸಂಕಲ್ಪವಿಲ್ಲದೇ ಸ್ವ-ಇಚ್ಛೆ ಇಂದಲ್ಲದೇ ಒಂದು ತಾಯಿಯ ಗರ್ಭದಲ್ಲಿ ಜನ್ಮ ಪಡೆಯುವುದೆನ್ನುವುದು ನಡೆಯಲಿಲ್ಲ. ಆದರೆ, ಹುಟ್ಟಿದನಂತರ ಇದೆಲ್ಲಾ ಮರೆತುಹೋಗಿ .. “ನನ್ನ ಜೀವನ ಹೀಗೆ ಅಧ್ವಾನವಾಗಿದೆ. ನನಗೆ ಇವರು ಇನ್ನೂ ಏನೋ ಮಾಡಲಿಲ್ಲ ಎನ್ನುತ್ತಾ ನೆಪವನ್ನು ಇತರರ ಮೇಲೆ ತಳ್ಳುತ್ತಾ ಆತ್ಮಜ್ಞಾನವಿಲ್ಲದ ಮೂರ್ಖರ ಹಾಗೆ ವರ್ತಿಸುತ್ತಿರುತ್ತೇವೆ”.

“ಯಾವಾಗ ಧ್ಯಾನದ ಮೂಲಕ ನಾವು ನಮ್ಮ ಅಂತರಂಗವನ್ನು ಪರಿಶೀಲಿಸಿ ನೋಡಿಕೊಂಡು … “ನಮ್ಮ ದೌರ್ಭಾಗ್ಯವನ್ನೂ, ನಮ್ಮ ದಾರಿದ್ರ್ಯವನ್ನೂ, ನಮ್ಮ ವಿಷಾದವನ್ನೂ ಮತ್ತು ನಮ್ಮ ರೋಗಗ್ರಸ್ತ ಜೀವನವನ್ನೂ ಸೃಷ್ಟಿಸಿಕೊಳ್ಳುವವರು ನಾವೇ” ಎನ್ನುವ ಅರಿವನ್ನು ತಂದುಕೊಳ್ಳುತ್ತೇವೆಯೋ .. ಆಗಲೇ ನಾವು ನಮ್ಮ ಅಜ್ಞಾನದಿಂದ ಶಾಸ್ತ್ರೀಯವಾಗಿ ಹೊರಬರುವ ಜ್ಞಾನವನ್ನು ಹೊಂದುತ್ತೇವೆ. ಆದ್ದರಿಂದ, ನಮ್ಮ ಜೀವನದ ಕೌಶಲ್ಯ, ಸಾಮರ್ಥ್ಯ, ಶಾಸ್ತ್ರೀಯತೆ ಎನ್ನುವುದು ನಮ್ಮ ಸ್ವ-ಇಚ್ಛೆಯಿಂದ ಕೂಡಿದ ಸಂಕಲ್ಪಶಕ್ತಿಯ ಮೇಲೆಯೇ ಆಧಾರಪಟ್ಟಿರುತ್ತದೆ ಎನ್ನುವುದು ನಾವು ಪ್ರತಿಕ್ಷಣ ಅರಿವಿನಲ್ಲಿ ಇಟ್ಟುಕೊಳ್ಳಬೇಕಾದ ಸತ್ಯ.

ನಾವು ನಮ್ಮ ಜೀವನದ ಹಾದಿಯಲ್ಲಿ ವಿಜಯವನ್ನು ಸಾಧಿಸಿದ್ದೇವೆಂದರೆ ಅದಕ್ಕೆ ಕಾರಣ ನಮ್ಮ ಸಂಕಲ್ಪ ಬಲವೇ. ಮತ್ತೆ ನಾವು ಅಲ್ಲಿ ಅಪಜಯಕ್ಕೆ ಒಳಗಾಗಿದ್ದೇವೆಂದರೆ, ಅದಕ್ಕೂ ಸಹ ನಮ್ಮ ಸಂಕಲ್ಪ ಬಲಹೀನತೆಯೇ ಕಾರಣ ಎನ್ನುವುದು ಪರಮ ಸತ್ಯ. ಮನುಷ್ಯ ಚಂದ್ರಮಂಡಲದ ಮೇಲೆ ಪಾದವಿಡುತ್ತಾನೆಂದು ಊಹಿಸಿದ್ದೆವೇನು? ಮನುಷ್ಯ ಎವರೆಸ್ಟ್ ಶಿಖರವನ್ನು ಏರುತ್ತಾನೆಂದು ಕನಸುಕಂಡಿದ್ದೆವೇನು? ಮನುಷ್ಯ ಒಂದು ಚಿಕ್ಕ ಮರದ ಹಡಗಿನಲ್ಲಿ ಅಟ್ಲಾಂಟಿಕ್ ಮಹಾಸಮುದ್ರದ ಮೇಲೆ ಈ ಮೂಲೆಯಿಂದ ಆ ಮೂಲಕ್ಕೆ ಪ್ರಯಾಣಿಸುತ್ತಾನೆ ಎಂದುಕೊಂಡಿದ್ದೇವೇನು? ಆದರೆ, ಈ ಊಹೆಗಳೆಲ್ಲಾ ಈ ದಿನ ನಿಜವಾಗಿವೆ ಎಂದರೆ, ಅದಕ್ಕೆ ಕಾರಣ, ಆ ಕೆಲಸವನ್ನು ನಿಜವಾಗಿಸಿದವರ ಮಹಾಸಂಕಲ್ಪ ಬಲವೇ. ಅವರ ಆಲೋಚನೆಗಳ ಸ್ಪಷ್ಟತೆ ಮತ್ತು ಅವರ ಆಲೋಚನೆಗಳ ಮೇಲೆ ಅವರಿಗಿರುವ ಛಲ. ಆ ಛಲವೇ ಅವರಲ್ಲಿ ಆ ಸಂಕಲ್ಪ ಬಲವನ್ನು ವೃದ್ಧಿಗೊಳಿಸಿ ಅವರು ನೆನೆದ ಕೆಲಸವನ್ನು ಪೂರ್ಣಗೊಳಿಸುವ ಹಾಗೆ ಅವರಿಗೆ ಬೇಕಾದ ಶಕ್ತಿಯನ್ನು ನೀಡಿದೆ.

ಆದ್ದರಿಂದ, ನಮ್ಮ ಸಂಕಲ್ಪಶಕ್ತಿಯಿಂದ ನಾವು ಆಯ್ಕೆಮಾಡಿಕೊಂಡ ನಮ್ಮ ಜೀವನವನ್ನು ಸಫಲಗೊಳಿಸಬೇಕಾದರೆ ನಮ್ಮಲ್ಲಿ ಇರಬೇಕಾದ್ದು ತುಂಬಾದೊಡ್ಡದಾದ “ಸಂಕಲ್ಪಶುದ್ಧಿ”. ಈ “ಸಂಕಲ್ಪಶುದ್ಧಿ” ಇದ್ದರೆ ಮಾತ್ರವೇ “ಸಂಕಲ್ಪಶಕ್ತಿ” ಬರುತ್ತದೆ; ಸಂಕಲ್ಪಶಕ್ತಿ ಇದ್ದರೆ ಮಾತ್ರವೇ “ಸಂಕಲ್ಪಸಿದ್ಧಿ” ನಮಗೆ ಉಂಟಾಗುತ್ತದೆ. ಜೀವನವನ್ನು ಅದ್ಭುತವಾಗಿ ಜೀವಿಸಲು ಅವಶ್ಯಕವಾದ ಇಂತಹ ದೊಡ್ಡ “ಸಂಕಲ್ಪಶುದ್ಧಿ”ಯನ್ನು ಕುರಿತು, “ಸಂಕಲ್ಪಶಕ್ತಿ” ಕುರಿತು ಮತ್ತು ಸಂಕಲ್ಪಸಿದ್ಧಿ ಕುರಿತು ಮಕ್ಕಳಿಗೆ ಬಾಲ್ಯದಿಂದಲೇ ವಿವರವಾಗಿ ಬೋಧಿಸಬೇಕು. ಜನ್ಮಪಡೆದ ಪ್ರತಿಯೊಂದು ಜೀವನ ಕೂಡಾ ಖಂಡಿತವಾಗಿಯೂ ಸಫಲಗೊಳ್ಳಲೇಬೇಕು. ಆದ್ದರಿಂದ, ಮಕ್ಕಳನ್ನು “ಸಂಕಲ್ಪಶುದ್ಧ ಮೂರ್ತರ “ಹಾಗೆ ರೂಪಿಸಬೇಕು. “ಧ್ಯಾನಶಾಸ್ತ್ರವನ್ನೂ “ಆಲೋಚನಾತರಂಗ ಶಾಸ್ತ್ರವನ್ನೂ ಅವರನ್ನು ಪ್ರಯೋಗಪೂರ್ವಕವಾಗಿ ಬೋಧಿಸಿ ಅವರನ್ನು “ಧ್ಯಾನಶಾಸ್ತ್ರ ವಿದ್ಯಾಪಾರಂಗತರಾಗಿ ” ತಯಾರು ಮಾಡಬೇಕು.

ನಮ್ಮ ಮನಸ್ಸಿನಲ್ಲಿ ಹುಟ್ಟುವ ಪ್ರತಿಯೊಂದೂ ಸಂಕಲ್ಪ .. ಅದು ಪ್ರಯೋಜನಕರವಾದದ್ದಾ ಅಥವಾ ಅಪ್ರಯೋಜನಕರವಾದದ್ದಾ ಎನ್ನುವುದು ನಮ್ಮ ಜನ್ಮಜನ್ಮಗಳ ಸಂಸ್ಕಾರದ ಮೇಲೆ .. ನಮ್ಮ ಮನೋನೈರ್ಮಲ್ಯದ ಮೇಲೆ ಆಧಾರಪಟ್ಟಿರುತ್ತದೆ. ಆದ್ದರಿಂದ, ಅದಕ್ಕೆ ಇರುವ ಒಂದು ಶಕ್ತಿ ಪರಧಿಯ ಮೇಲೆ ನಮ್ಮ ಆಲೋಚನೆಯ ವಿಧಾನ ನಾಲ್ಕು ವಿಧದಲ್ಲಿ ಸಾಗುತ್ತಿರುತ್ತದೆ.

1. ವಿನಾಶಕರವಾದ ಸಂಕಲ್ಪಗಳು;
2. ನಕಾರಾತ್ಮಕವಾದ ಸಂಕಲ್ಪಗಳು;
3. ಸಕಾರಾತ್ಮಕರವಾದ ಸಂಕಲ್ಪಗಳು;
4. ಅದ್ಭುತವಾದ ಸಂಕಲ್ಪಗಳು;

“ವಿನಾಶಕರವಾದ ಸಂಕಲ್ಪಗಳು”

ಮೊದಲನೆಯ ಬಾರಿ ನಾವು ಒಂದು ಮೋಟರ್ ಸೈಕಲ್‌ನ ಕೊಂಡುಕೊಂಡಿದ್ದೇವೆಂದುಕೊಳ್ಳೋಣ. ಅದರ ಮೇಲೆ ಕುಳಿತು “ಅಪಘಾತ ಖಂಡಿತವಾಗಿಯು ಆಗುತ್ತದೆ” ಎಂದುಕೊಂಡರು. “ಆದ್ದರಿಂದ, ಅವರಿಗೆ ಹಾಗೆಯೆ ಆಯಿತು” ಎಂದುಕೊಂಡು ಪದೇ ಪದೇ ಅಪಘಾತ ಆಗಿರುವವರನ್ನೇ ನೆನೆಯುತ್ತಾ … ಅದೇ ಘಟನೆಗಳನ್ನು ಕುರಿತು ಭಯಪಡುತ್ತಿದ್ದರೆ ಅದು ನಮ್ಮ ಸಂಕಲ್ಪಕ್ಕೆ ಭಯಂಕರವಾದ ವಿನಾಶಕರ ಶಕ್ತಿಯನ್ನು ಜೋಡಿಸಿ ಅತಿ ಶೀಘ್ರದಲ್ಲೇ ಖಂಡಿತವಾಗಿಯೂ ನಮಗೆ ಅಪಾಯವಾಗುವ ಹಾಗೆ ಮಾಡುತ್ತದೆ. ನಾವು ಏನು ಬೇಕೆಂದು ಗಾಢವಾಗಿ ಬಯಸುತ್ತೇವೆಯೊ ಅದನ್ನು ನಮ್ಮ ಮುಂದೆ ಸಾಕ್ಷಾತ್ಕಾರವಾಗಿಸುವ “ಸೂಪರ್‌ಮೆನ್” ನಮ್ಮ ಮನಸ್ಸು. ಅಂತಹ ಸಂಕಲ್ಪಶಕ್ತಿ ನಮ್ಮ ಮನಸ್ಸಿಗಿದೆ.
ಆದ್ದರಿಂದ, ಚಿಕ್ಕಂದಿನಿಂದಲೂ ಹಿರಿಯರು ನಮಗೆ ಹೇಳಿಕೊಟ್ಟ “ಕೆಡಕನ್ನು ನೆನೆದು ಅನಂತರ ಒಳಿತನ್ನು ನೆನೆಯಬೇಕು” ಎನ್ನುವ ಮಾತನ್ನು ನಮ್ಮ ಮನಸ್ಸಿನಿಂದ ತಕ್ಷಣ ಅಳಿಸಿಹಾಕಬೇಕು. ಏನು ಬೇಕೊ ಅದನ್ನೇ ಸ್ಪಷ್ಟವಾಗಿ ಆಯ್ಕೆಮಾಡಿಕೊಂಡು ಮಾನಸಿಕ ಅಭ್ಯಾಸವನ್ನು ಮಾಡಬೇಕು.
“ನಕಾರಾತ್ಮಕ ಸಂಕಲ್ಪಗಳು”
“ಏನೋ, ಪರೀಕ್ಷೆ ಬರೆಯಲು ಹೋಗುತ್ತಿದ್ದೇನೆ. ಆದರೆ, ಅಲ್ಲಿ ಏನು ನಡೆಯುತ್ತದೊ ಏನೊ, ಓದಿದ್ದೆಲ್ಲಾ ಬರುತ್ತದೊ ಇಲ್ಲವೋ” ಎನ್ನುತ್ತಾ ಅಸ್ಪಷ್ಟವಾದ ಡೋಲಾಯಮಾನ ಸ್ಥಿತಿಯಲ್ಲಿ ಒದ್ದಾಡುತ್ತಾ, ಆ ವಿಕಲ್ಪಗಳಿಂದ ನಮ್ಮ ಸಂಕಲ್ಪಗಳಿಗೆ ನಾವೇ “ನಕರಾತ್ಮಕ ಶಕ್ತಿ”ಯನ್ನು ಜೋಡಿಸುತ್ತಿರುತ್ತೇವೆ.
ಇಂತಹ ನಕಾರಾತ್ಮಕ ಶಕ್ತಿಯಿಂದ ಕೂಡಿರುವ “ವಿಕಲ್ಪಸಹಿತ ಸಂಕಲ್ಪಗಳು” ನಮ್ಮ ಆತ್ಮಾಭಿವೃದ್ಧಿಗೆ ಸ್ವಲ್ಪವೂ ಪ್ರಯೋಜನಕಾರವಲ್ಲ. ಇದರಿಂದ … ಪ್ರತಿಕ್ಷಣ ನಾವು ಅಪಾಯದ ಅಂಚಿನಲ್ಲಿ ಜೀವಿಸುತ್ತಾ … ಮುಪ್ಪನ್ನು ನಾವೇ ಆಹ್ವಾನಿಸುತ್ತಾ, ಶಕ್ತಿಹೀನರಾಗಿ ಬದಲಾಗಿ, ನಮ್ಮ ಜೀವನವನ್ನು ನರಕಪ್ರಾಯವನ್ನಾಗಿಸಿಕೊಳ್ಳುತ್ತಾ ಇರುತ್ತೇವೆ.

“ಸಕಾರಾತ್ಮಕ ಸಂಕಲ್ಪಗಳು”

“ನಾನು ಖಂಡಿತವಾಗಿಯೂ ವಿಜಯವನ್ನು ಸಾಧಿಸಿಯೇತೀರುತ್ತೇನೆ” .. ಅದು ಪರೀಕ್ಷೆಯಾದರೂ ಆಗಲಿ ಅಥವಾ ಮೊದಲನೆಯ ಬಾರಿ ಒಂದು ವಾಹನವನ್ನು ನಡೆಸುವುದೇ ಆಗಲಿ, ಅಥವಾ ಧ್ಯಾನ ಮಾಡುವುದೇ ಆಗಿರಲಿ, “ನಾನು ತಪ್ಪದೆ ಮಾಡಿಯೇತೀರುತ್ತೇನೆ” ಎನ್ನುವ “ವಿಕಲ್ಪರಹಿತ ಸಂಕಲ್ಪಶುದ್ಧಿ”ಯಿಂದ ಮುನ್ನಡೆಯುವುದೇ “ಸಕಾರಾತ್ಮಕವಾದ ಆಲೋಚನಾ ಧೋರಣೆ”.

ಹೀಗೆ ಧ್ಯಾನದ ಮೂಲಕ ನಮ್ಮ ಮನಸ್ಸಿನಲ್ಲಿ ಸಕಾರಾತ್ಮಕವಾದ ಆಲೋಚನಾ ತರಂಗಗಳು ಸದಾ ಸುಪ್ರತಿಷ್ಠಿತವಾಗಿರಬೇಕು. ಮನಸ್ಸನ್ನು ಎಷ್ಟು ಶೂನ್ಯವಾಗಿ ಇಟ್ಟುಕೊಂಡರೇ ಮನಸ್ಸಿನ ಶಕ್ತಿ ಅಷ್ಟು ಬಲಾಢ್ಯವಾಗಿರುತ್ತದೆ; ಮನಸ್ಸನ್ನು ಎಷ್ಟು ಶೂನ್ಯಾತಿ ಶೂನ್ಯವಾಗಿಟ್ಟುಕೊಂಡರೇ ನಮ್ಮ ಸಂಕಲ್ಪ ಶಕ್ತಿ ಅಷ್ಟು ಪ್ರಚಂಡವಾಗಿರುತ್ತದೆ. ಅವಶ್ಯಕತೆ ಇದ್ದರೆ ಮಾತ್ರವೇ ಮಾತನಾಡಬೇಕು. ಆದರೆ, ಅವಶ್ಯಕತೆ ಇಲ್ಲದ ಮಾತುಗಳನ್ನು ಸ್ವಲ್ಪವೂ ಮಾತನಾಡಬಾರದು; ಅವಶ್ಯಕತೆ ಇಲ್ಲದ ಆಲೋಚನೆಗಳನ್ನು ನಮ್ಮ ಮನಸ್ಸಿನಲ್ಲಿ ಒಂದು ಕ್ಷಣ ಸಹ ಬರಲು ಬಿಡಬಾರದು.

ಮನಸ್ಸಿಗೆ ಈ ಅಭ್ಯಾಸವಾಗಬೇಕಾದರೇ ನಾವು ತುಂಬಾ ಮೌನವನ್ನು ಪಾಲಿಸಬೇಕು; ತುಂಬಾ ಧ್ಯಾನವನ್ನು ಮಾಡಬೇಕು; ತುಂಬಾ ಅರಿವಿನಿಂದ ಜೀವಿಸಬೇಕು.

“ಅದ್ಭುತವಾದ ಸಂಕಲ್ಪಶಕ್ತಿ”

“ಕೆಲವರ ಜೀವನ ಅಸ್ತವ್ಯಸ್ತವಾಗಿಯೂ, ಇನ್ನೂ ಕೆಲವರ ಜೀವನ ಸಫಲತೆಯಿಂದ ಕೂಡಿದ್ದು ಯಶಸ್ವಿಯಾಗಿವೆ” ಅಂದರೆ, ಅವರಲ್ಲಿ ವಿಭಿನ್ನ ರೀತಿಯಲ್ಲಿರುವ ಸಂಕಲ್ಪಶುದ್ಧಿ ಮಾತ್ರವೇ ಅದಕ್ಕೆ ಕಾರಣ. ಒಂದೊಂದು ಸಲ ನಮಗೆ “ನಾನು ಈ ದೇಶದ ಪ್ರಧಾನ ಮಂತ್ರಿ ಆಗಬೇಕು” ಎಂದೂ, ಒಂದೊಂದು ಬಾರಿ “ನಾನು ಬುದ್ಧನ ಹಾಗೆ ಸಹ ಆಗಬೇಕು” ಎಂದು ಎನಿಸುತ್ತಿರುತ್ತದೆ. ಅವೆರಡೂ ಪರಸ್ಪರ ವಿರುದ್ಧವಾದ ಆಲೋಚನೆಗಳು.

ಬುದ್ಧನಹಾಗೆ ಆಗಬೇಕಾದರೆ ರಾಜಕೀಯಗಳನ್ನು ಮರೆತುಬಿಡಬೇಕು, ಪ್ರಧಾನ ಮಂತ್ರಿ ಆಗಬೇಕಾದರೆ ಬುದ್ಧತ್ವವನ್ನು ಕುರಿತು ಮರೆತುಬಿಡಬೇಕು. ಹೆಸರು, ಪ್ರತಿಷ್ಠೆಗಳು ಮತ್ತು ಅದರ ಜೊತೆ ದುಃಖರಾಹಿತ್ಯವೂ ಬೇಕೆಂದರೆ, ಅದು ಸಾಧ್ಯವಾಗದು. ಆ ಎರಡೂ ಪರಸ್ಪರ ವಿರುದ್ಧವಾದ ಗುರಿಗಳು, ಒಂದೇ ಜೀವನ ಕಾಲದಲ್ಲಿ ಅವು ಸಾಧ್ಯವಾಗುವುದು ತುಂಬಾ ಕಷ್ಟ. ಆದರೆ, ಸಾಧ್ಯವಾಗಲೇ ಬೇಕು. ಕೀರ್ತಿ, ಪ್ರತಿಷ್ಠೆಗಳ ಜೊತೆ ದುಃಖರಾಹಿತ್ಯವನ್ನು ಕೂಡಾ ಒಂದೇ ಜನ್ಮದಲ್ಲಿ ಸಾಧಿಸುವುದು ಕೇವಲ ಒಬ್ಬ ಯೋಗಿಗೆ ಮಾತ್ರ ಸಾಧ್ಯ. ಅಂತಹ ಧ್ಯಾನ ಯೋಗದಲ್ಲೇ ನಮ್ಮ ಜೀವನ ಅದ್ಭುತವಾಗಿ ಬದಲಾಗಿ ಬಿಡುತ್ತದೆ.

ಅದಕ್ಕಾಗಿ ನಾವು ಅತ್ಯಧಿಕವಾಗಿ ಧ್ಯಾನಶಕ್ತಿಯನ್ನು ವೃದ್ಧಿಗೊಳಿಸಿಕೊಳ್ಳಬೇಕು. ಪ್ರಾಪಂಚಿಕ ಜೀವನದಲ್ಲಿ ಇರುತ್ತಲೇ ಕೆಸರಲ್ಲಿ ಅರಳುವ ಕಮಲದ ಹಾಗೆ ಜೀವಿಸಬೇಕು. ಪ್ರಾಪಂಚಿಕ ಜೀವನದ ಜೊತೆ ಧ್ಯಾನವನ್ನೂ, ಜ್ಞಾನವನ್ನೂ ಒಂದುಗೊಡಿಸಿ ಯಾವಾಗ ನಾವು ಆಧ್ಯಾತ್ಮಿಕ ಶಾಸ್ತ್ರಜ್ಞರಾಗಿ ಬದಲಾಗಿ ಅತ್ಯಂತ ಶಾಸ್ತ್ರೀಯತೆಯಿಂದ ಜೀವಿಸುತ್ತಿರುತ್ತೇವೆಯೋ .. ಆಗ ನಾವು ಕೈಹಿಡಿದ ಕಾರ್ಯ, ಯಾವುದಾದರೂ ಸರಿಯೆ, ಶಕ್ತಿಯುತವಾಗಿ ಬದಲಾಗಿ ಲೋಕಕಲ್ಯಾಣ ಕಾರ್ಯಕ್ರಮವಾಗಿ ರೂಪುಗೊಳ್ಳುತ್ತದೆ. ಆತ್ಮಜ್ಞಾನದ ಬಗ್ಗೆ ಸ್ವಲ್ಪವೂ ಅರಿವಿಲ್ಲದೇ ಕೇವಲ ತಿಂಡಿ, ನಿದ್ದೆಗಳಿಗೆ ಮಾತ್ರ ಪ್ರಾಮುಖ್ಯತೆಯನ್ನು ನೀಡುತ್ತಾ, ಅಶಾಶ್ವತವಾದ ಲೌಕಿಕ ಸಂಪತ್ತುಗಳನ್ನು ಕೂಡಿಹಾಕಿಕೊಳ್ಳುತ್ತಾ ತನ್ನ ಸ್ವಾರ್ಥಕ್ಕಾಗಿಯೇ ಜೀವಿಸುವ ಸಾಮಾನ್ಯ ಮಾನವನಿಗೆ ಇದು ಅಸಾಧ್ಯವಾಗುತ್ತಿರಬಹುದು .. ಆದರೆ, ಆಧ್ಯಾತ್ಮಿಕತೆಯನ್ನು ಅಭ್ಯಸಿಸುವರಿಗೆ ಮಾತ್ರ ಎಲ್ಲಾ ರಂಗಗಳಲ್ಲೂ ಅಖಂಡ ವಿಜಯವನ್ನು ಸಾಧಿಸುವುದು ತುಂಬಾ ಸುಲಭ. ಕೇವಲ ಒಬ್ಬ “ಧ್ಯಾನಯೋಗಿ” ಮಾತ್ರವೇ ತನ್ನ ಅಖಂಡವಾದ ಸಂಕಲ್ಪಶಕ್ತಿಯಿಂದ ಅದ್ಭುತವಾದ ಸಂಕಲ್ಪಶುದ್ಧಿಯಿಂದ ತನ್ನ ಜೀವನವನ್ನು ವಿಜಯದ ಮಾರ್ಗದಲ್ಲಿ ಸುಲಭವಾಗಿ ನಡೆಸಿಕೊಳ್ಳುತ್ತಾ, ಜೀವಿಸುವುದರಲ್ಲಿರುವ ಆನಂದವನ್ನು ಪ್ರತಿಕ್ಷಣ ಅನುಭವಿಸುತ್ತಿರುತ್ತಾನೆ.

“ಸಂಕಲ್ಪಶಕ್ತಿಗೆ ಮಿತಿ ಇಲ್ಲ”

ಹೀಗೆ ನಿರಂತರ ಧ್ಯಾನ – ಜ್ಞಾನ ಸಾಧನೆಗಳ ಮೂಲಕ ತಮ್ಮ ಸಂಕಲ್ಪಗಳನ್ನು ಪರಿಶುದ್ಧ ಮಾಡಿಕೊಂಡಿರುವವರೇ .. ಪಿರಮಿಡ್ ಮಾಸ್ಟರ‍್ಸ್. ಧ್ಯಾನದ ಮೂಲಕ ತಮಗೆ ತಾವು ಪರಿಶುದ್ಧ ಆತ್ಮರಾಗಿ ಧ್ಯಾನಶಾಸ್ತ್ರಜ್ಞರಾಗಿ ರೂಪಿಸಿಕೊಂಡ ಇವರು ಧ್ಯಾನ ಪ್ರಚಾರದ ಮೂಲಕ ಲೋಕಕಲ್ಯಾಣ ಎನ್ನುವ ಅಖಂಡಸಂಕಲ್ಪವನ್ನು ಮಾಡಿಕೊಂಡರು. ಪ್ರತಿಯೊಬ್ಬರಲ್ಲಿರುವ ಆತ್ಮಶಕ್ತಿಯನ್ನು ತಟ್ಟಿಎಬ್ಬಿಸುತ್ತಾ “ನೀನು ಏನು ಬೇಕಾದರೂ ಮಾಡಬಹುದು” ಎನ್ನುತ್ತಾ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ. “ಏನಾದರೂ ಮಾಡಬಲ್ಲೆ” ಎನ್ನುವ ಆಲೋಚನೆಯೇ ಸರಿಯಾದ ಆಲೋಚನೆ, ಆ ಆಲೋಚನೆಯೇ ನಮ್ಮನ್ನು ಮತ್ತು ನಮ್ಮ ಜೊತೆ ಈ ಲೋಕವನ್ನು ಬಲಿಷ್ಠಗೊಳಿಸುತ್ತಾ .. ನಮ್ಮನ್ನು ವಿಶ್ವದ ಜೊತೆ ಒಟ್ಟುಗೂಡಿಸುತ್ತದೆ.

ಆದ್ದರಿಂದ, ನಮ್ಮ ವಾಸ್ತವಗಳಿಗೆ ನಾವೇ “ಸೃಷ್ಟಿಕರ್ತರು”, “ಸ್ಥಿತಿಕರ್ತರು” ಮತ್ತು “ಲಯಕರ್ತರು” ಎನ್ನುವ ಸತ್ಯವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು; ಧ್ಯಾನಶಕ್ತಿ ಮತ್ತು ಜ್ಞಾನಶಕ್ತಿಯಿಂದ ಕೂಡಿದ ಅದ್ಭುತವಾದ ಸಂಕಲ್ಪಶಕ್ತಿಯಿಂದ ನಮ್ಮ ಭೌತಿಕ ಮತ್ತು ಆಧ್ಯಾತ್ಮಿಕ ಜೀವನಗಳಿಗೆ ಹೊಂದಿದ ವಿಜಯಗಳನ್ನು ಈ ಜನ್ಮದಲ್ಲೇ ತುಂಬಾ ಸುಲಭವಾಗಿ ಕೈವಶ ಮಾಡಿಕೊಳ್ಳಬೇಕು; ಆಗಲೇ ನಾವು ನಮ್ಮ ಜೀವನವನ್ನು ಧನ್ಯಗೊಳಿಸಿಕೊಳ್ಳುತ್ತೇವೆ.