“ಒಂದು ಗಂಟೆಯ ಕಾಲ… ದಮ”

” ಮನಸ್ಸು ಮಹಾಚಂಚಲವಾದದ್ದು
ಅದು ಬಲವಾದದ್ದು, ಅದು ದೃಢವಾದದ್ದು, ಪ್ರಮಾದಕರವಾದದ್ದು .. ಮತ್ತು ಅದನ್ನು ನಿಗ್ರಹಿಸುವುದು ತುಂಬಾ ಕಷ್ಟ.
ವಾಯುವನ್ನು ನಿಯಂತ್ರಿಸುವುದು ಎಷ್ಟು ಕಷ್ಟವೊ .. ಮನಸ್ಸನ್ನು ನಿಯಂತ್ರಿಸುವುದು ಅದಕ್ಕಿಂತ ಕಷ್ಟ”
ಎನ್ನುವುದೇ ಅರ್ಜುನನ ಉವಾಚ

“ಚಂಚಲಂ ಹಿ ಮನಃ ಕೃಷ್ಣ ಪ್ರಮಾಧಿ ಬಲವದ್ದ ಢಮ್
ತಸ್ಯಾಹಂ ನಿಗ್ರಹಂ ಮನ್ಯೇ ವಾಯೊರಿವ ಸುದುಷ್ಕರಮ್”
ನಿಜವೇ … ಮನಸ್ಸು ಮಹಾ ದುರ್ನಿಗ್ರಹವಾದದ್ದು
ಆದ್ದರಿಂದ … ಪ್ರಪ್ರಥಮವಾಗಿ … ಮನಸ್ಸಿಗಿಂತಾ ಮುನ್ನ… ಇಂದ್ರಿಯಗಳನ್ನು ಜಯಿಸಬೇಕು.
ಬಹಿರೇಂದ್ರಿಯ ನಿಗ್ರಹ … “ದಮ”
ಅಂತರೇಂದ್ರಿಯ ನಿಗ್ರಹ … “ಶಮ”

ಮನಸ್ಸನ್ನು ಜಯಿಸುವುದು “ಶಮ”.. ಇಂದ್ರಿಯಗಳನ್ನು ಜಯಿಸುವುದು … “ದಮ”
“ದಮ”ವನ್ನು ಸುದೀರ್ಘಪ್ರಯತ್ನದ ಮೂಲಕ ಸಾಧಿಸಿದವನೇ ಧ್ಯಾನಿ
ಇನ್ನೂ ಹೆಚ್ಚು ಪ್ರಯತ್ನದ ಮೂಲಕ “ಶಮ”ವನ್ನು ಸಾಧಿಸಿದವನೇ … ಯೋಗಿ
“ಇಂದ್ರಿಯಾಣಾಂ ನಯನೇಂದ್ರಿಯಂ ಪ್ರಧಾನಂ”

ಸಕಲ ಇಂದ್ರಿಯಗಳಲ್ಲಿ ಅತ್ಯಂತ ಪ್ರಧಾನವಾದದ್ದು ನಯನಗಳು
ಕಣ್ಣುಗಳನ್ನು ಮುಚ್ಚಿಕೊಂಡು ಒಂದು ಗಂಟೆಕಾಲ ಕುಳಿತುಕೊಳ್ಳಬೇಕು
ಮನಸ್ಸು ಎಷ್ಟೇ ಗಲಾಟೆ ಮಾಡುತ್ತಿದ್ದರೂ ಕಣ್ಣುಗಳನ್ನು ಮಾತ್ರ ತೆರೆಯಬಾರದು
ಮನಸ್ಸು ಎಷ್ಟೇ ತಳಮಳಗೊಳ್ಳುತ್ತಿದ್ದರೂ ಕಣ್ಣುಗಳನ್ನು ಮಾತ್ರ ತೆರೆಯಬಾರದು
ಮನಸ್ಸು ಎಷ್ಟೇ ಗಜಿಬಿಜಿಯಾಗಿದ್ದರೂ ಕಣ್ಣುಗಳನ್ನು ಮಾತ್ರ ತೆರೆಯಬಾರದು
ಒಂದು ಗಂಟೆಕಾಲ ಕಣ್ಣುಗಳನ್ನು ತೆರೆಯಲೇಬಾರದು

ಪ್ರಾರಂಭದಲ್ಲಿ ಐದು ನಿಮಿಷಗಳು ಕಣ್ಣುಗಳನ್ನು ಮುಚ್ಚಿಕೊಂಡು ಕುಳಿತಿರುವುದೇ ಕಷ್ಟ…
ಆದರೆ … ನಿಧಾನಕ್ಕೆ ಕುಳಿತುಕೊಳ್ಳುವುದು ಅಭ್ಯಾಸವಾಗುತ್ತದೆ
ಅಭ್ಯಾಸ ಆದನಂತರ ಕಣ್ಣುಗಳನ್ನು ತೆರೆಯುವುದೇ ಕಷ್ಟಕರವಾಗಿರುತ್ತದೆ.
“ತಿನ್ನುತ್ತಾ ತಿನ್ನುತ್ತಾ ಬೇವು ಸಿಹಿಯಾಗಿರುತ್ತದೆ”
ಹಾಯಾಗಿ ಕುಳಿತುಕೊಳ್ಳಬೇಕು

ಸದಾ ಕದಲುತ್ತಿರುವ ಶರೀರವನ್ನು ಆದಷ್ಟು ಕದಲದೇ ಇರಿಸಬೇಕು
ಸದಾ ಮಾತನಾಡುತ್ತಿರುವ ಬಾಯಿಯನ್ನು ಒಂದು ಗಂಟೆಕಾಲ ಮುಚ್ಚಿರಬೇಕು
ಸದಾ ನೋಡುತ್ತಿರುವ ಕಣ್ಣುಗಳನ್ನು ಒಂದು ಗಂಟೆಕಾಲ ಮುಚ್ಚಿರಬೇಕು
ಇದೆಲ್ಲಾ “ದಮ”ದ ಕೆಳಗೆ ಲೆಕ್ಕಕ್ಕೆ ಬರುತ್ತದೆ

“ದಮ” ಎನ್ನುವುದು “ಒಂದು ಬಲವಂತದ ಕ್ರಿಯೆ”
“ದಮನ ನೀತಿ” ಅಂದರೆ “ಬಲವಂತವಾಗಿ ಸದೆಬಡಿಯುವುದು”
“ಬಲಪ್ರಹಾರ” ಮಾಡಬೇಕಾದ್ದು ಕೇವಲ ಇಂದ್ರಿಯಗಳ ಮೇಲೇ
ಮನಸ್ಸಿನ ಮೇಲೆ “ಬಲ ಪ್ರಹಾರ” ಎನ್ನುವುದು ಅಸಂಭವ

ಒಂದು ಗಂಟೆಕಾಲ ಬಲವಂತವಾಗಿ ಕಣ್ಣುಗಳನ್ನು ಮುಚ್ಚಿಕೊಂಡು ಕುಳಿತುಕೊಳ್ಳಬೇಕು
“ದಮ” ಅಭ್ಯಾಸ ಮಾಡುತ್ತಿರುವಾಗ ಮನಸ್ಸು ಎನ್ನುವುದು ಇನ್ನೂ ಚಂಚಲವಾಗಿಯೇ ಇರುತ್ತದೆ
ವಾಸ್ತವವಾಗಿ “ದಮ”ದ ಪ್ರಾರಂಭದ ಹಂತದಲ್ಲಿ ಮನಸ್ಸು ಎನ್ನುವುದು ಇನ್ನೂ ಹೆಚ್ಚಾಗಿ ವಿಜೃಂಭಿಸುತ್ತದೆ .. ಆದರೂ
ಅನೇಕಾನೇಕ ಆಲೋಚನೆಗಳು ತೆರೆತೆರೆಯಾಗಿ ಬರುತ್ತಿದ್ದರೂ
ಕಣ್ಣುಗಳನ್ನು ತೆರೆಯಲೇಕೂಡದು … ಕೈಗಳನ್ನು ಬಿಡಿಸಬಾರದು .. ಆಸನದಿಂದ ಏಳಲೇಬಾರದು
ನಿರ್ಧರಿಸಿದ ಸಮಯದ ಪ್ರಕಾರ ..

ಪ್ರತಿದಿನ “ನಯನೇಂದ್ರಿಯ ನಿಗ್ರಹ ಸಾಧನೆ”ಯಲ್ಲಿ ಇದ್ದು ತೀರಲೇಬೇಕು
ಕ್ರಮೇಣ “ದಮ”ವನ್ನು ಸಾಧಿಸಿಯೇತೀರಬೇಕು
“ದಮ” ಎನ್ನುವ ಪ್ರಕ್ರಿಯೆಗೆ ಜೊತೆಯಾಗಿ “ಶ್ವಾಸದ ಮೇಲೆ ಗಮನ” ಕೂಡಾ ಇದ್ದಾಗ
“ಶಮ” ಎನ್ನುವ ಮನೋಲಯ ಸ್ಥಿತಿಗೆ ಅತ್ಯಂತ ಸಹಜವಾಗಿ ತಲಪುತ್ತೇವೆ.
ಒಂದು ನಲವತ್ತು ದಿನಗಳಲ್ಲಿ … ಯಾರಾದರೂ ಸರಿಯೆ .. “ದಮ” ಎನ್ನುವ ಸ್ಥಿತಿಗೆ ಬಂದು ಧ್ಯಾನಿ ಆಗುತ್ತಾರೆ
ಮತ್ತೊಂದು ನಲವತ್ತು ದಿನಗಳಲ್ಲಿ … ಯಾರಾದರೂ ಸರಿಯೆ .. “ಶಮ” ಎನ್ನುವ ಸ್ಥಿತಿಗೆ ಬಂದು ಯೋಗಿ ಆಗುತ್ತಾರೆ
ಮೊದಲನೆಯ ಮೆಟ್ಟಿಲಿನ ನಂತರವೇ ಎರಡನೆಯ ಮೆಟ್ಟಿಲು
“ದಮ”ದಿಂದಲೇ “ಶಮ”

ಮೊದಲನೆಯದು ಯಾವಾಗಲೂ ಮೊದಲನೆಯದೇ, ಎರಡನೆಯದು ಯಾವಾಗಲೂ ನಂತರವೇ
ಹಾಲಾಹಲದನಂತರವೇ ಅಮೃತ … ಹೆರಿಗೆ ನೋವಿನ ನಂತರವೇ ಬಾಣಂತನ
ಸಹನೆಯಿಂದ “ದಮ” ಎನ್ನುವ ಸ್ಥಿತಿಯನ್ನು ದಾಟಿ …”ಶಮ” ಎನ್ನುವ ಸ್ಥಿತಿಗೆ
ಪ್ರವೇಶಿಸಬೇಕು.
“ದಮ” ಜಯಹೋ .. “ಶಮ” ಜಯ ಜಯಹೋ ..