” ಮಕ್ಕಳನ್ನು ಬೆಳೆಸುವ ಸರಿಯಾದ ಕ್ರಮ “

[ತಂದೆ-ತಾಯಿಯರಿಗೆ ವಿಶೇಷ ಸೂಚನೆಗಳು]

ವಿಶ್ವದಾದ್ಯಂತ ಗತಕಾಲದಲ್ಲಿ ನಡೆದ .. ವರ್ತಮಾನದಲ್ಲಿ ನಡೆಯುತ್ತಿರುವ ದೌರ್ಜನ್ಯಗಳು, ದರೋಡೆಗಳು, ಮಾರಣ-ಹೋಮಗಳು .. ಮತ್ತು ಭವಿಷ್ಯತ್ತಿನಲ್ಲಿ ನಡೆಯಲಿರುವ ದೌರ್ಜನ್ಯಗಳು, ದರೋಡೆಗಳು, ಮಾರಣಹೋಮಗಳು .. ಇವೆಲ್ಲಾ ಕೂಡಾ “ಮಕ್ಕಳ ಬೆಳವಣಿಗೆ” ಸರಿಯಾಗಿ ಇಲ್ಲದಿರುವುದರಿಂದಲೇ ಅಲ್ಲವೇ! ಸ್ವಚ್ಛವಾದ ಮಕ್ಕಳು ಸ್ವಾರ್ಥಪೂರಿತರಾದ, ಅಸ್ವಚ್ಛವಾದ ಹಿರಿಯರಾಗಿ ಬದಲಾಗಿದ್ದಕ್ಕೆ ಅಲ್ಲವೇ! ಪ್ರಕೃತಿ ಮಡಿಲಿನಿಂದ ಬಂದ ಪ್ರತಿಯೊಂದು ಶಿಶುವು ಸ್ವಚ್ಛವಾದದ್ದೇ, ಅತ್ಯಂತ ಶುದ್ಧವಾದದ್ದೇ! ಆದರೆ, ಮೂರ್ಖ ತಂದೆ-ತಾಯಿಯರ ಕೈಗಳಲ್ಲಿ, ಮೂರ್ಖತನದಿಂದ ಕೂಡಿರುವ ಸಮಾಜದ, ಸಂಘದ ಅಜ್ಞಾನ ವಾತಾವರಣದಲ್ಲಿ ಬೆಳೆದ ಶಿಶುಗಳು ತಮ್ಮ ತಂದೆ-ತಾಯಿಯರನ್ನು ಹೋಲುವ, ತಮ್ಮ ಸಂಘವನ್ನು ಹೋಲುವ ಮೂರ್ಖರಂತೆ ತಾವೂ ತಯಾರಾಗುತ್ತಾರೆ. “ಯಥಾ ರಾಜಾ ತಥಾ ಪ್ರಜಾ” ಅಲ್ಲವೇ! ಮತ್ತು ಸರಿಯಾದ ಮಕ್ಕಳ ಬೆಳವಣಿಗೆಯಲ್ಲಿರುವ ಅಂಶಗಳನ್ನು ವಿಶ್ಲೇಷಿಸಿಕೊಳ್ಳೋಣ.

1. ಶಿಶು ಅವಸ್ಥೆಯಲ್ಲಿರುವಾಗ ಸರಿಯಾದ ಆಹಾರ ನೀಡಬೇಕು, ಅಂದರೆ, ಕೇವಲ ಸಸ್ಯಾಹಾರ ಮಾತ್ರವೇ ಅಭ್ಯಾಸ ಮಾಡಬೇಕು.

2. ತಾಯಿ ಎಂದಿಗೂ ಶಿಶುವನ್ನು ಬಿಟ್ಟಿರಬಾರದು; ವಿಧಿಯಿಲ್ಲದ ಪರಿಸ್ಥಿತಿಗಳಲ್ಲಿ ಹೊರತಾಗಿ ಶಿಶುಗಳು ತಂದೆ-ತಾಯಿಯರ ಹತ್ತಿರವೇ ಬೆಳೆಯಬೇಕು.

3. ಬಾಲ್ಯಾವಸ್ಥೆಯಲ್ಲಿ ಪ್ರವೇಶಿಸಿದ ಕೂಡಲೇ ನೂತನ ಬಾಲಕ-ಬಾಲಕಿಯರಿಗೆ ಬ್ರಹ್ಮಜ್ಞಾನವನ್ನು ಬೋಧಿಸಬೇಕು; ಅವರಿಂದ ಧ್ಯಾನಭ್ಯಾಸ ಮಾಡಿಸಬೇಕು, ಅವರ ಧ್ಯಾನಾನುಭವಗಳನ್ನು ಶ್ರದ್ಧೆಯಿಂದ ಗ್ರಹಿಸಬೇಕು.

4. ಬ್ರಹ್ಮಜ್ಞಾನದ ಜೊತೆ ಲೋಕವಿದ್ಯೆಗಳನ್ನು ಕೂಡಾ ಆರಂಭಿಸಬೇಕು.

5. ಬಾಲಕ-ಬಾಲಕಿಯರನ್ನು ’ಬಾಲಕ-ಬಾಲಕಿಯರಂತೆ’ ನೋಡಬಾರದು! ಅವರು ಸಹ ಅನೇಕ ಜನ್ಮಗಳಿಂದ ಅನೇಕ ಅನುಭವಗಳನ್ನು ಹೊಂದಿರುವಂತಹ ಅನೇಕ ಮಹಾತ್ಮರಾಗಿರಬಹುದು! ಮಹಾತ್ಮರಾಗಿ ಇರುತ್ತಾರೆ! ಯಾವ ಹುತ್ತದಲ್ಲಿ ಯಾವ ಹಾವಿದೆಯೊ ಅಲ್ಲವೇ! ಕೆಲವರು ಬಾಲಕ-ಬಾಲಕಿಯರು ಮಾತ್ರವೇ ಪ್ರಥಮ ಜನ್ಮದಲ್ಲಿರುವವರಿರುತ್ತಾರೆ. ಚಿಕ್ಕಮಕ್ಕಳ ಜೊತೆ ವ್ಯವಹರಿಸುವಾಗ, ಹಿರಿಯರ ಜೊತೆ ಹೇಗೆ ವ್ಯವಹರಿಸುತ್ತೇವೊ ಹಾಗೆ ವ್ಯವಹರಿಸಬೇಕು. ಅವರ ಇಷ್ಟಾನಿಷ್ಟಗಳನ್ನು ತಿಳಿದುಕೊಳ್ಳಬೇಕು. ನಮ್ಮ ಇಷ್ಟಾನಿಷ್ಟಗಳನ್ನು ಅವರ ಮೇಲೆ ಹೇರಬಾರದು.

6. ಮಕ್ಕಳನ್ನು ನಿರ್ಭಯರನ್ನಾಗಿ ಮಾಡುವುದು ಹಿರಿಯರ ಪ್ರಥಮ ಕರ್ತವ್ಯ. ಮಕ್ಕಳನ್ನು ಸಕಲ ವಿದ್ಯಾಪಾರಂಗತರಾಗಿ, ಸಕಲ ಕಲಾಕೋವಿದರಾಗಿ ಮಾಡುವುದೇ ತಂದೆ-ತಾಯಿಯರ ಪೂರ್ಣ ಉದ್ದೇಶವಾಗಿರಬೇಕು.

7. ಇಂದಿನ ಶಾಲೆಗಳೆಲ್ಲಾ ಅಂದಿನ ಗುರುಕುಲಗಳಾಗಿ ತಯಾರಾಗಬೇಕು, ಅಂದಿನ ಗುರುಕುಲಗಳಲ್ಲಿ ’ಧ್ಯಾನ’, ’ಆತ್ಮಜ್ಞಾನ’, ’ಗುರುಗಳ ಸೇವೆ’ ಎನ್ನುವುದು ಪ್ರಥಮ ಸ್ಥಾನವನ್ನು ಆಕ್ರಮಿಸಿ ಇರುತ್ತಿತ್ತು.

8. ಮಕ್ಕಳಿಂದ ಅನೇಕಾನೇಕ ಪ್ರಶ್ನೆಗಳು ಹೊರಹೊಮ್ಮುತ್ತಿರುತ್ತವೆ, ಪ್ರಶ್ನೆಗಳಿಗೆ ಸರಿಯಾದ ಉತ್ತರ ನಮಗೆ ತಿಳಿದಿದ್ದರೆ ಮಾತ್ರ ಹೇಳಬೇಕು; ನಮಗೆ ತಿಳಿಯದಿದ್ದರೆ ತಿಳಿದವರ ಹತ್ತಿರ ಅವರನ್ನು ಕಳುಹಿಸಬೇಕು; ಅಷ್ಟೇ ವಿನಹ ಅವರ ಜ್ಞಾನತೃಷೆಯ ಮೇಲೆ ತಣ್ಣೀರು ಎರಚಬಾರದು.

9. ಮಕ್ಕಳಲ್ಲಿ ’ಸ್ಪರ್ಧಾತತ್ವ’ದ ಜೊತೆ ’ಸ್ವರ್ಧೆ ಇಲ್ಲದ ತತ್ವ’ವನ್ನು ಕೂಡಾ ಸರಿಸಮಾನವಾಗಿ ಅಭಿವೃದ್ಧಿಗೊಳಿಸಬೇಕು.

10. ಆಗಾಗ ಮಕ್ಕಳನ್ನು ಏಕಾಂತವಾಗಿ ತಪ್ಪದೇ ಬಿಡಬೇಕು; ಮಾನವ ಜೀವನ ಅಥವಾ ಯಾವ ಪ್ರಾಣಿಯ ಜೀವನವಾದರು ಎಂದಿಗೂ ಏಕಾಂತವೇ ಅಲ್ಲವೇ! ಮುಂಬರುವ ಅತಿ ಮಹತ್ವದ ಏಕತ್ವಕ್ಕೆ ಬಾಲ್ಯದಲ್ಲೇ ನಾಂದಿ ಹಾಡಬೇಕು.

11. ಪ್ರತಿದಿನ ನಿಗದಿತ ಸಮಯದಲ್ಲಿ ಮಕ್ಕಳು ಮೌನವಾಗಿರಲು ನಿರ್ದೇಶಿಸಬೇಕು .. ಸರಿಯಾದ ಮಕ್ಕಳ ಬೆಳವಣಿಗೆ ಎನ್ನುವ ವಿಷಯದಲ್ಲಿ ಈ ರೀತಿ ಅನೇಕಾನೇಕ ಮೂಲಭೂತ ಸೂತ್ರಗಳಿವೆ. ಪ್ರಕೃತಿಪರವಾಗಿ ತಯಾರಾದ ತಂದೆ-ತಾಯಿಯರು ’ನಿಜವಾದ ತಂದೆತಾಯಿ’ಯರಾಗಿ ಬದಲಾಗಬೇಕು. ಪ್ರತಿ ತಂದೆ-ತಾಯಿ ’ನಿಜವಾದ ತಂದೆ’ – ’ನಿಜವಾದ ತಾಯಿ’ಯಾಗಿ ಬದಲಾದ ದಿನ ಈ ಭೂಮಿ ಸ್ವರ್ಗವಾಗಿ ಬದಲಾಗಿಬಿಡುತ್ತದೆ!

ಹಿಂದೂ ಧರ್ಮದಲ್ಲಿ ’ಉಪನಯನ’ ಅಂದರೆ ’ಮೂರನೆಯ ಕಣ್ಣು’ (Third eye) ಎನ್ನುವುದು ಪ್ರಧಾನ ಅಂಶ! ಇದನ್ನೇ ‘E.S.P. (Extra Sensory Perception)‘ ಎಂದು ಸಹ ಹೇಳುತ್ತೇವೆ! ’ದಿವ್ಯದೃಷ್ಟಿ’, ’ದಿವ್ಯಶ್ರವಣ’, ’ದಿವ್ಯಯಾನ’ – ಮುಂತಾದ್ದೆಲ್ಲಾ ಇದರ ಕೆಳಗೆ ಬರುತ್ತವೆ. “ಬ್ರಹ್ಮೋಪದೇಶ” ಮಾಡುತ್ತೇವೆ, ಅಂದರೆ – ’ತತ್ತ್ವಮಸಿ’, ’ನೀನೇ ದೇವರು’, ’ಅಹಂ ಬ್ರಹ್ಮಾಸ್ಮಿ’, ’ನಾನೇ ದೇವರು’ ಎನ್ನುವುದನ್ನು ಬೋಧಿಸುತ್ತೇವೆ. “ಮೂರನೆಯ ಕಣ್ಣು” ಎನ್ನುವುದು ಧ್ಯಾನಾಭ್ಯಾಸದ ಮೂಲಕವೇ ಅಂಕುರಗೊಳ್ಳುತ್ತದೆ. “ಧ್ಯಾನಯೋಗ” ಎಂದರೆ “ಚಿತ್ತವೃತ್ತಿ ನಿರೋಧ”. ಇದು ಕೇವಲ ’ಆನಾಪಾನಸತಿ’ ಅಥವಾ “ಶ್ವಾಸವನ್ನು ಗಮನಿಸುವುದ”ರಿಂದ ಮಾತ್ರವೇ ಸಾಧ್ಯ. ಆದ್ದರಿಂದ, ಶಿಶುತ್ವ ಹೋಗಿ ಬಾಲತ್ವ ಬರುತ್ತಲೇ, ಬಾಲಕ-ಬಾಲಕಿಯರೆಲ್ಲರೂ ಪ್ರಪ್ರಥಮವಾಗಿ ಬ್ರಹ್ಮೋಪದೇಶವನ್ನು ಪಡೆದು ಧ್ಯಾನಾಭ್ಯಾಸದ ತಿರುಳನ್ನು ಅವರ ಜೀವನಗಳಲ್ಲಿ ಪ್ರವೇಶಿಸುವಂತೆ ಮಾಡುತ್ತೇವೆ. “ಬಾಲತ್ವ” ಎನ್ನುವುದು ಏಳು ವರ್ಷಗಳ ಕಾಲ ಇರುತ್ತದೆ. ಏಳು ವರ್ಷಗಳ ನಂತರ ಬಾಲಕ-ಬಾಲಕಿಯರು “ಯೌವನಾವಸ್ಥೆ”ಯಲ್ಲಿ ಪ್ರವೇಶಿಸುತ್ತಾರೆ. ಈ ಏಳು ವರ್ಷಗಳಲ್ಲಿ ಧ್ಯಾನಭ್ಯಾಸದ ಮೂಲಕ ಪೂರ್ತಿಯಾಗಿ ಬ್ರಹ್ಮಜ್ಞಾನಿಗಳಾಗಿ ಬೆಳಗುತ್ತಾರೆ, ’ಬ್ರಹ್ಮಚಾರಿ/ಬ್ರಹ್ಮಚಾರಿಣಿ’ಗಳಾಗುತ್ತಾರೆ. ಮತ್ತು ಯೌವನಾವಸ್ಥೆಯಲ್ಲಿ ಪ್ರವೇಶಿಸುತ್ತಲೆ ದೇಹ ಪ್ರಕೃತಿಪರವಾಗಿ ನೂತನ ಸೃಷ್ಟಿ ಕಾರ್ಯಕ್ರಮಕ್ಕೆ ತಕ್ಕ ಶಕ್ತಿಸಾಮರ್ಥ್ಯಗಳು ಬರುತ್ತವೆ. ಆದ್ದರಿಂದ, ಗೃಹಸ್ಥಾಶ್ರಮಕ್ಕೆ ತಕ್ಷಣ ಹೋಗಬಹುದು.

ಬಾಲತ್ವ ಪ್ರಾರಂಭದಲ್ಲೇ ಬ್ರಹ್ಮೋಪದೇಶವು, ಉಪನಯನ ಕಾರ್ಯಕ್ರಮಗಳು ನಡೆದು, ಬಾಲ ವಯಸ್ಸಿನಲ್ಲಿ ಪೂರ್ತಿಯಾಗಿ ಧ್ಯಾನಾಭ್ಯಾಸವೂ, ಜ್ಞಾನಭ್ಯಾಸವೂ ಪೂರ್ತಿಯಾಗಿ ನಡೆದು, ಯುವ ವಯಸ್ಸಿಗೆ ಪ್ರವೇಶಿಸುವ ತಾರುಣ್ಯ ಪೂರ್ತಿ ಬ್ರಹ್ಮಚಾರಿ, ಬ್ರಹ್ಮಚಾರಿಣಿಗಳಾಗಿ ’ದೇಹಧಾರುಡ್ಯ’ದ ಜೊತೆ ’ಆತ್ಮಧಾರುಡ್ಯ’ವು ಕೂಡಾ ಸಂಪೂರ್ಣವಾಗಿ ಹೊಂದಿರುತ್ತಾರೆ. ಅಂತಹವರು ಆಗ ಗೃಹಸ್ಥಾಶ್ರಮವನ್ನು ಸ್ವೀಕರಿಸಿ ನೂತನ ಶಿಶುಗಳನ್ನು ಪ್ರಕೃತಿ ಮಡಿಲಿನಿಂದ ಪಡೆದು ಅವರು ಸಹ ಶಿಶುತ್ವದಲ್ಲಿ ಅವರ ಶರೀರ ಪೋಷಣೆಯನ್ನು ಸಕ್ರಮವಾಗಿ ನೋಡಿಕೊಳ್ಳುತ್ತಾ, ಅವರು ಸಹ ಬಾಲ ವಯಸ್ಸಿನಲ್ಲಿ ಬಂದ ತಕ್ಷಣ ಅವರ ಆತ್ಮೋನ್ನತಿಗೆ ಕೂಡಾ ಕಾರಣಭೂತರಾಗುತ್ತಾ ಈ ವಿಧವಾಗಿ “ಸರಿಯಾದ ಮಕ್ಕಳ ಬೆಳವಣಿಗೆ” ನಡೆಯುತ್ತದೆ.