“ಬುದ್ಧ ಪೂರ್ಣಿಮೆಯಲ್ಲಿ ಪತ್ರೀಜಿಯವರ ಸಂದೇಶಗಳು”

ಮೇ 15ರ ಮುಂಜಾನೆ 5 ರಿಂದ 7 ರವರೆಗೂ ಪಿರಮಿಡ್ ವ್ಯಾಲಿಯ ಬಯಲು ರಂಗಮಂದಿರದಲ್ಲಿ ಅದ್ಭುತವಾದ ಸಂಗೀತದ ಜೊತೆಗೆ, ಸಾವಿರಾರು ಜನ ಪಿರಮಿಡ್ ಮಾಸ್ಟರ್‌ಗಳ ಸಮಕ್ಷಮದಲ್ಲಿ ಪತ್ರೀಜಿ ಧ್ಯಾನವನ್ನು ಮಾಡಿಸಿದರು. ಪಕ್ಷಿಗಳ ಚಿಲಿಪಿಲಿ ಶಬ್ದ, ಕೋಗಿಲೆಗಳ ಕುಹುಕುಹು ನಾದಗಳು, ಪ್ರಕೃತಿ ಸೌಂದರ್ಯದ ನಡುವೆ ಪ್ರಾತಃಕಾಲದ ಆ ಧ್ಯಾನವು ಎಂತಹ ಅದ್ಭುತವಾಗಿ ಇತ್ತು ಎಂಬುದನ್ನು ಪದಗಳಲ್ಲಿ, ಇಲ್ಲಿ ಹೇಳಲಾಗುವುದಿಲ್ಲ. ಅದು ಅಷ್ಟೊಂದು ಚೆನ್ನಾಗಿತ್ತು. ಧ್ಯಾನದ ನಂತರ ಪತ್ರೀಜಿ ಧ್ಯಾನಿಗಳಿಗೆ ಸಂದೇಶವನ್ನು ನೀಡಿದರು.

“ಮನಸ್ಸು ಉಪಯುಕ್ತ ಮತ್ತು ನಿರುಪಯುಕ್ತ ಎರಡೂ ಹೌದು”

ಧ್ಯಾನಾನಂತರ ಪತ್ರೀಜಿ, ಪ್ರತಿಯೊಬ್ಬರೂ ಯಾವ ಆಲೋಚನೆಯೂ ಇಲ್ಲದೇ 5ನಿಮಿಷಗಳ ಕಾಲ ಪ್ರಕೃತಿಯ ಕಡೆ ಗಮನಹರಿಸಿ ಎಂದರು. ನಾವು ‘ಅಂತರ್‌ಪ್ರಕೃತಿ’ಯ ಜೊತೆ ಮತ್ತು ‘ಬಾಹ್ಯಪ್ರಕೃತಿ’ಯ ಜೊತೆ ಐಕ್ಯವಾಗುವುದನ್ನು ಕಲಿತುಕೊಳ್ಳಬೇಕು. ಯಾರು ಅಂತರ್‌ಪ್ರಕೃತಿ ಮತ್ತು ಬಾಹ್ಯ ಪ್ರಕೃತಿಯ ಜೊತೆ ಐಕ್ಯವಾಗುತ್ತಾರೊ (ಒಂದಾಗುತ್ತಾರೊ) ಅವರೇ ಬುದ್ಧರು. ಎಷ್ಟು ಹೆಚ್ಚಾಗಿ ಬಾಹ್ಯ ಪ್ರಕೃತಿಯ ಜೊತೆ ಒಂದಾಗುತ್ತೇವೋ ಅಷ್ಟು ಹೆಚ್ಚಾಗಿ ಬುದ್ಧತ್ವವನ್ನು ಹೊಂದಿ ಬುದ್ಧರಾಗುತ್ತೇವೆ. ಯಾವಾಗ ನಾವು ಕಣ್ಣುಗಳನ್ನು ತೆರೆದು ಬಾಹ್ಯ ಪ್ರಕೃತಿಯನ್ನು ನೋಡುತ್ತೇವೊ ಆಗ ನಾವು ಏನೂ ಯೋಚಿಸಬೇಕಾಗಿಲ್ಲ. ಮನಸ್ಸಿಗೆ ಯಾಕೆ ವ್ಯಾಯಾಮ ಮಾಡಿಸಬೇಕು. ಮನಸ್ಸಿಗೆ ವ್ಯಾಯಾಮ ಕೊಡದೆ ಇರುವುದನ್ನು ನಾವು ಕಲಿತುಕೊಳ್ಳಬೇಕು. ಅದೇ ಧ್ಯಾನ. ಮನಸ್ಸು ಎಂಬುದು ‘ಉಪಯುಕ್ತವಾದುದು’ ಹೌದು ಹಾಗೆಯೇ ಅದು ನಿರುಪಯುಕ್ತವಾದದೂ’ ಸಹ ಹೌದು. ಯಾವಾಗ ಉಪಯೋಗವಿಲ್ಲವೊ ಆಗ ಅದನ್ನು ಪಕ್ಕಕ್ಕೆ ಇಡಬೇಕು. ಮನಸ್ಸನ್ನು ಆಗಿಂದಾಗ ಪಕ್ಕಕ್ಕೆ ಇಡುವುದೇ ಧ್ಯಾನ. ಕಣ್ಣುಗಳನ್ನು ತೆರೆದಾಗಲಾಗಲಿ, ಮುಚ್ಚಿದಾಗಲಾಗಲಿ ಅದನ್ನು ಪಕ್ಕಕ್ಕೆ ಇಡುವುದೇ ಧ್ಯಾನ. ಯಾವಾಗಲೂ ನಾವು ಯೋಚಿಸಬೇಕಾಗಿಲ್ಲ.

“ಮನಸ್ಸು ಇಲ್ಲದ, ಸಾಕ್ಷೀ ಪ್ರಜ್ಞೆ”

ಭೂಮಂಡಲ ಒಂದು ಅದ್ಭುತವಾದ ಗ್ರಹ. ಆಗಿಂದಾಗ ನಮ್ಮನ್ನು ಮರೆತುಬಿಡುವುದನ್ನೇ ‘ಎನ್‌ಲೈಟೆನ್‌ಮೆಂಟ್’ ಎಂದು ಹೇಳಲಾಗಿದೆ. ಬುದ್ಧತ್ವ (Buddhahood) ಎಂದರೆ ಕಣ್ಣುಗಳನ್ನು ತೆರೆದು ಧ್ಯಾನ ಮಾಡುವುದು. ಕಣ್ಣುಗಳು ತೆರೆದಿರುತ್ತದೆ, ಆದರೆ, ಮನಸ್ಸು ಇರುವುದಿಲ್ಲ. ಆಗ, ಅಂತಹ ಸ್ಥಿತಿಯಲ್ಲಿ ಕಣ್ಣುಗಳು ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತವೆ. ಅದರಲ್ಲಿನ ಸೌಂದರ್ಯವನ್ನು ನೀವು ಸವಿಯಲೆಂದೇ ಪ್ರಕೃತಿಯನ್ನು ಅಷ್ಟೊಂದು ಸುಂದರವಾಗಿ ಸೃಷ್ಟಿಸಲಾಗಿದೆ. ಸುಂದರವಾಗಿರುವ ಯಾವುದೇ ವಸ್ತುವು ಎಂದೆಂದಿಗೂ ಸಂತೋಷ, ಆನಂದವನ್ನು ತರುವಂತಹುದೇ. ಪ್ರಕೃತಿಯನ್ನು ಕುರಿತು ಏನಂತ ಹೇಳಲಾಗುತ್ತದೆ. ಪ್ರಕೃತಿ ಎಂತಹ ಸುಂದರವಾದದ್ದು. ಪ್ರಕೃತಿಯನ್ನು ನೋಡುತ್ತಿದ್ದರೆ ಎಷ್ಟು ಆನಂದವಾಗುತ್ತದೆ. “ಎಷ್ಟು ಹೆಚ್ಚು ಸಮಯ ನಾವು ಪ್ರಕೃತಿಯನ್ನು ಆಸ್ವಾದಿಸುತ್ತೇವೊ ಅಷ್ಟು ಹೆಚ್ಚು ಶಕ್ತಿವಂತರಾಗುತ್ತೇವೆ”. ಗಿಡ-ಮರಗಳನ್ನು, ಬೆಟ್ಟ-ಗುಡ್ಡಗಳನ್ನು, ನದಿ-ಸಮುದ್ರಗಳನ್ನು, ಹಾರುತ್ತಿರುವ ಹಕ್ಕಿಗಳನ್ನು ಆನಂದವಾಗಿ ನೋಡುತ್ತಿರಬೇಕು, ಗಮನಿಸುತ್ತಿರಬೇಕು. ಅದರ ಅಂದ-ಚಂದಗಳನ್ನು ಆನಂದವಾಗಿ ನೋಡುತ್ತಿರಬೇಕು. ಯಾರು ಎಷ್ಟು ಹೆಚ್ಚಾಗಿ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಬಲ್ಲರೊ ಅವರು ಅಷ್ಟು ಹೆಚ್ಚಾಗಿ ಆನಂದವಾಗಿ, ಆರೋಗ್ಯವಾಗಿ, ಚಿರಂಜೀವಿಗಳಾಗಿ ಜೀವಿಸುತ್ತಾರೆ. ಈ ಭೂಮಿಯ ಮೇಲೆ ನಮ್ಮ ಆಯುಷ್ಯವನ್ನು ಹೆಚ್ಚಿಸಿಕೊಳ್ಳಬೇಕಾದರೆ ನಾವು ಹೆಚ್ಚು ಹೊತ್ತು ಪ್ರಕೃತಿಯ ಜೊತೆ ಒಂದಾಗಬೇಕು. “ನೀವು ಹೆಚ್ಚು ಹೆಚ್ಚು ಸಂತೋಷಕರ ವ್ಯಕ್ತಿಯಾಗಬೇಕು ಎಂದು ಬಯಸುವುದಾದರೆ, ಪ್ರಕೃತಿಯಲ್ಲಿ ಒಂದಾಗಿ”. ಕಣ್ಣುಗಳನ್ನು ಮುಚ್ಚಿಕೊಂಡು ಶಾಂತಿಯನ್ನು, ಕಣ್ಣುಗಳನ್ನು ತೆರೆದು ಅಂದ-ಚಂದಗಳನ್ನು ನೋಡುತ್ತಿರಬೇಕು, ಅನುಭವಿಸುತ್ತಿರಬೇಕು. ಆ ಅನುಭವವು, ಅದು ಸಿಗುವವರೆಗೂ ಅರ್ಥವಾಗುವುದಿಲ್ಲ. ಅಲ್ಲಿ ಮನಸ್ಸು ಇರಬಾರದು, ಕಣ್ಣುಗಳು ನೋಡುತ್ತಿರಬೇಕು. ಕಣ್ಣುಗಳ ತುಂಬ ಸೌಂದರ್ಯವೇ ತುಂಬಿರಬೇಕು. ಮನಸ್ಸು ಶೂನ್ಯವಾಗಿರಬೇಕು. ಹೀಗೆ ಬುದ್ಧತ್ವವನ್ನು ಸಾಧಿಸಬೇಕು. ಸಂಗೀತ ಎಷ್ಟು ಹೆಚ್ಚುಹೆಚ್ಚು ಕಾಲ ಸಾಧನೆ ಮಾಡಿದರೆ ಅಷ್ಟಷ್ಟು ದೊಡ್ಡ ಸಂಗೀತಕಾರರಾಗುತ್ತೇವೆ. “ಎಷ್ಟು ಹೊತ್ತು ಕಣ್ಣುಗಳನ್ನು ಮುಚ್ಚಿಕೊಂಡು, ಕಣ್ಣುಗಳನ್ನು ತೆರೆದು ಧ್ಯಾನ ಸಾಧನೆ ಮಾಡುತ್ತೇವೊ ಅಷ್ಟು ಹೆಚ್ಚಾಗಿ ಬುದ್ಧತ್ವವನ್ನು ಹೊಂದುತ್ತೇವೆ”. ಪ್ರಪಂಚದಲ್ಲಿ ಕಣ್ಣುಗಳನ್ನು ತೆರೆದು ಜೀವಿಸಬೇಕು. ಮನಸ್ಸು ಇಲ್ಲದೇ ಜೀವಿಸಬೇಕು. ಧ್ಯಾನಾಭ್ಯಾಸವು ಮನುಷ್ಯನನ್ನು ಒಬ್ಬ ಕರಾರುವಾಕ್ ಮನುಷ್ಯನನ್ನಾಗಿಸುತ್ತದೆ.

“ತೆರೆದ ಕಣ್ಣಿನ ಧ್ಯಾನ”

ಧ್ಯಾನದಲ್ಲಿ ಎರಡು ಬಗೆಗಳು ಇವೆ. ಕಣ್ಣುಗಳನ್ನು ಮುಚ್ಚಿಕೊಂಡು ಮಾಡುವ ಧ್ಯಾನ, ಕಣ್ಣುಗಳನ್ನು ತೆರೆದುಕೊಂಡು ಮಾಡುವ ಧ್ಯಾನ. ಕಣ್ಣುಗಳನ್ನು ಮುಚ್ಚಿಕೊಂಡು ಶ್ವಾಸವನ್ನು ಗಮನಿಸುತ್ತಾ ಮಾಡುವ ಧ್ಯಾನ ಮತ್ತು ಕಣ್ಣುಗಳನ್ನು ತೆರೆದು ಪ್ರಕೃತಿಯ ಜೊತೆ ಒಂದಾಗಿ ಮಾಡುವ ಧ್ಯಾನ. ಕಣ್ಣುಗಳನ್ನು ಮುಚ್ಚಿದರೂ ಧ್ಯಾನದಲ್ಲಿರಬೇಕು, ಕಣ್ಣುಗಳನ್ನು ತೆರೆದರೂ ಧ್ಯಾನದಲ್ಲಿರಬೇಕು. ನಮ್ಮ ಬದುಕು ನಮ್ಮಿಂದ ಎಷ್ಟು ಅಧ್ವಾನವಾಗಿ ಹೋಗಿದೆಯೋ, ಎಷ್ಟು ಭಾರವಾಗಿ ಹೋಗಿದೆಯೋ ಲೆಕ್ಕವೇ ಇಲ್ಲ. ಆಲೋಚನೆಗಳು ಹೆಚ್ಚಾಗುವುದರಿಂದ ಭಾರವಾಗುತ್ತದೆ. ಭಾರವಾಗಿ ಇರುತ್ತದೆ. ಪ್ರತಿದಿನ ಮುಂಜಾನೆ ಅರ್ಧಗಂಟೆ ಕಾಲ ಕಣ್ಣುಗಳನ್ನು ತೆರೆದುಕೊಂಡು ಧ್ಯಾನ ಸಾಧನೆ ಮಾಡಬೇಕು (Open Eye Meditation) ಯವಾಗ ನಾವು ಪ್ರಕೃತಿಯನ್ನು ಮನಸ್ಸು ಇಲ್ಲದೇ ಗಮನಿಸಬಲ್ಲವರಾಗುತ್ತೇವೆಯೋ ಆಗ, ಹೊರಗೆ ಇರುವ ಮನುಷ್ಯರನ್ನು ಸಹ ಮನಸ್ಸು ಇಲ್ಲದೇ ಗಮನಿಸಬಲ್ಲವರಾಗುತ್ತೇವೆ. ನೀವು ಮನಸ್ಸನ್ನು ಉಪಯೋಗಿಸದೇ ಮನುಷ್ಯರು ಹೇಗೆ ಮಾತನಾಡುತ್ತಿದ್ದಾರೆ, ಏನು ಮಾಡುತ್ತಿದ್ದಾರೆ ಎನ್ನುವದನ್ನು ಗಮನಿಸಬೇಕು. ಮನುಷ್ಯರ ಅಂದ ಚಂದಗಳನ್ನು ಆಸ್ವಾದಿಸಬೇಕು ಎಂದು ಪ್ರಕೃತಿಯ ಮಹತ್ನನ್ನು ಕುರಿತು ತುಂಬಾ ವಿವರವಾಗಿಹೇಳಿದರು.

ಮೇ 16 ರಂದು ಮುಂಜಾನೆ 5 ರಿಂದ 6 ರವರೆಗೂ ಧ್ಯಾನ ಅದ್ಭುತವಾಗಿ ನಡೆಯಿತು. ಪತ್ರೀಜಿಯವರು ವೇಣುನಾದ, ಸಿತಾರ್, ವಯೋಲಿನ್, ತಬಲ ಜೊತೆ ಧ್ಯಾನ ತುಂಬಾ ಚೆನ್ನಾಗಿ ನಡೆಯಿತು. ಧ್ಯಾನದ ನಂತರ ಪತ್ರೀಜಿ ‘ಬುದ್ಧಂ ಶರಣಂ ಗಚ್ಛಾಮಿ, ಧರ್ಮಂ ಶರಣಂ ಗಚ್ಛಾಮಿ, ಸಂಘಂ ಶರಣಂ ಗಚ್ಛಾಮಿ’ ಕುರಿತು ತುಂಬಾ ಚೆನ್ನಾಗಿ ವಿವರಿಸಿದರು.

“ನಾನು ಒಂದು ದೊಡ್ಡ ಸೊನ್ನೆ”

ಪಿರಮಿಡ್ ಸ್ಪಿರಿಚ್ಯೂವಲ್ ಸೊಸೈಟೀಸ್ ಮೂವ್‌ಮೆಂಟ್ ಈ ಮೂರಕ್ಕೂ ಅಂಕಿತವಾಗಿದೆ ಬುದ್ಧಂ ಶರಣಂ ಗಚ್ಛಾಮಿ, ಧರ್ಮಂ ಶರಣಂ ಗಚ್ಛಾಮಿ, ಸಂಘಂ ಶರಣಂ ಗಚ್ಛಾಮಿ ಎಂದು ಹೇಳಿ, ಬುದ್ಧಂ ಶರಣಂ ಗಚ್ಛಾಮಿ- ಗಚ್ಛಾಮಿ ಅಂದರೆ, ನಾನು ಆ ಕಡೆಗೆ ಹೋಗುತ್ತಿದ್ದೇನೆ. ನಾನು ಬುದ್ಧತ್ವದ ಕಡೆಗೆ ಹೋಗುತ್ತಿದ್ದೇನೆ. ಬುದ್ಧಂ ಅಂದರೆ, ಎನ್‌ಲೈಟೆನ್‌ಮೆಂಟ್. ನಿಮ್ಮ ವ್ಯಕ್ತಿಗತ ಪ್ರಾಮುಖ್ಯತೆಯನ್ನು ಸೊನ್ನೆಗೊಳಿಸಿಕೊಳ್ಳುವುದನ್ನೇ ಸಾಕ್ಷಾತ್ಕಾರ ಅಂದರೆ ಎನ್‌ಲೈಟ್‌ಮೆಂಟ್ ಎಂಬುದರ ಅರ್ಥ. ನೀನು ಒಂದು ದೊಡ್ಡ ಸೊನ್ನೆ. ಬುದ್ಧತ್ವ ಅಂದರೆ, ಶೂನ್ಯತೆ. ಶೂನ್ಯತೆ ಅಂದರೆ, ಝೀರೊ.. ನಾವು ಏನೇನೂ ಅಲ್ಲ, ಕೇವಲ ಒಂದು ದೊಡ್ಡ ಸೊನ್ನೆ ಎಂಬುದನ್ನು ನಾವು ಎಂದೆಂದಿಗೂ ನೆನಪಿಟ್ಟುಕೊಳ್ಳಬೇಕು. ಯಾರು ತಮ್ಮ ದಿನನಿತ್ಯದ ಜೀವನದಲ್ಲಿ ಈ ಶೂನ್ಯತ್ವವನ್ನು ಪಾಲಿಸಬಲ್ಲವರಾಗುತ್ತಾರೋ, ಅವರೇ ಬುದ್ಧ. ಆ ಸ್ಥಿತಿಯನ್ನೇ ಬುದ್ಧತ್ವ ಎನ್ನುತ್ತಾರೆ. ಆಧ್ಯಾತ್ಮಿಕತೆ ಎಂದರೆ ‘ಎನ್‌ಲೈಟೆನ್‌ಮೆಂಟ್’. ‘ಎನ್‌ಲೈಟೆನ್‌ಮೆಂಟ್’ ಎಂದರೆ ನಾನು ಒಂದು ದೊಡ್ಡ ಸೊನ್ನೆ. ನಾನು ಒಬ್ಬ ದೊಡ್ಡ ಸಿತಾರ್ ವಾದ್ಯಕ, ಒಬ್ಬ ದೊಡ್ಡ ತಬಲ ವಾದ್ಯಕ, ಒಬ್ಬ ದೊಡ್ಡ ಕ್ರಿಕೆಟ್ ಆಟಗಾರ, ಒಬ್ಬ ಟಾಟಾ, ಬಿರ್ಲಾ ಇವೆಲ್ಲಾ ಮನಸ್ಸಿನಲ್ಲಿರುತ್ತದೆ. ಆದರೆ, ಸತ್ತ ನಂತರ, ಅಲ್ಲಿ ಇವು ಯಾವುದೂ ಇರುವುದಿಲ್ಲ. ಈ ಮನಸ್ಸು ತುಂಬಾ ಭಯಂಕರವಾದದ್ದು. ಇಂತಹ ಕಸದಿಂದ ತುಂಬಿರುವ ಮನಸ್ಸಿನಿಂದಲೇ ಎಲ್ಲರೂ ದುಃಖದ ಪಾಲಾಗುತ್ತಿದ್ದಾರೆ. ನಾವು ಯಾವುದಕ್ಕೋಸ್ಕರ ಆದರೂ ದುಃಖಿಸಿದರೆ ನಮಗೆ ತುಂಬಾ ಸ್ವ-ಪ್ರಾಮುಖ್ಯತೆ ಇದೆ ಎಂದರ್ಥ. ಎಲ್ಲಿ ಸ್ವ-ಪ್ರಾಮುಖ್ಯತೆ ಎನ್ನುವುದು ಇಲ್ಲವೋ ಅಲ್ಲಿ ದುಃಖ ಹೇಗಿರುತ್ತದೆ? ಎಲ್ಲಿ ದುಃಖ ಇರುತ್ತದೆಯೋ ಅಲ್ಲಿ ಬುದ್ಧತ್ವ ಇಲ್ಲ. ಎಲ್ಲಿ ಬುದ್ಧತ್ವ ಇದೆಯೊ ಅಲ್ಲಿ ದುಃಖವಿಲ್ಲ. ಎಲ್ಲಿ ಕತ್ತಲೆ ಇದೆಯೋ, ಅಲ್ಲಿ ಸೂರ್ಯನಿಲ್ಲ. ಎಲ್ಲಿ ಸೂರ್ಯನಿದ್ದಾನೋ ಅಲ್ಲಿ ಕತ್ತಲೆ ಇರುವುದಿಲ್ಲ. ಸೂರ್ಯನಿದ್ದರೆ ಕತ್ತಲೆ ಇರುವುದಿಲ್ಲ. ಬುದ್ಧತ್ವವಿದ್ದರೇ ದುಃಖ ಇರುವುದಿಲ್ಲ. ಬುದ್ಧತ್ವ ಇಲ್ಲದಿದ್ದರೆ ಪ್ರತಿಯೊಂದಕ್ಕೂ ದುಃಖ ಬರುತ್ತಿರುತ್ತದೆ. ನನ್ನ ತಾಯಿ ತೀರಿ ಹೋದಳು, ನನ್ನ ತಂದೆ ಮರಣಿಸಿದ, ನನ್ನ ಗುರುಗಳು ದೇಹತ್ಯಾಗ ಮಾಡಿದ್ದಾರೆ ಎಂದು ದುಃಖಿಸುತ್ತೇವೆ. ಶಿಷ್ಯನ ಗುಣಮಟ್ಟ ನೋಡಿದರೆ ಗುರುಗಳ ಗುಣಮಟ್ಟ ತಿಳಿದುಬರುತ್ತದೆ. ಯಥಾ ಗುರು ತಥಾ ಶಿಷ್ಯ, ಯಥಾ ರಾಜ ತಥಾ ಪ್ರಜಾ, ಯಥಾ ಮನಸ್ಸು ತಥಾ ಜೀವನ. ನಮ್ಮ ಮನಸ್ಸೇ ರಾಜ, ನಮ್ಮ ಮನಸ್ಸು ಹೇಗೆ ಇರುತ್ತದೊ ಹಾಗೆ ನಮ್ಮ ಜೀವನವಿರುತ್ತದೆ. ಈ ಮನಸ್ಸು ಎಂಬುವ ರಾಜನನ್ನು ಕೊಲ್ಲಬೇಕು. ಅದೇ ಬುದ್ಧತ್ವ. ನನ್ನಲ್ಲಿ ಮನಸ್ಸೇ ಇಲ್ಲ, ನಾನು ರಾಜನೇನಲ್ಲ, ನಾನು ಪ್ರಜೆಯೂ ಅಲ್ಲ ಎಂಬಂತಹ ಸ್ಥಿತಿಯಲ್ಲಿ ದುಃಖವೂ ಸಹ ಇಲ್ಲ. ಮನಸ್ಸೆಂಬುವುದು ಕೊಲ್ಲಲ್ಪಟ್ಟಾಗ ಇನ್ನು ಅಲ್ಲಿ ದುಃಖ ಎನ್ನುವುದು ಇರುವುದಿಲ್ಲ. ಬುದ್ಧನಾದವನು ಸಾಕ್ಷಿಯಾಗಿದ್ದುಕೊಂಡು, ಎಲ್ಲವನ್ನೂ ನಗುನಗುತ್ತಾ ನೋಡುತ್ತಾನೆ.

“ಸಾಕ್ಷಾತ್ಕಾರಕ್ಕಾಗಿ ಶೂನ್ಯವನ್ನು ಆಶ್ರಯಿಸಿ”

ಬುದ್ಧಂ ಶರಣಂ ಗಚ್ಛಾಮಿ, ಅಂದರೆ ನಾನು ಎನ್‌ಲೈಟೆನ್‌ಮೆಂಟ್‌ಗೆ ಶರಣು ಹೋಗಿದ್ದೇನೆ. ನಾನು ಶೂನ್ಯತೆಯನ್ನು ಆಶ್ರಯಿಸಿದ್ದೇನೆ. ಹೀರೋ ಹಾಗೆ ನಡೆದುಕೋ. ಆದರೆ, ನೀನು ಝೀರೋ ಎಂಬುದನ್ನು ಎಂದೆಂದಿಗೂ ನೆನಪಿನಲ್ಲಿಟ್ಟುಕೋ. ಕೃತಿಯಲ್ಲಿ, ಕಾರ್ಯದಲ್ಲಿ ಮಾತ್ರವೇ ನೀನು ‘ಹೀರೋ’, ಆದರೆ, ಮನಸ್ಸಿನಲ್ಲಿ ಮಾತ್ರ ನೀನು ಎಂದೆಂದಿಗೂ ‘ಝೀರೋ’. ಮಾನಸಿಕವಾಗಿ, ಮನಸ್ಸಿನಲ್ಲಿ ನೀನು ‘ಝೀರೋ’ ಆಗದ ಹೊರತು ಕೃತಿಯಲ್ಲಿ, ಕಾರ್ಯದಲ್ಲಿ ಎಂದೆಂದಿಗೂ ನೀನು ‘ಹೀರೋ’ ಆಗಲಾರೆ. ಕೃಷ್ಣನು ತನ್ನ ಕೆಲಸಗಳಲ್ಲಿ ಹೀರೊ, ಏಕೆಂದರೆ, ಆತನ ಮನಸ್ಸಿನಲ್ಲಿ ಸದಾ ಶೂನ್ಯತೆ ಇರುತ್ತದೆ. ಆತ ‘ಯೋಗೀಶ್ವರ’. ನಾವು ಸಹ ಕೃಷ್ಣನ ಹಾಗೆ ಮನಸ್ಸಿನಲ್ಲಿ ಶೂನ್ಯತೆಯನ್ನು ಹೊಂದಿದ್ದರೆ ಮಾತ್ರವೇ ನಮ್ಮ ದಿನನಿತ್ಯದ ಕಾರ್ಯಕಲಾಪಗಳಲ್ಲಿ ಕೃಷ್ಣನ ಹಾಗೆ ಇರಬಲ್ಲೆವು. ಆತ ಏನು ಮಾಡಿದರೂ ಅದು ಪರಿಪೂರ್ಣವಾಗಿರುತ್ತದೆ. ಅವನು ನೃತ್ಯ ಮಾಡಿದರೆ ಅದು ಉತ್ತಮವಾದ ನೃತ್ಯ. ಅವನು ಕೊಳಲು ನುಡಿಸಿದರೆ ಅದು ಉತ್ತಮವಾದ ನಾದ. ಅವರು ಇತರರ ಮೇಲೆ ಉಪಾಯಗಳನ್ನು ಹೂಡಿದರೆ ಅವು ಉತ್ತಮವಾದ ಉಪಾಯಗಳು. ಅವರು ಬೋಧಿಸಿದರೇ ಅದು ಶ್ರೇಷ್ಠ ಬೋಧನೆ. ಏಕೆಂದರೆ, ಅವರು ‘ಯೋಗೀಶ್ವರರು’. ಯೋಗ ಎಂದರೆ ಮನಸ್ಸನ್ನು ಶೂನ್ಯ ಮಾಡಿಕೊಳ್ಳುವುದೇ. ‘ಯೋಗೀಶ್ವರ’ ಎಂದರೆ, ಮನಸ್ಸಿನಲ್ಲಿ ಅಗಾಧವಾದ ಶೂನ್ಯತೆ ಹೊಂದಿರುವುದು. ‘ಯೋಗಃ ಚಿತ್ತವೃತ್ತಿ ನಿರೋಧ’. ಒಬ್ಬ ಬುದ್ಧನ, ಒಬ್ಬ ಕೃಷ್ಣನ ಮನಸ್ಸಿನಲ್ಲಿ ಅಗಾಧವಾದ ಶೂನ್ಯತೆ ನೆಲೆಸಿದೆ. ಹೊರನೋಟಕ್ಕೆ ಮಾತ್ರ ಆತ ಹೀರೋ, ಚಕ್ರ ಬಿಡುತ್ತಾನೆ, ಭಗವದ್ಗೀತೆ ಹೇಳುತ್ತಾನೆ, ಹಲವಾರು ಪತ್ನಿಯರು ಇದ್ದಾರೆ. ಆದರೆ, ಒಳಗೆ (ಅಂತರಂಗದಲ್ಲಿ) ಮಾತ್ರ ಬಹುದೊಡ್ಡ ಶೂನ್ಯ. ಯಾರೆಲ್ಲಾ ಮನಸ್ಸಿನಲ್ಲಿ ಝೀರೋ ಆಗಿರುತ್ತಾರೆಯೋ, ಅವರೆಲ್ಲರೂ ಜೀವನದಲ್ಲಿ ಹೀರೋಗಳೇ ಆಗಿರುತ್ತಾರೆ. ಮನಸ್ಸಿನಲ್ಲಿ ‘ನಾನು ಹೀರೋ’ ಎಂದು ನೀನು ಅಂದುಕೊಂಡರೆ, ಜೀವನದಲ್ಲಿ ‘ನೀನು ಬರೀ ಝೀರೋ’ ಅಷ್ಟೇ. ನಿನ್ನ ಜೀವನ ತುಂಬಾ ಅಧ್ವಾನವಾಗಿರುತ್ತದೆ. ಪ್ರತಿದಿನ ಧ್ಯಾನ ಸಾಧನೆಯಿಂದ ಮನಸ್ಸಿನಲ್ಲಿ ಶೂನ್ಯತೆ ಬರುತ್ತದೆ. ಧ್ಯಾನ ಸಾಧನೆಯಿಂದ ಎನ್‌ಲೈಟೆನ್‌ಮೆಂಟ್ ಒಂದೇ ಬರುತ್ತದೆ. ಒಂದು ಸಲ ಎನ್‌ಲೈಟೆನ್‌ಮೆಂಟ್ ಬಂದ ನಂತರ ನಾವು ಮರಳಿ ಹಿಂದಕ್ಕೆ ಹೋಗಲಾಗುವುದಿಲ್ಲ. ಹಾಲು ಮೊಸರಾದ ಮೇಲೆ ಪುನಃ ಮೊಸರು ಹಾಲಾಗುವುದಿಲ್ಲ. ಆದ್ದರಿಂದ, ಶೂನ್ಯತೆಯನ್ನು ಸಾಧನೆಯಿಂದ ಸಾಧಿಸಬೇಕು. ಬುದ್ಧತ್ವವನ್ನು ಸಾಧನೆ ಮಾಡಿ ಪಡೆಯಬೇಕು.

‘ಬುದ್ಧ’ ಒಬ್ಬ ‘ದೊಡ್ಡ ಝೀರೊ’, ‘ವೇದವ್ಯಾಸ’ ಒಬ್ಬ ‘ದೊಡ್ಡ ಝೀರೊ’, ‘ಜೀಸಸ್’ ಒಬ್ಬ ‘ದೊಡ್ಡ ಝೀರೊ’, ’ಮಹಾವೀರ’ ಒಬ್ಬ ‘ದೊಡ್ಡ ಝೀರೊ’, ‘ಮಿಲಾರಪ್ಪ’, ‘ಮಾರ್ಪ’, ‘ಶಂಕರಾಚಾರ್ಯ’ ಇವರೆಲ್ಲಾ ಸಹ ‘ದೊಡ್ಡ ಝೀರೊ’. ಅದೇ ನಾವು ಸಾಧಿಸಬೇಕಾದ್ದು. ಹೇಗೆಂದರೆ ಆಗಿಂದಾಗ ಶೂನ್ಯತೆಯನ್ನು (emptiness) ಸಾಧನೆ ಮಾಡುವುದರಿಂದ. ಎಷ್ಟು ಹೆಚ್ಚುಹೆಚ್ಚು ಶೂನ್ಯತೆಯನ್ನು ಸಾಧನೆ ಮಾಡುತ್ತೇವೋ ಅಷ್ಟು ಹೆಚ್ಚು ಶೂನ್ಯತೆಯನ್ನು ಹೊಂದುತ್ತೇವೆ. ಇದು ಬುದ್ಧತ್ವ.

“ಧರ್ಮ ಪಾಲನೆ ಎಂದರೆ ನಮ್ಮ ನಮ್ಮ ಪಾತ್ರ ನಿರ್ವಹಿಸುವುದು”

ಎನ್‌ಲೈಟೆನ್‌ಮೆಂಟ್ ಆಗುವುದಕ್ಕಿಂತಾ ಮುಂಚೆ ಯಾರೂ ಸಹ ಧರ್ಮವನ್ನು ಅರ್ಥಮಾಡಿಕೊಳ್ಳಲಾರರು. “ಧರ್ಮಂ ಶರಣಂ ಗಚ್ಛಾಮಿ” ಎಂದರೆ ನಮ್ಮ ಪಾತ್ರವನ್ನು ನಾವು ಪರಿಪೂರ್ಣವಾಗಿ ನಿರ್ವಹಿಸಬೇಕು ಎಂದು ಅರ್ಥ. ಧರ್ಮಂ ಅಂದರೆ, ನಮ್ಮ ಪಾತ್ರವನ್ನು ಗುರ್ತಿಸಿ ಆ ಪಾತ್ರವನ್ನು ಪರಿಪೂರ್ಣವಾಗಿ ನಿರ್ವಹಿಸಬೇಕು. ಯಾವ ಪಾತ್ರವಾದರೂ ಪಾತ್ರವೇ. ಹೆಣ್ಣಾಗಲಿ, ಗಂಡಾಗಲಿ, ತಾಯಾಗಲಿ, ತಂದೆಯಾಗಲಿ ಆ ಪಾತ್ರವನ್ನು ಚೆನ್ನಾಗಿ ನಿರ್ವಹಿಸಬೇಕು.. ನೀನು ಹೆಚ್ಚು ಹೆಚ್ಚು ‘ಎನ್‌ಲೈಟನ್‌ಮೆಂಟ್’ ಪಡೆದಿದ್ದರೆ, ನೀನು ಅಷ್ಟೇ ಹೆಚ್ಚು ಹೆಚ್ಚು ಧರ್ಮ ಪರಿಪಾಲಕನಾಗಿರುತ್ತೀಯೆ. ನಿನಗೆ ಕಡಮೆ ಎನ್‌ಲೈಟನ್‌ಮೆಂಟ್ ಇದ್ದರೆ, ನೀನು ಅಷ್ಟೇ ಕಡಮೆ ಧರ್ಮ ಪರಿಪಾಲಕನಾಗಿರುತ್ತೀಯೆ. ‘ಬುದ್ಧತ್ವ’ ಹೆಚ್ಚಾದರೆ ‘ಧರ್ಮತ್ವ’ ಹೆಚ್ಚಾಗುತ್ತದೆ. ‘ಬುದ್ಧತ್ವ’ ಕಡಿಮೆಯಾದರೆ ‘ಅಧರ್ಮತ್ವ’ ಹೆಚ್ಚಾಗುತ್ತದೆ.

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕು ತಾಮ್
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ

ಎಲ್ಲಿ ಧರ್ಮ ಕುಗ್ಗಿ (ನಾಶವಾದಾಗ) ಅಧರ್ಮ ತಾಂಡವವಾಡುತ್ತದೊ ಅಲ್ಲಿಗೆ ನಾನು ಬರುತ್ತೇನೆ. ನಾನು ಅಂದರೆ,‘ಬುದ್ಧಂ’, ‘ಎನ್‌ಲೈಟೆನ್‌ಮೆಂಟ್’. ಯಾರಿಗೆ ‘ಎನ್‌ಲೈಟೆನ್‌ಮೆಂಟ್’ ಇರುತ್ತದೊ ಅವರಿಗೆ ಧರ್ಮವೆಂದರೆ ಏನು ಎಂಬುದು ತಿಳಿದಿರುತ್ತದೆ. ಅವರು ತಮ್ಮ ಧರ್ಮವನ್ನು ನಿರ್ವಹಿಸುತ್ತಾರೆ.

ನಮಗೆ ‘ಎನ್‌ಲೈಟೆನ್‌ಮೆಂಟ್’ ಇದೆ. ಆದ್ದರಿಂದ, ಪ್ರಪಂಚದಲ್ಲಿ ನಮ್ಮ ಪಾತ್ರವನ್ನು ಕ್ರಮಬದ್ಧವಾಗಿ ನಿರ್ವಹಿಸುತ್ತಿದ್ದೇವೆ. ಆದರೂ ನಾವು ತೃಪ್ತಿಯನ್ನು ಹೊಂದುವುದಿಲ್ಲ. ಏನೋ ಕೊರತೆ ಇದೆ. ಅದೇ ಸಂಘ ಎಂದರೆ, “ಎನ್‌ಲೈಟೆನ್ಡ್ ಮಾಸ್ಟರ್‌ಗಳ ಗುಂಪು”. ಅದೇ “ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟಿ”. ನಾವು ‘ಎನ್‌ಲೈಟೆನ್’ ಆಗಿದ್ದೇವೆ. ನಮ್ಮ ಪಾತ್ರವನ್ನು ನಾವು ನಿರ್ವಹಿಸುತ್ತಿದ್ದೇವೆ. ಆದರೆ, ನಾವು ಎನ್‌ಲೈಟೆನ್ಡ್ ಮಾಸ್ಟರ್‌ಗಳ ಸಂಘದಲ್ಲಿ ಬೆರೆಯದಿದ್ದರೆ ಇನ್ನೂ ಹೆಚ್ಚಾಗಿ ಕಲಿಯುವುದು, ಎಂಜಾಯ್‌ಮೆಂಟ್ ಇರುವುದಿಲ್ಲ. ಅದೇ ‘ಸಂಘಂ ಶರಣಂ ಗಚ್ಛಾಮಿ’. Birds of the same feather flock together ಎನ್ನುವ ಇಂಗ್ಲಿಷ್ ನಾಣ್ಣುಡಿಯಂತೆ, ಒಂದೇ ಗುಣಧರ್ಮದ ವ್ಯಕ್ತಿಗಳು ಒಗ್ಗೂಡುತ್ತಾರೆ. ನಾವು ಎನ್‌ಲೈಟೆನ್ ಆದನಂತರ ಮತ್ತೊಬ್ಬ ಎನ್‌ಲೈಟೆನ್ ಆದವರನ್ನು ಹುಡುಕಿಕೊಳ್ಳುತ್ತೇವೆ. ಒಬ್ಬ ಸಿತಾರ್ ವಾದ್ಯದವನು ಮತ್ತೊಬ್ಬ ಸಿತಾರ್ ವಾದ್ಯದವನನ್ನು ಹುಡುಕಿಕೊಳ್ಳುತ್ತಾನೆ. ಅವನು ಹೇಗೆ ನುಡಿಸುತ್ತಿದ್ದಾನೆಂದು ಗಮನಿಸುತ್ತಾನೆ. ನೀವು ಎನ್‌ಲೈಟೆನ್ಡ್ ಮಾಸ್ಟರ್ ನಾನೂ ಎನ್‌ಲೈಟೆನ್ಡ್ ಮಾಸ್ಟರ್. ನೀವು ಇಲ್ಲಿಗೆ ಯಾಕೆ ಬಂದಿದ್ದೀರೆಂದರೆ, ಈ ‘ಎನ್‌ಲೈಟೆನ್ ಮಾಸ್ಟರ್’ (ಪತ್ರೀಜಿ) ಈ ದಿನ ‘ಎನ್‌ಲೈಟೆನ್‌ಮೆಂಟ್’ ಕುರಿತು ಏನು ಹೇಳುತ್ತಾರೋ ಎಂದು ಕೇಳಲಿಕ್ಕಾಗಿ ಬಂದಿದ್ದೀರಿ. ಇದೇ ‘ಸಂಘಂ ಶರಣಂ ಗಚ್ಛಾಮಿ.’

ಮನೆಯಲ್ಲಿ, ಸಂಘದಲ್ಲಿ ನಿಮ್ಮ ಪಾತ್ರವನ್ನು ನಿರ್ವಹಿಸುವುದು ಧರ್ಮಂ ಶರಣಂ ಗಚ್ಛಾಮಿ. ನೀವು ಆಧ್ಯಾತ್ಮಿಕ ಜೊತೆಗಾರರನ್ನು ಹುಡುಕಿಕೊಳ್ಳುತ್ತೀರಿ, ಅದೇ ‘ಸಂಘಂ ಶರಣಂ ಗಚ್ಛಾಮಿ’ ಎಂದು ಹೇಳಿದರು.

ಮೇ 17ರಂದು ಮುಂಜಾನೆ 4 ರಿಂದ 7 ರವರೆಗೂ ಪ್ರಾತಃಕಾಲ ಧ್ಯಾನ ತುಂಬಾ ಚೆನ್ನಾಗಿ ನಡೆಯಿತು. ಅಂದು ಬುದ್ಧ ಪೂರ್ಣಿಮೆ. ಪ್ರಕೃತಿಯ ಮಡಿಲಲ್ಲಿ, ಪಿರಮಿಡ್ ಆವರಣದಲ್ಲಿ, ಅತ್ಯದ್ಭುತವಾದ ಸಂಗೀತದಿಂದ, ಎಲ್ಲಕ್ಕಿಂತ ಹೆಚ್ಚಾಗಿ ಪತ್ರೀಜಿಯವರ ಸಮಕ್ಷಮದಲ್ಲಿ ನಡೆದ ಆ ಧ್ಯಾನದಿಂದ ಆದ ಅನುಭವಗಳು ವರ್ಣನಾತೀತ.

“ನಿನಗೆನೀನೇ ಸನ್ಮತಿ ತಂದುಕೋ…”

ಪತ್ರೀಜಿ, ‘ರಘುಪತಿ ರಾಘವ ರಾಜಾರಾಂ’ ಹಾಡನ್ನು ಹಾಡಿದರು. “ಓ ಪರಮಾತ್ಮ ಎಲ್ಲರಿಗೂ ಸನ್ಮತಿಯನ್ನು ನೀಡು ಎಂದು ಕೇಳುವುದು ಬುದ್ಧತ್ವ ಅಲ್ಲ”. ದೇವರು ಹೊರಗೆ ಎಲ್ಲೂ ಇಲ್ಲ. ನೀನೇ ದೇವರು. ನಿನಗೆ ನೀನೇ ಸನ್ಮತಿಯನ್ನು ಕೊಟ್ಟುಕೊಳ್ಳಬೇಕು. ಎರಡು ಮುಖ್ಯವಾದ ವಿಷಯಗಳಿವೆ. 1. ಬುದ್ಧಿ ಇರುವುದು. 2. ಬುದ್ಧಿ ಇಲ್ಲದೆ ಇರುವುದು.

ನಿನಗೆ ಬುದ್ಧಿ ಇದ್ದರೇ ಪ್ರಾರ್ಥಿಸುವುದನ್ನು ನಿಲ್ಲಿಸುವೆ. ಬುದ್ಧಿಯಿಲ್ಲದಿದ್ದರೆ ಪ್ರಾರ್ಥಿಸುತ್ತಲೇ ಇರುವೆ. ಯಾವುದೇ ದೇವರ ಕುರಿತನ್ನಾಗಲಿ ಪ್ರಾರ್ಥಿಸುವುದು ಬುದ್ಧಿ ಇಲ್ಲದವರು ಮಾಡುವ ಕೆಲಸ. ಮತದಲ್ಲಿ ಬುದ್ಧಿ ಇಲ್ಲ. “ಪ್ರಾರ್ಥಿಸುವುದಲ್ಲಿ ಬುದ್ಧಿ ಇಲ್ಲ”. ಹೊರಗಡೆಯಿಂದ ಬೇರೊಬ್ಬರಿಂದ ಅರ್ಥಿಸುವುದು ಬುದ್ಧಿ ಹೀನರು ಮಾಡುವ ಕೆಲಸ. ಬುದ್ಧಿ ‘ಧ್ಯಾನ’ದಿಂದ ಲಭಿಸುತ್ತದೆ. ನಾವು ಎಷ್ಟು ಧ್ಯಾನ ಮಾಡುತ್ತೇವೋ ಅಷ್ಟು ಸನ್ಮತಿ ನಮ್ಮ ಹತ್ತಿರದಿಂದ ನಮಗೆ ಲಭಿಸುತ್ತದೆ. ಬೀಜದಲ್ಲಿ ಮರವಿದೆ. ಜೀವದಲ್ಲಿ ದೇವನಿದ್ದಾನೆ. ಈ ಆತ್ಮದಲ್ಲಿ ತುಂಬಾ ಶಕ್ತಿ ಇದೆ. ಸಾಧನೆ ಮಾಡದೆ ಹೋದರೆ ಬುದ್ಧಿ ವಿಕಾಸ ಆಗುವುದಿಲ್ಲ. ಬೀಜವನ್ನು ಭೂಮಿಯಲ್ಲಿ ಬಿತ್ತಿದಾಗ ಬೀಜ ಹೋಗಿ ಮರ ಬರುತ್ತದೆ. ‘ನಾನು’, ‘ನನ್ನದು’ ಎನ್ನುವ ಭಾವನೆ ಇದ್ದರೆ ಅವನೇ ‘ಜೀವನು’. ‘ನಾನು’, ‘ನನ್ನದು’ ಎನ್ನುವ ಭಾವನೆ ಹೋದರೆ ಅವನೇ ‘ದೇವನು’. ಧ್ಯಾನದಿಂದ ಜೀವನ ಹೋಗಿ ‘ದೇವನು’ ಬರುತ್ತಾನೆ. ಭಗವದ್ಗೀತದ ಸಾರವೆಲ್ಲಾ ಎರಡು ವಿಷಯಗಳನ್ನು ಕುರಿತೇ ಹೇಳಲಾಗಿದೆ. “ನಿರ್ಮಮೊ ನಿರಹಂಕಾರ”. ನಿರ್ಮಮ ಅಂದರೆ ನನ್ನದು ಎನ್ನುವ ಭಾವನೆ ತೆಗೆದುಹಾಕು ಎಂದು. ‘ನಾನು’ ಎನ್ನುವ ಭಾವನೆ ತೆಗೆಯುವುದು ಎಂದರೆ ‘ನಿರಹಂಕಾರ’. ‘ನಾನು’, ‘ನನ್ನದು’ ಎನ್ನುವ ಭಾವನೆ ತೆಗೆದುಹಾಕು. ಹೇಗೆಂದರೆ, ಧ್ಯಾನ ಸಾಧನೆಯಿಂದ. ಧ್ಯಾನ ಮಾಡುವಾಗ ‘ನಾನು’, ‘ನನ್ನದು’ ಎನ್ನುವ ಭಾವನೆ ತೊಲಗುತ್ತದೆ. ಎಷ್ಟು ಹೆಚ್ಚು ಧ್ಯಾನ ಮಾಡುವಿರೋ ಅಷ್ಟು ಬುದ್ಧಿ ವಿಕಾಸವಾಗುತ್ತಾ ಒಂದು ಸಮಯ ಬಂದಾಗ ಬುದ್ಧಿ ಪೂರ್ಣವಾಗಿ ಅರಳುತ್ತದೆ. ಅದೇ ಬುದ್ಧತ್ವ ಎಂದರೆ. ಅದೇ ‘ಎನ್‌ಲೈಟೆನ್‌ಮೆಂಟ್’ ಎಂದರೆ. ಪ್ರಾರ್ಥಿಸುವುದು ಅಂತ್ಯವಾದ ನಂತರ ಬುದ್ಧಿ ಪ್ರಾರಂಭವಾಗುತ್ತದೆ. ‘ಬುದ್ಧಿ’ ಅರಳುತ್ತಾ ಒಂದು ದಿನ “ಪೂರ್ಣಬುದ್ಧಿ” ಪ್ರಾಪ್ತಿಯಾಗುತ್ತದೆ. ಆಗ ನೀನು ಬುದ್ಧನಾಗುವೆ. ಸಿತಾರ್ ಕಲಿತುಕೊಳ್ಳಲು ಪ್ರಾರಂಭಿಸಿದಾಗ ಸ್ವರಗಳು ಸರಿಯಾಗಿ ನುಡಿಸಲಾಗುವುದಿಲ್ಲ. ಸಾಧನೆ ಮಾಡುತ್ತಾ ಪಂಡಿತ್ ರವಿಶಂಕರ್ ಆಗುವೆ. ಹಾಗೆಯೆ, ಧ್ಯಾನ ಮಾಡುತ್ತಾ ಬುದ್ಧಿ ವಿಕಾಸವಾಗುತ್ತದೆ. ಜ್ಞಾನ ವೃದ್ಧಿಯಾಗುತ್ತದೆ, ಎನ್‌ಲೈಟೆನ್‌ಮೆಂಟ್ ಅಧಿಕಗೊಳ್ಳುತ್ತದೆ. ಯಾವಾಗ ನೀನು 100%ಗೆ ತಲಪುತ್ತಿಯೋ ಆಗ ಪೂರ್ಣ ಬುದ್ಧಿ ಲಭಿಸುತ್ತದೆ. ನೀನು ಬುದ್ಧನಾಗುವೆ.

ಯಾವಾಗ ನೀನು ಪ್ರಾರ್ಥನೆ ಮಾಡುತ್ತಿಯೊ ಆಗ ನಿನಗೆ ಜ್ಞಾನದ ಅಭಾವ ಇದ್ದ ಹಾಗೆ. ಮೊದಲು ಪ್ರಾರ್ಥನೆಯನ್ನು ನಿಲ್ಲಿಸಬೇಕು. ಹಿಂದೂ ಸಾಂಪ್ರದಾಯದಲ್ಲಿ ಹೀಗೆ ಪ್ರಾರ್ಥಿಸುತ್ತಾರೆ ಸೂರ್ಯ ಭಗವಾನನ್ನು. .

ಅಸತೋಮ ಸದ್ಗಮಯ ತಮಸೋಮ ಜೋತಿರ್ಗಮಯ ಮೃತ್ಯೋರ್ಮ ಅಮೃತಂಗಮಯ. .

“ಓ ಸೂರ್ಯ ಭಗವಾನನೇ. ನನ್ನನ್ನು ಅಸತ್ಯದಿಂದ ಸತ್ಯದ ಕಡೆಗೆ ಕರೆದುಕೊಂಡು ಹೋಗು. ಅಂಧಕಾರದಿಂದ ಬೆಳಕಿನಡೆಗೆ ಕರೆದುಕೊಂಡು ಹೋಗು. ಮೃತ್ಯುವಿನಿಂದ ಅಮೃತತ್ವದ ಕಡೆಗೆ ಕರೆದುಕೊಂಡು ಹೋಗು” ಎಂದು ಪ್ರಾರ್ಥಿಸುತ್ತಾರೆ. ಆದರೆ, ಯಾರೂ ನಮ್ಮನ್ನು ಕರೆದೊಯ್ಯಲಾರರು. ನೀನು ಅಸತ್ಯದಲ್ಲಿ ಇರುವೆ. ಆದ್ದರಿಂದ, ನೀನೇ ಸತ್ಯದೆಡೆಗೆ ಬರಬೇಕು. ಅಂಧಕಾರದಿಂದ ಬೆಳಕಿನ ಕಡೆ ನೀನೇ ಬರಬೇಕು, ಮೃತ್ಯುವಿನಿಂದ ಅಮೃತತ್ವದ ಕಡೆ ನೀನೇ ಬರಬೇಕು. ಯಾವ ಗುರುವೂ, ಯಾವ ದೇವರೂ ನಿನ್ನನ್ನು ಕರೆದೊಯ್ಯಲಾರ.

“ಧ್ಯಾನವೇ ಬೆಳಕು”

ಧ್ಯಾನ ಮಾಡುವುದು ಪ್ರಾರಂಭಿಸಿದ ನಂತರ ‘ಅಸತ್ಯ’ ಅಂತ್ಯವಾಗಿ ‘ಸತ್ಯ’ ಪ್ರಾರಂಭವಾಗುತ್ತದೆ. ‘ಅಂಧಕಾರ’ ಅಂತ್ಯವಾಗಿ ‘ಬೆಳಕು’ ಪ್ರಾರಂಭವಾಗುತ್ತದೆ, ‘ಮೃತ್ಯುತ್ವ’ ಅಂತ್ಯಗೊಂಡು ‘ಅಮೃತತ್ವ’ ಪ್ರಾರಂಭವಾಗುತ್ತದೆ. ಪ್ರಾರಂಭವಾಗುತ್ತದೆ ಎಂದರೆ ಅದಕ್ಕು ಮೊದಲು ಸತ್ಯ, ಬೆಳಕು, ಅಮೃತತ್ವ ಇವೆಲ್ಲವೂ ೦% ಇತ್ತು. ಧ್ಯಾನ ಮಾಡಲು ಪ್ರಾರಂಭಿಸಿದ ನಂತರ ಅವೆಲ್ಲವೂ ಸಹ 1%, 2%, 3% ಹೀಗೆ ಬೆಳೆಯುತ್ತಿರುತ್ತವೆ. ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಆಂದೋಲನಕ್ಕೆ ಬಂದ ತಕ್ಷಣ ಬುದ್ಧಿ ಅರಳಲು ಪ್ರಾರಂಭವಾಗುತ್ತದೆ. ಧ್ಯಾನ ಮಾಡಲು ಪ್ರಾರಂಭಿಸಿದ ನಂತರ ಬುದ್ಧಿ ಅಧಿಕವಾಗುತ್ತಾ ಹೋಗುತ್ತದೆ. ಆಡುವ ಪ್ರತಿಯೊಂದೂ ಮಾತೂ ಸಹ ಕರಾರುವಾಕ್ಕಾಗಿರಬೇಕು. ಪ್ರತಿಯೊಂದು ಒಂದು ಮಾತು ಪರಿಪೂರ್ಣವಾಗಿರಬೇಕು. ಪ್ರತಿಯೊಂದೂ ನೋಟವೂ ಸಹ ಖಚಿತವಾಗಿ, ಪರಿಪೂರ್ಣವಾಗಿರಬೇಕು.ಇಬ್ಬರು ಜಗಳವಾಡುತ್ತಿದ್ದರೆ ನಾನು ಅವರ ಕಡೆಗೆ ನೋಡಬಾರದು. ಅವರ ಕಡೆ ನೋಡಿದರೆ ನನಗೆ ಬುದ್ಧಿ ಇಲ್ಲ. ನಾನು ಯಾಕೆ ಅವರ ಕಡೆ ನೋಡಬೇಕು. ನನ್ನ ಭಗವದ್ಗೀತೆ ನಾನು ಓದಿಕೊಳ್ಳಬೇಕು. ಅವರು ಬುದ್ಧ ಆದರು. ನಾನು ಏಕೆ ಆಗಬಾರದು. ಸಾಧನೆ ಮಾಡಬೇಕು. ನಾವು ಇತರರ ಕೆಟ್ಟ ಕೆಲಸಗಳ ಕಡೆ ನೋಡಬೇಕಾಗಿಲ್ಲ. ಅನವಶ್ಯಕವಾಗಿ ನೋಡಿದರೆ ನಮಗೆ ಬುದ್ಧಿ ಇಲ್ಲ ಎಂದೇ ಅರ್ಥ. ಪ್ರತಿಕ್ಷಣ ಬುದ್ಧಿ ಇರಬೇಕು. ಗಂಟೆಗೆ ಒಂದು ಕ್ಷಣ ಬುದ್ಧಿ ಅಲ್ಲ. ಪ್ರತಿಕ್ಷಣಕ್ಕೂ ಬುದ್ಧಿ ಇರಬೇಕು. ಪ್ರತಿಕ್ಷಣವೂ ಅರಿವಿನಿಂದ ಇರಬೇಕು. ಪ್ರತಿಕ್ಷಣವೂ ನಮ್ಮಲಿರುವ ಸಂಪನ್ಮೂಲಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು. ನಮ್ಮ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು. ನಮ್ಮಲ್ಲಿರುವ ಶಕ್ತಿಯನ್ನು ವ್ಯರ್ಥಮಾಡಿಕೊಳ್ಳಬಾರದು. ಹಾಗೆ ವ್ಯರ್ಥ ಮಾಡಿದರೆ ನಮಗೆ ಬುದ್ಧಿ ಇಲ್ಲ ಎಂದೇ ಅರ್ಥ. ಗೌತಮ ಬುದ್ಧನು ದುಃಖವನ್ನು ನೋಡಿದ. ಆದರೆ, ಆ ತಕ್ಷಣವೇ ದುಃಖಕ್ಕೆ ಕಾರಣವೇನು ಎಂದು ಯೋಚಿಸಿ, ಎಲ್ಲಾ ತ್ಯಜಿಸಿ, ಇಂತಹ ದುಃಖಕ್ಕೆ ಕಾರಣವನ್ನು ಕಂಡುಹಿಡಿಯಲು (ಮನೆ ಬಿಟ್ಟು, ರಾಜ್ಯ ಬಿಟ್ಟು, ಹೆಂಡತಿ ಮಕ್ಕಳನ್ನು ಬಿಟ್ಟು) ಹೊರಟು ಹೋದ.

“ಧ್ಯಾನ ಮಾಡುವವರೆಲ್ಲಾ ಬುದ್ಧರಾಗುತ್ತಾರೆ”

ಹಠಾತ್ತಾಗಿ ಪರಿಸ್ಥಿತಿಗಳು ಬದಲಾಗುತ್ತಿರುತ್ತವೆ. ಆಗ ತಕ್ಷಣ ನಿನ್ನ ಕೆಲಸ ಬದಲಾಗಬೇಕು. ಯಾವತ್ತಿಗೂ ನಿನ್ನ ಸಮಯ ವ್ಯರ್ಥ ಮಾಡಬಾರದು. ನಾವು ಸಮಯ ವ್ಯರ್ಥ ಮಾಡಿದರೆ, ನಮಗೆ ಬುದ್ಧಿ ಇಲ್ಲಾ ಎಂದೇ ಅರ್ಥ. ಸನ್ಮತಿ ಇಲ್ಲ ಎಂದೇ ಅರ್ಥ. ಗೌತಮ ಬುದ್ಧನು ಯಾವ ರಾಮನನ್ನು, ಕೃಷ್ಣನನ್ನು, ವೆಂಟಕೇಶ್ವರ ಸ್ವಾಮಿಯನ್ನು ಪೂಜಿಸಲಿಲ್ಲ. ಅವರ ಕುರಿತು ಎಲ್ಲೂ ಬರೆಯಲಿಲ್ಲ. ಆತನಿಗೆ ಗೊತ್ತಿದೆ. ಆದರೆ, ಯಾವ ದೇವರೂ ಬೇಡ. ಧ್ಯಾನ… ಧ್ಯಾನ .. ಧ್ಯಾನ. ಧ್ಯಾನ ಒಂದೇ ಸಾಕು. ಧ್ಯಾನವನ್ನು 1 ರಿಂದ 100 ವರೆಗೂ ಕರೆದುಕೊಂಡುಹೋದರೆ ಬುದ್ಧಿ ಕೂಡ 1 ರಿಂದ 100 ವರೆಗೂ ಬರುತ್ತದೆ. ಧ್ಯಾನ ವಿಲ್ಲದಿದ್ದರೇ 0% ಬುದ್ಧಿ, ಸ್ವಲ್ಪ ಧ್ಯಾನ 1% ಬುದ್ಧಿ, ಹೆಚ್ಚು ಧ್ಯಾನ 10% ಬುದ್ಧಿ, ಅತಿಹೆಚ್ಚು ಧ್ಯಾನ 100% ಬುದ್ಧಿ. ಆಗ ನೀನು ಬುದ್ಧನಾಗುವೆ. ಇದು ಒಂದು ಪ್ರಕ್ರಿಯೆ. ಬುದ್ಧನಾಗಲು ಕೆಲವು ಜನ್ಮಗಳು ಬೇಕಾಗುತ್ತವೆ ನಾವು ಧ್ಯಾನವನ್ನು ಈ ಜನ್ಮದಲ್ಲಿ ಪ್ರಾರಂಭಿಸಲಿಲ್ಲ. ಅನೇಕ ಜನ್ಮಗಳ ಹಿಂದೆಯೇ ಧ್ಯಾನ ಪ್ರಾರಂಭಿಸಿ, ಈ ಜನ್ಮದಲ್ಲಿ ಇಲ್ಲಿರುವವರೆಲ್ಲಾ ಬುದ್ಧರಾಗಿ ಬಿಟ್ಟಿದ್ದಾರೆ. ಧ್ಯಾನ ಮಾಡುವವರೆಲ್ಲಾ ಬುದ್ಧರಾಗದೇ ಇರುತ್ತಾರೆಯೇ? ಆಗೇ ಆಗುತ್ತಾರೆ. ಈ ದಿನ ಬುದ್ಧ ಪೂರ್ಣಿಮೆ, ಪ್ರಾರ್ಥನೆಯಿಲ್ಲ. ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂಮೆಂಟ್ ಪೂಜೆಗಳನು, ಪ್ರಾರ್ಥನೆಗಳನ್ನು ವಿರೋಧಿಸುತ್ತದೆ. ‘ಮೂರ್ತಿ ಪೂಜೆ ಮೆಟ್ಟಲ್ಲ ಅದು ಒಂದು ಕಂದಕ’ ಎಂದರು ಆರ್ಯ ಸಮಾಜ ಸ್ಥಾಪಕರಾದ ಶ್ರೀ ದಯಾನಂದ ಸರಸ್ವತಿ. ಪೂಜೆಗಳು ನಮ್ಮನ್ನು ಕೆಳಮಟ್ಟಕ್ಕೆ ಕೊಂಡೊಯ್ಯುತ್ತವೆ. ಮೇಲ್ಮಟ್ಟಕ್ಕೆ ಕೊಂಡೊಯ್ಯುವುದಿಲ್ಲ. ಬುದ್ಧನ ವಿಗ್ರಹಕ್ಕೆ ನಾವು ಪೂಜೆ ಮಾಡುವುದಿಲ್ಲ. ಯಾವ ಕಲ್ಲಿಗೂ ನಾವು ಪೂಜೆ ಮಾಡುವುದಿಲ್ಲ. ಪೂಜೆ ಮಾಡಿದರೆ ಬುದ್ಧಿ ಇಲ್ಲ ಎಂದೇ ಅರ್ಥ. ಆ ವಿಗ್ರಹ ಎಷ್ಟು ಚೆನ್ನಾಗಿ ಕೆತ್ತಿದ್ದಾರೆ ಎಂದು ಆ ಕೆತ್ತನೆ ಕೆಲಸವನ್ನು ನೋಡಿ ಆನಂದಿಸಬೇಕು, ಅಷ್ಟೇ. ಶಿಲ್ಪಕಲೆ ಬೇಕು, ಸಂಗೀತ ಕಲೆ ಬೇಕು, ನೃತ್ಯಕಲೆ ಬೇಕು, ವಿಗ್ರಹಾರಾಧನೆ ಅಲ್ಲ, ಶಿಲ್ಪಕಲೆಯ ಆರಾಧನೆ ಬೇಕು.

“ಆಧ್ಯಾತ್ಮಿಕ ಪ್ರಗತಿಗೆ ಸರಳ ಸೂತ್ರಗಳು”

ಮೊದಲನೆಯ ಸೂತ್ರವೇನೆಂದರೆ, ಯಾವ “ಪೂಜೆಗಳು”, ಪ್ರಾರ್ಥನೆಗಳು ಆರಾಧನೆಗಳು ಬೇಕಾಗಿಲ್ಲ. ಎರಡನೆಯದು, ಯಾವ ‘ವೈದ್ಯನ ಹತ್ತಿರವೂ ಹೋಗಬಾರದು’. ನಿನ್ನ ತಲೇ ನೋವು ನಿನ್ನಿಂದಲೇ ಬಂದಿದೆ. ಆದ್ದರಿಂದ, ನಿನ್ನಿಂದಲೇ ಹೋಗುತ್ತದೆ. ವೈದ್ಯರ ಹತ್ತಿರ ಹೋದರೆ ನೀನು ಅವಲಂಬಿ, ಸ್ವತಂತ್ರನಲ್ಲ. ನೀನು ಅವಲಂಬಿಯಾಗಿರದೆ ಸ್ವತಂತ್ರನಾಗಿ ಇರಬೇಕು. ಮೂರನೆಯ ಸೂತ್ರ, ‘ಮಾಂಸಹಾರ’ ಸೇವನೆ ನಿಷಿದ್ಧ.

ಯಾವುದು ಮಾಡಬಾರದೋ ಅದನ್ನು ಮಾಡುವುದರಿಂದ ಬುದ್ಧಿ ಹೇಗೆ ಬರುತ್ತದೆ. ಪೂಜೆಗಳು, ಪ್ರಾರ್ಥನೆಗಳು ಮಾಡಬೇಡಿ. ಸಾಯಲಿಕ್ಕಾದರೂ ಸಿದ್ಧವಾಗಿರಿ. ಆದರೆ, ವೈದ್ಯರ ಹತ್ತಿರ ಹೋಗಬೇಡಿ. ಉಪವಾಸ ಮಾಡುವುದರಿಂದ ಶಾರೀರಿಕ ಅನಾರೋಗ್ಯದಿಂದ ಹೊರಬರಬಹುದು. ವಾರಕ್ಕೆ ಒಂದೆರಡು ದಿನ ಉಪವಾಸ ಇರಬೇಕು. ಅತಿ ಆಹಾರ ಸೇವನೆಯಿಂದ ಅನೇಕ ಆರೋಗ್ಯ ಸಮಸ್ಯೆಗಳು ಬರುತ್ತವೆ. ಅತಿ ಆಹಾರ, ಸರಿಯಾಗಿಲ್ಲದ ಆಹಾರ ಸೇವನೆಯಿಂದ ಅನೇಕ ಸಮಸ್ಯೆಗಳು ಬರುತ್ತವೆ. ಸರಿಯಾದ ಆಹಾರ, ಮಿತಹಾರ, ನಿರಾಹಾರದಿಂದ ಯಾವ ಸಮಸ್ಯೆಗಳೂ ಬರುವುದಿಲ್ಲ. “ನಿಮ್ಮ ಸಮಸ್ಯೆಗಳು ನಿಮ್ಮಿಂದಲೇ ಸೃಷ್ಟಿಸಲ್ಪಟ್ಟಿದೆ”. ನಿಮ್ಮ ಆಹಾರ ವಿಧಾನ, ನಿಮ್ಮ ಆಲೋಚನಾ ವಿಧಾನ, ನಿಮ್ಮ ಜೀವನ ವಿಧಾನದಿಂದಲೇ ಸೃಷ್ಟಿಸಲ್ಪಟ್ಟಿವೆ. ನೀನು ಹಣದ ಹಿಂದೆ ಓಡಾಡಿದರೆ, ಅದು ಸರಿ ಅಲ್ಲದ ಜೀವನ ವಿಧಾನ. ನೀನು ಸತ್ಯದ ಕಡೆ ನಡೆದರೆ, ಅದು ಸರಿಯಾದ ಜೀವನ ವಿಧಾನ. ಸರಿ ಅಲ್ಲದ ಆಹಾರ ಪದ್ಧತಿಗಳು, ಸರಿ ಅಲ್ಲದ ಆಹಾರ ವಿಧಾನಗಳು, ಸರಿ ಅಲ್ಲದ ಜೀವನ ವಿಧಾನಗಳು, ಸರಿ ಅಲ್ಲದ ಪುಸ್ತಕಗಳನ್ನು ಓದುವುದರಿಂದಲೇ ನಾವು ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದೇವೆ. ಸರಿಯಾಗಿಲ್ಲದ ಪುಸ್ತಕಗಳನ್ನು ಓದಬಾರದು. ಆದ್ದರಿಂದ, ಸರಿಯಾದ ಸ್ವಾಧ್ಯಾಯ, ಸರಿಯಾದ ಧ್ಯಾನ, ಮಾಡಬಾರದ ಕೆಲಸಗಳನ್ನು ಮಾಡದೆ ಇರುವುದು, ಮಾಡಬೇಕಾದ ಕೆಲಸಗಳನ್ನು ಮಾಡುವುದೇ ಬುದ್ಧಿವಂತರ ಲಕ್ಷಣ. ಪರಿಪೂರ್ಣ ಬುದ್ಧಿ ಬರುವವರೆಗೂ ಬುದ್ಧಿಯನ್ನು ಹೆಚ್ಚಿಸಿಕೊಳ್ಳುತ್ತಿರಬೇಕು ಯಾವಾಗ ಬರಬೇಕೋ ಆವಾಗಲೇ ಬರಲಿ “ಪರಿಪೂರ್ಣ ಬುದ್ಧಿ”. ಆತುರ ಏನಿಲ್ಲ. ನಿಧಾನವೇ ಪ್ರಧಾನ. ಓಡುತ್ತಾ ಹಾಲು ಕುಡಿಯುವುದಕ್ಕಿಂತ, ನಿಂತು ನೀರು ಕುಡಿಯುವುದು ಉತ್ತಮ. ಬೇಕಾಗಿರುವುದು ಸಾಧನೆ…. ಸಾಧನೆ…. ಸಾಧನೆ…. ಸಾಧನೆ. ಬೇಕಾಗಿರುವುದು ಧ್ಯಾನ ಸಾಧನೆ, ಸ್ವಾಧ್ಯಾಯ ಸಾಧನೆ, ಸಜ್ಜನ ಸಾಂಗತ್ಯ ಸಾಧನೆ. ಪ್ರತಿನಿತ್ಯ ಮಾಡಬೇಕು. ಅದೇ ಭಗವದ್ಗೀತೆ ಓದುವುದರಿಂದ ಅನೇಕ ಹೊಸ ವಿಷಯಗಳು ತಿಳಿಯುತ್ತದೆ. ನುಡಿಸುವ ರಾಗವನ್ನೇ ನುಡಿಸುವುದರಿಂದ ಹೊಸಹೊಸ ರಾಗಗಳು ಬರುತ್ತಿರುತ್ತವೆ. ಆದ್ದರಿಂದ, ಸಾಧನೆ ಎನ್ನುವುದು ತುಂಬಾ ತುಂಬಾ ಮುಖ್ಯ ಎಂದು ಹೇಳಿದರು.