” ಪಾದವನ್ನಲ್ಲ… ಪದವನ್ನು ಹಿಡಿದುಕೊಳ್ಳಬೇಕು “

ಅನೇಕಾನೇಕ ಲೋಕಗಳಿಂದ ಇಲ್ಲಿಗೆ, ಅಂದರೆ, ಭೂಲೋಕಕ್ಕೆ ಇಳಿದುಬಂದ ದೇವರುಗಳು ನಾವೆಲ್ಲಾ. ಹೇಗೆಂದರೆ, ನಾವೆಲ್ಲರೂ ಈ ಹಾಲ್‌ಗೆ ಎಲ್ಲಿಂದೆಲ್ಲಿಂದಲೋ ಬಂದಿದ್ದೇವೆ. ಈ ಹಾಲ್ ಜೊತೆ ನಮಗೆ ಯಾವ ರೀತಿಯಾದ ಬಂಧವಿಲ್ಲ. ಇಲ್ಲಿ ಎರಡುಗಂಟೆಗಳ ಕಾಲ ಇರುತ್ತೇವೆ. ಪುನಃ ತಿರುಗಿ ನಮ್ಮ ಸ್ವಸ್ಥಾನಗಳಿಗೆ… ನಮ್ಮ ನಮ್ಮ ಮನೆಗಳಿಗೆ ಹೊರಟು ಹೋಗುತ್ತೇವೆ. ಇಲ್ಲಿಗೆ ಯಾಕೆ ಬಂದಿದ್ದೇವೆ? ಮರಳಿ ಯಾಕೆ ಹೋಗುತ್ತೇವೆ? ಯಾಕೆ ಬಂದಿದ್ದೇವೆಂದರೇ ಯಾರೋ ಒಬ್ಬ ಸ್ವಾಮೀಜಿ ಬರುತ್ತಾರಂತೆ. ಏನೋ ಹೇಳುತ್ತಾರಂತೆ. ಯವ ಹುತ್ತದಲ್ಲಿ ಯಾವ ಹಾವಿದೆಯೋ? ಕೇಳಿಸಿಕೊಳ್ಳೋಣ ತಿಳಿದುಕೊಳ್ಳೋಣ, ನಮಗೆ ಉಪಯೋಗವಾದರೆ, ಆಚರಿಸೋಣ… ಇಲ್ಲದಿದ್ದರೆ, ಈ ಕಿವಿಯಿಂದ ಕೇಳಿ, ಆ ಕಿವಿಯಿಂದ ಬಿಡೋಣ…

ನಮಗೆ ತಿಳಿಯದೆ ಇರುವುದು ನಾವು ತಿಳಿದುಕೊಳ್ಳುತ್ತೇವೆ, ಯಾವುದು ಇದುವರೆಗೂ ತಿಳಿದಿಲ್ಲವೋ ಅದನ್ನು ತಿಳಿದುಕೊಳ್ಳುತ್ತೇವೆ, ತಿಳಿದುಕೊಂಡು ಮರಳಿ ನಮ್ಮ ಮನೆಗೆ ನಾವು ಹೋಗುತ್ತೇವೆ. ಹಾಗೆಯೇ, ಅನೇಕಾನೇಕ ಲೋಕಗಳಿಂದ ನಾವು ಇಲ್ಲಿಗೆ ಬಂದಿದ್ದೇವೆ. ಇಳಿದು ಬಂದಿದ್ದೇವೆ. ಇಲ್ಲಿ ಎಲ್ಲಾ ತಿಳಿದುಕೊಳ್ಳುತ್ತೇವೆ. ಪುನಃ ಮರಳಿ ನಮ್ಮ ಲೋಕಗಳಿಗೆ ನಾವು ಹೋಗುತ್ತೇವೆ. ‘ಇಳಿದು’ ಬಂದ ನಾವು ಸ್ವಲ್ಪ ‘ಬೆಳೆದು’ ಹೋಗಬೇಕು. ಹೇಗೆ ಬಂದಿದ್ದೇವೋ ಹಾಗೇ ಹೋಗಬಾರದು, ಬೆಳೆದು ಹೋಗಬೇಕು. ಒಂದೇ ಜನ್ಮದಲ್ಲಿ ಎಲ್ಲಾ ತಿಳಿದುಕೊಳ್ಳಲಾಗುವುದಿಲ್ಲ. ಒಂದೊಂದು ಜನ್ಮದಲ್ಲೂ ಸ್ವಲ್ಪ ಸ್ವಲ್ಪ ತಿಳಿದುಕೊಳ್ಳುತ್ತೇವೆ. ತಿಳಿದುಕೊಂಡೇ ತೀರಬೇಕು. “ನಮಗೆ ಎಷ್ಟು ಜನ್ಮಗಳು ಇರುತ್ತವೆ?” ಅಂದರೆ, ಸುಮಾರು 400 ಜನ್ಮಗಳು, ಮೂರ್ಖನಾದರೆ, ಅವನು ಮಾಡಿದ ಪಾಪದ ಕೆಟ್ಟ ಕರ್ಮಗಳಿಂದ ಈ 400 ಅಲ್ಲದೇ ಅದು ಐದು ನೂರರವರೆಗೂ ಇರಬಹುದು. ಅವರ ಮೂರ್ಖತನದಿಂದ, ಆಲಸ್ಯದಿಂದ, ಹಿಂಸೆಯಿಂದ, ಅನೇಕ ಪಾಪದ ಕರ್ಮಗಳನ್ನು ಕೂಡಿ ಹಾಕಿಕೊಳ್ಳುತ್ತಾರೆ.

ಒಂದು ಚಿಕ್ಕಮೀನು ಸಮುದ್ರದಲ್ಲಿ ಚೆನ್ನಾಗಿ ಆಡಿಕೊಳ್ಳುತ್ತಿದೆ. ಇವನು ಬೇಟೆಗಾರನ ಹಾಗೆ ಬಲೆ ಬೀಸಿ ಹಿಡಿದುಕೊಂಡು ತಿನ್ನುತ್ತಿದ್ದಾನೆ… ಎಂತಹ ಅನ್ಯಾಯ. ಒಂದು ಕುರಿ ಮರಿ ಛಂಗ್… ಛಂಗ್… ಅಂತ ಕುಣಿಯುತ್ತಾ ಆಡಿಕೊಳ್ಳುತ್ತಿದೆ. ಆ ಕುರಿಮರಿಯನ್ನು ಕೊಂದು ಆ ಹಳಿಸಿದ ಶವವನ್ನು… ಆ ಗಬ್ಬುನಾತ ಹೊಡೆಯುತ್ತಿರುವ ಶವವನ್ನು ತಿನ್ನುತ್ತಿದ್ದಾರೆ. ಎಂತಹ ದರಿದ್ರ… ರಾಮಚಂದ್ರಾ. ಮಾಡಿದ ಕೆಟ್ಟ ಕರ್ಮಗಳೆಲ್ಲವನ್ನೂ ಅನುಭವಿಸಬೇಕು.

ವರ್ತಮಾನದಲ್ಲಿ ಹಿಂಸೆಯಿಂದ ಇದ್ದರೆ ಭವಿಷ್ಯತ್ ಎಲ್ಲಾ ಅಂಥಕಾರಮಯವಾಗುತ್ತದೆ. ಅಯೋಮಯವಾಗಿರುತ್ತದೆ. ಅಸ್ತವ್ಯಸ್ತವಾಗಿರುತ್ತದೆ. ವರ್ತಮಾನದಲ್ಲಿ ನಾವು ಎಷ್ಟು ಅದ್ಭುತವಾಗಿದ್ದರೆ ನಮ್ಮ ಭವಿಷ್ಯತ್ತು ಸಹ ಅಷ್ಟು ಮಹದಾನಂದವಾಗಿರುತ್ತದೆ. ವರ್ತಮಾನದಲ್ಲಿರುವ ಒಂದು ಆತ್ಮ… ಮೂರ್ಖತ್ವಮಟ್ಟದಿಂದ… ದುಷ್ಟಾತ್ಮಕ ಹಂತದಿಂದ… ಶುಭಾತ್ಮ ಹಂತದಿಂದ… ಮಹಾತ್ಮ ಹಂತದಿಂದ… ‘ಪರಮಾತ್ಮ’ ಹಂತಕ್ಕೆ ಬೆಳೆಯಬೇಕು… ಈ ಜನ್ಮದಲ್ಲೇ.

ಈ ಜನ್ಮದಲ್ಲಿ ಕಲಿತುಕೊಳ್ಳಬೇಕಾಗಿರುವುದು ಈ ಜನ್ಮದಲ್ಲೇ ಕಲಿತುಕೊಳ್ಳಬೇಕು. ಇಲ್ಲದಿದ್ದರೆ, ಈಗ ಕಲಿತುಕೊಳ್ಳಬೇಕಾದ್ದು ಕಲಿತುಕೊಳ್ಳದೇ ಹೋದರೆ, ಅದನ್ನು ಕಲಿತುಕೊಳ್ಳಲಿಕ್ಕಾಗಿಯೇ, ಅಂದರೆ, ಅದೇ ಕೆಲಸಕ್ಕಾಗಿ ಅಥವಾ ಅದೇ ಕ್ಲಾಸ್‌ಗಾಗಿ, ಪುನಃ ಪುನಃ ಹುಟ್ಟಬೇಕಾಗುತ್ತದೆ.

ಗುಡಿಗೆ ಹೋಗಿ, ಗುಡಿಸುತ್ತೂ ತಿರುಗುತ್ತಾ… ‘ಅದೇ ಆಧ್ಯಾತ್ಮಿಕತೆ’ ಎಂದುಕೊಳ್ಳುತ್ತಿದ್ದಾರೆ ಭ್ರಮೆಯಲ್ಲಿದ್ದಾರೆ ಅದು ಭೌತಿಕಪರವಾದ ಶ್ರಮ ಮಾತ್ರವೇ ‘ದೇವರೆಲ್ಲಿ? ದೇವರೆಲ್ಲಿ?’ ಎಂದು ಹುಡುಕುವವನೇ ದೇವನು ನಾವೇ ದೇವರುಗಳು.

ಅಜ್ಞಾನದಿಂದ ಮಾಡಿರುವ ಕರ್ಮಗಳಿಂದ, ಒಂದು ಗಂಟಿನ ಮೇಲೆ ಮತ್ತೊಂದು ಗಂಟು ಉಂಟಾಗಿರುವ ಹಾಗೆ ಗಂಟುಗಳೊಳಗೆ ನಮ್ಮ ಜೀವನ ಸಿಕ್ಕಿಬಿದ್ದಿರುತ್ತದೆ. ಒಂದೊಂದು ಜನ್ಮದಲ್ಲೂ ಒಂದೊಂದು ಗಂಟನ್ನು ಬಿಡಿಸುತ್ತಾ ಬರಬೇಕು. ಕೊನೆಗೆ ಎಲ್ಲಾ ಗಂಟುಗಳು ಬಿಡಿಸಿ ‘ಪರಮಾತ್ಮ’ ವಾಗಿ ಬೆಳೆದು ಇಲ್ಲಿಂದ ನಿರ್ಗಮಿಸಬೇಕು. ನಾವು ಎಷ್ಟು ಪಾಪಗಳು ಮಾಡಿದ್ದೇವೋ ನಮಗೆ ಗೊತ್ತು… ನಾವು ಎಷ್ಟು ಪುಣ್ಯಗಳನ್ನು ಮಾಡಿದ್ದೇವೋ ನಮಗೆ ಗೊತ್ತು… ಬೇರೆ ಯಾರೋ ಬಂದು ಹೇಳಬೇಕಾಗಿಲ್ಲ. ನಮ್ಮ ಹಸಿವೆ, ಬಾಯರಿಕೆ ನಮಗೆ ಮಾತ್ರ ಹೇಗೆ ಗೊತ್ತೋ… ಹಾಗೆಯೇ ಎಂದು ಅರ್ಥ್. ಈ ಆತ್ಮವು ಪರಮಾತ್ಮವಾಗಿ ನಿರ್ಗಮಿಸುವುದೇ ನಮ್ಮ ಗುರಿ ಆಗಬೇಕು. ಇದು ಧ್ಯಾನದಿಂದಲೇ ಸಾಧ್ಯ. ಧ್ಯಾನ ನಮಗೆ ಎಲ್ಲಾ ನೀಡುತ್ತದೆ, ಇಹ ಲೋಕದಲ್ಲಿ ಸೌಖ್ಯ, ಪರ ಲೋಕದಲ್ಲಿ ಸಂಪತ್ತು.

ಧ್ಯಾನವನ್ನು ಎಲ್ಲರಿಗೂ ತಿಳಿಸುವುದೇ “ಪರಮಾತ್ಮಗಳ” ಕಾರ್ಯ ಏನು ಕಲಿತುಕೊಂಡರೆ… ಬೇರೆ ಇನ್ನೇನೂ ಕಲಿತುಕೊಳ್ಳಬೇಕಾದ ಅವಶ್ಯಕತೆ ಇಲ್ಲವೋ. ಏನು ಮಾಡಿದರೆ ಬೇರೆ ಇನ್ನೇನೂ ಮಾಡುವ ಅವಶ್ಯಕತೆ ಇರುವುದಿಲ್ಲವೋ… ಏನು ತೆಗೆದುಕೊಳ್ಳುವುದರಿಂದ ಬೇರೆ ಇನ್ನೇನೂ ತೆಗೆದುಕೊಳ್ಳಬೇಕಾದ ಅವಶ್ಯಕತೆ ಇರುವುದಿಲ್ಲವೋ… ಅದನ್ನು ಕಲಿತುಕೊಳ್ಳಬೇಕು… ಅದನ್ನು ಮಾಡಬೇಕು… ಅದನ್ನು ಕೊಡಬೇಕು… ಅದನ್ನು ತೆಗೆದುಕೊಳ್ಳಬೇಕು… ಅದೇ ಧ್ಯಾನ! ಧ್ಯಾನ!! ಧ್ಯಾನ!!! ಈ ಸತ್ಯವನ್ನು ನಾನು ೩೦ ವರ್ಷಗಳ ಹಿಂದೆ ತಿಳಿದುಕೊಂಡಿದ್ದೇನೆ. ಆಗಿಂದಲೂ ಎಲ್ಲರಿಗೂ ಧ್ಯಾನವನ್ನು ಹೇಳಿ ಕೊಡುತ್ತಲೇ ಇದ್ದೇನೆ. ನಾವು ಎಲ್ಲರೂ ಎಲ್ಲರಿಗೂ ನೀಡಬೇಕಾದ್ದು ಧ್ಯಾನ ಒಂದೇ.

ರಮಣ ಮಹರ್ಷಿ ಮೌನದ ಮಹಿಮೆಯನ್ನು ತಿಳಿಸಿಕೊಟ್ಟರು; ಗೌತಮ ಬುದ್ಧನು ಧ್ಯಾನದ ಮಹಿಮೆಯನ್ನು ತಿಳಿಸಿಕೊಟ್ಟರು! ಆದರೆ, ನಮ್ಮ ಪಾತ್ರೆ ಶುಚಿಯಾಗಿಲ್ಲ, ನಮ್ಮ ಮನಸ್ಸು, ನಮ್ಮ ಬುರುಡೆ, ಕಸದಿಂದ ತುಂಬಿಹೋಗಿದೆ. ಆ ಕಸವನ್ನು ತೆಗೆದು ಬಿಸಾಕಿ ಶುಚಿಯಾಗಿರಿಸಿಕೊಳ್ಳಬೇಕು. ಅದನ್ನು ಶುಚಿಯಾಗಿ ಮಾಡಿಕೊಳ್ಳದೆ ಅದರಲ್ಲಿ ಪಾಯಸ ಬಡಿಸಿದರೂ ವಿಷವಾಗಿಯೇ ತಯಾರಾಗುತ್ತದೆ. ನಮ್ಮ ಮನಸ್ಸು ಶುಚಿಯಾಗಿದ್ದರೆ ಎಲ್ಲರೂ ಹೇಳುವುದು ಅರ್ಥವಾಗಿ, ಮೈಗೂಡುತ್ತದೆ.

ಅವರವರ ಮನಸ್ಸಿನಲ್ಲಿರುವ ಕಸವನ್ನು ಅವರೇ ಶುಚಿ ಮಾಡಿಕೊಳ್ಳಬೇಕು. ನಾನು ಬಂದು ಶುಚಿ ಮಾಡುವುದಿಲ್ಲ. ಮಾಡಲಾಗುವುದೂ ಇಲ್ಲ. ನಿಮ್ಮ ತಲೆಯ ಮೇಲೆ ನನ್ನ ಕೈ ಇಟ್ಟರೆ ಏನೂ ಬರುವುದಿಲ್ಲ… ನನ್ನ ಕ ನಿಮ್ಮ ತಲೆಯ ಮೇಲಿಟ್ಟರೆ ನಿಮ್ಮ ತಲೆ ನೋವು ಹೋಗುವುದಿಲ್ಲ. ನಿಮ್ಮ ತಲೆಯೊಳಗಿರುವ ಕಸ ಹೋಗುವುದಿಲ್ಲ. ಹಾಗೆಯೇ, ನನ್ನ ಪಾದಗಳನ್ನು ಮುಟ್ಟುವುದರಿಂದ ಏನೂ ಬರುವುದಿಲ್ಲ… ಎಲ್ಲರೂ ಬಗ್ಗಿ ಬಗ್ಗಿ ನಮಸ್ಕಾರ ಮಾಡುತ್ತಿದ್ದಾರೆ: ಹಾಗೆ ಮಾಡುವುದರಿಂದ ನನ್ನ ಪಾದಗಳಿಗಿರುವ ಧೂಳು ನಿಮ್ಮ ಕೈಗಳಿಗೆ ಅಂಟುಕೊಳ್ಳುತ್ತದೆ ವಿನಹ ಇನ್ನು ಯಾವ ರೀತಿಯಾದ ಪ್ರಯೋಜನ ಉಂಟಾಗುವುದಿಲ್ಲ.

ಸಚಿನ್ ತೆಂಡುಲ್ಕರ್ ಪಾದಗಳನ್ನು ಮುಟ್ಟುವುದರಿಂದ ಹೇಗೆ ಕ್ರಿಕೆಟ್ ಬರುವುದಿಲ್ಲವೋ… ತ್ಯಾಗರಾಜ ಸ್ವಾಮಿ ಪಾದಗಳನ್ನು ಮುಟ್ಟಿದರೆ ಸಂಗೀತ ಹೇಗೆ ಬರುವುದಿಲ್ಲವೋ… ಹಾಗೆಯೇ ನನ್ನ ಪಾದಗಳನ್ನು ಹಿಡಿಯುವುದರಿಂದ ನಿಮಗೆ ಧ್ಯಾನ… ಜ್ಞಾನ… ಲಭ್ಯವಾಗುವುದಿಲ್ಲ! ನನ್ನ ಪಾದಗಳಲ್ಲ… ಪದಗಳನ್ನು ಹಿಡಿದುಕೊಳ್ಳಬೇಕು. ಪಾದಗಳಿಗೆ ನಮಸ್ಕಾರವಲ್ಲ… ನನ್ನ ಪದಗಳಿಗೆ ನಮಸ್ಕಾರ ಮಾಡಬೇಕು!!!

ನಾನು ಹೇಳುತ್ತಿರುವ ಪದಗಳು ಬಾಯಿಂದ ಬಂದಿಲ್ಲ… ನನ್ನ ಒಳಗಿಂದ ಬಂದಿದೆ… ನೀವು ಇದನ್ನು ಹಿಡಿದುಕೊಳ್ಳಬೇಕು… ನೀವು ಕೇಳಿಸಿಕೊಳ್ಳುತ್ತಿದ್ದೀರಾ? ನಿಮ್ಮ ಕಿವಿಗಳು ಕೇಳಿಸಿಕೊಳ್ಳುತ್ತಿವೆ… ಕೇಳಿಸಿಕೊಳ್ಳಬೇಕಾದ್ದು ನೀವು. ನಾನು ಹೇಗೆ ಈ ವಸ್ತ್ರವಲ್ಲವೋ ನಾನು ಈ ಕೈ, ಕಾಲು, ಕಿವಿ ಅಲ್ಲ. ನಾನು ಉಟ್ಟಿರುವ ಈ ವಸ್ತ್ರವನ್ನು ಕಳಚಿದರೇ ನಾನು ಬದಲಾಗುತ್ತೇನಾ? ನಾಳೆ ಇನ್ನೊಂದು ನೂತನ ವಸ್ತ್ರಗಳನ್ನು ಧರಿಸುತ್ತೇನೆ. ಅಷ್ಟೇ ವಿನಹ ನಾನು ಬದಲಾಗುವುದಿಲ್ಲ… ನಾನು ನಾನೇ!

(ಚೀಲದ ಒಳಗಿಂದ ಕೊಳಲನ್ನು ತೆಗೆಯುತ್ತಾ…) ಈ ಕೊಳಲಲ್ಲಿ ಸಂಗೀತವಿದೆ. ನಾನು ೪೦ ವರ್ಷಗಳ ಕಾಲ ಸಾಧನೆ ಮಾಡಿದ್ದೆ. ಆದ್ದರಿಂದ, ನಾನು ಈ ಕೊಳಲನ್ನು ನುಡಿಸಬಲ್ಲೆ. ಈ ವೇಣುವಿನ ಸೃಷ್ಟಿಯನ್ನು ಮಾನವ ಮಾಡಿದ. ಈ ದೇಹ ಸೃಷ್ಟಿಕರ್ತನ ಸೃಷ್ಟಿ. ಮಾನವನ ಸೃಷ್ಟಿಯಾಗಿರುವ ಈ ಬಿದಿರಿನಲ್ಲಿಯೇ ಇಷ್ಟು ಸಂಗೀತವಿದ್ದರೆ, ಆ ಸೃಷ್ಟಿಕರ್ತ ಸೃಷ್ಟಿಸಿದ ಈ ಆತ್ಮದಲ್ಲಿ ಎಷ್ಟು ಸಂಗೀತವಿರುತ್ತದೆಯೋ! ನಮ್ಮ ಜೀವನಕ್ಕೆ ನಾವೇ ಸೃಷ್ಟಿಕರ್ತರು! ನನ್ನ ಜೀವನ ನನ್ನ ಸೃಷ್ಟಿ. ನನ್ನ ಶರೀರ ಸೃಷ್ಟಿಕರ್ತ ಸೃಷ್ಟಿಸಿದ್ದು. ನನ್ನ ಕೈಗಳು ನನ್ನ ಸೃಷ್ಟಿ! ನನ್ನ ನೋಟ ನನ್ನ ಸೃಷ್ಟಿ! ನನ್ನ ಮಾತುಗಳು ನನ್ನ ಸೃಷ್ಟಿ! ನನ್ನ ಕೋರಿಕೆ ನನ್ನ ಸೃಷ್ಟಿ! ೩೦ ವರ್ಷಗಳ ಹಿಂದೆ ಧ್ಯಾನ ಕಲಿತುಕೊಳ್ಳುವುದು ನನ್ನ ಸೃಷ್ಟಿ! ೪೦ ವರ್ಷಗಳು ಸಂಗೀತ ಅಭ್ಯಸಿಸುವುದು ನನ್ನ ಸೃಷ್ಟಿ!

“ನಮ್ಮ ಜೀವನಗಳಿಗೆ ನಾವೇ ಸೃಷ್ಟಿಕರ್ತರು! ನಮ್ಮ ಪಾಪಗಳಿಗೆ, ನಮ್ಮ ಪುಣ್ಯಗಳಿಗೆ, ನಮ್ಮ ರೋಗಗಳಿಗೆ, ನಮ್ಮ ದುಃಖಗಳಿಗೆ ನಾವೇ ಸೃಷ್ಟಿಕರ್ತರು! ಪಾಪಕ್ಕೆ ಪಾಪವೇ ಫಲ, ಪುಣ್ಯಕ್ಕೆ ಪುಣ್ಯವೇ ಫಲವಾಗಿ ಸಿಗುತ್ತದೆ. ಮೂರು ರೀತಿಯ ಕರ್ಮಗಳಿವೆ. ಪಾಪ ಕರ್ಮಗಳು! ಪುಣ್ಯ ಕರ್ಮಗಳು! ಧ್ಯಾನ ಕರ್ಮಗಳು!”

ಯಾವ ಪ್ರಾಣಿಯನ್ನಾದರೂ ಹಿಂಸಿಸಿದರೇ- ಪಾಪಕರ್ಮ
ಯಾವ ಪ್ರಾಣಿಗಾದರೂ ಸಹಾಯಮಾಡಿದರೇ- ಪುಣ್ಯಕರ್ಮ
ಧ್ಯಾನ ಮಾಡಿದರೇ- ಧ್ಯಾನ ಕರ್ಮ