“ನಾವು ಸ್ಫಟಿಕದಂತೆ ಸ್ವಚ್ಛ ಮತ್ತು ಶುದ್ಧ ಆತ್ಮಗಳು”

 

ಮೈತ್ರೇಯಬುದ್ಧ ಧ್ಯಾನ ವಿಶ್ವಾಲಯದಲ್ಲಿ ಮುಂಜಾನೆ 5.30 ಗಂಟೆಗೆ ನಾದಧ್ಯಾನದಲ್ಲಿ ಪತ್ರೀಜಿಯವರ ಕೊಳಲು ನಾದಕ್ಕೆ ಡಾ||ಸಂಜಯ್ ಕಿಂಗಿಯವರ ಸಿತಾರ್ ವಾದನ ಜೊತೆಗೂಡಿತ್ತು. ವಯೋಲಿನ್ ವಿದ್ವಾನ್ ಗಣೇಶ್ ಕುಮಾರ್, ಮೃದಂಗ ವಿದ್ವಾನ್ ಅರುಣ್ ಕುಮಾರ್ ಮತ್ತು ತಬಲ ಬಬ್ಲೂ ಇವರು ತಮ್ಮ ವಾದ್ಯ ಸಹಕಾರವನ್ನು ನೀಡಿದರು. ಕೊಳಲುನಾದ ಧ್ಯಾನದ ನಂತರ ಅಕ್ಟೋಬರ್ ೪ನೇರಂದು ಪತ್ರೀಜಿಯವರು ನೀಡಿದ ಸಂದೇಶ ಇಲ್ಲಿ ನೀಡಲಾಗಿದೆ.

ನನ್ನ ಮೆಚ್ಚಿನ ಗೆಳೆಯರೆ, ಮಾಸ್ಟರ್ಸ್ ರ್ದೇವರುಗಳೆ ಹಾಗು ವಿಜ್ಞಾನಿಗಳೆ ಈಗ ಹೇಳುವ ಸಂದೇಶ ಸ್ಪಷ್ಟವಾಗಿದೆ ಮತ್ತು ಆ ಸಂದೇಶವೇನೆಂದು ನಮಗೆಲ್ಲ ತಿಳಿದಿದೆ. ಈ ಸಂದೇಶ ’ಸ್ಫಟಿಕದಂತೆ’ (crystal) ಶುಭ್ರವಾಗಿದೆ. ನಾವೆಲ್ಲ ಉಜ್ವಲವಾದ, ಭವ್ಯವಾದ ಸ್ಫಟಿಕಗಳು. ಒಂದು ಸ್ಫಟಿಕವು ಖನಿಜ ಲೋಕದ ಎನ್‌ಲೈಟೆನ್ಡ್ ಮಾಸ್ಟರ್.

ನಾವೆಲ್ಲ ಈ ಸ್ವಚ್ಛ ಹರಳುಗಳನ್ನು ಗೌರವಿಸುತ್ತೇವೆ. ಇವುಗಳ ಕಡೆ ನಮ್ಮ ಒಲವೂ ಇದೆ. ಸ್ಫಟಿಕವು ಪಾರದರ್ಶಕತೆಯನ್ನು ಹೊಂದಿರುತ್ತದೆ. ನೀವೂ ಈ ರೀತಿ ಪಾರದರ್ಶಕತೆಯನ್ನು ಪಡೆದರೆ ನೀವೂ ಕೂಡ ಮಾನವಲೋಕದ ಎನ್‌ಲೈಟೆನ್ಡ್ ಮಾಸ್ಟರ್ಸ್ ಆಗುತ್ತೀರಿ. ನಮ್ಮ ಮೂಲತತ್ವ ಅಥವ ಸ್ವಭಾವ ಸ್ಪಟಿಕದಂತೆಯೆ ಇರುತ್ತದೆ. ನಮ್ಮ ಸ್ವಸ್ಥಿತಿಯಲ್ಲಿ ನಾವು ಸ್ಫಟಿಕದ ಹಾಗೆಯೆ ಸ್ವಚ್ಛ, ಶುದ್ಧ ಆತ್ಮಗಳು. ನಾವು ಬೇರೇನೂ ಅಲ್ಲ. ನಾವು ಅಂತಹ ಆತ್ಮಸ್ವರೂಪಗಳು.

ಇಂಥ ಪವಿತ್ರತೆ, ಸ್ವಚ್ಛತೆಯನ್ನು ಪಡೆದಿರುವ ನಾವು ಅನೇಕ ಆಯಾಮಗಳನ್ನು ಹಾದು ಹೋಗುತ್ತೇವೆ. ಆದ್ದರಿಂದ ಮೂಲತಃ ನಾವೆಲ್ಲ ಶುದ್ಧ ಅಸ್ತಿತ್ವವುಳ್ಳ ಆತ್ಮಗಳು. ಆದರೆ ಅನುಭವಗಳನ್ನು ಪಡೆಯುತ್ತೇವೆ. ಈ ಅನುಭವಗಳು ಅಸ್ಪಷ್ಟವಾಗಿರುತ್ತವೆ. ಇವುಗಳನ್ನು ನಾವು ಕೇವಲ ಪುಳಕಿತ ಅನುಭವಕ್ಕಾಗಿಯೆ, ಸಾಹಸಕ್ಕಾಗಿಯೆ ಪಡೆಯುತ್ತೇವೆ.

ಭೂಕಾಲ/ದೇಹಕಾಲ (Earth time/Body-time) ಎಂದರೆ ನಾವು ಈ ಭೂಮಿಯ ಮೇಲೆ ಮಾನವ ಶರೀರವನ್ನು ಪಡೆದು ಕಳೆಯುವ ಸಮಯ. ಈ ಸಮಯದಲ್ಲಿ ನಾವು ಸ್ವಚ್ಛವಲ್ಲದ, ಸ್ಪಷ್ಟವಲ್ಲದ, ಮಸುಕಾದ ಅನುಭವಗಳನ್ನು ಪಡೆಯುತ್ತೇವೆ. ನಮ್ಮ ನೈಜಸ್ವಭಾವವನ್ನು ನಾವು ಮರೆತುಬಿಡುತ್ತೇವೆ. ಇದೆಲ್ಲವು ಕೇವಲ ಲೋಕದಾಟದಲ್ಲಿ ಪುಳಕಿತಗೊಳ್ಳುವಂಥ ಅನುಭವಕ್ಕಾಗಿಯೇ ಮಾಡುತ್ತೇವೆ.

ಈ ಪ್ರಪಂಚವು ಒಂದು ರಂಗಭೂಮಿಯಿದ್ದಂತೆ. ನಾವೆಲ್ಲರೂ ಕೇವಲ ಪಾತ್ರಧಾರಿಗಳು. ನಮ್ಮ ಪಾತ್ರವನ್ನು ನಟಿಸಿ ಹೊರಡುತ್ತೇವೆ. ನಾವು ಮೊಳಕೆಯೊಡೆದು ನಮ್ಮ ತನವನ್ನು ಪಸರಿಸುತ್ತೇವೆ. ಈ ನುಡಿಗಳನ್ನು ಮಹಾನ್ ವ್ಯಕ್ತಿಯಾದ ಶೇಕ್ಸ್‌ಪಿಯರ್‌ರವರು ಹೇಳಿದ್ದಾರೆ.

ನಾವು ಮಾನವ ಶರೀರವನ್ನು ಧರಿಸಿ ರಂಗಭೂಮಿಯನ್ನು ಏರುವುದು ವಿಭಿನ್ನ ಪಾತ್ರಾಭಿನಯಕ್ಕಾಗಿ, ವಿಭಿನ್ನ ಅಭಿಪ್ರಾಯಗಳಿಂದ ವಿವಿಧ ಅನುಭವಗಳನ್ನು ಪಡೆದು ವಿವಿಧ ರೋಮಾಂಚಕ ವಿನೋದಭರಿತ ಆಟ ಆಡಲೆಂದು. ಇಲ್ಲಿ ಯಾವ ಪಾತ್ರವೂ ಇನ್ನೊಂದು ಪಾತ್ರಕ್ಕಿಂತ ಉತ್ಕೃಷ್ಟವಾದದ್ದಲ್ಲ. ನಾವೆಲ್ಲ ಕೇವಲ ಪಾತ್ರಧಾರಿಗಳು ಅಷ್ಟೇ!

ನಾವು ಮತ್ತೆ ಮತ್ತೆ ನೆನಪಿನಲ್ಲಿಡಬೇಕಾದ ಮಾತು ಈ ಪ್ರಪಂಚವು ಒಂದು ನಾಟಕರಂಗ. ಇದೊಂದು ಜಗನ್ನಾಟಕ. ನಾವೆಲ್ಲ ನಟನಟಿಯರು. ನಮ್ಮ ಪಾತ್ರಾಭಿನಯ ಮುಗಿದ ನಂತರ ಹೊರಡಬೇಕು. ಪುನಃ ಬರುತ್ತೇವೆ. ಹೀಗೆ ಎಷ್ಟೋ ಬಾರಿ ಬರುತ್ತಿರುತ್ತೇವೆ. ‘ಪುನರಪಿ ಜನನಂ ಪುನರಪಿ ಮರಣಂ, ಪುನರಪಿ ಜನನಂ ಪುನರಪಿ ಮರಣಂ.’

ಇದನ್ನು ಶೇಕ್ಸ್‌ಪಿಯರ್ ಎಷ್ಟು ಸೂಕ್ತವಾಗಿ ಹೇಳಿದ್ದಾರೆ. ಇದನ್ನು ಮತ್ತೆ ಮತ್ತೆ ಜ್ಞಾಪಿಸಿಕೊಳ್ಳಬೇಕು. ನಾವು ಬಂದಿರುವ ಉನ್ನತ ಲೋಕಗಳಲ್ಲಿ ಯಾವುದೇ ವೈವಿಧ್ಯತೆ ಇರುವುದಿಲ್ಲ. ಅಲ್ಲಿರುವುದು ಕೇವಲ ಏಕತೆಯೇ. ನಾವು ಸ್ವರ್ಗ ಅಥವ ಹೆವೆನ್ ಎಂದು ಯಾವ ಲೋಕವನ್ನು ಕರೆಯುತ್ತೇವೊ ಅಲ್ಲಿ ಜನ್ಮವೂ ಇರುವುದಿಲ್ಲ, ಮರಣವೂ ಇರುವುದಿಲ್ಲ. ಇಲ್ಲಿ ಸಿಗುವಂತ ಪುಳಕ ಅಲ್ಲಿ ಸಿಗುವುದಿಲ್ಲ. ಏಕೆಂದರೆ ಅಲ್ಲಿ ನಮಗೆ ಏನು ಬೇಕಾದರೂ ಸಿಗುತ್ತದೆ. ಮೇಲಿನ ಲೋಕಗಳಲ್ಲಿ ಏಕತೆ ಇರುತ್ತದೆ ಭೂಲೋಕದಲ್ಲಿ ಅನೇಕತೆ ಇರುತ್ತದೆ. ಭೂಲೋಕವು ಒಂದು ಸುಂದರವಾದ, ಅದ್ಭುತವಾದ ಸ್ಥಳ. ಇಲ್ಲಿ ವೈವಿಧ್ಯಮಯವಾದ ಆಯ್ಕೆಗಳಿವೆ. ವೈವಿಧ್ಯಮಯವಾದ ವಿವೇಕಜ್ಞಾನಗಳಿವೆ. ಪ್ರತಿಯೊಂದು ಜನ್ಮವು ಒಂದು ’ಥ್ರಿಲ್’ ಆದ್ದರಿಂದಲೇ ನಾವು ಇಲ್ಲಿ ಜನಿಸುತ್ತೇವೆ. ಆದರೆ ಒಮ್ಮೆ ಜನ್ಮ ಮುಗಿಸಿದ ನಂತರ ಮತ್ತೊಬ್ಬ ತಾಯಿಯ ಗರ್ಭವನ್ನು ಸೇರಿದ ನಂತರ ನಾವು ಅನುಭವಗಳ ಸರಪಳಿಯನ್ನು ಸ್ವೀಕರಿಸಲೇಬೇಕು. ಅವನ್ನು ಅನುಭವಿಸಲೇಬೇಕಾಗುತ್ತದೆ. ಇಂಥ ಅನುಭವಗಳನ್ನು ಪಡೆಯಲು ಅನೇಕ ಜನ್ಮಗಳು ಹಿಡಿಯಬಹುದು. ಪ್ರತಿ ಜನ್ಮವೂ ಒಂದು ’ಥ್ರಿಲ್’. ಯಾವುದೂ ಶಿಕ್ಷೆಯಲ್ಲ. ಯಾವ ಜನ್ಮವೂ ಶಿಕ್ಷೆಯ ಜನ್ಮವಲ್ಲ. ಯಾವ ಪಾತ್ರವೂ ಶಿಕ್ಷೆಯಲ್ಲ. ಮಾನವಜನ್ಮ ಸಾಹಸಮಯವಾದದ್ದು.

ಭೂಮಿ ಎಂಬ ಈ ನಾಟಕಶಾಲೆಯಲ್ಲಿ ಎಲ್ಲಾ ಹೆಂಗಸರು, ಗಂಡಸರು ಪಾತ್ರಧಾರಿಗಳು. ಬೀಜದಿಂದ ಮೊಳಕೆಯೊಡೆದು ನಾವು ವಿಕಸಿಸುತ್ತೇವೆ. ಇದೇ ಈ ಜನ್ಮನಾಟಕದ ಅಥವ ಆಟದ ಸೊಗಸು.

ಹೊರೆಶಿಯ ಎಂಬುವರು ಹೀಗೆ ಹೇಳಿದ್ದಾರೆ ನೀವು ನಮ್ಮ ತರ್ಕಶಾಸ್ತ್ರದಲ್ಲಿ ಅಂದುಕೊಂಡಿರುವುದಕ್ಕಿಂತ ಹೆಚ್ಚು ವಿಷಯಗಳು ಈ ಸ್ವರ್ಗದಲ್ಲೂ, ಭೂಮಿಯಲ್ಲೂ ಇದೆ. ಭೂಮಿಯು ರಹಸ್ಯಗಳಿಂದ ತುಂಬಿದೆ. ಪ್ರತಿಯೊಂದು ತಿರುವಿನಲ್ಲೂ ನಾವು ತಿಳಿಯದಂಥಹ ವಿಷಯಗಳನ್ನು ಎದುರುಗೊಳ್ಳುತ್ತಿರುತ್ತೇವೆ. ಅದೊಂದು ಆಟ ಅಡುವ ಕ್ರೀಡೆ. ಕ್ರೀಡೆಯ ಸೊಗಸು ಇದೇ! ಈ ಕ್ರೀಡೆಯಲ್ಲಿ ತೊಡಗಿರುವ ನಾವು ಸಂತೋಷವಾಗಿದ್ದೇವೆ. ನಾವು ಮಾಡುವ ಪ್ರತಿಯೊಂದು ಆಯ್ಕೆಯೂ ವಿಸ್ಮಯಕಾರಿ, ಯಾವಾಗಲೂ .. ಎಲ್ಲ ಆತ್ಮಗಳು ಅದ್ಭುತ ಆತ್ಮಗಳು.

ಮನುಷ್ಯರಾದ ನಮಗೆ ನಮ್ಮದೇ ಆದ ಇಚ್ಛೆ ಇರುತ್ತದೆ. ಅದೇ ರೀತಿ ಇತರ ಅಸ್ತಿತ್ವವುಳ್ಳ ಜೀವಿಗಳಿಗೂ, ಅವರದೇ ಆದ ಇಚ್ಛೆಗಳು ಇರುತ್ತದೆ. ಏನನ್ನಾದರೂ ಮಾಡುವ ಸ್ವಾತಂತ್ರ್ಯ ಅವರಿಗೂ ಇರುತ್ತದೆ. ನಿಷೇಧಿಸುವಂಥ ಒಂದೇ ಒಂದು ವಿಷಯವೇನೆಂದರೆ ನಾವು ಇನ್ನೊಂದು ಆತ್ಮದ ಆಟವನ್ನು ನಿಲ್ಲಿಸುವುದು. ಇಬ್ಬರು ಮಕ್ಕಳು ಆಡುತ್ತಿದ್ದರೆ ಅವರ ಮಧ್ಯೆ ಹೋಗಿ ಅವರ ಆಟವನ್ನು ನಿಲ್ಲಿಸುವುದು ತಪ್ಪು. ಒಂದು ಪ್ರಾಣಿ, ಪಕ್ಷಿ, ಮೀನು ಇವುಗಳನ್ನು ಕೊಲ್ಲುವುದೂ ತಪ್ಪು. ಅವುಗಳ ಆಟದ ನಡುವೆ ಹೋಗುವುದು ತಪ್ಪು. ಯಾರಲ್ಲೇ ಆಗಲಿ, ಯಾವುದರಲ್ಲೇ ಆಗಲಿ ಮಧ್ಯಪ್ರವೇಶಿಸುವುದು ತಪ್ಪು.
ನಾವು ವಿರೋಧಿಸಬೇಕಾದ ಅಂಶವೇನೆಂದರೆ – ಪ್ರಾಣಿ, ಪಕ್ಷಿ, ಮೀನುಗಳನ್ನು ಕೊಲ್ಲುವುದು. ಕಾರಣವೇನೇ ಇರಬಹುದು- ಊಟ, ಕ್ರೀಡೆ, ಆಟ ಯಾವುದಾದರೂ ಸರಿ, ಅವುಗಳನ್ನು ಕೊಲ್ಲುವ ಹಕ್ಕು ನಮಗಿಲ್ಲ. ಇನ್ನೊಂದರ, ಇನ್ನೊಬ್ಬರ ಬದುಕು ನಿಮ್ಮ ಬದುಕಲ್ಲ. ನಿಮ್ಮ ಬದುಕು ಮಾತ್ರವೆ ನಿಮ್ಮದು. ಬೇರೆ ಆತ್ಮಗಳ ಇಚ್ಛೆಯಲ್ಲಿ ನಾವು ಕೈಹಾಕಬಾರದು. ನೀವು ನಿಮ್ಮ ಆಟವನ್ನು ಮಾತ್ರ ಆಡಬೇಕು.

ಈ ಭೂಮಿಯು ಒಂದು ಭೀಕರವಾದ ಸ್ಥಳವಾಗಿದೆ. ಏಕೆಂದರೆ ಇಲ್ಲಿ ಮಾನವರು ಪ್ರಾಣಿ, ಪಕ್ಷಿ, ಮೀನುಗಳನ್ನು ಕೊಂದು ತಿನ್ನುವ ಆಯ್ಕೆಯನ್ನು ಆಯ್ದುಕೊಂಡಿದ್ದಾರೆ. ‘ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟಿ’ಯಲ್ಲಿರುವ ನಾವು ಇದನ್ನು ನಿಲ್ಲಿಸುತ್ತೇವೆ. ಮಾನವ ತನ್ನ ಸಹಜೀವಿಗಳು ಎಂದರೆ ಪ್ರಾಣಿ, ಪಕ್ಷಿ, ಮೀನು ಇವುಗಳ ಜೀವನದಲ್ಲಿ ಅಡ್ಡಿಯಾಗುವುದನ್ನು ನಿಲ್ಲಿಸುತ್ತೇವೆ. ಇಂಥ ಕೆಲಸಮಾಡಲೆಂದೆ ನಾವಿದ್ದೇವೆ.

ನಾವು ಪ್ರಾಣಿಗಳನ್ನು ರಕ್ಷಿಸುತ್ತೇವೆ
ನಾವು ಪಕ್ಷಿಗಳನ್ನು ರಕ್ಷಿಸುತ್ತೇವೆ
ನಾವು ಮೀನುಗಳನ್ನು ರಕ್ಷಿಸುತ್ತೇವೆ

ಮಾನವನ ಹೀನಕೃತ್ಯವನ್ನು ನಾವು ತಡೆಯುತ್ತೇವೆ. ಇದೇ ಏಕೈಕ ಉದ್ದೇಶ ಹಾಗು ಇದೇ ಕೆಲಸಕ್ಕಾಗಿ ಪಿರಮಿಡ್ ಮಾಸ್ಟರ್‌ಗಳು ಜನ್ಮಿಸಿದ್ದಾರೆ. ಇಲ್ಲದಿದ್ದರೆ ನಾವು ಬೇರೊಂದು ಕಡೆ ಆಟ ಆಡಲು ಆಯ್ದುಕೊಳ್ಳುತ್ತಿದ್ದೆವು. ಆದರೆ ನಾವಿಲ್ಲಿಗೆ ಒಂದು ವಿಶಿಷ್ಟ ಕಾರಣಕ್ಕಾಗಿ ಬಂದಿದ್ದೇವೆ. ನಮ್ಮ ವೈಯಕ್ತಿಕ ಆಟದ ಜೊತೆ ಮಾನವನ ಇಂಥ ಕ್ರೂರ ಕಾರ್ಯವನ್ನು ನಿಲ್ಲಿಸಬೇಕೆಂದು ನಾವು ಇಲ್ಲಿಗೆ ಬಂದಿದ್ದೇವೆ.
ಇಲ್ಲಿ ಸೇರಿರುವ ಎಲ್ಲರಿಗೂ ನಾವು ಈ ಸಂದೇಶವನ್ನೇ ಕೊಡಲು ಬಯಸುತ್ತೇವೆ. ಯಾವುದನ್ನೂ ಕೊಲ್ಲಬಾರದು, ಯಾವುದನ್ನೂ ಹಿಂಸಿಸಬಾರದು, ಯಾವುದಕ್ಕೂ ಅಡ್ಡಿಯಾಗಬಾರದು. ಪ್ರಾಣಿ, ಮೀನು, ಪಕ್ಷಿ – ಇವು ನಮ್ಮ ಆಹಾರವಲ್ಲ. ನಮ್ಮ ಆಹಾರ ಸಸ್ಯಗಳು.

ನೀವು ಯಾರೆಂದು ತಿಳಿಯಲು ನೀವು ಧ್ಯಾನ ಮಾಡಬೇಕಾಗಿಲ್ಲ. ಆದರೆ ಇತರ ಜೀವಿಗಳ ಜೊತೆ ವಿನಯದಿಂದ, ನಾಗರಿಕತೆಯಿಂದ ನಡೆದುಕೊಂಡರೆ ಸಾಕು.

ನೀವು ಯಾರೆಂದು ತಿಳಿಯದಿದ್ದರೆ ಅದೇ ಒಂದು ’ಥ್ರಿಲ್’. ನೀವು ಎನ್‌ಲೈಟೆನ್ಡ್ ಆದರೆ ಅರ್ಧಭಾಗದಷ್ಟು ’ಥ್ರಿಲ್’ ಇರುವುದಿಲ್ಲ. ಏಕೆಂದರೆ ನಿಮಗೆ ವಿಷಯಗಳ ಯೋಜನಾ ನಕ್ಷೆಯು ಮುಂಚೆಯೆ ತಿಳಿದಿರುತ್ತದೆ. ನಿಮಗೆ ಕೊನೆಯಲ್ಲಿ ಏನಾಗುತ್ತದೆ ಎಂದು ತಿಳಿದಿರುತ್ತದೆ. ಮರಣದ ನಂತರದ ವಿಷಯವೂ ತಿಳಿದಿರುತ್ತದೆ. ಆದ್ದರಿಂದ ’ಥ್ರಿಲ್’ ಇರುವುದಿಲ್ಲ. ಈಗ ಇಲ್ಲಿ ಪ್ರಧಾನ ವಿಷಯವೇನೆಂದರೆ ’ಅಹಿಂಸೆ’

ಮಾನವನ ಪಕ್ಷಿಯ ಮೇಲಿನ ಹಿಂಸೆ
ಮಾನವನ ಪ್ರಾಣಿಯ ಮೇಲಿನ ಹಿಂಸೆ
ಮಾನವನ ಮೀನಿನ ಮೇಲಿನ ಹಿಂಸೆ

ಮಾನವ ಜಾತಿಯು ಕ್ರೂರಜಾತಿ. ಅದು ನಿಷ್ಕರುಣೆಯಿಂದ ಕೂಡಿದೆ. ಜೀಸಸ್ ಕ್ರೈಸ್ಟ್‌ರವರನ್ನು ಪ್ರಾರ್ಥಿಸಿ ಪ್ರಾಣಿಹಿಂಸೆ ಮಾಡುವುದು, ತಿರುಪತಿ ಬಾಲಾಜಿಯನ್ನು ಪ್ರಾರ್ಥಿಸಿ ಪ್ರಾಣಿಗಳ ಮೇಲೆ ಕ್ರೌರ್ಯವನ್ನೆಸೆಗುವುದು ಇದು ಬಹಳ ಯಾತನೆಯನ್ನು ಕೊಡುತ್ತದೆ. ಇದು ದುಃಖಕರ ಸಂಗತಿ. ಪಶುವಧಾಲಯಗಳಲ್ಲಿ ಪ್ರಾಣಿ, ಪಕ್ಷಿ, ಮೀನುಗಳ ಮೇಲೆ ನಡೆಯುವ ದೌರ್ಜನ್ಯ ಅಸಹನೀಯವಾದದ್ದು.

ನಾವು ಪಾರ್ಟಿಗಳಲ್ಲಿ ನೃತ್ಯ, ಹಾಡುಗಳಿಂದ ರಂಜಿತರಾಗಿ ಮಾಂಸಾಹಾರವನ್ನು ಸೇವಿಸುತ್ತೇವೆ. ಜೀವಿಗಳನ್ನು ಕೊಂದು ಹೀಗೆ ನಾವು ಸಂಗೀತ, ಹಾಡು, ನೃತ್ಯಗಳಲ್ಲಿ ತೊಡಗುತ್ತೇವೆ ನೋಡಿ? ಅಬ್ಬಾ! ಎಂಥ ದಾರುಣವಾದ ಸಂಗತಿ. ಇಲ್ಲ, ಇದಕ್ಕೆ ಕೊನೆ ಹಾಡಲೇಬೇಕು. ಮುಂದಿನ 10-15ವರ್ಷಗಳಲ್ಲಿ ಪ್ರಾಣಿಗಳನ್ನು ಕೊಲ್ಲುವುದನ್ನು ಖಂಡಿತ ಸಂಪೂರ್ಣವಾಗಿ ನಿಲ್ಲಿಸೋಣ. ಯಾವೊಂದು ಪ್ರಾಣಿಯಾಗಲಿ, ಪಕ್ಷಿಯಾಗಲಿ, ಮೀನಾಗಲಿ, ಮಾನವನಿಂದ ಕೊಲ್ಲಲ್ಪಡಬಾರದು. ನಮ್ಮ ವಿನೋದ ವಿಲಾಸಕ್ಕಾಗಿ ರಕ್ತಪಾತವನ್ನು ನಿಲ್ಲಿಸೋಣ. ಎಲ್ಲ ತರಹದ ಕ್ರೂರತನವನ್ನು ನಿಲ್ಲಿಸೋಣ. ’ಪ್ರಾಣ’ ವಾಯುವಿನ ಮೇಲೆ ಜೀವಿಸಿ. ಎಷ್ಟೋ ಜನ ಮಹನೀಯರು ಹೀಗೆ ’ಪ್ರಾಣ’ ವಾಯುವಿನ ಆಧಾರದಲ್ಲಿ ಜೀವಿಸಿದ್ದಾರೆ. ಕೊಲ್ಲುವುದು ಏತಕ್ಕೆ ಹೇಳಿ? ನಿಮ್ಮ ಆಹಾರಕ್ಕಾಗಿ ನೀವು ಕೊಲ್ಲಬೇಕಾಗಿಲ್ಲ. ಒಂದು ವಿಷಯವನ್ನು ತಿಳಿಯಿರಿ – ನೀವೇನನ್ನು ಸೇವಿಸುತ್ತೀರೊ ನೀವು ಅದೇ ಆಗುತ್ತೀರಿ.

ಗಾಂಧೀಜಿಯವರ ಸಂದೇಶವೇ ನಮ್ಮ ಸಂದೇಶ. ಗಾಂಧೀಜಿಯವರ ಜೀವನವೇ ನಮ್ಮ ಜೀವನ. ಪ್ರತಿಯೊಬ್ಬರು ಗಾಂಧೀಜಿಯವರಂತೆ ಆಗಬೇಕು. ಇದಕ್ಕಾಗಿಯೇ ನಾವು ಶ್ರಮಿಸುತ್ತಿದ್ದೇವೆ. ’ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟಿ’ಯ ಮೂಲ ಉದ್ದೇಶ ಇದೇ ಆಗಿದೆ.