” ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ “

ಅನಾರೋಗ್ಯ ವಿಪರೀತವಾಗಿ ಹರಡಿ, ಕನಿಷ್ಠ ಆರೋಗ್ಯದ ಉಪಶಮನವನ್ನು ಬಯಸುವ ವರ್ತಮಾನ ಸಮಾಜಕ್ಕೆ.. ಸಂಪೂರ್ಣ ಆರೋಗ್ಯಶಾಸ್ತ್ರದ ಬೆಲೆಯನ್ನು ತಿಳಿಸಿ ಅವರಿಗೆ ಸಂಪೂರ್ಣ ಆನಂದವನ್ನು ಕಲ್ಪಿಸಲು ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟಿ ಮೂವ್‌ಮೆಂಟ್‌ನಿಂದ ಒಂದು “ಧ್ಯಾನ ಆರೋಗ್ಯ ವಿಧಾನ”ವನ್ನು ವಿನ್ಯಾಸಿಸಿ, ನಿಯಮಿಸಲಾಗಿದೆ.

ನಿಜಕ್ಕೂ ಸಕಲ ರೋಗಗಳಿಗೆ ನಮ್ಮ ಎಡವಟ್ಟಾದ, ಅಶಾಸ್ತ್ರೀಯವಾದ ಆಹಾರ ವಿಧಾನಗಳು .. ನಮ್ಮ ಎಡವಟ್ಟಾದ, ಅಶಾಸ್ತ್ರೀಯವಾದ ಆಲೋಚನಾ ವಿಧಾನಗಳು .. ಮತ್ತು ನಮ್ಮ ಎಡವಟ್ಟಾದ, ಅಶಾಸ್ತ್ರೀಯವಾದ ವಾಕ್ ವಿಧಾನಗಳು ಮಾತ್ರವೇ ಕಾರಣ. ಇವೆಲ್ಲವನ್ನೂ ನಿರಂತರ ಧ್ಯಾನ, ಸ್ವಾಧ್ಯಾಯ, ಸಜ್ಜನ ಸಾಂಗತ್ಯಗಳಿಂದ ಕೊನೆಗಾಣಿಸಿ .. ಅನಾರೋಗ್ಯವನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಿದ ಮೇಲೆ ಸರಿಯಾದ ಅರಿವನ್ನು ಕಲ್ಪಿಸುವುದೇ “ಧ್ಯಾನ ಆರೋಗ್ಯ ವಿಧಾನ”ದ ಮುಖ್ಯ ಉದ್ದೇಶ.

ದೀರ್ಘಕಾಲಿಕ ರೋಗಗಳಾದ ರಕ್ತದ ಒತ್ತಡ, ಮಧುಮೇಹ, ಸೊಂಟನೋವು, ತಲೆನೋವು, ನರಗಳಿಗೆ ಸಂಬಂಧಿಸಿದ ವ್ಯಾಧಿಗಳಿಗೆ ಮತ್ತು ಮಾನಸಿಕ ವ್ಯಾಧಿಗಳಿಗೆ ಯಾವ ಅಲೋಪತಿ ಔಷಧಿಗಳು ಉಪಯೋಗಿದೆಯೇ ಧ್ಯಾನದ ಮೂಲಕ ಬರುವ ವಿಶ್ವಶಕ್ತಿಯಿಂದ ತಮ್ಮ ನಾಡೀಮಂಡಲವನ್ನು ಅವರವರೇ ಶುದ್ಧಿಮಾಡಿಕೊಳ್ಳುತ್ತಾ ಸಂಪೂರ್ಣವಾಗಿ ಸ್ವಯಂಚಿಕಿತ್ಸೆ ಮಾಡಿಕೊಳ್ಳಬಲ್ಲರು.

ಮಾನವನು ಏಳು ಶರೀರಗಳ ಸಮುದಾಯ ಎಂದು ಶಾಸ್ತ್ರ ತಿಳಿಸುತ್ತಿದೆ”

ಅನ್ನಮಯ ಕೋಶ … Physical Body

ಪ್ರಾಣಮಯ ಕೋಶ … Etheric body

ಮನೋಮಯ ಕೋಶ … Astral Body

ವಿಜ್ಞಾನಮಯ ಕೋಶ … Causal Body

ಆನಂದಮಯ ಕೋಶ … Spiritual Body

ವಿಶ್ವಮಯ ಕೋಶ … Cosmic Body

ನಿರ್ವಾಣಮಯ ಕೋಶ … Nirvanic Body

ಪ್ರಾಣಮಯಕೋಶದಲ್ಲಿ ಹರಡಿಕೊಂಡಿರುವ ಸುಮಾರು 2,72,೦೦೦ ನಾಡಿಗಳ ಸಮುದಾಯವನ್ನೇ “ನಾಡೀಮಂಡಲ” ಎನ್ನುತ್ತೇವೆ. ಈ ಪ್ರಾಣಮಯಕೋಶದಲ್ಲಿರುವ ನಾಡಿಗಳ ಮೂಲಕವೇ ಭೌತಿಕ ಶರೀರಕ್ಕೆ ಬೇಕಾಗಿರುವ ವಿಶ್ವಮಯ ಪ್ರಾಣಶಕ್ತಿ ಸರಬರಾಜು ಆಗುತ್ತಿರುತ್ತದೆ.

ಪ್ರತಿಯೊಂದು ಊರಿಗೂ ಕೆಲವು ಮುಖ್ಯವಾದ “ಹೆದ್ದಾರಿ ಕೂಡು ರಸ್ತೆಗಳು” ಇದ್ದಂತೆ ನಾಡೀಮಂಡಲದಲ್ಲಿ ಇರುವ 2,72,000 ನಾಡಿಗಳು ಕೂಡಾ ಕೆಲವು ಮುಖ್ಯ ಪ್ರದೇಶಗಳಲ್ಲಿ ಸಂಧಿಸಿ ಅತ್ಯಂತ ಪ್ರಧಾನವಾಗಿ ಇರುತ್ತವೆ. ಈ ಮುಖ್ಯ ಪ್ರದೇಶಗಳನ್ನೇ “ಷಟ್‌ಚಕ್ರಗಳು” ಎನ್ನುತ್ತೇವೆ.

1. ಮೂಲಾಧಾರ
2. ಸ್ವಾಧಿಷ್ಟಾನ
3. ಮಣಿಪೂರಕ
4. ಅನಾಹತ
5. ವಿಶುದ್ಧ
6. ಆಜ್ಞಾ

ಈ ಚಕ್ರಗಳೆಲ್ಲಾ ಅನ್ನಮಯಕೋಶದಲ್ಲಿರುವ ಗುದಸ್ಥಾನದಿಂದ ಪ್ರಾರಂಭವಾಗಿ ತಲೆಯವರೆಗೂ .. ಬೆನ್ನು ಮೂಳೆಗೆ ಸಮಾಂತರವಾಗಿ .. ಪ್ರಾಣಮಯಕೋಶದಲ್ಲಿ ಹೊಂದಿಕೊಂಡಿರುತ್ತದೆ. ಇವೆಲ್ಲವನ್ನೂ ದಾಟಿದನಂತರ ಇರುವ “ಸಹಸ್ರಾರ” ಎನ್ನುವ “ಚಕ್ರಾತೀತಸ್ಥಿತಿ” ಕುಂಡಲಿನಿಯಲ್ಲಿರುವ ಕೊನೆಯ ಸ್ಥಿತಿ.

“ನಾಡೀಮಂಡಲ ಅಶುದ್ಧಿ”

ಕೆಲವೊಮ್ಮೆ ಪ್ರಾಣಮಯ ಶರೀರದಲ್ಲಿರುವ ನಾಡಿಗಳು.. ಹಿಂದೆ ಮಾಡಿದ ಪಾಪಕರ್ಮಗಳಿಂದ ಮತ್ತು ವರ್ತಮಾನದ ಅಶಾಸ್ತ್ರೀಯ ಜೀವನ ವಿಧಾನದಿಂದ ಅಶುದ್ಧವಾಗಿದ್ದು ನಾಡೀಮಂಡಲದಲ್ಲಿ ಪ್ರಾಣಶಕ್ತಿಯನ್ನು ಸರಿಯಾಗಿ ಸರಬರಾಜು ಆಗಲು ಬಿಡದೇ ಅಡ್ಡಿಯಾಗುತ್ತಾ ಸಕಲ ರೋಗಗಳಿಗೂ ಕಾರಣಗಳಾಗುತ್ತಾ ಇರುತ್ತದೆ. “ಪಾಪಕರ್ಮಗಳು” ಅಂದರೆ, “ಮಾಂಸಾಹಾರ ಸೇವಿಸುವುದು” .. “ಜೀವನ (ಪ್ರಕೃತಿ) ನ್ಯಾಯಕ್ಕೆ ವಿರುದ್ಧವಾಗಿ ಹಿಂಸಾತ್ಮಕ ಕಾರ್ಯಕಲಾಪಗಳನ್ನು ಮಾಡುವುದು ಮುಂತಾದ ಹಿಂಸಾತ್ಮಕವಾದ ಮಾರ್ಗಗಳಿಂದ ಸದಾ ಇತರರಿಗೂ ಮತ್ತು ನಮಗೂ ಕೂಡ ತೊಂದರೆ ಉಂಟಾಗುತ್ತದೆ.

ನಾವು ಆಧ್ಯಾತ್ಮಿಕಶಾಸ್ತ್ರದ ಮೂಲಭೂತವಾದ ಸತ್ಯಗಳನ್ನು ತಿಳಿದುಕೊಳ್ಳದೇ ಕೇವಲ ಪ್ರಾಪಂಚಿಕ ಜ್ಞಾನದಿಂದ .. ದೇಹವನ್ನು, ಮನಸ್ಸನ್ನು ಮಾತ್ರವೇ ಗಮನಿಸಿಕೊಂಡರೆ ಅದು .. ಸರ್ವ ಅನಾರೋಗ್ಯಗಳಿಗೂ ಮೂಲಕಾರಣವಾಗುತ್ತದೆ. ಇಂತಹ ಅಜ್ಞಾನದಿಂದಲೇ ನಾಡೀಮಂಡಲದಲ್ಲಿ ಇರುವ ಪ್ರಾಣಶಕ್ತಿ ನಾಡಿಗಳಲ್ಲಿ “ಅಡೆತಡೆಗಳು” ಅಂದರೆ, “blocks” ಉಂಟಾಗುತ್ತವೆ.

ಇದರಿಂದ ಪ್ರಾಣಮಯ ಕೋಶದಲ್ಲಿರುವ ಆಯಾ ಪ್ರದೇಶಗಳಲ್ಲಿ ಪ್ರಾಣಶಕ್ತಿ ಕ್ಷೀಣಿಸಿ ಅವು ಇತರ ಪ್ರಾಣಿ ಸಮೂಹಗಳಾದ ಬ್ಯಾಕ್ಟೀರಿಯಾ, ವೈರಸ್‌ಗಳಿಗೆ ನಿಲಯವಾಗಿ .. ಅವುಗಳಿಂದ ಅನೇಕ ತೊಡಕುಗಳು ಮತ್ತು ರೋಗಗಳು ಉಂಟಾಗುತ್ತವೆ. ಕ್ರಮೇಣ ದೇಹದಲ್ಲೆಲ್ಲಾ ಸಕಲ ವ್ಯಾಧಿಗಳಿಗೆ ನಿಲಯವಾಗಿ “ದೇವಾಲಯ”ವಾಗಿ ಇರಬೇಕಾದ ನಮ್ಮ ದೇಹ “ರೋಗಾಲಯ“ವಾಗಿ ಬದಲಾಗುತ್ತದೆ. ನಾಡೀಮಂಡಲದಲ್ಲಿರುವ ಈ ಅಶುದ್ಧಿಯನ್ನು ತೊಲಗಿಸದೆ ಅದರ ಮೇಲೆ ಎಷ್ಟು ಔಷಧಿಗಳನ್ನು ಬಳಸಿದರೂ ಮತ್ತು ಇತರ ಯಾವುದೇ ರೀತಿಯ ವೈದ್ಯ ವಿಧಾನಗಳಿಗೆ ಈ ಭೌತಿಕ ಶರೀರವನ್ನು ಗುರಿ ಮಾಡಿದರೂ ಸಹ .. ಅದೆಲ್ಲಾ “ತಾತ್ಕಾಲಿಕ ಉಪಶಮನವೇ ಹೊರತು “ಶಾಶ್ವತ ಚಿಕಿತ್ಸೆ ಅಲ್ಲವೇ ಅಲ್ಲ.

“ನಾಡೀಮಂಡಲ ಶುದ್ಧಿ”

ನಾವು ನಿದ್ರಿಸುವ ಸಮಯದಲ್ಲಿ ನಮ್ಮ ಪ್ರಾಣಮಯಕೋಶ ವಿಶ್ವದಿಂದ ವಿಶ್ವಶಕ್ತಿಯನ್ನು ಗ್ರಹಿಸುತ್ತಾ ಇರುತ್ತದೆ. ಆದ್ದರಿಂದ, ದಿನನಿತ್ಯದ ಕೆಲಸಗಳಿಂದ ಎಷ್ಟು ದಣಿದರೂ ಸಹ.. ಸ್ವಲ್ಪಹೊತ್ತು ನಿದ್ರಿಸಿ ಎದ್ದ ತಕ್ಷಣ ಪುನಃ ನಮಗೆ ಶಕ್ತಿ ಬಂದಂತೆ ಚುರುಕಾಗಿದ್ದೇವೆ ಅನಿಸುತ್ತದೆ. ನಿದ್ದೆ ಸರಿಯಾಗಿ ಬರದಿದ್ದರೆ ಶರೀರ ಶಕ್ತಿಹೀನವಾಗಿ ಇರುತ್ತದೆ. ಆದರೆ, ರೋಗಗಳನ್ನು ಪೂರ್ಣವಾಗಿ ವಾಸಿ ಮಾಡುವ ಶಕ್ತಿಯು ನಮಗೆ ನಿದ್ದೆಯಿಂದ ಮಾತ್ರವೇ ಲಭಿಸುವುದಿಲ್ಲ. ಅದು ಧ್ಯಾನದಲ್ಲಿ ಮಾತ್ರವೇ ಸಾಧ್ಯವಾಗುತ್ತದೆ. ಏಕೆಂದರೆ, ಧ್ಯಾನದಲ್ಲಿ ಆಲೋಚನಾರಹಿತ ಸ್ಥಿತಿಯಲ್ಲೇ ನಮ್ಮೊಳಗೆ ಇನ್ನೂ ಹೆಚ್ಚು ‘ಕಾಸ್ಮಿಕ್ ಎನರ್ಜಿ’ ಪ್ರವಹಿಸಿ ಪ್ರಾಣಮಯಕೋಶ ಇನ್ನೂ ಅಧಿಕವಾಗಿ ತೇಜೋಮಯವಾಗಿ ತಯಾರಾಗುತ್ತದೆ.

ಧ್ಯಾನಸ್ಥಿತಿಯಲ್ಲಿ.. ಒಂದುಕಡೆ “ಆತ್ಮ ಶಕ್ತಿಯ ಖರ್ಚು” ಕಡಿಮೆಯಾಗುತ್ತಾ.. ಇನ್ನೊಂದು ಕಡೆ “ವಿಶ್ವಮಯ ಪ್ರಾಣಶಕ್ತಿಯ ಉಳಿತಾಯ” ಹೆಚ್ಚುತ್ತಾ ಇರುತ್ತದೆ. ಏಕಕಾಲದಲ್ಲಿ ನಡೆಯುವ ಈ ಎರಡರ ಸಮ್ಮಿಲನದಿಂದ ಪ್ರಾಣಮಯಕೋಶದಲ್ಲಿರುವ “ಹಿಂದಿನ ಪಾಪಕರ್ಮಜನಿತ ರೋಗ ಕಾರಣಗಳು” ಅಂದರೆ, “ಮಲಿನ ನಾಡಿಗಳು” ಎನ್ನುವುದು ಬುಡಸಮೇತ ಶುಚಿಗೊಳ್ಳುತ್ತವೆ.

“ಧ್ಯಾನ ಸ್ಥಿತಿಯಲ್ಲಿನ ನೋವುಗಳು”

ಧ್ಯಾನ ಮಾಡುವಾಗ ಕೆಲವೆಡೆ “ನೋವುಗಳು” ಬರಬಹುದು. ಆ ನೋವುಗಳು ಧ್ಯಾನ ಮಾಡುವುದಕ್ಕಿಂತಾ ಮುಂಚೆ ಮತ್ತು ಧ್ಯಾನ ಮಾಡುವುದನ್ನು ಮುಗಿಸಿದ ನಂತರ ಕೂಡಾ ಇರುವುದಿಲ್ಲ; ಧ್ಯಾನ ಮಾಡುವಾಗ ಮಾತ್ರವೇ ಬರುತ್ತವೆ. ಹಾಗೆ ಧ್ಯಾನದಲ್ಲಿ ಮಾತ್ರವೇ ಹೆಚ್ಚು ನೋವುಗಳು ಬರುತ್ತಿದೆ ಎಂದಾದರೆ .. ಅಲ್ಲಿರುವ ಪ್ರಾಣಮಯಕೋಶದಲ್ಲಿ ನಾಡೀಮಂಡಲ ಶುಚಿಯಾಗುತ್ತಾ .. “ರೋಗಕಾರಣ” ಎನ್ನುವದು ಅಲ್ಲಿ ಶಾಶ್ವತವಾಗಿ ನಿವಾರಿಸಲ್ಪಡುತ್ತಿದೆ ಎಂದು ಅರ್ಥ. ಎರಡು ಮೂರು ದಿನಗಳು ನಿಷ್ಠೆಯಿಂದ ಧ್ಯಾನಮಾಡಿದ ನಂತರ ಇನ್ಮು ಅಲ್ಲಿ ನೋವು ಬರುವುದಿಲ್ಲ. ಆದರೆ, ಬೇರೆ ಕಡೆ ನೋವು ಬಂದರೂ ಬರಬಹುದು. ಈ ರೀತಿ ಕ್ರಮೇಣ ವಿವಿಧ ಭೌತಿಕಶರೀರ ಭಾಗಗಳೆಲ್ಲಾ ಒಂದರ ನಂತರ ಇನ್ನೊಂದು ಪೂರ್ಣವಾಗಿ ಶುಚಿಯಾದಾಗ ಇನ್ನು ಎಂದಿಗೂ “ರೋಗ” ಎನ್ನುವ ಸಂದರ್ಭವೇ ಇರುವುದಿಲ್ಲ. ಆ ನೋವುಗಳು ಧ್ಯಾನದಲ್ಲಿ ಇರುವಷ್ಟು ಸಮಯ ಮಾತ್ರವೇ ಇರುತ್ತವೆ. ಆದ್ದರಿಂದ, ನಾವು ಹೆದರಿ ವೈದ್ಯರ ಬಳಿ ಹೋಗಬಾರದು .. ಮತ್ತು ಅದಕ್ಕಾಗಿ ಯಾವುದೇ ರೀತಿಯ ಔಷಧಿಯನ್ನು ಬಳಸಬಾರದು.

ನಮ್ಮ ಭೌತಿಕ ಶರೀರದಿಂದ ವಿಶ್ವಮಯ ಪ್ರಾಣಶಕ್ತಿ ಮುಖ್ಯವಾಗಿ ಹೊರಗೆ ಹರಿಯುವ ದ್ವಾರಗಳು .. ಎರಡು ಕಣ್ಣುಗಳು, ಎರಡು ಕೈಗಳ ಬೆರಳುಗಳ ತುದಿಗಳು, ಎರಡು ಪಾದಗಳ ಬೆರಳಿನ ತುದಿಗಳು. ಆದ್ದರಿಂದಲೇ, ಧ್ಯಾನದಲ್ಲಿ ಕಣ್ಣುಗಳನ್ನು ಮುಚ್ಚಿ ಇರುವುದು, ಬೆರಳುಗಳಲ್ಲಿ ಬೆರಳುಗಳನ್ನು ಜೋಡಿಸುವುದು, ಎರಡು ಕಾಲುಗಳನ್ನು ‘ಕ್ರಾಸ್’ಮಾಡಿ ಇಡಲಾಗುತ್ತದೆ. ಅದರ ಮೂಲಕ ಶರೀರದಲ್ಲಿನ ವಿಶ್ವಮಯ ಪ್ರಾಣಶಕ್ತಿ ಶರೀರದಲ್ಲೇ ಭದ್ರಗೊಳಿಸಲಾಗುತ್ತದೆ.

ನಾಡೀಮಂಡಲ ಸಂಪೂರ್ಣವಾಗಿ ಶುದ್ಧಿಗೊಂಡ ನಂತರ “ದಿವ್ಯಚಕ್ಷುವು” ಅಂದರೆ, “ಆಜ್ಞಾಚಕ್ರ”ದ ಉತ್ತೇಜನ ಕೂಡಾ ಪ್ರಕೃತಿ ಸಹಜವಾಗಿಯೇ ನಡೆಯುತ್ತದೆ.