” ತ್ರಯೀಧರ್ಮ ”

ಮನುಷ್ಯನಾಗಿ ಹುಟ್ಟಿದ ಪ್ರತಿಯೊಬ್ಬರೂ ಮೂರು ಧರ್ಮಗಳನ್ನು ತಪ್ಪದೇ ಪಾಲಿಸಬೇಕು.

ಮೊದಲನೆಯದು, ದೇಹಧರ್ಮ : ನಮ್ಮ ದೇಹದ ಬಗ್ಗೆ ನಮ್ಮ ಧರ್ಮವನ್ನು ಚೆನ್ನಾಗಿ ಪಾಲಿಸುವುದು. ಈ ಭೂಮಿಯ ಮೇಲೆ ಅನೇಕಾನೇಕ ಅನುಭವಗಳ ಮೂಲಕ ಅನಂತಾನಂತ ಜ್ಞಾನವನ್ನು ಹೊಂದಲಿಕ್ಕಾಗಿ ಜನ್ಮಪಡೆದಿರುವ ಆತ್ಮಸ್ವರೂಪವಾದ ನಮಗೆಲ್ಲರಿಗೂ ದೇಹ ಒಂದು ‘ವಾಹನ’.

ಈ ವಾಹನವನ್ನು ನಾವು ಧರ್ಮಬದ್ಧವಾಗಿ ನೋಡಿಕೊಂಡರೇನೆ ಅದು ನಮಗೆ ಚೆನ್ನಾಗಿ ಸಹಕರಿಸುತ್ತದೆ. ವಾಹನ ಚೆನ್ನಾಗಿದ್ದರೇನೆ ನಾವು ಎಲ್ಲಿಗೆ ಬೇಕಾದರೂ ಪ್ರಯಾಣ ಮಾಡಬಹುದು .. ಮತ್ತೆ ನಾವು ಇಲ್ಲಿಗೆ ಯಾವ ಕೆಲಸವನ್ನು ಮಾಡಲು ಬಂದಿದ್ದೇವೆಯೋ ಅದನ್ನು ಚೆನ್ನಾಗಿ ಮಾಡಬಲ್ಲೆವು. ಆದ್ದರಿಂದ, ಶುದ್ಧ ಸಸ್ಯಾಹಾರದಿಂದ ಅದಕ್ಕೆ ಪೋಷಣೆ ನೀಡುತ್ತಾ ಧ್ಯಾನದಿಂದ ಅದನ್ನು ಶಕ್ತಿಯುತಗೊಳಿಸಬೇಕು.

“ನಮ್ಮ ಶರೀರದಲ್ಲಿ ಕೋಟ್ಯಾಂತರ ಕಣಗಳಿವೆ. ನಮ್ಮ ಬಗ್ಗೆ ಅವಕ್ಕೆ ಚೆನ್ನಾಗಿ ಗೊತ್ತಿದೆ. ಆದರೆ, ನಮಗೇ ಅವುಗಳ ಬಗ್ಗೆ ಏನೂ ತಿಳಿಯದು. ಅದಕ್ಕೇ ಸರಿಯಲ್ಲದ ಮಾಂಸಾಹಾರದಿಂದ ಅವುಗಳನ್ನು ನೋಯಿಸುತ್ತಾ, ಅವುಗಳನ್ನು ವೇದನೆಗೆ ಗುರಿಮಾಡುತ್ತಿದ್ದೇವೆ. ಪೆಟ್ರೋಲ್ ಕಾರಿನಲ್ಲಿ ಡೀಸೆಲ್ ಹಾಕಿ ಓಡಿಸಿದರೆ ಅದರ ಇಂಜಿನ್‌ನ ಸಾಮರ್ಥ್ಯವನ್ನು ಹಾಳು ಮಾಡಿದಹಾಗೆ .. ಮಾಂಸಾಹಾರದಿಂದ ನಮ್ಮ ದೇಹವು ಕೆಲಸ ಮಾಡುವ ರೀತಿಯನ್ನು ಹಾಳುಮಾಡುತ್ತಾ ನಾವೂ ಸಹ ರೋಗಗ್ರಸ್ಥರಾಗುತ್ತಿದ್ದೇವೆ.”

ಈ ಕೋಟ್ಯಾಂತರ ಕಣಗಳಲ್ಲಿ ಪ್ರತಿಯೊಂದು ಕಣ ಸಹ ತುಂಬಾ ಜ್ಞಾನವುಳ್ಳದ್ದು. ನಮ್ಮ ಕಣಜಾಲವೆಲ್ಲಾ ಕೂಡಾ ಪ್ರತಿಕ್ಷಣ ಒಂದರ ಜೊತೆ ಒಂದು ಸಮನ್ವಯಿಸಿಕೊಳ್ಳುತ್ತಾ ಕ್ರಮೇಣ ಆತ್ಮ ಪರಿಣಾಮ ದಿಸೆಯಲ್ಲಿ ಸಾಗುತ್ತಾ ಇರುತ್ತದೆ. ಆದ್ದರಿಂದ, ಅವುಗಳ ಜೊತೆ ನಾವು ಸರಿಯಾದ ರೀತಿಯಲ್ಲಿ ವರ್ತಿಸಬೇಕಾದರೆ .. ನಮಗೆ ನಿರಂತರ ಧ್ಯಾನ ಸಾಧನೆ ಮತ್ತು ಅಹಿಂಸಾ ಧರ್ಮಾಚರಣೆಯೇ ಮಾರ್ಗ.

ಎರಡನೆಯದು, ಸಮಾಜ ಧರ್ಮ : ಸಮಾಜದಲ್ಲಿ ನಾವೂ ಸಹ ಭಾಗಿಗಳೇ ಆದ್ದರಿಂದ ‘ಎಲ್ಲರೂ ಸುಖವಾಗಿ ಸಂತೋಷವಾಗಿ ಇದ್ದರೆ ಮಾತ್ರವೇ ನಾವೂ ಸಹ ಸಂತೋಷವಾಗಿ ಇರುತ್ತೇವೆ’ ಎನ್ನುವುದನ್ನು ತಿಳಿದುಕೊಳ್ಳಬೇಕು. ಅದಕ್ಕಾಗಿ ನಮ್ಮ ಹತ್ತಿರ ಇರುವ ಆರ್ಥಿಕ, ಆಧ್ಯಾತ್ಮಿಕ ಸಂಪತ್ತನ್ನು ಎಲ್ಲರ ಜೊತೆ ಹಂಚಿಕೊಳ್ಳಬೇಕು. ಅನ್ನದಾನ, ವಸ್ತ್ರದಾನ ವಿದ್ಯಾದಾನ – ಇಂತಹ ಅನೇಕಾನೇಕ ದಾನಗಳ ಜೊತೆ ‘ಧ್ಯಾನದಾನ’ವನ್ನೂ ಕೂಡಾ ಮಾಡಬೇಕು. ಧ್ಯಾನಪ್ರಚಾರದ ಮೂಲಕ ಧ್ಯಾನದಾನ ಮಾಡದಿದ್ದರೆ .. ಉಳಿದ ಎಲ್ಲಾ ದಾನಗಳೂ ವ್ಯರ್ಥವಾಗಿಬಿಡುತ್ತವೆ.

ಮೂರನೆಯದು, ಆತ್ಮಧರ್ಮ : ನಾವು ಯಾವ ಕೆಲಸಕ್ಕಾಗಿ ಈ ಭೂಮಿಯ ಮೇಲೆ ಜನ್ಮತಾಳಿದ್ದೇವೊ .. ಪ್ರತಿಕ್ಷಣ ಆ ಕೆಲಸದ ಮೇಲೆ ಗಮನವಿಡುತ್ತಾ .. ನಮ್ಮ ದಿನನಿತ್ಯದ ಕಾರ್ಯಕ್ರಮಗಳನ್ನು ನಿರ್ವಹಿಸಬೇಕು. ಬಂದ ಕೆಲಸವನ್ನು ಪೂರ್ಣಗೊಳಿಸದಿದ್ದರೆ .. ಇಲ್ಲಿ ಕಳೆದ ನಮ್ಮ ಜನ್ಮಕಾಲ ಮತ್ತು ನಾವು ಸಂಪಾದಿಸಿದ ಸಂಪತ್ತುಗಳೆಲ್ಲಾ ಕೂಡಾ ಯಾವುದಕ್ಕೂ ಉಪಯೋಗವಿಲ್ಲ.

“ಧ್ಯಾನ – ಅಹಿಂಸೆ .. ನಮಗೆ ಎರಡು ರೆಕ್ಕೆಗಳು”

ಎರಡು ರೆಕ್ಕೆಗಳು ಇರುವವರೆಗೆ ಪಕ್ಷಿ ಚೆನ್ನಾಗಿ ಆಕಾಶದಲ್ಲಿ ಹಾರುತ್ತಾ ಅದ್ಭುತವಾದ ಜೀವನವನ್ನು ಕಳೆಯಬಲ್ಲದು. ಅದರಲ್ಲಿ ಯಾವುದೇ ಒಂದು ರೆಕ್ಕೆ ಇಲ್ಲದಿದ್ದರೆ, ಪಾಪ, ಅದರ ಜೀವನ ವಿಕಲಾಂಗ ಜೀವನವಾಗಿ ಬದಲಾಗಿ .. ತನ್ನ ಸಹಜ ಜೀವನವಾದ ‘ಆಕಾಶದಲ್ಲಿ ಹಾರುವುದು’ ಎನ್ನುವ ಕೆಲಸವನ್ನು ಅದು ಮಾಡಲಾರದು. ಹಾಗೆಯೆ, ಆತ್ಮಸ್ವರೂಪರಾದ ನಮಗೆ ‘ಧ್ಯಾನ’ – ’ಸಸ್ಯಾಹಾರ’ ಎನ್ನುವುವು ಎರಡು ರೆಕ್ಕೆಗಳು ಇದ್ದಹಾಗೆ. ಇದರಲ್ಲಿ ಯಾವುದೇ ಒಂದು ರೆಕ್ಕೆ ಇಲ್ಲದಿದ್ದರೂ ರೆಕ್ಕೆಗಳನ್ನು ಕಳೆದುಕೊಂಡ ಹಕ್ಕಿಯ ಹಾಗೆ ನಾವೂ ಸಹ ಕುಂಟನಂತೆ ಜೀವನವನ್ನು ಜೀವಿಸುತ್ತಾ ನಮ್ಮ ಜೀವನವನ್ನು ಕಳೆಯಬೇಕಾಗುತ್ತದೆ.

ಆದ್ದರಿಂದ, ಧ್ಯಾನದ ಮೂಲಕ ನಮ್ಮ ಮನಸ್ಸನ್ನು ಹತೋಟಿಗೆ ತಂದು ಇತರ ಪ್ರಾಣಿಗಳ ಮೇಲೆ ದಯೆ ತೋರಿಸುತ್ತಾ .. ಅವುಗಳ ಜೊತೆ ಮಿತ್ರತ್ವದಿಂದ ಇರುತ್ತಾ .. ಸೃಷ್ಟಿಯ ಸಿದ್ಧಾಂತಗಳನ್ನು ಗೌರವಿಸುತ್ತಾ ಆನಂದದಿಂದ ಜೀವಿಸಬೇಕು. ಅಷ್ಟೇ ಹೊರತು, ಪ್ರಾಣಿಗಳನ್ನು ಕೊಲ್ಲಬಾರದು. ಸಸ್ಯಾಹಾರದಿಂದ ಪೋಷಿಸಬೇಕಾದ ದೇವಾಲಯದಂತಹ ನಮ್ಮ ದೇಹಗಳನ್ನು ಮಾಂಸಾಹಾರದಿಂದ ಅಪವಿತ್ರಗೊಳಿಸಬೇಡಿ.

“ಒಂದುವೇಳೆ ಸಸ್ಯಾಹಾರ ಸ್ವಲ್ಪವೂ ಸಿಗದ ಪ್ರದೇಶಗಳಲ್ಲಿ ಇರಬೇಕಾದ ಅವಶ್ಯಕತೆ ಬಂದರೆ .. ಅದು ಎಂತಹ ದೊಡ್ಡ ಪ್ರದೇಶವಾದರೂ ಸರಿಯೆ .. ಆ ಪ್ರದೇಶವನ್ನು ಇನ್ನೊಂದು ಆಲೋಚನೆ ಇಲ್ಲದೆ ಬಿಟ್ಟುಬಿಡಬೇಕು. ಇಂತಹ ದುರ್ಭರ ಪ್ರದೇಶಗಳು ‘ಡಾಲರ್‌ಗಳನ್ನು ಸುರಿಸುತ್ತಾ ನಮ್ಮನ್ನು ಮಾಯೆಗೆ ಗುರಿಮಾಡಿದರೂ .. ಆತ್ಮ ವಿಕಾಸದ ಹಾದಿಯಲ್ಲಿ ಮಾತ್ರ ಅವು ನಮಗೆ ದೊಡ್ಡ ಅಡ್ಡಿ- ಆತಂಕಗಳು ಮತ್ತು ಅವು ನಮಗೆ ಸ್ವಲ್ಪವೂ ಅನುಕೂಲ ಪ್ರದೇಶಗಳಲ್ಲ”

” ಧ್ಯಾನಶಕ್ತಿ ತರಂಗಗಳನ್ನು ವಿಶ್ವದಾದ್ಯಂತ್ಯ ಹರಡಬೇಕು “

“ಕೆಟ್ಟವರು ಕೆಟ್ಟಕೆಲಸಗಳನ್ನು ಮಾಡುತ್ತಿದ್ದಾರೆ. ಇತರರನ್ನು ದೂಷಿಸುತ್ತಾ, ಹಿಂಸಿಸುತ್ತಾ, ಕೊಲ್ಲುತ್ತಾ ಆನಂದವಾಗಿ ಅವರಕೆಲಸಗಳನ್ನು ಅವರು ಮಾಡುತ್ತಿದ್ದಾರೆ.

“ಮತ್ತೆ ಒಳ್ಳೆಯವರು ಏನು ಮಾಡುತ್ತಿದ್ದಾರೆ? ಅವರು ಇತರರನ್ನು ಕೊಲ್ಲಲಾರರು, ಹಿಂಸಿಸಲಾರರು ಮತ್ತು ದೂಷಿಸಲಾರರು. ದೇವಾಲಯಗಳಿಗೆ ಹೋಗಿ ಅವರು ಪೂಜೆಗಳು ಮಾಡುತ್ತಾರೆ. ಆದರೆ, ಅಲ್ಲಿ ಇನ್ನು ಮುಂದೆ ಏನುಮಾಡಬೇಕು ಎಂಬುದು ಅವರಿಗೆ ತೋಚುವುದಿಲ್ಲ. ಚರ್ಚ್‌ಗಳಿಗೆ, ಮಸೀದಿಗಳಿಗೆ ಹೋಗಿ ಪ್ರಾರ್ಥನೆಗಳನ್ನು ಮಾಡುತ್ತಾರೆ”. ಆದರೆ .. ಮುಂದುವರೆದು ಇನ್ನೂ ಏನು ಮಾಡಬೇಕು ಎಂಬುದು ಅವರಿಗೆ ಗೊತ್ತಿಲ್ಲ. ಇದು ಸರಿಯಾದ ಪದ್ಧತಿ ಅಲ್ಲ.

“ಕೆಟ್ಟವರ ಕೆಟ್ಟಕೆಲಸಗಳಿಂದ .. ನಡೆಯಬೇಕಾದ ಅನರ್ಥಗಳು ನಡೆಯುತ್ತಿದ್ದರೆ .. ಒಳ್ಳೆಯವರ ನಿಷ್ಕ್ರಿಯತೆಯಿಂದಾಗಿ ಬರಬೇಕಾದ ಒಳ್ಳೆಯ ಬದಲಾವಣೆ ಬರುತ್ತಿಲ್ಲ. ಆದ್ದರಿಂದ, ಒಳ್ಳೆಯವರೆಲ್ಲಾ ಸಹ ಧ್ಯಾನಮಾಡಿ ಸಾಧ್ಯವಾದಷ್ಟು ಹೆಚ್ಚು ತಮ್ಮದೇ ಆದ ಆತ್ಮಶಕ್ತಿಯನ್ನು ಸೃಷ್ಟಿಸಿದರೆ .. ಆ ಶಕ್ತಿತರಂಗಗಳು ಈ ಭೂಮಿಯ ಮೇಲೆ ವ್ಯಾಪಿಸಿ .. ಕೆಟ್ಟವರಲ್ಲಿ ಒಳ್ಳೆಯ ಬದಲಾವಣೆಯನ್ನು ಉಂಟುಮಾಡುತ್ತವೆ. ಗೌತಮಬುದ್ಧನ ಧ್ಯಾನ-ಶಕ್ತಿ ತರಂಗಗಳು ಪರಮ ಕಿರಾತಕನಾದ ಅಂಗೂಲಿಮಾಲನನ್ನು ಪೂರ್ತಿಯಾಗಿ ಬದಲಾಯಿಸಿದ ಹಾಗೆ .. ಭೂಮಿಯ ಮೇಲಿರುವ ಅನೇಕಾನೇಕ ಬುದ್ಧರ ಧ್ಯಾನದ ಶಕ್ತಿತರಂಗಗಳು ಸಮಾಜದಲ್ಲಿರುವ ಕೆಡುಕನ್ನು ಅಳಸಿಬಿಡುತ್ತದೆ. ಆದ್ದರಿಂದ, ವ್ಯಾಪಕವಾದ ಧ್ಯಾನ-ಜ್ಞಾನ ಪ್ರಚಾರಗಳ ಮೂಲಕ ಕೋಟ್ಯಾಂತರ ಜನ ಬುದ್ಧರನ್ನು ತಟ್ಟಿಎಬ್ಬಿಸುತ್ತಾ ಧ್ಯಾನಶಕ್ತಿ ತರಂಗಗಳನ್ನು ವಿಶ್ವದಾದ್ಯಂತ ಹರಡಬೇಕು.”

” 40 ದಿನಗಳ ಧ್ಯಾನ ತಪ್ಪದೆ ಮಾಡಬೇಕು “

“ಒಂದು ಕಲ್ಲನ್ನು ಸುತ್ತಿಗೆಯಿಂದ ಜೋರಾಗಿ ಹೊಡೆಯುತ್ತಾ ಇದ್ದರೆ ಹತ್ತು, ಹದಿನೈದು ಏಟುಗಳವರೆಗೂ ಏನೂ ಆದಂತೆಕಾಣುವುದಿಲ್ಲ. ಅನಂತರ ಒಂದು ಚಿಕ್ಕ ಏಟಿಗೆ ಅದು ಒಡೆದು ಎರಡು ಭಾಗವಾಗುತ್ತದೆ. ಅದು ಆ ಕೊನೆಯ ಏಟಿನ ಹಿರಿತನವಲ್ಲ .. ಅದರ ಪ್ರಭಾವವಲ್ಲ… ಅದುವರೆಗೂ ಶ್ರಮಿಸಿ ಹೊಡೆದ ಹದಿನಾಲ್ಕು ಏಟುಗಳ ಫಲಿತಾಂಶವೇ ಅದು”.

“ಹಾಗೆಯೆ, ಧ್ಯಾನ ಸಹ 40 ದಿನಗಳ ಕಾಲ ಖಂಡಿತಾ ಮಾಡಬೇಕು. ಮೊದಲು ಕೆಲವು ದಿನಗಳವರೆಗೆ ಹೊರನೋಟಕ್ಕೆ ಏನೂ ಕಾಣದೇ ಇದ್ದರು, ಒಂದೊಂದು ಏಟುಗೂ ಕಲ್ಲಿನೊಳಗೆ ಇರುವ ಕಣದ ಸಂರಚನೆಯಲ್ಲಿ ಬದಲಾವಣೆ ಬಂದಹಾಗೆ .. ಒಂದೊಂದು ದಿನದ ಧ್ಯಾನದಿಂದ ನಮ್ಮ ಅಂತರಂಗದ ಒಳಗೆ ಇರುವ ಜನ್ಮಜನ್ಮಗಳ ಕರ್ಮಫಲಿತಗಳು ನಮ್ಮಿಂದ ದೂರವಾಗುತ್ತಿರುತ್ತದೆ. ತಪನೆಯಿಂದ ಕೂಡಿರುವ ಶ್ರದ್ಧೆಯಿಂದ ಧ್ಯಾನಸಾಧನೆ ಮಾಡುತ್ತಿದ್ದರೆ .. 40 ದಿನಗಳೊಳಗೆ .. ಯಾವುದೋ ಒಂದು ಕ್ಷಣದಲ್ಲಿ ಕಲ್ಲು ಎರಡು ಭಾಗವಾದಹಾಗೆ .. ನಾವು ನರನಿಂದ ನಾರಾಯಣನಾದಂತೆ ಪರಿವರ್ತನೆ ಆಗುತ್ತೇವೆ”.

ಕಲ್ಲಿನಹಾಗಿರುವ ನಾವು .. ಒಡೆಯುವುದಕ್ಕಿಂತ ಮೊದಲು ನರನಾದ ಅರ್ಜುನನ ಹಾಗೆ ಪದೇಪದೇ ದುಃಖಕ್ಕೆ ಒಳಗಾಗುತ್ತಾ ಇರುತ್ತೇವೆ. ನಿರಂತರ ಧ್ಯಾನದ ಮೂಲಕ ಒಡೆದು ಎರಡಾಗಿ ಬಿಡುಗಡೆ ಆದನಂತರ .. ನಾರಾಯಣನಾದ ಕೃಷ್ಣನ ಹಾಗೆ ಆತ್ಮಜ್ಞಾನದಿಂದ ವಿಹರಿಸುತ್ತಾ ಪ್ರತಿಯೊಂದು ಕ್ಷಣವನ್ನು ಆನಂದವಾಗಿ ಕಳೆಯುತ್ತಿರುತ್ತೇವೆ. ಅದಕ್ಕೂ ಮೊದಲು ಅನೇಕಾನೇಕ ಜನ್ಮಗಳ ಸಂದೇಶಗಳಿಂದ ತುಂಬಿರುವ ನಮಗೆ 40 ದಿನಗಳ ಧ್ಯಾನಸಾಧನೆಯ ನಂತರ ಪ್ರತಿಯೊಂದು ಸಂದೇಶಕ್ಕೂ ನಮ್ಮ ಅಂತರಂಗದಿಂದಲೇ ಉತ್ತರ ಸಿಗುತ್ತದೆ.

ಮುಂದೆ ಬರಲಿರುವ ಸತ್ಯಯುಗದಲ್ಲಿ ಆಸ್ಪತ್ರೆಗಳು, ಔಷಧಾಲಯಗಳೇನೂ ಇರುವುದಿಲ್ಲ. ಕೇವಲ ಧ್ಯಾನ ಮತ್ತು ಪಿರಮಿಡ್‌ಶಕ್ತಿ ಮಾತ್ರವೇ ಇರುತ್ತದೆ. “ನಾನು ಕೇವಲ ಶರೀರ ಮಾತ್ರವೇ ” ಎಂದುಕೊಳ್ಳುತ್ತಿರುವವರೆಗೂ ನಾವು ದುಃಖದಲ್ಲಿರುತ್ತಿರುತ್ತೇವೆ. ಕರ್ಮಸಿದ್ಧಾಂತವನ್ನು ಅರ್ಥಮಾಡಿಕೊಂಡ ನಂತರ ಮೋಕ್ಷ ಸ್ಥಿತಿಯಲ್ಲಿರುತ್ತೇವೆ. ಮೋಕ್ಷ ಸ್ಥಿತಿಯಲ್ಲಿ ನಮಗೆ ಯಾವ ಕರ್ಮಸಿದ್ಧಾಂತವೂ ಅನ್ವಯಿಸುವುದಿಲ್ಲ. ಆದ್ದರಿಂದ, ಆತ್ಮಸ್ವರೂಪರಾದ ನಾವು ಆತ್ಮಲೋಕದ ನಿಯಮ, ನಿಬಂಧನೆಗಳನ್ನು ಕಡ್ಡಾಯವಾಗಿ ಅನುಸರಿಸುತ್ತಾ ಇದ್ದರೆ ಪ್ರತಿಕ್ಷಣವೂ ಮೋಕ್ಷಸ್ಥಿತಿಯಲ್ಲಿ ಪೂರ್ಣ ಆನಂದದಿಂದ ಇರುತ್ತೇವೆ.