“ಜೀವನ ಒಂದು ಅದ್ಭುತ ಅವಕಾಶ”

ಪ್ರತಿಯೊಬ್ಬರಿಗೂ ಅವರವರ ಜೀವನ ಒಂದು ಅದ್ಭುತ ಅವಕಾಶ!

ಪ್ರತಿದಿನ ಒಳ್ಳೆಯ ಕೆಲಸಗಳನ್ನು ಮಾಡುವುದು ಒಂದು ಅವಕಾಶ .. ಪ್ರತಿ ವ್ಯಕ್ತಿಗೂ ಧ್ಯಾನ ಹೇಳಿಕೊಡುವುದು ಒಂದು ಅವಕಾಶ! ಒಂದು ವೇಳೆ ಆ ವ್ಯಕ್ತಿಗೆ ಧ್ಯಾನ ಗೊತ್ತು .. ಮತ್ತೆ ನಮಗಿಂತಾ ಹೆಚ್ಚು ಜ್ಞಾನ ಕೂಡಾ ಇದೆ ಎಂದುಕೊಳ್ಳೋಣ .. ಆಗ ಆ ವ್ಯಕ್ತಿಯಿಂದ ಜ್ಞಾನ ಪಡೆಯುವುದು ಒಂದು ಒಳ್ಳೆಯ ಅವಕಾಶ. ಹೀಗೆ ಯಾವ ಮನುಷ್ಯನಿಂದಾದರೂ ಯಾವುದೋ ಒಂದು ಅವಕಾಶ ನಮಗೆ ಬರುತ್ತದೆ! ಅದು ಹೇಳಿಕೊಡುವ ಅವಕಾಶವಾದರೂ ಆಗಿರಬಹುದು .. ಅಥವಾ ಕಲಿತುಕೊಳ್ಳುವ ಅವಕಾಶವಾದರೂ ಆಗಿರಬಹುದು.

ನೀವೆಲ್ಲರೂ ನನ್ನ ಹತ್ತಿರ ಕಲಿತುಕೊಳ್ಳುವ ಅವಕಾಶಕ್ಕಾಗಿ ಬಂದಿರುವಿರಿ ಮತ್ತೆ ನಾನು ನಿಮಗೆ ಹೇಳಿಕೊಡುವ ಅವಕಾಶಕ್ಕಾಗಿ ಬಂದಿರುವೆ. ನಿಮಗೆಲ್ಲರಿಗೂ ಧ್ಯಾನ ಹೇಳಿಕೊಡುವುದರಿಂದ ನನಗೆ ‘ಪುಣ್ಯ’ ಬರುತ್ತದೆ .. ಮತ್ತೆ ಕಲಿತುಕೊಳ್ಳುವ ಅವಕಾಶದಿಂದ ನಮ್ಮ ‘ಜ್ಞಾನ’ಎರಡರಷ್ಟಾಗುತ್ತದೆ. ನಮ್ಮ ಹತ್ತಿರ ಇರುವುದನ್ನು ಇತರರ ಜೊತೆ ನಾವು ಹಂಚಿಕೊಂಡರೆ ಅದು “ಪುಣ್ಯ”! ನಮ್ಮ ಹತ್ತಿರ ಇಲ್ಲದಿರುವುದು ನಾವು ಸಂಪಾದಿಸಿಕೊಂಡರೆ .. ಅದು “ಜ್ಞಾನ”! ಹೀಗೆ ಅವರವರ ಅವಕಾಶವನ್ನು ಅವರು ಉಪಯೋಗಿಸಿಕೊಳ್ಳಬೇಕು.

ಸಾಧಾರಣವಾಗಿ .. ನಮ್ಮ ಕಣ್ಣಿಗೆ ಕಾಣಿಸುವ ಇತರ ವ್ಯಕ್ತಿಗಳು ನಮಗಿಂತಾ ಕಡಿಮೆಯಾಗಿಯಾದರೂ ಆಗಿರುತ್ತಾರೆ, ಅಥವಾ ನಮಗಿಂತಾ ಹೆಚ್ಚಾಗಿಯಾದರೂ ಆಗಿರುತ್ತಾರೆ. ನಮಗಿಂತಾ ಕಡಿಮೆಯವರಾದರೆ ಅವರಿಗೆ “ಧ್ಯಾನ ಭಿಕ್ಷೆ” ನೀಡಬೇಕು. ನಮಗಿಂತಾ ಹೆಚ್ಚಿನವರಾದರೆ ನಾವು“ಜ್ಞಾನ ಭಿಕ್ಷೆ” ಪಡೆಯಬೇಕು. ಹೀಗೆ ಜೀವನಪರ್ಯಂತಾ ಕೂಡಾ ಪುಣ್ಯ ಸಂಪಾದಿಸಲು, ಜ್ಞಾನಪಡೆಯಲು ಇರುವ ಮಹಾ ಅವಕಾಶವನ್ನು ಉಪಯೋಗಿಸಿಕೊಳ್ಳುತ್ತಾ .. ಪುಣ್ಯವನ್ನು ಸಂಪಾದಿಸಿಕೊಳ್ಳುತ್ತಾ ಇನ್ನೂ ಹೆಚ್ಚು ಜ್ಞಾನವನ್ನು ಹೊಂದುವವರೇ .. “ಪಿರಮಿಡ್ ಮಾಸ್ಟರ್ಸ್”!

ನಾವು ಇತರರಿಂದ ಜ್ಞಾನವನ್ನು ನಿರ್ಭಯವಾಗಿ ಕಲಿತುಕೊಳ್ಳಬೇಕು .. ಮತ್ತೆ ಹಾಗೆ ನಾವು ಇತರರಿಗೆ ಧ್ಯಾನವನ್ನು ಹೇಳಿಕೊಡುವಾಗ ತುಂಬಾ“ವಿನಯ”ದಿಂದ ಹೇಳಿಕೊಡಬೇಕು. ನಾವು ಇಪ್ಪತ್ತು ವರ್ಷಗಳಿಂದ ಧ್ಯಾನ ಸಾಧನೆ ಮಾಡಿದ್ದರೆ, ನಮ್ಮ ಪಕ್ಕದವರು ಇನ್ನೂರು ವರ್ಷಗಳು ಧ್ಯಾನ ಮಾಡಿರುವವನಾಗಿರಬಹದು. ಅದಕ್ಕೇ ನಾವು ಇತರರಿಗೆ ಧ್ಯಾನ ಹೇಳಿಕೊಡುವಾಗ “ವಿನಯ”ದಿಂದ ಹೇಳಿಕೊಡಬೇಕು .. ಮತ್ತೆ ಇತರರಿಂದ ಜ್ಞಾನವನ್ನು ಕಲಿಯುವಾಗ “ವಿನಯ”ದಿಂದ ಕಲಿತುಕೊಳ್ಳಬೇಕು!

“ನಾವು ಕಲಿತುಕೊಂಡಿರುವುದು ಸ್ವಲ್ಪ .. ಕಲಿತುಕೊಳ್ಳಬೇಕಾಗಿರುವುದು ಬೆಟ್ಟದಷ್ಟು” ಎನ್ನುವ ಪರಮಸತ್ಯವನ್ನು ಪ್ರತಿಕ್ಷಣ ಅರಿವಿನಲ್ಲಿ ಇಟ್ಟುಕೊಳ್ಳಬೇಕು!

ಒಮ್ಮೆ ಬುದ್ಧನ ಹತ್ತಿರ ಒಬ್ಬ ಶಿಷ್ಯನು ಹೋಗಿ “ಸ್ವಾಮಿ ನೀವು ಎಲ್ಲಾ ತಿಳಿಸಿಬಿಟ್ಟಿರುವಿರಿ .. ಇನ್ನು ಹೇಳಲು ಏನು ಇಲ್ಲ ಅಲ್ಲವೇ?” ಎಂದು ಕೊಂಡಾಡಿದನು.

ಆಗ ಬುದ್ಧನು “ಆ ಮರದಿಂದ ಕೆಲವು ಎಲೆಗಳನ್ನು ತೆಗೆದುಕೊಂಡು ಬಾ!” ಎಂದರು.

ಆ ಶಿಷ್ಯನು ಕೆಲವು ಎಲೆಗಳನ್ನು ತಂದ ನಂತರ .. “ನಾನು ನಿನಗೆ ಹೇಳಿದ್ದು ಈ ಎಲೆಗಳಷ್ಟೇ .. ಹೇಳಬೇಕಾಗಿರುವುದು ಇನ್ನೂ ಆ ಮರದಷ್ಟಿದೆ. ಹಾಗೆಯೇ ನಾನು ಅರಿತಿದ್ದು ಸಹ ಇಷ್ಟೇ .. ಮತ್ತೆ ನನಗೆ ತಿಳಿಯಬೇಕಾಗಿರುವುದು ಆ ಮರದಷ್ಟಿದೆ!” ಎಂದು ಹೇಳಿದರು.

ಇಂತಹ ಮಾತುಗಳನ್ನೇ “ಬುದ್ಧತ್ವದ ಮಾತುಗಳು” ಎನ್ನುತ್ತಾರೆ. ಪಿರಮಿಡ್ ಮಾಸ್ಟರ್ಸ್ ಎಲ್ಲರೂ ಕೂಡಾ ಬುದ್ಧರೇ! ಅವರಿಂದ ಸದಾ ಬುದ್ಧತ್ವದ ಮಾತುಗಳೇ ಬರುತ್ತವೆ!