” ಜಾಗತಿಕ ಆಧ್ಯಾತ್ಮಿಕ ಸಮ್ಮೇಳನದಲ್ಲಿ ಪತ್ರೀಜಿಯವರ ಸಂದೇಶಗಳು “

” ಬುದ್ಧತ್ವ ಅಂದರೆ ಶೂನ್ಯತ್ವ ಮತ್ತು ಪೂರ್ಣತ್ವ ”

ನಾವು ಧ್ಯಾನವನ್ನು ಪ್ರತಿದಿನ ಮಾಡಬೇಕು. ಎಲ್ಲಾದರೂ, ಹೇಗಾದರೂ, ಪ್ರಕೃತಿಯಲ್ಲಾಗಲಿ ಸಾಮೂಹಿಕವಾಗಿ ಆಗಲಿ, ಪಿರಮಿಡ್‌ನಲ್ಲಾಗಲಿ ಹಾಗೂ ಹುಣ್ಣಿಮೆ ದಿನದಂದಾಗಲಿ ಮಾಡಬೇಕು. ನಾವು ಹೆಚ್ಚು ಧ್ಯಾನ ಮಾಡಿದಂತೆ ಹೆಚ್ಚು ಉತ್ತಮ ಮತ್ತು ಗುಣಾತ್ಮಕ ಮನುಷ್ಯರಾಗುತ್ತೇವೆ. ಹೆಚ್ಚು ಅರಿವು ಉಳ್ಳವರಾಗುತ್ತೇವೆ. ನಮ್ಮ ಪ್ರಜ್ಞೆ ವಿಸ್ತಾರವಾಗುತ್ತದೆ. ಧ್ಯಾನ ಅಂದರೆ ಭೌತಿಕತೆ ಅಥವಾ ಆಧ್ಯಾತ್ಮಿಕತೆಯ ಕುರಿತು ಯೋಚಿಸುವುದಲ್ಲ. ರಾಮ ಅಥವಾ ಕೃಷ್ಣ ಅಥವಾ ಶಿವನ ಕುರಿತು ಯೋಚಿಸುವುದಲ್ಲ. ಧ್ಯಾನದಿಂದ ನಮ್ಮ ತಿಳುವಳಿಕೆ ಹಾಗು ಗ್ರಹಣಶೀಲಶಕ್ತಿ ಬೆಳೆಯುತ್ತದೆ. ಧ್ಯಾನ ಎಂಬುದರ ಅರ್ಥ ಜೀವಿಸುವುದು. ಧ್ಯಾನ ಶೂನ್ಯತೆಯನ್ನು ಅಭ್ಯಾಸಿಸುವುದು ಎಂದು ಅರ್ಥ. ಶೂನ್ಯತೆಯನ್ನು ಅಭ್ಯಸಿಸುವುದೇ ಬುದ್ಧತ್ವ ಮತ್ತು ಧ್ಯಾನದಿಂದಲೇ ಅಭ್ಯಸಿಸಲು ಸಾಧ್ಯ. ಇಡೀ ಪ್ರಪಂಚ ಮಾಯೆಯಿಂದ ಅಥವಾ ಭ್ರಮೆಯಿಂದ ಕೂಡಿಲ್ಲ. ಶೂನ್ಯತೆ ಮತ್ತು ಪೂರ್ಣತ್ವ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನೀವು ಯಾವ ಕ್ಷಣದಲ್ಲಿ ನಾನು ಶೂನ್ಯ ಎಂದು ಹೇಳುತ್ತೀರೊ, ಅದು ವಾಸ್ತವಿಕತೆಯಲ್ಲ. ಅದು ಬಹು ದೊಡ್ಡ ರಿಯಾಲಿಟಿ. ಆ ವಾಸ್ತವಿಕತೆಯಲ್ಲಿ ಅರಿವಿನಿಂದ ಇದ್ದರೆ ಅದೇ ಬುದ್ಧತ್ವ. ನಾನು ಶೂನ್ಯ, ನೀವು ಶೂನ್ಯ ಮತ್ತು ಎಲ್ಲವೂ ಶೂನ್ಯ. ಮತ್ತೊಂದೆಡೆ ನಾನು ಪೂರ್ಣ, ನೀವು ಪೂರ್ಣ ಮತ್ತು ಎಲ್ಲವೂ ಪೂರ್ಣ. ಅದು ಪ್ರಕೃತಿಯ ವಿರುದ್ಧವಲ್ಲ. ನೀವು ಚಟುವಟಿಕೆಗಳನ್ನು ಮಾಡದಂತೆ ನಿಮ್ಮನ್ನು ತಡೆಗಟ್ಟುವುದಲ್ಲ, ನಿಮ್ಮ ಚಟುವಟಿಕೆಯಲ್ಲಿ ಸ್ಥಿರತೆಯಿಂದಿರುವುದು. ಎಲ್ಲಿಯವರೆಗು ನೀವು ಸ್ಥಿರತೆಯಲ್ಲಿ ಸ್ಥಿರತೆಯನ್ನು ಅಭ್ಯಸಿಸುವುದಿಲ್ಲವೊ, ಅಲ್ಲಿಯವರೆಗು ನಿಮ್ಮ ಚಟುವಟಿಕೆಯಲ್ಲಿ ನೀವು ಸ್ಥಿರತೆಯನ್ನು ಅಭ್ಯಸಿಸಲು ಸಾಧ್ಯವಿಲ್ಲ. ಆದ್ದರಿಂದ, ಸ್ಥಿರತೆಯಲ್ಲಿ ಸ್ಥಿರತೆಯನ್ನು ಅಭ್ಯಸಿಸಲು ಧ್ಯಾನವೇ ಬಹು ಒಳ್ಳೆಯ ಸಾಧನೆ. ಅದು ಚಟುವಟಿಕೆಯ ಹಾದಿಯಲ್ಲಿ ನಿಮ್ಮನ್ನು ಮುಂದೆ ಕೊಂಡೊಯ್ಯುತ್ತದೆ. ಎಲ್ಲಾ ಚಟುವಟಿಕೆಯಲ್ಲೂ ನಾವು ಪೂರ್ಣತೆ ಮತ್ತು ಶೂನ್ಯತೆಯನ್ನು ಕಂಡುಕೊಳ್ಳಬೇಕು.

ನಾವು ಈಗ ಮೈತ್ರೇಯ ಬುದ್ಧ ಧ್ಯಾನ ಪಿರಮಿಡ್ ದೇಗುಲದಲ್ಲಿ ಇದ್ದೇವೆ. ನಾವು ಇಲ್ಲಿ ಅರ್ಥ ಮಾಡಿಕೊಳ್ಳಬೇಕಾದ ಎರಡು ಪದಗಳು ಇವೆ. ಮೈತ್ರಿ ಎಂದರೆ ಬುದ್ಧತ್ವ. ಮೈತ್ರಿ ಎಂದರೆ ಸ್ನೇಹ. ಸ್ನೇಹದಲ್ಲಿ ಎರಡು ಬಗೆ ಇದೆ. ಒಂದು ಷರತ್ತುಬದ್ಧ ಸ್ನೇಹ ಮತ್ತು ಇನ್ನೊಂದು ಷರತ್ತುರಹಿತ ಸೇಹ. ಎರಡನ್ನೂ ಅಭ್ಯಸಿಸಬೇಕು. ನಾವು ಬಹಳಷ್ಟು ಪಾತ್ರಗಳಲ್ಲಿ ಜೀವಿಸುತ್ತಿದ್ದೇವಿ ಮತ್ತು ಅದು ಬಹಳಷ್ಟು ನಿಯಮಗಳನ್ನು ಸೃಷ್ಟಿಸುತ್ತದೆ ಮತ್ತು ಷರತ್ತುಬದ್ಧ ಸ್ನೇಹವನ್ನು ಬೇಡಿಕೆಯಲ್ಲಿಡುತ್ತದೆ. ಷರತ್ತುಬದ್ಧವಾದ ಸ್ನೇಹದ ಬಗ್ಗೆ ತಿಳಿದುಕೊಳ್ಳುವುದರಲ್ಲಿ ಯಾವುದೇ ರೀತಿಯಾದ ಅರ್ಥವಿಲ್ಲ.

ಸ್ನೇಹವು ಸ್ನೇಹದ ಮೇಲೆಯೇ ಅಲವಂಬಿಸಿದೆ. ಆದ್ದರಿಂದ, ನೀನು ನನ್ನನ್ನು ಕೊಲ್ಲಲು ಬಂದರೆ, ನಾನು ಕೂಡ ನಿನ್ನನ್ನು ಕೊಲ್ಲುತ್ತೇನೆ. ಇದರಿಂದ ನಾನು ಷರತ್ತುರಹಿತ ಸ್ನೇಹವನ್ನು ಅಭ್ಯಸಿಸುತ್ತೇನೆ, ಇನ್ನೊಂದೆಡೆ ಷರತ್ತುಬದ್ಧ ಸ್ನೇಹವನ್ನು ಅಭ್ಯಸಿಸುತ್ತೇನೆ. ಆದ್ದರಿಂದ, ನೀನು ನನ್ನನ್ನು ಕೊಲ್ಲಲು ಬಂದರೆ ನಾನು ಕೂಡ ನಿನ್ನನ್ನು ಕೊಲ್ಲುತ್ತೇನೆ. ಇದು ಗೀತೆಯ ಸಾರ. ನೀನು ನನ್ನನ್ನು ಕೊಲ್ಲಲು ಬಂದರೆ, ಸ್ವಲ್ಪ ಸಮಯದವರೆಗೆ ಭರಿಸುತ್ತೇನೆ, ತಡೆದುಕೊಳ್ಳುತ್ತೇನೆ. ಮೊದಲನೆಯ ಪ್ರಯತ್ನಕ್ಕೇ ಪ್ರತಿಕ್ರಿಯಿಸುವುದಿಲ್ಲ. ಹಾಗೆಂದು ನಿಬಂಧನೆಯೂ ಇಲ್ಲವೆಂದಲ್ಲ. ನೀನು ನನ್ನನ್ನು ಕೊಲ್ಲಲು ಬಂದರೆ, ನಾನು ಕೂಡ ನಿನ್ನನ್ನು ಕೊಲ್ಲುತ್ತೇನೆ. ನೀನು ನನ್ನನ್ನು ಕೊಲ್ಲಲು ಬರದಿದ್ದರೆ, ನಾನು ನಿನ್ನನ್ನು ಕೊಲ್ಲುವುದಿಲ್ಲ. ನೀನು ನನ್ನ ಬಳಿ ಸ್ನೇಹದಿಂದ ಇದ್ದರೆ, ನಾನು ನಿನ್ನ ಬಳಿ ಸ್ನೇಹದಿಂದ ಇರುತ್ತೇನೆ. ನನಗೋಸ್ಕರ ನಿನ್ನ ಜೀವವನ್ನು ಕೊಟ್ಟರೆ, ನಾನು ನಿನಗೆ ನನ್ನ ಜೀವವನ್ನು ಕೊಡುತ್ತೇನೆ. ಹೀಗೆ ಮೈತ್ರಿ ಎಂಬ ಪದದಲ್ಲಿ, ಎಲ್ಲ ವಿಷಯಗಳು ಅಡಗಿವೆ. ಷರತ್ತುಬದ್ಧ ಸ್ನೇಹವನ್ನು ಅಭ್ಯಸಿಸಲು ಪ್ರಜ್ಞೆ ಮತ್ತು ಸಂವೇದನಾ ಶಕ್ತಿಯನ್ನು ಅಭ್ಯಸಿಸಬೇಕು. ಷರತ್ತುಬದ್ಧ ಮತ್ತು ಷರತ್ತುರಹಿತ ಸ್ನೇಹದ ವ್ಯತ್ಯಾಸವನ್ನು ತಿಳಿಯುವುದರಲ್ಲಿ ಯಾವುದೇ ಅರ್ಥವಿಲ್ಲ. ದಿನನಿತ್ಯದ ವ್ಯವಹಾರದಲ್ಲಿ ಜೀವಿಸುವುದು ಎಂಬುದು ಒಂದು ಮಧುರವಾದ ಅರ್ಥವನ್ನು ನೆನಪಿಸುತ್ತದೆ. ಆದ್ದರಿಂದ ಮೈತ್ರಿ ಅಂದರೆ ಕೇವಲ ಷರತ್ತುಬದ್ಧ ಅಥವಾ ಷರತ್ತುರಹಿತ ಸ್ನೇಹವಲ್ಲ. ಇದು ಎರಡೂ ಆಗಿದೆ.

ಸತ್ಯವೆಂದರೆ ಶೂನ್ಯ ಅಥವಾ ಪೂರ್ಣತ್ವವಲ್ಲ. ಅದು ಶೂನ್ಯತೆ ಮತ್ತು ಪೂರ್ಣತೆ ಎರಡು ಸಹ. ಬುದ್ಧತ್ವವೆಂದರೆ ಶೂನ್ಯತೆಯನ್ನು ಅಭ್ಯಸಿಸುವುದು. ಬೇರೆ ಯಾವುದೇ ಆವಶ್ಯಕ ಕೆಲಸ ಇಲ್ಲದಿದ್ದರೆ ಧ್ಯಾನದಿಂದ ಮಾತ್ರವೇ ನಿಮ್ಮ ಸಮಯವನ್ನು ಸರಿಯಾಗಿ ಉಪಯೋಗಿಸಲು ಸಾಧ್ಯ. ಬೇರೆ ಯಾವುದೇ ಆವಶ್ಯಕ ಕೆಲಸ ಇಲ್ಲದಿದ್ದಾಗ, ಧ್ಯಾನವೇ ಅತ್ಯಾವಶ್ಯಕ ಕೆಲಸ. ಯಾವುದೇ ಸ್ಥಳ ಅಥವಾ ಸಮಯ ಧ್ಯಾನಕ್ಕೆ ಸೂಕ್ತವಾದುದು. ಆದ್ದರಿಂದ ಸೂಕ್ತ ಆಸನದಲ್ಲಿ ಕುಳಿತುಕೊಳ್ಳಿ. ದೇಹವು ಸಹಕರಿಸದಿದ್ದರೆ ನೀವು ಧ್ಯಾನದ ಒಳಹೋಗಲು ಸಾಧ್ಯವಿಲ್ಲ. ಧ್ಯಾನ ಎನ್ನುವುದು ಸತತ ಅಭ್ಯಾಸದ ಫಲ. ಸಮಯಪೂರಕವಾದ ಕಾಯಕವೇ ಧ್ಯಾನ. ನಮ್ಮ ದೇಹ ನಮ್ಮ ಮನಸ್ಸಿನ ದೇಗುಲ. ಆದ್ದರಿಂದ ಬುದ್ಧತತ್ವದ ಪ್ರಕಾರ ಹೆಚ್ಚೂ ತಿನ್ನಬೇಡಿ, ಕಡಿಮೆಯೂ ತಿನ್ನಬೇಡಿ. ಮಧ್ಯೆಮಾರ್ಗವನ್ನು ಪಾಲಿಸಿ. ಹೆಚ್ಚು ಮಲಗಬೇಡಿ, ಕಡಿಮೆಯೂ ಮಲಗಬೇಡಿ. ಸಮಯಕ್ಕೆ ಸರಿಯಾಗಿ ದೇಹ ಮತ್ತು ಮನಸ್ಸಿನೊಂದಿಗೆ ಇರಿ. ಎಚ್ಚರಿಕೆಯ ಜೀವನ ಧ್ಯಾನದೊಂದಿಗೆ ಇರಬೇಕು. ಹಾಗೆಯೇ ಧ್ಯಾನದೊಂದಿಗೆ ಎಚ್ಚರಿಕೆಯ ಜೀವನ ಕ್ರಮಗಳಿರಬೇಕು. ಯಾವುದೇ ಒಂದು ಪರಿಸ್ಥಿತಿಗೂ ಹೆಚ್ಚು ಅಥವ ಕಡಿಮೆ ಪ್ರಾಮುಖ್ಯತೆಯನ್ನು ಕೊಡಬಾರದು. ನಮಗೆ ಕೊಟ್ಟಿರುವ ಪ್ರತಿಯೊಂದು ಪರಿಸ್ಥಿತಿಯೂ ಒಂದಕ್ಕಿಂತ ಒಂದು ಮುಖ್ಯ. ಬುದ್ಧತ್ವವೆಂದರೆ ಒಂದು ಸುಂದರವಾದ ಸರಿದೂಗಿಸುವಿಕೆ. ನಾವೆಲ್ಲರೂ ಇಲ್ಲಿ ಇರುವುದು ಬುದ್ಧನ ರೀತಿ ಆಗುವುದಕ್ಕೆ. ನಾವು ಬುದ್ಧನಂತೆ ಆಗಬೇಕು ಎಂಬ ಗುರಿಯನ್ನು ಅರಿತಿರುವನೇ ಬುದ್ಧನು. ಶೂನ್ಯತೆಯನ್ನು ಅಭ್ಯಾಸಮಾಡುವುದೇ ಬುದ್ಧತತ್ವ. ನಾವು ನಮ್ಮಲ್ಲಿ ಮತ್ತು ಬೇರೆಯವರಲ್ಲಿ ಶೂನ್ಯತೆಯನ್ನು ಕಾಣಬೇಕು. ಇತರರು ನಿಮಗೆ ಯಾವುದೇ ಮಾದರಿಯಲ್ಲ. ಹಾಗು ನಿಮಗೆ ನೀವು ಕೂಡ ಮಾದರಿಯಲ್ಲ. ನೀವು ಇತರರಿಗೆ ಮಾದರಿಯಲ್ಲ. ಜೊತೆಗೆ ಇತರರು ನಿಮಗೆ ಹೆಚ್ಚು ಮೌಲ್ಯವುಳ್ಳವರು ಹಾಗು ನೀವು ಇತರರಿಗೆ ಹೆಚ್ಚು ಮೌಲ್ಯವುಳ್ಳವರು. ಎಲ್ಲಾ ವಿಷಯಗಳು ಏಕಕಾಲದಲ್ಲಿ ಸಂಬಂಧವುಳ್ಳದ್ದು. ಆಧ್ಯಾತ್ಮವೇ ವಿರೋಧಾಭಾಸ. ವಿರೋಧಾಭಾಸಗಳು ಅರ್ಥವಾಗದ್ದಿದರೆ, ಆಧ್ಯಾತ್ಮಿಕತೆಯ ಆಳವನ್ನು ತಿಳಿಯಲಾಗುವುದ್ದಿಲ್ಲ. ಆದರೆ, ಅದನ್ನು ಸಾಧಿಸುವುದು ಕಷ್ಟಕರವಲ್ಲ. ಬುದ್ಧರೊಂದಿಗೆ ಸಂಭಾಷಿಸುವುದರಿಂದ ಬುದ್ಧತ್ವದ ಅರ್ಥ, ಸ್ಥಿತಿ ಹಾಗು ಪ್ರಾಮುಖ್ಯತೆ ತಿಳಿಯುತ್ತದೆ.ಕೇವಲ ಒಬ್ಬ ಬುದ್ಧ ಮಾತ್ರ ಇನ್ನೊಬ್ಬ ಬುದ್ಧನನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ಬುದ್ಧನಲ್ಲದವನು ಇನ್ನೊಬ್ಬ ಬುದ್ಧನನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಇನ್ನೊಬ್ಬ ಬುದ್ಧನನ್ನು ಅರ್ಥಮಾಡಿಕೊಳ್ಳಲು ನೀವು ಒಬ್ಬ ಬುದ್ಧನಾಗಬೇಕು. ಮಾನವಕುಲದ ಎಲ್ಲಾ ಸಮಸ್ಯೆಗಳಿಗೂ ಧ್ಯಾನ ಒಂದೇ ಉತ್ತರ. ಪ್ರಾಣಿಕುಲದಲ್ಲಿ ಸಮಸ್ಯೆಗಳು ಇಲ್ಲ. ಸಮಸ್ಯೆಗಳು ಇರುವುದು ಮಾನವಕುಲದಲ್ಲಿ ಮಾತ್ರ. ನಾವು ಪ್ರಾಣಿಕುಲದಿಂದ ನಮ್ಮ ಸಮಸ್ಯೆಗಳೆಡೆಗೆ ಹೊರಳಿದ್ದೇವೆ. ನಿಮ್ಮ ಸಮಸ್ಯೆಗಳನ್ನು ನೋಡಿಕೊಳ್ಳಿ ಹಾಗೆಯೇ ನಾವು ಮಾನವಕುಲಕ್ಕೆ ಬಡ್ತಿ ಹೊಂದಿದ್ದೇವೆ. ಮಾನವಕುಲಕ್ಕೆ ಬಡ್ತಿ ಹೊಂದಿದ್ದೀರ ಎಂದರೆ ಬುದ್ಧತ್ವದೆಡೆಗೆ ಬಡ್ತಿ ಹೊಂದಿದಂತೆ. ಬುದ್ಧನ ಭಾಷೆಯಲ್ಲಿ ನಾವು ದೈವತ್ವ ಎಂಬ ಪದವನ್ನು ಬಳಸುವುದಿಲ್ಲ. ಏಕೆಂದರೆ, ಎಲ್ಲವೂ ದೈವತ್ವ.. ಬುದ್ಧ ಎಂದರೆ ಬುದ್ಧಿಯಿಂದ ಮತ್ತು ತಿಳಿವಳಿಕೆಯಿಂದ ಕೂಡಿರುವುದು. ಬುದ್ಧಿ ಎಂದರೆ ಭೌತಿಕ ಮತ್ತು ಆಧ್ಯಾತ್ಮಿಕ ತಿಳಿವಳಿಕೆ. ಎಲ್ಲಿ ದೈವತ್ವವಿರುತ್ತದೆಯೊ, ಅಲ್ಲಿ ನಿರ್ದಿಷ್ಟವಾಗಿ ದೈವತ್ವ ಎಂದು ಕರೆಯುವ ಅವಶ್ಯಕತೆ ಇಲ್ಲ. ‘ದೇವರು’ ಎಂಬ ಪದವು ಅವಿವೇಕತನ ಎಂದೆನಿಸಿದಾಗ, ನೀವು ಬುದ್ಧತ್ವವನ್ನು ಹೊಂದಿದಂತೆ. ಬುದ್ಧತ್ವವೆಂದರೆ ಗುಣಮಟ್ಟ. ಬುದ್ಧಿ ಎಂದರೆ ಗುಣಮಟ್ಟ. ಗುಣಮಟ್ಟವೇ ಎಲ್ಲ. ನೀವು ಹೇಗೆ ನೋಡುವಿರಿ, ಹೇಗೆ ಮಾತನಾಡುವಿರಿ, ಹೇಗೆ ಆಲೋಚಿಸುವಿರಿ, ಹೇಗೆ ನಿಂತುಕೊಳ್ಳುವಿರಿ, ಹೇಗೆ ಕುಳಿತುಕೊಳ್ಳುವಿರಿ, ಹೇಗೆ ತಿನ್ನುವಿರಿ, ಹೇಗೆ ಆಲಿಸುವಿರಿ ಎಂಬುದರಲ್ಲಿ ಉನ್ನತ ಗುಣಮಟ್ಟ ಮತ್ತು ಅಭಿವೃದ್ಧಿ ಇರಬೇಕು. ಅತಿಸೂಕ್ಷ್ಮ ರೀತಿಯಲ್ಲಿ ನಿಮ್ಮ ಚಟುವಟಿಕೆಗಳನ್ನು ಅಭಿವೃದ್ಧಿಗೊಳಿಸಿಕೊಳ್ಳಬೇಕು. ಅದೇ ಬುದ್ಧತ್ವ.

ಇದು ಮೈತ್ರೇಯ ಬುದ್ಧ ಧ್ಯಾನ ವಿಶ್ವವಿದ್ಯಾಲಯ. ವಿಶ್ವಾಲಯ ಅಂದರೆ ದೇಗುಲ. ಧ್ಯಾನವಿದ್ಯೆ ಎಂದರೆ ಧ್ಯಾನವಿಜ್ಞಾನ. 2500 ವರ್ಷಗಳ ನಂತರ ನಾನು ಮೈತ್ರೇಯ ಬುದ್ಧನಾಗಿ ಮತ್ತೆ ಜನ್ಮ ತಾಳುತ್ತೇನೆ ಎಂದು ಬುದ್ಧ ಸಾಯುವ ಮುನ್ನ ಹೇಳಿದ್ದಾನೆ. ಇಡೀ ಪಿರಮಿಡ್ ಸ್ಪಿರಿಚ್ಯುವಲ್ ಮೂವ್‌ಮೆಂಟ್ (ಪಿ.ಎಸ್.ಎಸ್.ಎಂ.) ಒಬ್ಬ ಮೈತ್ರೇಯ ಬುದ್ಧ. ಮೈತ್ರಿ ಎಂದರೆ ಕೇವಲ ಯಾವಾಗಲೂ ಷರತ್ತುರಹಿತ ಸ್ನೇಹವಲ್ಲ ಅಥವಾ ಇಡಿಯಾಗಿ ಷರತ್ತುಬದ್ಧ ಸ್ನೇಹವಲ್ಲ. ಅದು ಎರಡರ ಬಹು ಸುಂದರವಾದ ಸಂಯೋಜನೆ. ಬುದ್ಧತ್ವವೆಂದರೆ ಶೂನ್ಯತೆಯನ್ನು ಅಭ್ಯಸಿಸುವುದು. ನಿಮ್ಮ ಶೂನ್ಯತೆ ನಿಮ್ಮೊಂದಿಗೆ ಇರುತ್ತದೆ. ಬೇರೆಯವರ ಶೂನ್ಯತೆಯೂ ಕೂಡ ನಿಮ್ಮೊಂದಿಗೆ ಇರುತ್ತದೆ. ನಿಮ್ಮ ಶೂನ್ಯತೆ ಬೇರೆಯವರೊಂದಿಗೆ ಇರುತ್ತದೆ. ಆದ್ದರಿಂದ ಅದು ಧ್ಯಾನದ ಅಭ್ಯಸಿಸುವಿಕೆ ಮತ್ತು ಬೋಧನೆಗೆ ಸಮರ್ಪಣೆ. ಧ್ಯಾನದಲ್ಲಿ ಪ್ರತಿಯೊಬ್ಬರು ಬುದ್ಧತ್ವವನ್ನು ಅಭ್ಯಸಿಸಬಹುದು.

 

” ಜ್ಞಾನೋದಯವೆಂದರೆ ಜವಾಬ್ದಾರಿ “

ನಮ್ಮ ಜೀವನವೇ ಕನಸು. ಕನಸೇ ಜೀವನ. 10-15ವರ್ಷಗಳ ಹಿಂದೆ ನನ್ನ (ಬ್ರಹ್ಮರ್ಷಿ ಪತ್ರೀಜಿ) ಕನಸು ಬೆಂಗಳೂರಿನಲ್ಲಿ ದೊಡ್ಡ ಪಿರಮಿಡ್‌ನ್ನು ನಿರ್ಮಿಸುವುದು. ಈಗ ಅದು ನನಸಾಗಿ ಅದರಲ್ಲಿ ನಾವು ಕುಳಿತ್ತಿದ್ದೇವೆ. ನಾವು ಕನಸಿನಿಂದ ಹೊರಹೊಮ್ಮಿದ್ದೇವೆ. ವಿಜ್ಞಾನವೆಂಬುದು ಅಪ್ಪಟ ಸಂಶೋಧನೆ. ಆಧ್ಯಾತ್ಮಿಕ ವಿಜ್ಞಾನದ ಸಂಶೋಧನೆಯೇ ಆಧ್ಯಾತ್ಮಿಕತೆ. ಆಧ್ಯಾತ್ಮಿಕತೆಯ ಮುಂದಿನ ಭಾಗವೇ ಭೌತಿಕತೆ. ಆಧ್ಯಾತ್ಮಿಕತೆಲ್ಲಿ ವಿಜ್ಞಾನದ ಸಂಶೋಧನೆ ಅಂದರೆ ಆಧ್ಯಾತ್ಮಿಕ ವಿಜ್ಞಾನದ ಆಧಿಪತ್ಯ, ಈ ಆಧ್ಯಾತ್ಮಿಕತೆಯ ಆಧಿಪತ್ಯದಲ್ಲಿ ಸಾಕಷ್ಟು ಶಿಖರಗಳಿವೆ. ನಾವು ನಮ್ಮ ಅನುಭವಗಳನ್ನು ಹಂಚಿಕೊಂಡರೆ ನಮ್ಮ ಬೆಳವಣಿಗೆ ಒಂದು ಹಂತಕ್ಕೆ ಮುಟ್ಟುತ್ತದೆ.

ಪಿ.ಎಸ್.ಎಸ್.ಎಮ್ ತನ್ನನ್ನು ತಾನು ಆಧ್ಯಾತ್ಮಿಕ ವಿಜ್ಞಾನಕ್ಕೆ, ಅಹಿಂಸೆಗೆ, ಸಸ್ಯಾಹಾರಕ್ಕೆ, ಧ್ಯಾನಕ್ಕೆ ಸಮರ್ಪಿಸಿಕೊಂಡಿದೆ. ಇನ್ನು ಭೂಮಿಯ ಮೇಲೆ ‘ಸಾಯುವುದು’ ಎಂಬುವುದು ಇರುವುದಿಲ್ಲ. ಬೇರೆಯವರ ಜೀವನ ವ್ಯವಹಾರಗಳಲ್ಲಿ ‘ಮೂಗು ತೂರಿಸುವುದು’ ಎಂಬುದು ಇರುವುದಿಲ್ಲ. ಸಸ್ಯಾಹಾರವೇ ಆಹಾರ, ಮಾಂಸಾಹಾರ ಮಾನವಕುಲಕ್ಕೆ ವಿಷಕಾರಿಯಾದುದು. ಅದು ಆಹಾರವಲ್ಲ, ಅಂತಹ ಆಹಾರ ನಿಮ್ಮನ್ನು ನೀವೇ ನಿಧಾನವಾಗಿ ಸಾಯಿಸಿಕೊಂಡಂತೆ. ನಿಮ್ಮನ್ನು ನೀವು ಕೂಡ ಸಾಯಿಸಿಕೊಳ್ಳಬಾರದು. ನೀವು ನಿಮ್ಮ ದೇಹವನ್ನು ಸಾಯಿಸಿಕೊಂಡರೆ ಅದು ದೊಡ್ಡ ಅಪರಾಧ. ಆದ್ದರಿಂದ, ಪಿ.ಎಸ್.ಎಸ್.ಎಮ್.ಗೆ ಬೇಕಾಗಿರುವುದೇನೆಂದರೆ ಯಾವುದೇ ಪ್ರಾಣಿ, ಪಕ್ಷಿ ಮತ್ತು ಮೀನು ಇವುಗಳನ್ನು ಸಾಯಿಸಬಾರದು, ಹಿಂಸೆ ಇರಬಾರದು. ಪಿ.ಎಸ್.ಎಸ್.ಎಮ್.ನ ನಾಲ್ಕನೆಯ ಸಮರ್ಪಣೆಯೆಂದರೆ ಇಡೀ ಮಾನವಕುಲಕ್ಕೆ ಪಿರಮಿಡ್ ಎನರ್ಜಿಯ ಬಗ್ಗೆ ತಿಳಿಸುವುದು. ನಮಗೆ ಪ್ರತಿಯೊಂದು ಕೊಠಡಿಯಲ್ಲಿ, ಪ್ರತಿಯೊಂದು ಕಡೆಯೂ, ಪ್ರತಿ ಮನೆಯಲ್ಲಿಯೂ, ಪ್ರತಿಯೊಂದು ಸಮುದಾಯದಲ್ಲೂ, ಪ್ರತಿಯೊಂದು ದೇಶದಲ್ಲೂ ಪಿರಮಿಡ್ ಬೇಕು.

ಮೊದಲನೆಯ ಅಂಶವೆಂದರೆ ಆಧ್ಯಾತ್ಮಿಕ ವಿಜ್ಞಾನ. ಈ ಭೂಮಿಯ ಮೇಲೆ ನಮ್ಮ ದೇಹವನ್ನು ನಾವು ಸೃಷ್ಟಿಸಿ, ಉಳಿಸಿ, ನಿರ್ವಹಿಸಿ ಮತ್ತು ಜೀವಿಸುತ್ತಿರುವ ಆತ್ಮದ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಆಧ್ಯಾತ್ಮಿಕ ವಿಜ್ಞಾನವು ಹೇಳುತ್ತದೆ. ಈ ಭೂಮಿಯ ಮೇಲೆ ಎದುರಾಗುವ ಸವಾಲುಗಳು ಬೇರೆ ಯಾವ ಲೋಕದಲ್ಲಿಯೂ ಎದುರಾಗುವುದಿಲ್ಲ. ಎಲ್ಲಿ ಅತಿಹೆಚ್ಚು ಸವಾಲುಗಳು ಮತ್ತು ಅವಕಾಶಗಳು ಇರುತ್ತವೆಯೊ, ಅಲ್ಲಿ ಆತ್ಮದ ಬೆಳವಣಿಗೆ ಇರುತ್ತದೆ. ಆದ್ದರಿಂದ, ನಾವು ನಮ್ಮ ದೇಹವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಯಾವಾಗ ಶಿಕ್ಷಕರು ಬೋಧಿಸಲು ತಯಾರಾಗುತ್ತಾರೆಯೋ, ಎಲ್ಲಾ ಜನರು ಜ್ಞಾನ ಸಂಪಾದಿಸಲು ಶಿಕ್ಷಕರನ್ನು ಮುತ್ತಿಕೊಳ್ಳುತ್ತಾರೆ. ಯಾರಾದರು ಹಣವನ್ನು ಹಂಚಲು ಬಂದಾಗ ನಾವು ಹೇಗೆ ತೆಗೆದುಕೊಳ್ಳುತ್ತೇವೊ, ಹಾಗೆಯೇ ಜ್ಞಾನದ ವಿಷಯದಲ್ಲೂ ಕೂಡ. ಶಿಕ್ಷಕರು ಬೋಧಿಸಲು ಸಿದ್ಧರಾದರೆ, ಶಿಷ್ಯರು ಸಿದ್ಧರಾಗುತ್ತಾರೆ. ಶಿಕ್ಷಕರು ಬೋಧಿಸಲು ಸಿದ್ಧವಿಲ್ಲದಿದ್ದರೆ, ಶಿಷ್ಯರು ಮಲಗಿರುತ್ತಾರೆ. ಎಲ್ಲರಿಗೂ ಪಿರಮಿಡ್ ಧ್ಯಾನದ ಅರಿವನ್ನು ಮೂಡಿಸುವುದು ನಮ್ಮ ಗುರಿ.

ಕೊನೆಯ ಮನುಷ್ಯನೂ ಅಹಿಂಸಾವಾದಿ ಹಾಗು ಸಸ್ಯಾಹಾರಿಯನ್ನಾಗಿ ಮಾಡುವವರೆಗೂ ನಾನು ಈ ಭೂಮಿಯ ಮೇಲೆ ದೈಹಿಕವಾಗಿಯೂ ಜೀವಂತವಾಗಿ ಇರುತ್ತೇನೆ. ಅದಕ್ಕಾಗಿ 80 ವರ್ಷಗಳನ್ನು ಮುಡಿಪಾಗಿಟ್ಟಿದ್ದೇನೆ. ಇನ್ನು 2೦-3೦ ವರ್ಷಗಳಲ್ಲಿ ಖಂಡಿತವಾಗಿ ಇದು ಸಾಧ್ಯವಾಗುತ್ತದೆ. ನಾನು ‘ಫಕೀರ್’ ಎಂಬ ಪುಸ್ತಕವನ್ನು ಓದುತ್ತಿದ್ದೆ, ಅಲ್ಲಿ ಮೆಹರ್ ಬಾಬ, ಶಿರಡಿ ಸಾಯಿಬಾಬ ಅವರಿಂದ ಚಾನಲಿಂಗ್ ಆಗುತ್ತದೆ. ಅದರಲ್ಲಿ ಮೆಹರ್ ಬಾಬ ಒಂದು ವಿಷಯ ಹೇಳಿದ್ದಾರೆ ಎಲ್ಲರೂ 2030ರ ಒಳಗೆ ಸಸ್ಯಾಹಾರಿಗಳಾಗಿ ಪರಿವರ್ತನೆ ಆಗುತ್ತಾರೆ ಎಂದು. ಅದು ತುಂಬಾ ದೂರವಿಲ್ಲ. ಆಗ ಎಲ್ಲಾ ಪ್ರಾಣಿಗಳು, ಜೀವಿಗಳು ಆನಂದವಾಗಿರುತ್ತವೆ. ಆಗ ಮಾನವಕುಲ ಕೂಡ ಸಂತೋಷವಾಗಿರುತ್ತದೆ. ಎಲ್ಲಾ ಮನುಷ್ಯರು ಆತಂಕವಾದಿಗಳಂತೆ, ಉಗ್ರವಾದಿಗಳಂತೆ ವರ್ತಿಸಿ ಪ್ರಾಣಿ, ಪಕ್ಷಿಗಳನ್ನು ಸಾಯಿಸುತ್ತಿದ್ದಾರೆ. ಆದರೆ, ನಾವು ಮಾನವ ಉಗ್ರಗಾಮಿಗಳ ಬಗ್ಗೆ ದೂಷಿಸುತ್ತಿದ್ದೇವೆ. ನನ್ನ ಕೆಲಸ ಮಾನವಕುಲದೊಡನೆ ಅಲ್ಲ. ನನ್ನ ಕೆಲಸ ಪ್ರಾಣಿಗಳನ್ನು ಸಂತೋಷವಾಗಿಡುವುದು. ಎಲ್ಲ ಪಿರಮಿಡ್ ಸೊಸೈಟಿ ಮಾಸ್ಟರ್‌ಗಳು ಇದಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಈಗ ಯಾವುದೇ ಪ್ರಾಣಿಗಳು, ಪಕ್ಷಿಗಳು ಸಂತೋಷವಾಗಿಲ್ಲ. ಅವನ್ನು ಕೊಂದು ನಿರ್ಮಿಸಿರುವ ಕಟ್ಟಡಗಳಿಂದ ನಾವು ಕೂಡ ಸಂತೋಷವಾಗಿಲ್ಲ. ನಾವು ಎಲ್ಲಿಯವರೆಗೂ ಸಂತೋಷಕರವಾಗಿ ಇರುವುದಿಲ್ಲವೊ ಅಲ್ಲಿಯವರೆಗೂ ಆರೋಗ್ಯಕರವಾಗಿರಲು ಸಾಧ್ಯವಿಲ್ಲ. ಯಾವ ಮನುಷ್ಯರ ಪ್ರಾಣಿ, ಪಕ್ಷಿಗಳನ್ನು ಕೊಲ್ಲುತ್ತಿದ್ದಾರೊ, ಅವರು ಮನುಷ್ಯರೇ ಅಲ್ಲ. ಅವರು ಮನುಷ್ಯ ಜಾತಿಗೆ ಸೇರಿದವರಲ್ಲ. ಅವುಗಳೂ ನಮ್ಮಂತೆಯೇ ಜೀವಿಗಳು. ಹಿಂಸಾವಾದಿಗಳನ್ನು ಅಹಿಂಸಾವಾದಿಗಳನ್ನಾಗಿಸುವುದೇ ನಮ್ಮ ಗುರಿ, ಕರ್ತವ್ಯ. ನಾವು ಅವರನ್ನು ಪರಿವರ್ತಿಸಲು ಸಾಧ್ಯವಿಲ್ಲ, ಆದರೆ, ಅವರಿಗೆ ಹೇಳಬಹುದು. ಪಿ.ಎಸ್.ಎಸ್.ಎಮ್. ಪ್ರಾಣಿಕೋಟಿಯ ಸಂರಕ್ಷಣೆಗಾಗಿ ಮತ್ತು ಬೆಳವಣಿಗೆಗಾಗಿಯೇ ಇರುವುದು. ಇದೇ ವಿಕಸನ, ಜ್ಞಾನೋದಯ. ನೀವು ನಿಮ್ಮ ಜವಾಬ್ದಾರಿಯನ್ನು ಅರಿತರೆ ಸಮಸ್ತ ಪ್ರಾಣಿಕುಲಕ್ಕೆ ನೀವು ಉಪಕಾರಿಗಳಾಗುವಿರಿ. ಧ್ಯಾನದ ಮುಖಾಂತರ ಆ ಜವಾಬ್ದಾರಿಯನ್ನು ನೀವು ತಿಳಿದುಕೊಳ್ಳುವಿರಿ. ನಾನು ಈ ಜವಾಬ್ದಾರಿಯ ಅರಿವನ್ನು ನನ್ನ ಧ್ಯಾನದಿಂದ ಅರಿತುಕೊಂಡೆನು. ನಾನು ಹುಟ್ಟಿದಾಗಿನಿಂದಲೇ ಸಸ್ಯಾಹಾರಿ. ನಾನು ಧ್ಯಾನಕ್ಕೆ ಬರುವವರೆಗೂ ಮತ್ತು ಜ್ಞಾನೋದಯ ಹೊಂದುವವರೆಗೂ ನನಗೆ ಆ ಜವಾಬ್ದಾರಿಯ ಅರಿವಿರಲಿಲ್ಲ. ಜ್ಞಾನೋದಯವೆಂದರೆ ಜವಾಬ್ದಾರಿ.

 

“ಧ್ಯಾನವನ್ನು ಮಾಡಿ – ಪೂಜೆ,ಮಾಂಸಾಹಾರ,ಕರ್ಮಕಾಂಡ,ಔಷಧಿ,ವೈದ್ಯರನ್ನು ಬಿಡಿ”

ಕಬೀರರ ತತ್ವಗಳಿಗೆ ಸರಿಸಮಾನವಾದದ್ದು ನಮ್ಮ ಪಿರಮಿಡ್ ತತ್ವಗಳು. ಕಬೀರರು ಬಹಳ ದೊಡ್ಡ ಆಧ್ಯಾತ್ಮಿಕ ವಿಜ್ಞಾನಿ. ಕಬೀರರು ಭಾರತದ ಗುರುತು, ಹೃದಯ, ಮಿದುಳು. ಕಬೀರನ ತತ್ವಗಳು ಭಾರತದ ಮೂಲ, ಮುಂದಿನ ದೃಷ್ಟಿ. ಇವೆಲ್ಲವೂ ಕಬೀರರ ಪರಿಚಯ. ಪಿ.ಎಸ್.ಎಸ್.ಎಮ್ ಎಂದರೆ ಕಬೀರ್ ಮೂವ್‌ಮೆಂಟ್. ಕಬೀರರ ಎರಡು ಮುಖ್ಯವಾದ ತತ್ವಗಳು:

೧. ಪೂಜೆ ಬಿಡುವುದು

೨. ಕರ್ಮಕಾಂಡ ಬಿಡುವುದು ಮತ್ತು ಕಟ್ಟುಪಾಡು ಬಿಡುವುದು

ಪಿರಮಿಡ್ ಸಮಾಜದಲ್ಲೂ ಪೂಜೆ, ವಿಗ್ರಹಾರಾಧನೆ, ವ್ಯಕ್ತಿ ಪೂಜೆ, ಮನುಷ್ಯ ಅಥವ ಗುರುಗಳನ್ನು ಆರಾಧಿಸುವುದು, ಪೂಜಿಸುವುದು ನಿಷೇಧಿಸಲಾಗಿದೆ. (No Worship). ಮಹಮ್ಮದ್‌ರು ಕೂಡ ವಿಗ್ರಹಾರಾಧನೆಯನ್ನು ವಿರೋಧಿಸುತ್ತಿದ್ದರು. ಕಬೀರರು ಮತ್ತು ಮಹಮ್ಮದ್‌ರು ನಿರ್ಗುಣತ್ವವನ್ನು ಪ್ರೋತ್ಸಾಹಿಸುತ್ತಿದ್ದರು. ಬುದ್ಧ ಕೂಡ ಇದನ್ನೇ ಹೇಳಿದರು. ಸ್ವಾಮಿ ದಯಾನಂದ ಸರಸ್ವತಿ ಆರ್ಯಸಮಾಜದ ಸ್ಥಾಪಕರು, ಅವರು ಸಹ ಪೂಜೆ ಮತ್ತು ವಿಗ್ರಹಾರಾಧನೆಯನ್ನು ಪ್ರೋತ್ಸಾಹಿಸುತ್ತಿರಲಿಲ್ಲ. ದೇವರ ಆರಾಧನೆ ಮಾಡಬಾರದು ಎಂಬುದು ಬಹು ಮುಖ್ಯವಾದ ಅಂಶ ಎಂದು ಕಬೀರರು ಹೇಳಿದ್ದಾರೆ. ಅದೇ ಸತ್ಯ.

ನಾವೇ ದೇವರುಗಳು. ಅಹಂ ಬ್ರಹ್ಮಾಸ್ಮಿ. ಎಲ್ಲರೂ ಸಮಾನರೇ. ಯಾರಿಗೆ ಯಾರೂ ಕಡಿಮೆಯಲ್ಲ. ನನಗಿಂತ ಬುದ್ಧ ಹೆಚ್ಚಲ್ಲ. ನಾನು ಬುದ್ಧನಿಗಿಂತ ಹೆಚ್ಚಲ್ಲ. ಪ್ರಾರ್ಥನೆ ಇಲ್ಲ. ಇನ್ನೊಂದು ಮಹತ್ತರವಾದ ಕಬೀರರ ಅಂಶವೆಂದರೆ “ಮಾಂಸ ಬಿಟ್ಟುಬಿಡಿ”. ದೈವಾರಾಧನೆಯನ್ನು ಪ್ರೋತ್ಸಾಹಿಸದೆ ನಮ್ಮನ್ನು ನಾವು ದೇವರೆಂದು ಭಾವಿಸಿ ನಮ್ಮನ್ನು ನಾವು ಅರಿತು “ಕಾಯಕವೇ ಕೈಲಾಸ” ಎಂಬುದನ್ನು ಅರಿಯಬೇಕು ಕಬೀರರ ಈ ತತ್ವಗಳು “ನಾವೆಲ್ಲರೂ ಸರಿಸಮಾನರು, ಯಾರೂ ಗುರುಗಳಲ್ಲ” ಎನ್ನುವುದನ್ನು ಸಾರುತ್ತವೆ. ಇದರಿಂದಲೇ ಅವರು ಪೂಜೆಯನ್ನು, ಪ್ರಾರ್ಥನೆಯನ್ನು ವಿರೋಧಿಸುತ್ತಿದ್ದರು. ಮಾಂಸವನ್ನು ತ್ಯಜಿಸಿ, ಪ್ರಾಣಿಹಿಂಸೆ ಮಾಡುವುದು ಸರಿಯಲ್ಲ ಎನ್ನುವುದು ಕಬೀರರ ವಾದ. ಕಬೀರರು ಮಾಂಸಾಹಾರಿಗಳನ್ನು ಬೈಯುತ್ತಿದ್ದರು.

ಈ ಮೂರು ಮೂಲಭೂತ ತತ್ವಗಳಿಗಾಗಿ ಕಬೀರರು ತಮ್ಮ ಜೀವನವನ್ನು ಮುಡುಪಾಗಿಟ್ಟರು. ವೈದ್ಯರನ್ನು ಮತ್ತು ಔಷಧಿಯನ್ನು ಬಿಟ್ಟುಬಿಡಿ. ಕಬೀರರ ಮತ್ತು ನಮ್ಮ ಪಿರಮಿಡ್ ಸಮಾಜದ ತತ್ವಗಳು ಸಮಾನವಾಗಿವೆ. 3 ಅಭ್ಯಾಸಗಳನ್ನು ತ್ಯಜಿಸಿ, 3 ತತ್ವಗಳನ್ನು ಅಳವಡಿಸಿಕೊಳ್ಳಿ ಎಂದು ಕಬೀರರು ಹಾಡುತ್ತಿದ್ದರು.

೧) ಪೂಜೆ ಬಿಡಿ

೨) ಮಾಂಸ ಬಿಡಿ

೩) ವೈದ್ಯರನ್ನು ಮತ್ತು ಔಷಧಿಯನ್ನು ಬಿಡಿ

ನಾವು ಕಬೀರರಂತೆಯೇ ಎಲ್ಲರ ಅನುಭವಗಳನ್ನು ಕೇಳಿ ಅರಿತು ಅನುಭವಶೀಲರಾಗುವುದು, ವೈದ್ಯರನ್ನು ತ್ಯಜಿಸಿ ಔಷಧಿಗಳನ್ನು ಬಿಟ್ಟು ನಮ್ಮನ್ನು ನಾವು ಅರಿಯುವುದರೆಡೆಗೆ ಸಾಗುವುದು ಅಗತ್ಯ. ಸಾವಿಗೆ ಸಿದ್ಧರಾಗಿ. ಸಾಯುವುದಕ್ಕೆ ಸಿದ್ಧವಾಗಿರಬೇಕು. ಆತ್ಮಕ್ಕೆ ಸಾವಿಲ್ಲ ಎಂದು ನಮಗೆ ತಿಳಿದಿದೆ, ಆದ್ದರಿಂದ ಸಾಯುವುದಕ್ಕೆ ಸಿದ್ಧವಾಗಿರಬೇಕು.

ಬೆಂಗಾಳದಲ್ಲಿ ಮೀನನ್ನು ‘ಜಲಪುಷ್ಪ’ವೆಂದು ಕರೆದು ಅದನ್ನು ಸಸ್ಯಹಾರವೆಂದು ಪರಿಗಣಿಸಿದ್ದಾರೆ. ಅದು ದೇವರೇ ಕೊಟ್ಟಿರುವ ಆಹಾರವೆಂದು ಭ್ರಮಿಸುತ್ತಿದ್ದಾರೆ. ರಾಮಕೃಷ್ಣ ಪರಮಹಂಸರೂ ಸಹ ಇದಕ್ಕೆ ಹೊರತಾಗಿಲ್ಲ. ಅದು ಮೂರ್ಖತನ ಎಂದು ಹೇಳಿದ್ದಾರೆ ಕಬೀರ್. ಕಬೀರ್ ಮೀನು ಸಹ ಮಾಂಸಾಹಾರವೇ, ಅದೂ ಹಿಂಸೆಯೇ ಎಂದು ಪ್ರತಿಪಾದಿಸಿದ್ದಾರೆ. ಜಗತ್ತಿನ ಅತ್ಯಂತ ಕೊನೆಯ ವ್ಯಕ್ತಿಯೂ ಸಹ ಸಸ್ಯಹಾರಿ ಆಗುವವರೆಗೂ ಪಿ.ಎಸ್.ಎಸ್.ಮ್. ಹಾಗು ಕಬೀರ್‌ರ ಕೆಲಸವು ಮುಂದುವರೆಯುತ್ತಿರುತ್ತದೆ.

“ಅಹಿಂಸಾ ಪರಮೋ ಧರ್ಮಃ”.

“ಭವಿಷ್ಯತ್ತಿನಲ್ಲಿ ಯಾರೂ ಪೂಜೆ ಮಾಡುವುದಿಲ್ಲ”

ನಾನು ಮೊದಲು ಧ್ಯಾನಕ್ಕೆ ಬಂದಾಗ ನನ್ನ ಹೆಂಡತಿ ರಾಘವೇಂದ್ರ ಸ್ವಾಮಿಗೆ ಬಹಳಷ್ಟು ಪೂಜೆ ಮಾಡುತ್ತಿದ್ದಳು. 5 ವರ್ಷಗಳ ನಂತರ ಪೂಜೆಯನ್ನು ನಿಲ್ಲಿಸಿದರು. ನಂತರ ಧ್ಯಾನಕ್ಕೆ ಬಂದರು. ಹಳೆಯ ಹವ್ಯಾಸಗಳು ಸಾಯುವುದು ಕಷ್ಟ. ಆದರೆ ಅವು ಸಾಯಲೇಬೇಕು. ನಾನು ಔಷಧಿಗಳಿಗೆ ಮತ್ತು ವೈದ್ಯರುಗಳಿಗೆ ತದ್ವಿರುದ್ಧ. ಆದರೆ ಕೆಲವೊಂದಕ್ಕೆ ಮನ್ನಣೆಯಿದೆ ಅಂದರೆ ಕಣ್ಣು, ಮೂಳೆ, ಹಲ್ಲುಗಳಿಗೆ ಅದು ಕಾರ್‌ಪೆಂಟರಿ ಕೆಲಸವಿದ್ದಂತೆ. ಆದರೆ ತಲೆನೋವು, ಹೊಟ್ಟೆ ನೋವುಗಳಿಗೆ ವೈದ್ಯರ ಬಳಿ ಹೋಗುವುದು ಮೂರ್ಖತನ.

ಮೂರನ್ನು ಬಿಡಿ ಮತ್ತು ಮೂರನ್ನು ಹಿಡಿಯಿರಿ :

1. ಪೂಜೆ ಬಿಡಿ – ಧ್ಯಾನ ಮಾಡಿ

2. ಮಾಂಸ ಬಿಡಿ – ಪುಸ್ತಕ ಓದಿ

3. ಔಷಧಿ ಮತ್ತು ವೈದ್ಯರನ್ನು ಬಿಡಿ – ಸಜ್ಜನ ಸಾಂಗತ್ಯ ಮಾಡಿ

ಧ್ಯಾನದಿಂದ ಶಕ್ತಿ (ಎನರ್ಜಿ), ಸ್ವಾಧ್ಯಾಯದಿಂದ ಜ್ಞಾನ, ಸಜ್ಜನಸಾಂಗತ್ಯದಿಂದ ವಿವೇಕ (ವಿಸ್ಡಮ್). ಎಲ್ಲರ ಅನುಭವಗಳನ್ನು ಕೇಳಬೇಕು. ವಿವೇಕಾನಂದ, ರಾಮಕೃಷ್ಣ ಪರಮಹಂಸರಿಗೆ ಕಾಳಿಕಾದೇವಿ ದರ್ಶನವಾಗಿ ಮೂರನೇ ಕಣ್ಣು (ಚಕ್ಷು) ತೆರೆಯಿತು. ನಿಮಗೂ ಸಹ ಆಗುತ್ತದೆ. ವಿವೇಕಾನಂದರು ಅದ್ವೈತದಲ್ಲಿ ಚಾಂಪಿಯನ್ ಆದರು. ಭಗವದ್ಗೀತೆ, ಆನೀಬೆಸೆಂಟ್‌ರ ಆತ್ಮಚರಿತ್ರೆ, ಯೋಗಾನಂದ ಪರಮಹಂಸರ ಆತ್ಮಚರಿತ್ರೆ, ಸ್ವಾಮಿ ರಾಮರವರ ಆತ್ಮಚರಿತ್ರೆ, ಲೋಬ್‌ಸಾಂಗ್ ರಾಂಪಾರ ಪುಸ್ತಗಳನ್ನು ಓದಿದರೆ ತಿಳಿಯುತ್ತದೆ ಅವರು ಹೇಗೆ ಸಂತೋಷದಿಂದ ಇದ್ದರು ಎಂದು. ಜೂಡಿ ಸತೋರಿಯವರ ‘ಸನ್‌ಶೈನ್ ಬಿಫೊರ್ ದಿ ಡಾನ್’, ಹೀಗೆ, ಇಂತಹ ಎಲ್ಲ ಪುಸ್ತಗಳನ್ನು ಓದಬೇಕು. ಜ್ಞಾನವೇ ಪವರ್, ಶಕ್ತಿ. ಪ್ರತಿದಿನ ಸಜ್ಜನಸಾಂಗತ್ಯ ಮಾಡಲೇಬೇಕು. “ತ್ರಿಜಗತಿ ಸಜ್ಜನ ಸಂಗತಿ ರೇಖ ಭವತಿ ಭವಾ ನವ ತರಣೇ ನೌಕ” ಎಂದು ಶಂಕರಾಚಾರ್ಯರು ಹೇಳಿದ್ದಾರೆ. ‘ಭವಾ ನವ’ ಎಂದರೆ ಈ ದುಃಖದ ಭವಸಾಗರವನ್ನು ದಾಟಬೇಕು, ಅದು ಸಜ್ಜನ ಸಾಂಗತ್ಯದಿಂದಲೇ ಸಾಧ್ಯ. ಇದೇ ಮೂಲಸತ್ವ. ಚಿಕ್ಕಚಿಕ್ಕದಕ್ಕೆಲ್ಲ ನ್ಯಾಚುರೋಪತಿ, ಹೋಮಿಯೋಪತಿ, ಆಯುರ್ವೇದ, ಅಲೋಪತಿ, ಯೋಗ ವೈದ್ಯರ ಬಳಿ ಹೋಗಬೇಡಿ. ನಿಮ್ಮೊಳಗೆ ಹೋಗಿ. ನಿಮ್ಮ ಉಸಿರಾಟದ ಕಡೆಗೆ ಹೋಗಿ.

ಪಿ.ಎಸ್.ಎಸ್.ಎಮ್. ಎಂದರೆ ಕಬೀರರ ತತ್ವಗಳನ್ನು ಅಳವಡಿಸುವುದು ಮತ್ತು ಔಷಧಿ, ವೈದ್ಯರನ್ನು ಬಿಡುವುದು, ಹೆಚ್ಚು ಧ್ಯಾನ ಮಾಡುವುದು, ಪಿರಮಿಡ್ ಶಕ್ತಿಯನ್ನು ಉಪಯೋಗಿಸಿಕೊಳ್ಳುವುದು, ಅನ್‌ಲಿಮಿಟೆಡ್ ಸ್ವಾಧ್ಯಾಯ, ಸಜ್ಜನ ಸಾಂಗತ್ಯ. ಪ್ರತಿಯೊಬ್ಬರ ಅನುಭವ ಕೇಳಬೇಕು. ಕರ್ಮಕಾಂಡ (ಕಂದಾಚಾರಗಳು) ಬಿಡಿ. ನಿಮ್ಮ ತಂದೆ ತಾಯಿ ಸತ್ತರೆ 3ನೇ ದಿನ 4ನೇದಿನ ಎಲ್ಲ ಇಲ್ಲ. ಅವರ ಆತ್ಮ ಸಂತೋಷವಾಗಿ ಇರುತ್ತದೆ. ನಿಮ್ಮ ಆತ್ಮವೇ ಅಳುತ್ತಿರುತ್ತದೆ. ನನ್ನ ಗುರುವಿನ ಆತ್ಮ ದೈಹಿಕ ಶರೀರದಲ್ಲಿದ್ದಾಗ, ಪ್ರತಿದಿನ ಹೋಗಿ ಭೇಟಿ ಮಾಡಿ ಬರುತ್ತಿದ್ದೆ. ಯಾವಾಗ ಅವರ ಆತ್ಮ ದೇಹಬಿಟ್ಟು ತೆರಳಿತೊ, ನಾನು ಹೋಗುವುದನ್ನು ಬಿಟ್ಟು ‘ಬಾಯ್’ ಹೇಳಿದೆ. ‘ಔಟ್ ಆಫ್ ಸೈಟ್ ಔಟ್ ಆಫ್ ಮೈಂಡ್’. ಪಿ.ಎಸ್.ಎಸ್.ಎಮ್. ಎಂದರೆ ಕಬೀರ ಆದ್ದರಿಂದ ನೀವು ಹೆಚ್ಚಾಗಿ ಕಬೀರರ ಪುಸ್ತಕಗಳನ್ನು ಓದಬೇಕು.

 

” ಪಿರಮಿಡ್ ಶಕ್ತಿಯ ಬಗ್ಗೆ ಎಲ್ಲರಿಗೂ ತಿಳಿಸಬೇಕು “

ಸುಮಾರು 30 ವರ್ಷಗಳಿಂದ ನಾನು ಧ್ಯಾನ ಮತ್ತು ಜ್ಞಾನಾರ್ಜನೆಯ ಅನುಭವಗಳನ್ನು ಹೇಳುತ್ತಿದ್ದೇನೆ. ಪರಿವರ್ತನೆ ಹೊಂದಲು ಧ್ಯಾನವಲ್ಲದೆ ಬೇರೆ ಯಾವುದರ ಅವಶ್ಯಕತೆ ಇಲ್ಲ. ಧ್ಯಾನವನ್ನು ಸಾಧಿಸಲು, ನಾವು ಪಿರಮಿಡ್ ಗುರುಗಳಾಗಲು ನಮ್ಮ ಉಸಿರಾಟದಿಂದಲೇ ಸಾಧ್ಯ. ಇದನ್ನು ಸಾಧಿಸಲು ನಾವು ಎಲ್ಲಿಗೂ ಹೋಗುವುದು ಬೇಡ. ನಾವು ಇರುವ ಸ್ಥಳದಲ್ಲಿಯೇ ಸಾಧಿಸಬಹುದು. ನಿಮ್ಮ ಉಸಿರಿನೊಂದಿಗೆ ಇದ್ದರೆ, ಎಲ್ಲವೂ ಪರಿವರ್ತನೆಗೊಳ್ಳುತ್ತದೆ. ಪರಿಹಾರ ನಿಮ್ಮಲ್ಲಿಯೇ ಇದೆ. ನಮ್ಮ ನಿರ್ಲಕ್ಷ್ಯದಿಂದ ನಾವು ಗಳಿಸುವುದು 10 ರೂಪಾಯಿಗಳು. ಆದರೆ, ವೆಚ್ಚ ಮಾಡುವುದು 20 ರೂಪಾಯಿಗಳು. ಇದರಿಂದ ಸಾಲದ ಹೊರೆಯನ್ನು ಹೊರುವುದಲ್ಲದೇ ಚಿಂತೆಯಿಂದ ಅನಾರೋಗ್ಯದಿಂದ ವೈದ್ಯರ ಮೊರೆಹೋಗುತ್ತೇವೆ, ಪೂಜಾರಿಗಳ ಮೊರೆಹೋಗುತ್ತೇವೆ. ಬಿ.ಪಿ. ಅಥವಾ ಸಕ್ಕರೆ ಖಾಯಿಲೆಗಳಿಗೆ ಬಲಿಯಾಗುತ್ತೇವೆ. ಆದರೆ ಅದರ ಜೊತೆ ವೃಥಾ ಹಣದ ಖರ್ಚು ಅಷ್ಟೆ. ಹಣ ಸಂಪಾದಿಸುವುದು ಹಾಗು ಖರ್ಚು ಮಾಡುವುದು ಬಹು ಕಷ್ಟಕರವಾದುದು. ಎಲ್ಲಾ ಆರ್ಥಿಕ ತೊಂದರೆಗಳೇ. ತಲೆನೋವಿನ ಜೊತೆಗೆ ಆರ್ಥಿಕ ಸಮಸ್ಯೆ ಸೇರಿಕೊಳ್ಳುತ್ತದೆ. ಧ್ಯಾನ ಮಾಡಿದರೆ ಆರ್ಥಿಕವಾಗಿ ಬಲಗೊಳ್ಳುವಿರಿ. ಏಕೆಂದರೆ ಪೂಜೆ ಮಾಡುವುದು, ವೈದ್ಯರ ಬಳಿ ಹೋಗುವಂತಹ ಅನಾವಶ್ಯಕ, ಮೂರ್ಖತನದ ಖರ್ಚುಗಳು ಉಳಿಯುತ್ತದೆ. ಧ್ಯಾನಕ್ಕೆ ಬರುವ ಮುಂಚೆ 10 ರೂ. ಸಂಪಾದಿಸಿ, 20 ರೂ. ಖರ್ಚು ಮಾಡುತ್ತಿದ್ದರೆ, ಧ್ಯಾನಕ್ಕೆ ಬಂದ ನಂತರ 10 ರೂ. ಸಂಪಾದಿಸಿ 5 ರೂ. ಖರ್ಚು ಮಾಡಿ ಜೊತೆಗೆ 5 ರೂ. ಉಳಿಸಬಹುದು. ಆರೋಗ್ಯವೇ ಭಾಗ್ಯವಲ್ಲವೇ! ಅದರ ಜೊತೆಗೆ ನಮಗೆ ಸ್ನೇಹಿತರು ದೊರೆಯುತ್ತಾರೆ ಹಾಗು ಇಡೀ ದೇಶವನ್ನು ಸುತ್ತಬಹುದು ಒಂದು ರುಪಾಯಿ ಸಹ ಖರ್ಚಿಲ್ಲದೆ!

ನೀವು ಧ್ಯಾನಕ್ಕೆ ಬರುವ ಮುಂಚೆ ಮತ್ತು ಧ್ಯಾನಕ್ಕೆ ಬಂದ ನಂತರ ಎಷ್ಟು ಜನ ಸ್ನೇಹಿತರು ಇದ್ದಿರಬಹುದು ಎಂದು ಊಹಿಸಿಕೊಳ್ಳಿ. ಧ್ಯಾನಕ್ಕೆ ಬರುವ ಮೊದಲು 2 ರಿಂದ 3 ಜನ ಸ್ನೇಹಿತರು ಇರುವುದು ಕಷ್ಟಕರ. ಪ್ರತಿಯೊಬ್ಬರಿಗೂ ಸ್ನೇಹಿತರು ಇರುತ್ತಾರೆ. ಏಕೆಂದರೆ, ಅದು ಹಳೆಯ ಜನ್ಮಗಳ ಸಂಬಂಧ. ಆದರೆ, ಧ್ಯಾನಕ್ಕೆ ಬಂದ ನಂತರ ಪ್ರತಿಯೊಬ್ಬರೂ, ಅಂದರೆ, ತಿಳಿದವರು ಅಥವಾ ತಿಳಿಯದಿದ್ದವರು, ಪರಿಚಿತರು ಅಥವಾ ಅಪರಿಚಿತರು ಎಲ್ಲರೂ ಸ್ನೇಹಿತರಾಗುತ್ತಾರೆ. ನೀವು ಧ್ಯಾನ ತರಬೇತಿ ನೀಡುವವರು ಎಂದು ಒಮ್ಮೆ ಹೇಳಿಕೊಂಡರೆ ಸಾಕು, ಇಡೀ ಪ್ರಪಂಚವೇ ನಿಮ್ಮ ಸ್ನೇಹಿತನಾಗಿಬಿಡುತ್ತದೆ. ಎಲ್ಲರೂ ನಿಮಗೆ ಬಾಗುತ್ತಾರೆ. ಪ್ರತಿಯೊಬ್ಬರಿಗೂ ಧ್ಯಾನದ ಪ್ರಾಮುಖ್ಯತೆ ತಿಳಿದಿರುತ್ತದೆ. ಒಮ್ಮೆ ಒಬ್ಬ ಮನುಷ್ಯ ಧ್ಯಾನಾಭ್ಯಾಸ ಮಾಡಲು ಶುರು ಮಾಡಿದರೆ, ಅವನ ಬಾಯಿಯಿಂದ ಧ್ಯಾನದ ಬಗ್ಗೆ ಹೊರತು ಬೇರೆ ಇನ್ನೇನೂ ಮಾತುಗಳು ಬರುವುದಿಲ್ಲ. ಪಿ.ಎಸ್‌ಎಸ್.ಎಮ್ ಶುರುವಾದದ್ದು ಒಬ್ಬರಿಂದ. ಆದರೆ, ಈಗ ಪ್ರತಿಯೊಬ್ಬರೂ ಧ್ಯಾನ ಶಿಕ್ಷಕರೇ. ಹಿಂದಿನ ದಿನಗಳಲ್ಲಿ ಧ್ಯಾನ ಎಂದರೆ ಅದು ಹಿಮಾಲಯಕ್ಕೆ ಮಾತ್ರ ಸೀಮಿತವಾಗಿತ್ತು, ಬಂಧಿಯಾಗಿತ್ತು. ಆದರೆ, ಅದು ಈಗ ಪ್ರತ್ಯಕ್ಷವಾದುದು (ಪ್ರಾಕ್ಟಿಕಲ್). ಅದು ಪ್ರತಿಯೊಬ್ಬರ ಸ್ವತ್ತು. ನೀವು ಜಗದ್ಗುರುಗಳಾಗುವಿರಿ. ಅದು ಪ್ರತಿಯೊಬ್ಬ ಪಿ.ಎಸ್.ಎಸ್.ಎಮ್ ಮಾಸ್ಟರ್‌ನ ಅನುಭವ. ಪಿರಮಿಡ್ ಮಾಸ್ಟರ್‌ಗಳಾಗುವುದು ನಮ್ಮೆಲ್ಲರ ಅದೃಷ್ಟ. ಹಿಂದಿನ ಜನ್ಮಗಳಲ್ಲಿ ನಮಗೆ ಧ್ಯಾನ, ಸಸ್ಯಾಹಾರ, ಆಧ್ಯಾತ್ಮಿಕ ವಿಜ್ಞಾನ ಎಲ್ಲದರ ಕುರಿತು ಗೊತ್ತು. ಈ ಜನ್ಮದಲ್ಲಿ ಇದಕ್ಕೆ ‘ಪಿರಮಿಡ್ ಶಕ್ತಿ’ಯನ್ನು ಸೇರಿಸಲು ಬಂದಿದ್ದೇವೆ. ಯಾವಾಗ ಪಿರಮಿಡ್ ಶಕ್ತಿ ದೊರೆಯುತ್ತದೆಯೋ, ಆಗ ನಾವು ಪರಿಪೂರ್ಣರು.

ಭಾರತ ದೇಶದಲ್ಲಿ 20-30 ವರ್ಷಗಳ ಹಿಂದೆ ಪಿರಮಿಡ್‌ಗಳು ಇರಲಿಲ್ಲ. 30-40 ವರ್ಷಗಳ ಹಿಂದೆ ಒಂದು ಪಿರಮಿಡ್ ಕೂಡ ಇಲ್ಲದ ನಮ್ಮ ಭಾರತದಲ್ಲಿ ಈಗ ಕೇವಲ ಆಂಧ್ರಪ್ರದೇಶದಲ್ಲಿಯೇ 10,000 ಪಿರಮಿಡ್‌ಗಳಿವೆ. ನಮ್ಮ ಮೊದಲ ಪಿರಮಿಡ್ ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ನಿರ್ಮಿಸಲಾಯಿತು. ಅದನ್ನು ನಿರ್ಮಿಸುವ ಸಮಯದಲ್ಲಿ ನಿರ್ಮಾಣವನ್ನು ತಡೆಗಟ್ಟಲು ಎಷ್ಟೋ ಜನ ಪ್ರಯತ್ನಿಸಿದರು. ಪಿರಮಿಡ್‌ನ್ನು ಸಮಾಧಿ ಎಂದು ಟೀಕಿಸಿದರು. ಪಿರಮಿಡ್‌ಗಳು ಸತ್ತ ಹೆಣಗಳಿಗೊಸ್ಕರ ಮೀಸಲಾಗಿಲ್ಲ. ಯಾವುದೋ ಮಹಾನ್‌ಕಾರ್ಯಕ್ಕೆ ಮೀಸಲಾಗಿದೆ. ಮಾಂಸಾಹಾರ ಸೇವಿಸುವವರು ಪಿರಮಿಡ್ ಒಳಗಡೆ ಇರಲು ಸಾಧ್ಯವಾಗುವುದಿಲ್ಲ. ಪಿರಮಿಡ್ ಅವರನ್ನು ಆಚೆಗೆ ಎಸೆಯುತ್ತದೆ. ಅವರು ಪರಿವರ್ತನೆ ಹೊಂದಬೇಕು ಅಥವಾ ಆವರಣದಿಂದ ಹೊರಗೆ ಹಾಕುತ್ತದೆ. ಅವರು ಕಿಂಗ್ಸ್ ಚೇಂಬರ್‌ನಲ್ಲಿ ಇರಲು ಸಾಧ್ಯವಾಗುವುದಿಲ್ಲ. ಎಲ್ಲಾ ಧರ್ಮದವರಿಗೂ ಪಿರಮಿಡ್‌ನಲ್ಲಿ ಬರುವ ಅವಕಾಶವಿದೆ. ಆದರೆ ಮಾಂಸಾಹಾರಿಗಳಿಗೆ ಇಲ್ಲಿ ಸ್ಥಳವಿಲ್ಲ. ನಾವು ಈಗ ಸಂಪೂರ್ಣ ಮಾಸ್ಟರ್‌ಗಳು. ಇದು ಪಿರಮಿಡ್ ಯುಗ. ಪ್ರಪಂಚದಲ್ಲಿ ಎಲ್ಲಿಯೂ ಧ್ಯಾನಕ್ಕಾಗಿ ಪಿರಮಿಡ್‌ಗಳಿಲ್ಲ. ಭಾರತ ಒಂದರಲ್ಲಿಯೇ ಧ್ಯಾನ ಪಿರಮಿಡ್‌ಗಳಿವೆ. ಈಜಿಪ್ಟ್ ಪಿರಮಿಡ್‌ಗಳು ಕೇವಲ ಪ್ರವಾಸಿಗರ ಆಕರ್ಷಣೆಗೆ. ಈಜಿಪ್ಟ್‌ನಲ್ಲಿ ಯಾರೂ ಪಿರಮಿಡ್ ಒಳಗೆ ಹೋಗುವುದಿಲ್ಲ, ಅವುಗಳನ್ನು ಹೊರಗಿನಿಂದಲೇ ತೋರಿಸುತ್ತಾರೆ ಒಳಗೆ ಹೋಗುವುದಿಲ್ಲ. ಏಕೆಂದರೆ ಅವರುಗಳು ಮಾಂಸಾಹಾರಿಗಳಾಗಿದ್ದರೆ ಪಿರಮಿಡ್ ಒಳಗಿನ ಧ್ಯಾನಶಕ್ತಿ ಅವರನ್ನು ಕಿತ್ತೆಸೆಯುತ್ತದೆ. ಭಾರತ ಒಂದರಲ್ಲಿಯೇ ಅತಿ ಹೆಚ್ಚಾದ ಸಸ್ಯಾಹಾರಿಗಳಿದ್ದಾರೆ ಅದರಿಂದಲೇ ಭಾರತ ಒಂದು ಶ್ರೇಷ್ಠವಾದ ದೇಶ. 1936-38ರಲ್ಲಿ ಧ್ಯಾನಕ್ಕಾಗಿ ಪಿರಮಿಡ್ ಒಳಗಡೆ ಹೋಗಿ ಕುಳಿತ ಮೊದಲ ವ್ಯಕ್ತಿ Dr. ಪಾಲ್ ಬ್ರನ್‌ಟನ್ ಮತ್ತು ಅದ್ಭುತವಾದ ಅನುಭವಗಳನ್ನು ಪಡೆದುಕೊಂಡಿದ್ದರು. ನಂತರ ಅವರು ‘ಸೀಕ್ರೆಟ್ ಪವರ್ ಆಫ್ ದಿ ಪಿರಮಿಡ್‘, ‘ಸೀಕ್ರೆಟ್ಸ್ ಆಫ್ ಈಜಿಪ್ಟ್‘ ಎಂಬ ಪುಸ್ತಕಗಳನ್ನು ಬರೆದರು.

ಸಸ್ಯಾಹಾರಕ್ಕೆ ಭಾರತ ದೇಶವೇ ನೇತಾರನ ಸ್ಥಾನವನ್ನು ಹೊಂದಿದೆ. ನಿಮ್ಮ ಆಧ್ಯಾತ್ಮಿಕತೆಯ ಪರೀಕ್ಷೆಯು ನೀವು ಸೇವಿಸುವ ಆಹಾರದ ಮೇಲೆ ಮತ್ತು ನೀವು ಹೇಗೆ ಪ್ರಾಣಿಸಂಕುಲವನ್ನು ಸಂರಕ್ಷಿಸುತ್ತೀರಿ ಎಂಬುದರ ಮೇಲೆ ಅವಲಂಬಿಸಿದೆ. ಈ ವಿಷಯದಲ್ಲಿ ಭಾರತ ದೇಶ ಅತ್ಯುತ್ತಮ ದೇಶ. ಇದೇ ವಿಚಾರದಲ್ಲಿ ಪಿ.ಎಸ್.ಎಸ್.ಎಮ್. ತನ್ನ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದೆ. ನಮ್ಮ ದೇಶದ ಬಗ್ಗೆ ಎಚ್ಚರ ವಹಿಸುತ್ತಿದೆ. ನಾವು ಎಲ್ಲಿರುತ್ತೇವೆಯೊ, ಅಲ್ಲಿಯೇ ನಮ್ಮ ದೇಶದ ಕುರಿತು ಎಚ್ಚರ ವಹಿಸುವಿಕೆ ಎಂಬುದು ಇರುತ್ತದೆ. ದೇಶವು ಪ್ರಪಂಚದ ಕುರಿತು ಎಚ್ಚರ ವಹಿಸುತ್ತದೆ. ಪಿರಮಿಡ್‌ಗಳು ಎಲ್ಲೆಡೆ ಬರಬೇಕು. ಪಿರಮಿಡ್ ಮಾಸಪತ್ರಿಕೆಗಳು ಎಲ್ಲೆಡೆ ಬರಬೇಕು. ಎಲ್ಲಾ ಪಿರಮಿಡ್ ಮಾಸ್ಟರ್‌ಗಳು ಅವರವರ ಸ್ಥಳಗಳಲ್ಲಿ ಮಾಸಪತ್ರಿಕೆಗಳನ್ನು ಆರಂಭಿಸಬೇಕು. ಹಾಗಾಗಿ ಮಾಸಪತ್ರಿಕೆಗಳು ಅವರವರ ಸ್ಥಳೀಯ ಭಾಷೆಗಳಲ್ಲಿ ಎಲ್ಲೆಡೆ ತಲುಪುತ್ತವೆ. ಜ್ಞಾನವು ಎಲ್ಲೆಡೆ ಪಸರಿಸುತ್ತದೆ.

 

” ಯಾರು ಯಾರಿಗೂ ಹೀಲಿಂಗ್ ಮಾಡಬಾರದು “

ಪಿರಮಿಡ್‌ನ ಒಳಗೆ, ಸಂಗೀತದ ಜೊತೆ, ಆಧ್ಯಾತ್ಮಿಕ ವಿಜ್ಞಾನಿಗಳ ಸಮಕ್ಷಮದಲ್ಲಿ ಕೂಡಿ ಮಾಡುವ ಧ್ಯಾನ ಬಹಳ ಶಕ್ತಿವುಳ್ಳದ್ದು. ನಮ್ಮ ಪ್ರಾಪಂಚಿಕ ಕೆಲಸಗಳಲ್ಲಿ, ಭೌತಿಕ ಕೆಲಸಗಳಲ್ಲಿ ಪ್ರಾಣಶಕ್ತಿಯನ್ನು ಉಪಯೋಗಿಸಿ ಬಲಹೀನರಾಗುತ್ತೇವೆ. ಇಂತಹ ಸಮಯದಲ್ಲಿ ಕಣ್ಣೆರಡು ಮುಚ್ಚಿ, ಸಹಜವಾದ ಉಸಿರಾಟವನ್ನು ಗಮನಿಸುತ್ತಾ ಧ್ಯಾನದಲ್ಲಿ ಕೂರಬೇಕು. ಮೊಬೈಲನ್ನು ಚಾರ್ಜ್ ಮಾಡುವ ಹಾಗೆ, ನಮ್ಮ ಉಸಿರು ಸಾಕೆಟ್‌ನ ಹಾಗೆ, ಮನಸ್ಸನ್ನು ಪ್ಲಗ್‌ಮಾಡಿ ವಿಶ್ವದಿಂದ ಶಕ್ತಿಯನ್ನು ಪಡೆಯಬೇಕು. ಹೇಗೆ ನೀವು ಸಮಯಕ್ಕೆ ಸರಿಯಾಗಿ ನಿಮ್ಮ ಮೊಬೈಲ್‌ನ್ನು ಚಾರ್ಜ್ ಮಾಡುತ್ತೀರೊ, ಹಾಗೆಯೇ ನಿಮ್ಮ ಆತ್ಮವನ್ನು ಚಾರ್ಜ್ ಮಾಡಬೇಕು. ಹಾಗೆಯೇ ಉಸಿರಾಟದೊಂದಿಗೆ ಇರಿ.

ಆಧ್ಯಾತ್ಮಿಕ ವಿಜ್ಞಾನ ಏನು ಹೇಳುತ್ತದೆ ಎಂದರೆ ನೀವು ನಿಮ್ಮ ಉಸಿರಾಟದೊಂದಿಗೆ ಇದ್ದರೆ, ನಿಮ್ಮ ಮನಸ್ಸು ಶೂನ್ಯವಾಗುತ್ತದೆ. ದೇಹದ ಹೊರಗಿನ ಶಕ್ತಿಗೆ ಮತ್ತು ದೇಹದ ಒಳಗಿನ ಶಕ್ತಿಗೆ ಮನಸ್ಸೇ ತಡೆಗೋಡೆ. ಯಾವಾಗ ಮನಸ್ಸು ಶೂನ್ಯಗೊಳ್ಳುತ್ತದೆಯೊ ಹೊರಗಿನ ಶಕ್ತಿಯು ದೇಹದ ಒಳಗೆ ಪ್ರವೇಶಿಸುತ್ತದೆ. ಯಾವ ವೈದ್ಯರೂ ಬೇಡ, ಯಾವ ಔಷಧಿಯೂ ಬೇಡ. ನಾವೆಲ್ಲರೂ ದೇವರುಗಳೇ. ನೀವು ಸುಖಕರ ಆಸನದಲ್ಲಿ ಕುಳಿತು, ಕಣ್ಣುಮುಚ್ಚಿ ನಿಮ್ಮ ಉಸಿರಾಟವನ್ನು ಗಮನಿಸಿದರೆ ತಲೆನೋವಿನಿಂದ ಕ್ಯಾನ್ಸರ್‌ನವರೆಗೆ ಎಲ್ಲಾ ರೋಗಗಳು ಗುಣವಾಗುತ್ತದೆ. ಯಾವುದೇ ಮಂತ್ರ ಮತ್ತು ಭಾವಚಿತ್ರದ ಅವಶ್ಯಕತೆ ಇಲ್ಲ. ಬಾಯಿಯಿಂದ ಯಾವುದೇ ರೀತಿಯಾದ ಶಬ್ದದ ಅವಶ್ಯಕತೆ ಇಲ್ಲ. ನಮ್ಮ ಮೂಗೇ ನಮ್ಮ ಪಿರಮಿಡ್. ಅದರೊಳಗೆ ಪ್ರವೇಶಿಸಿ. ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗುತ್ತದೆ. ನೀವು ನಿಮ್ಮ ಮನೆಯಲ್ಲೇ ಕುಳಿತು ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ಉಸಿರಾಟವನ್ನು ಗಮನಿಸಿ. ಅಷ್ಟೆ. ನಿಮ್ಮ ಮನಸ್ಸು ಯೋಚನೆಗಳೆಡೆಗೆ ಹೋಗುತ್ತದೆ. ಆದರೆ, ಅದನ್ನು ಮತ್ತೆ ಉಸಿರಾಟದೆಡೆಗೆ ಮತ್ತೆ ಕರೆತನ್ನಿ. ಸ್ವಲ್ಪ ಸಮಯದ ಹೋರಾಟದ ನಂತರ ನೀವು ಉಸಿರಿನೊಂದಿಗೆ ಒಂದಾಗುವಿರಿ. ಎಲ್ಲಾ ವಿಜ್ಞಾನಗಳ ತಾಯಿ ಆಧ್ಯಾತ್ಮಿಕ ವಿಜ್ಞಾನ. ಆಧ್ಯಾತ್ಮಿಕ ವಿಜ್ಞಾನ ಎಲ್ಲಾ ದ್ರವ್ಯಗಳಿಗೆ ಮೂಲ. ಎಲ್ಲವು ‘ಸೈಕೋಸೊಮಾಟಿಸಿಟಿ‘. ಆಧ್ಯಾತ್ಮಿಕ ವಿಜ್ಞಾನದಿಂದ ನಾವು ಇದನ್ನೇ ಕಲಿಯುವುದು. ನಾಲ್ಕು ವಿಷಯಗಳು ಪ್ರಮುಖವಾದವು : 1. ಪದಾರ್ಥ, 2. ಶಕ್ತಿ, 3. ಆಲೋಚನೆ, 4. ಪ್ರಜ್ಞೆ.

ಪದರ್ಥಾವೇ ಶಕ್ತಿ. ನಿಮ್ಮ ಆಲೋಚನೆಗಳು ಶಕ್ತಿಯನ್ನು ನಡೆಸುತ್ತದೆ. ನಿಮಗೆ ಎಲ್ಲಿ ಬೇಕೊ ಅಲ್ಲಿಗೆ ಶಕ್ತಿಯು ಹರಿಯುತ್ತದೆ. ನಿಮ್ಮ ಆಲೋಚನೆಗಳು ಶಕ್ತಿಗೆ ದಾರಿಯನ್ನು ತೋರಿಸುತ್ತವೆ. ಆಲೋಚನೆ ಎಂದರೆ ಶಕ್ತಿಯ ವ್ಯಯ. ನಿಮ್ಮ ಆಲೋಚನೆಗಳನ್ನು ತೆಗೆದು ಹಾಕಿದರೆ ಶಕ್ತಿಯನ್ನು ಹೆಚ್ಚಿಸಬಹುದು ಮತ್ತು ಅರಿವಿನೆಡೆಗೆ ತೆರಳಬಹುದು. ನಿಮಗೆ ಒಂದು ದೊಡ್ಡ ಪಿರಮಿಡ್ ಬೇಕೆಂದರೆ, ಅದು ಬರುತ್ತದೆ. ನಮ್ಮ ಆಲೋಚನೆಯನ್ನು ಸಮಸ್ತ ಮಾನವಕುಲ ಸಸ್ಯಾಹಾರಿಗಳಾಗಬೇಕೆಂಬ ಕಡೆಗೆ ಹರಿಸುತ್ತೇವೆ. ಅದು ನೆರವೇರುತ್ತದೆ. ಆಲೋಚನೆಗಳನ್ನು ಮೀರಿ ಹೊರಬಂದು, ಶುದ್ಧವಾದ ಪ್ರಜ್ಞೆಯನ್ನು ಸೇರಿದಾಗ, ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಇವು ನಾಲ್ಕು ಬಗೆಯ ಮೂಲಭೂತವಾದ ವಿಧಗಳು. ಪದಾರ್ಥ, ಶಕ್ತಿ, ಆಲೋಚನೆ, ಪ್ರಜ್ಞೆ. ನಾವೆಲ್ಲಾ ಶುದ್ಧವಾದ ಪ್ರಜ್ಞಾಜೀವಿಗಳು. ನಾವೆಲ್ಲಾ ಪ್ರತ್ಯೇಕವಾದ ಪ್ರಜ್ಞೆ ಹಾಗು ಒಟ್ಟುಪ್ರಜ್ಞೆಗೆ ಪ್ರತೀಕವಾಗಿದ್ದೇವೆ. ನಾವು ಭೌತಿಕ ದೇಹವಲ್ಲ ಎಂದು ತಿಳಿದುಕೊಂಡಾಗ, ಅದೇ ಸ್ವ-ತಿಳಿವಳಿಕೆ. ನಾವು ಇಲ್ಲಿರುವಹಾಗೆ, ಎಲ್ಲಾ ಕಡೆಯೂ ಇದ್ದೇವೆ ಎಂದು ತಿಳಿಯುವುದೇ ದೊಡ್ಡ ತಿಳಿವಳಿಕೆ.

ಓಜಾಸ್ ಬೆಟ್ಟದ ಮೇಲೆ ಒಂದು ಧ್ವನಿ ಕೇಳಿಸಿತು. ಅದು ಯಾರು ಎಂದು ಕೇಳಿದಾಗ, “ನಾನು ನಿನ್ನ ಅಸ್ತಿತ್ವ, ನಾವು ಇದು, ಅದಲ್ಲ!!” ಎಂದಿತು. ನಾವು ಒಟ್ಟುಪ್ರಜ್ಞಾಜೀವಿಗಳು ಹಾಗೆಯೇ ಪ್ರತ್ಯೇಕವಾದ ಪ್ರಜ್ಞಾಜೀವಿಗಳು. ನಾವು ಭೌತಿಕ ದೇಹದಲ್ಲಿರುವಾಗ ನಮ್ಮ ಮನಸ್ಸೊಂದು ಉಪಕರಣ, ಭ್ರಾಂತಿ ಅಲ್ಲ..!! ನಾವು ನಮ್ಮ ದೇಹದಲ್ಲಿದ್ದಾಗ ಪರಿಸ್ಥಿತಿಗಳನ್ನು ಸರಿದೂಗಿಸಬೇಕು. ಆತ್ಮದ ಒಂದು ಪದಾರ್ಥ ದೇಹದಲ್ಲಿ ಸೇರಿದಾಗ, ಅದನ್ನು ಮನಸ್ಸು ಎನ್ನುತ್ತೇವೆ. ’ನಾವು ದೇಹ’ದಿಂದ ‘ನಾವು ಆತ್ಮ‘ ಎಂಬ ಪರಿವರ್ತನೆಯನ್ನು ಹೊಂದಿದಾಗ ನಾವು ವೈಯಕ್ತಿಕವಾಗಿ ಬೆಳೆದಹಾಗೆ. ಆಗ ನೀವು ಬೇರೆಯವರಿಗೆ ಸಹಾಯ ಮಾಡಬೇಕು. ಆದರೆ, ಬೋಧನೆಯ ಮುಖಾಂತರ ಹೊರತು ಹೀಲಿಂಗ್ ಮುಖಾಂತರ ಅಲ್ಲ. ನೀವು ಬೇರೆಯವರಿಗೆ ಹೀಲಿಂಗ್ ಮಾಡುತ್ತಿದ್ದೀರ ಎಂದರೆ, ಅವರ ಹೋಂವರ್ಕ್‌ನ್ನು ನೀವು ಮಾಡುತ್ತಿದ್ದಂತೆ. ಆಗ ಅವರು ನಿಮ್ಮ ಮೇಲೆ ಅವಲಂಬಿಸಿದಂತೆ. ನೀವು ಅವರನ್ನು ಸ್ವತಂತ್ರವಾಗಿ ಇರಲು ಕಲಿಸಬೇಕು. ನೀವು ಸ್ವತಂತ್ರವಾಗಿರಬೇಕು, ಬೇರೆಯವರನ್ನು ಹಾಗೆ ಇರಲು ಮಾಡಬೇಕು. ನಿಮ್ಮ ಧ್ಯಾನದಿಂದ ನಿಮಗೆ ನಿಮ್ಮ ಸ್ವಾತಂತ್ರ ಸಿಕ್ಕಿದಂತೆ, ಬೇರೆಯವರಿಗೂ ಧ್ಯಾನವನ್ನು ಕಲಿಸಬೇಕು. ನೀವು ಪ್ರತಿಯೊಬ್ಬರಿಗೂ ಬೋಧಿಸಿ, ಪ್ರತಿಯೊಂದು ಆತ್ಮವು ಅದರ ಹೋಂವರ್ಕ್ ಅದೇ ಮಾಡುವಂತೆ ಆಗಬೇಕು. ಅವರ ಕರ್ಮವನ್ನು ಅವರೇ ದೂರ ಮಾಡಿಕೊಳ್ಳಬೇಕು. ಸ್ವಲ್ಪ ಮಟ್ಟಿನ ಸಹಾಯವನ್ನು ಅಪರೂಪದ ಮತ್ತು ತುರ್ತು ಸಮಯದಲ್ಲಿ ಮಾಡಬಹುದು. ಆದರೆ, ಅದು ನಿಯಮವಲ್ಲ. ಪಿ.ಎಸ್.ಎಸ್.ಎಮ್.ನಲ್ಲಿ ನಾವು ಯಾರಿಗೂ ಹೀಲಿಂಗ್ ಮಾಡುವುದಿಲ್ಲ. ಸ್ವಂತವಾಗಿ ನಮಗೂ ಹೀಲಿಂಗ್ ಮಾಡಿಕೊಳ್ಳಬಾರದು. ಕ್ಯಾನ್ಸರ್ ಇದ್ದರೆ ಇರಲಿ. ಪ್ರತಿಯೊಂದಕ್ಕೂ ಕಾರಣವಿರುತ್ತದೆ. ಈಗ ನಾನು ಸಾಯಬೇಕೆಂದರೆ, ಸಾಯಬೇಕು. ನಿರ್ಗಮನಕ್ಕೆ ಕೂಡ ಕಾರಣವಿರುತ್ತದೆ. ಆದರೆ, ನಾವು ಧ್ಯಾನದಲ್ಲಿ ಇರಬೇಕು, ಏನಾಗುತ್ತದೊ ಅದು ಆಗಲಿ. ನಾವು ಧ್ಯಾನದಲ್ಲಿರಬೇಕಾದರೆ, ಏನಾಗಬೇಕೆಂದು ಇದೆಯೊ ಅದು ಆಗುವುದು. ಏನು ಆಗಬಾರದೆಂದಿಯೊ ಅದು ಆಗುವುದಿಲ್ಲ. ಅದು ಕೂಡ ಒಳ್ಳೆಯದಕ್ಕೆ. ಯಾವುದೇ ಪರಿಸ್ಥಿತಿಗಳನ್ನು ಬದಲಾಯಿಸಲು ನಾವು ಹೆಚ್ಚು ಪರಿಶ್ರಮಿಸುವುದಿಲ್ಲ.

ಬಡವನಾಗಿದ್ದರೆ, ಬಡತನ ಸಾಕಷ್ಟು ಬೋಧಿಸುತ್ತದೆ. ಶ್ರೀಮಂತನಾಗಿದ್ದರೆ, ಬೇಕಾದಷ್ಟು ಅವಕಾಶಗಳನ್ನು ಮಾಡಿಕೊಳ್ಳುತ್ತದೆ. ನೀವು ಧ್ಯಾನದಲ್ಲಿರಬೇಕಾದರೆ, ಪ್ರಕೃತಿಯು ನಿಮಗೆ ಸಹಜವಾಗಿ ಹೀಲಿಂಗ್ ಮಾಡಬೇಕೆನಿಸಿದರೆ, ಅದು ಆಗಲಿ. ಅದು ಆಗುತ್ತದೆ. ನಾನು ಬೇರೆಯವರಿಗೆ ಹೀಲಿಂಗ್ ಮಾಡುವುದಿಲ್ಲ, ನನಗೆ ಯಾರೂ ಹೀಲಿಂಗ್ ಮಾಡುವುದಿಲ್ಲ. ನನಗೆ ನಾನು ಮಾಡಿಕೊಳ್ಳುವುದಿಲ್ಲ. ನಾವು ಇಲ್ಲಿ ಬಂದಿರುವುದೇ ಪಾಠವನ್ನು ಕಲಿಯಲು. ಅದರಿಂದ ಕಲಿಯಬೇಕು ಎಂದು ಇದ್ದರೆ, ಪ್ರಕೃತಿ ಹೀಲಿಂಗ್ ಮಾಡುವುದಿಲ್ಲ. ಯಾವ ಅನುಭವವು ಅನುಪಯುಕ್ತವಾದುದಲ್ಲ, ನಕಾರಾತ್ಮಕವಲ್ಲ, ಕೆಟ್ಟದ್ದಲ್ಲ. ಯಾವ ಅನುಭವೂ ನಿಲ್ಲುವುದಿಲ್ಲ, ನಿರ್ಗಮಿಸುತ್ತದೆ. ಒಂದು ಅನುಭವ ಬೇಡ, ಇನ್ನೊಂದು ಬೇಕೆಂದರೆ, ನೀವೇ ಪಾಠಗಳನ್ನು ಕಳೆದುಕೊಳ್ಳುವಿರಿ. ನಿಮ್ಮ ಜೀವನದಲ್ಲಿ ಅತಿಹೆಚ್ಚು ಅನುಭವಗಳನ್ನು ಪಡೆಯಬೇಕು. ಅವನ್ನು ತಡೆಯಬೇಡಿ. ಮತ್ತು ಧ್ಯಾನದಲ್ಲಿದ್ದು ನಿಮ್ಮ ಶಕ್ತಿಯನ್ನು ಹೆಚ್ಚಿಸಿ. ನಾವು ಧ್ಯಾನದಲ್ಲಿ ಇಲ್ಲದಿದ್ದರೆ, ಸಮಸ್ತ ಮಾನವ ಕೋಟಿಗೋಸ್ಕರ ನೀವು ನಿಮ್ಮ ಆಲೋಚನೆಯ ಮೂಲಕ ನಿಮ್ಮ ಶಕ್ತಿಯನ್ನು ಉಪಯೋಗಿಸಿ. ಹುಟ್ಟು ಸಂಭವಿಸುತ್ತವೆ, ಸಾವನ್ನು ಕೂಡ. ಇಲ್ಲಿಗೆ ಬರದಿದ್ದರು ಆಚರಿಸಬೇಕು. ಇಲ್ಲಿಗೆ ಬರಲು ಆಯ್ಕೆ ಮಾಡದಿದ್ದರೆ, ಅದು ತಪ್ಪಲ್ಲ. ಎಲ್ಲವು ಎಲ್ಲಾ ಕಡೆಯೂ ಸರಿಯೇ. ಆದರೆ ನಾವು ಇಲ್ಲಿಗೆ ಬರಲು ಆಯ್ಕೆ ಮಾಡಿದ್ದೇವೆ. ನಾವು ಅತ್ಯುತ್ತಮವಾಗಿದ್ದರೆ ನಮ್ಮಿಂದ ಅಂತಹ ಶಕ್ತಿಯೇ ಹರಿಯುತ್ತದೆ. ನಾವು ಪರಮನೀಚರಾಗಿದ್ದರೆ ನಮ್ಮಿಂದ ಅಂತಹುದೇ ಶಕ್ತಿಯು ಎಲ್ಲ ಕಡೆಗೂ ಹರಿಯುತ್ತದೆ. ಧ್ಯಾನದ ಮೂಲಕ ಯಾವಾಗಲೂ ಅತ್ಯುತ್ತಮರಾಗಿರುವುದು ನಮ್ಮ ಕರ್ತವ್ಯ. ಎಲ್ಲರಿಗೂ ಧ್ಯಾನವೇ ಎಲ್ಲಾ. ಯಾವಾಗ ನಿಮಗೆ ಎಲ್ಲಾ ದೊರೆಯುತ್ತದೆಯೊ, ಆಗ ನೀವು ಚಲಾವಣೆಯಲ್ಲಿರುತ್ತೀರಿ.

ಸಂಭ್ರಮ .. ಸಂಭ್ರಮ .. ಸಂಭ್ರಮ

ಧ್ಯಾನ .. ಧ್ಯಾನ .. ಧ್ಯಾನ