” ಚತುರ್ವಿಧ ಪುರುಷಾರ್ಥಗಳು “

ವೇದಾಂತ ಪರಿಭಾಷೆಯಲ್ಲಿ ಪ್ರತಿಯೊಂದು ಜೀವಾತ್ಮವೂ ಸಹ ‘ಪುರುಷ’ ಎಂದು .. ವಿಶೇಷ ಲೋಕಗಳಿಂದ ಕೂಡಿರುವ ಶಕ್ತಿಕ್ಷೇತ್ರವನ್ನು .. ‘ಪ್ರಕೃತಿ’ ಎಂದು ಎನ್ನುತ್ತೇವೆ.

ಹೀಗೆ ಪುರುಷನು ‘ಆತ್ಮಕ್ಷೇತ್ರವಾಗಿ’ ಮತ್ತು ಪ್ರಕೃತಿಯು ‘ಶಕ್ತಿಕ್ಷೇತ್ರವಾಗಿ’ .. ಒಂದು ಶುದ್ಧಚೈತನ್ಯ ಅಥವಾ ಮಹಾಮೂಲಚೈತನ್ಯದಿಂದ ಹೊರಬಂದು ಎರಡಾಗಿ ವಿಭಜಿಸಲಾಗಿದೆ ಎನ್ನುವುದು ಸೃಷ್ಟಿಯ ರಚನಾ ಕಾರ್ಯಕ್ರಮದ ಮೂಲಸಂರಚನಾ ಸಿದ್ಧಾಂತ.

ಒಂದು ಮೂಲಚೈತನ್ಯದಿಂದ ‘ಶಕ್ತಿಕ್ಷೇತ್ರವಾಗಿ’ ಹೊರಬಂದ ‘ಪ್ರಕೃತಿಶಕ್ತಿ’ .. ಅನೇಕ ಆಯಾಮಗಳಲ್ಲಿನ ಅನೇಕ ಲೋಕಗಳಾಗಿ ಬದಲಾಗುತ್ತಾ .. ಅತಲ, ವಿತಲ, ಸುತಲ, ಕುತಲ, ಪಾತಾಳದಂತಹ ಆಯಾಮದೊಂದಿಗೆ ಭೂಲೋಕ, ಭುವರ್ಲೋಕ, ಸುವರ್ಲೋಕ, ಜನಾಲೋಕ, ಮಹಾಲೋಕ, ತಪೋಲೋಕ, ಸತ್ಯಲೋಕಗಳಾಗಿ ಬಗೆಬಗೆಯಾಗಿ ವಿರಾಜಿಸುತ್ತಿರುತ್ತದೆ.

ಹಾಗೆಯೇ, ಮೂಲಚೈತನ್ಯದಿಂದ ಒಂದು ‘ಆತ್ಮಕ್ಷೇತ್ರ’ವಾಗಿ ಹೊರಬಂದ ‘ಪುರುಷಶಕ್ತಿ’ ಅನೇಕಾನೇಕ ಅಂಶಾತ್ಮಗಳಾಗಿ ಬಿಡುಗಡೆಯಾಗಿ ಖನಿಜಲೋಕದಲ್ಲಿ ಇದ್ದಾಗ ಖನಿಜಾತ್ಮವಾಗಿ, ವೃಕ್ಷಲೋಕದಲ್ಲಿ ವೃಕ್ಷಾತ್ಮವಾಗಿ, ಪ್ರಾಣಿಲೋಕದಲ್ಲಿದ್ದಾಗ ಪ್ರಾಣಿ ಆತ್ಮವಾಗಿ, ಮಾನವಲೋಕದಲ್ಲಿ ಇದ್ದಾಗ ಮಾನವಾತ್ಮವಾಗಿ, ದೈವಲೋಕದಲ್ಲಿದ್ದಾಗ ದೈವಾತ್ಮವಾಗಿ .. ಬಗೆಬಗೆಯ ಜೀವಾತ್ಮಗಳು ತಯಾರಾಗುತ್ತವೆ.

* * *

ಹೀಗೆ ಪ್ರಕೃತಿ ಕ್ಷೇತ್ರವನ್ನೆಲ್ಲಾ .. ‘ಪ್ರಕೃತಿ’ ಎಂದಂತೆ ಆತ್ಮಕ್ಷೇತ್ರವನ್ನು ‘ಪುರುಷ’ ಎನ್ನುತ್ತಾರೆ.

ಆತ್ಮವಿಕಾಸದಲ್ಲಿನ ಭಾಗವಾಗಿ ಹೀಗೆ ಮಾನವಲೋಕದೊಳಗೆ ಪ್ರವೇಶಿಸಿದ “ಪುರುಷಾತ್ಮ“ನಿಗೆ ನಾಲ್ಕು ವಿಧಗಳಾದ ಪುರುಷಾರ್ಥಗಳಿರುತ್ತವೆ. ೧.ಧರ್ಮ ೨.ಅರ್ಥ ೩.ಕಾಮ ೪.ಮೋಕ್ಷ ಎನ್ನುವ ಈ ನಾಲ್ಕನ್ನು “ಚತುರ್ವಿಧ ಪುರುಷಾರ್ಥಗಳು” ಎನ್ನುತ್ತೇವೆ.

ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಹೇಳಿದರು.

“ಚಾತುರ್ವರ್ಣ್ಯಂ ಮಯಾ ಸ್ಪಷ್ಟಂ ಗುಣಕರ್ಮವಿಭಾಗಶಃ |

ತಸ್ಯ ಕರ್ತಾರಮಪಿ ಮಾಂ ವಿದ್ಧ್ಯಕರ್ತಾರಮವ್ಯಯಮ್ ||

(ಭ, ೪ ಅ, ೧೩ಶ್ಲೋ)

“ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ವರ್ಣಗಳನ್ನು ಅವರವರ ಗುಣಕರ್ಮಗಳನ್ನು ಅನುಸರಿಸಿ ಬೇರೆಬೇರೆಯಾಗಿ ಸೃಷ್ಟಿಸಿದ್ದೇನೆ. ಈ ಸೃಷ್ಟಿ ಕಾರ್ಯಕ್ರಮಕ್ಕೆ ನಾನೇ ಕರ್ತನಾದರೂ, ನನ್ನನ್ನು ನಿಜಕ್ಕೂ ‘ಅಕರ್ತ’ ಎಂದು ತಿಳಿದುಕೊಳ್ಳಿ”.

ಅಂದರೆ, ಮೂಲಚೈತನ್ಯದಿಂದ ಒಂದು ಪುರುಷಕ್ಷೇತ್ರ .. ಒಂದು ಪ್ರಕೃತಿಕ್ಷೇತ್ರ ಬಂದು ಒಂದರಲ್ಲೊಂದು ಲೀನವಾಗಿ ಅನೇಕಾನೇಕ ಲೋಕಗಳು ಏರ್ಪಟ್ಟು, ಬಗೆಬಗೆಯ ಗುಣಗಳ ಕಾರಣದಿಂದ ಬಗೆಬಗೆಯ ಜೀವಾತ್ಮಗಳು ಹುಟ್ಟಿಬಂದಿವೆ. “ಇವೆಲ್ಲಕ್ಕೂ ನಾನು ಅವ್ಯಯನಾಗಿ, ಅಕರ್ತನಾಗಿ ಮತ್ತು ಸಾಕ್ಷೀಭೂತನಾಗಿ ಮಾತ್ರವೇ ಇದ್ದೇನೆ. ಅವು ನನ್ನೊಳಗಿಂದ ಬಂದರೂ ಸಹ .. ನಾನು ಮಾತ್ರ ವ್ಯಯವಾಗಲಿಲ್ಲ ..” ಎಂದು ಶ್ರೀ ಕೃಷ್ಣ ಪರಮಾತ್ಮ ಅರ್ಜುನನಿಗೆ ಹೇಳುತ್ತಾನೆ.

ಅಂದರೆ .. ಒಬ್ಬ ತಾಯಿ ಮಗುವನ್ನು ಹಡೆದಾಗ .. ಆ ತಾಯಿ ತನ್ನ ಶರೀರ ಭಾಗವನ್ನು ಕೊಯ್ದು ತಾನು ವ್ಯಯವಾಗಿ ಮಕ್ಕಳನ್ನು ಹುಟ್ಟಿಸಿದಳೇ? ಅಥವಾ ಇಲ್ಲವೇ? ತಾಯಿ ತಾಯಿಯಾಗೇ ಇದ್ದು ತನ್ನ ಸ್ವ-ಇಚ್ಛಾನುಸಾರ ಮಗುವನ್ನು ಹುಟ್ಟಿಸಿದ್ದಾಳಷ್ಟೇ. ಆ ಮಕ್ಕಳು ಸಹ ತಮ್ಮ ಸ್ವ-ಇಚ್ಛಾನುಸಾರವೇ ಆ ತಾಯಿಗೆ ಮಕ್ಕಳಾಗಿ ಜನ್ಮಿಸಿದ್ದಾರೆ. ಹಾಗೆಯೇ, ಇಲ್ಲಿ ಸಹ ಯಾರಿಗೆ ಯಾರೂ ಕರ್ತರಲ್ಲ. ಯಾರೂ ವ್ಯಯವಾಗುತ್ತಿಲ್ಲ.

ಇಂತಹ ಮೂಲಸೂತ್ರಗಳ ಸಾರವನ್ನೆಲ್ಲಾ ಅರ್ಥಮಾಡಿಕೊಂಡ “ಯೋಗೀಶ್ವರೆಲ್ಲಾ ಕೂಡ ಧ್ಯಾನದಲ್ಲಿ ಕುಳಿತುಕೊಂಡು ಎರಡು ಕಣ್ಣುಗಳನ್ನು ಮುಚ್ಚಿಕೊಂಡು ಏನು ಮಾಡುತ್ತಿದ್ದಾರೆ?” ಅಂದರೆ .. ತಮ್ಮ ತಮ್ಮ ದಿವ್ಯನೇತ್ರಗಳಿಂದ ಕೋಟ್ಯಾಂತರ ಲೋಕಗಳನ್ನು .. ಮತ್ತು ಅನೇಕಾನೇಕ ಜನ್ಮಗಳನ್ನು ತೆಗೆದುಕೊಳ್ಳುತ್ತಿರುವ ಜೀವಿಗಳನ್ನು ನೋಡಿ ಸೃಷ್ಟಿಯ ರಚನೆಯನ್ನು ವಿಸ್ಮಯದಿಂದ ನೋಡುತ್ತಿರುತ್ತಾರೆ”. ಇಂತಹದೆಲ್ಲವನ್ನೂ ಆತ್ಮಕ್ಷೇತ್ರದಲ್ಲೇ ವೀಕ್ಷಿಸಬಲ್ಲರು. ಆದ್ದರಿಂದ, ಅವರನ್ನು “ಋಷಿಗಳು”, “ದ್ರಷ್ಟರು” ಎನ್ನುತ್ತಾರೆ. ಅನಂತರ ಅವರು ತಮ್ಮ ತಮ್ಮ ಅನುಭವಗಳನ್ನು ವಿಶ್ಲೇಷಿಸಿದಾಗ .. ವ್ಯಾಖ್ಯಾನ ಮಾಡಿದಾಗ .. ಅದನ್ನು ನಾವು ಶ್ರದ್ಧೆಯಿಂದ ಕೇಳಿಸಿಕೊಳ್ಳಬೇಕು. ಅದನ್ನೇ “ಶೃತಿ” ಎನ್ನುತ್ತೇವೆ. ಹಾಗೆ ಶೃತಿಮಾಡಿ .. ಅವುಗಳನ್ನು ಚೆನ್ನಾಗಿ ಮನನಮಾಡಿ “ಸ್ಮೃತಿ”ಯಲ್ಲಿ ಇಟ್ಟುಕೊಳ್ಳಬೇಕು.

ಜೀವಿಗಳ ಗುಣಕರ್ಮ ವಿಭಾಗಗಳನುಸಾರ ಅವುಗಳ ಅಂತರಂಗವನ್ನು “ಜೀನೋಟೈಪು – genotype” ಎಂದು, ಬಹಿರಂಗವನ್ನು “ಫೀನೋಟೈಪ್ – phenotype” ಎಂದು ವಿಭಜಿಸಲಾಗಿದೆ. ಜೀವಶಾಸ್ತ್ರದ ಪರಿಜ್ಞಾನ ಇರುವವರಿಗೆ ಈ ಪದಗಳ ಅರ್ಥ ತಿಳಿದುಬರುತ್ತದೆ.

ಇಲ್ಲಿ ಜೀನೋಟೈಪು ಅಂದರೆ ಜೀವಿಯಕರ್ಮಕ್ಕೆ ಸಂಬಂಧಿಸಿದ ಗುಣಸಮುದಾಯ ಎಂದು, ಫೀನೋಟೈಪ್ ಅಂದರೆ ಬಹಿರಂಗವಾಗಿ ಕಾಣಿಸುವ ಆ ಕರ್ಮಗಳ ರೂಪುರೇಖೆಗಳು ಎಂದು ಹೇಳುತ್ತೇವೆ.

ಯಥಾ ಗುಣಃ ತಥಾ ಕರ್ಮಃ

ಯಥಾ ಅಂತರಂಗಃ ತಥಾ ಬಹಿರಂಗಃ” ಎಂದು ಶಾಸ್ತ್ರ ಹೇಳುತ್ತಿರುವಂತೆ ..

“ಒಳಗೆ ಏನಿದೆಯೋ ಅದೇ ಹೊರಗೆ ಬರುತ್ತದೆ .. ಮತ್ತೆ ಮಾಡುತ್ತಿರುವ ಕರ್ಮಗಳು ಸಹ ಗುಣಗಳ ಅನುಸಾರವೇ ಇರುತ್ತವೆ. ಸೃಷ್ಟಿಕ್ರಮದಲ್ಲಿ ಗುಣಗಳು ಸದಾ ಬದಲಾಗುತ್ತಲೇ ಇರುತ್ತವೆ. ಹೀಗೆ ಬದಲಾಗುತ್ತಿರುವ ಗುಣಗಳಿಂದ ಬದಲಾಗುವ ಕರ್ಮಗಳನ್ನೇ “ಚಾತುರ್ವರ್ಣಗಳು” ಎನ್ನುತ್ತೇವೆ. ನಾಲ್ಕು ಗುಣಗಳು ನಾಲ್ಕು ಬಗೆಯ ಕರ್ಮಗಳಿಗೆ ಕಾರಣವಾಗುತ್ತಿರುತ್ತದೆ. ಅವೇ “ತಮೋಗುಣ”, “ರಜೋಗುಣ”, “ಸಾತ್ವಿಕಗುಣ” ಮತ್ತು “ಶುದ್ಧಸಾತ್ವಿಕ”. ಉಳಿದ ಗುಣಗಳೆಲ್ಲಾ ಹಾಗೆಯೇ ಇದ್ದರೂ ಸಹ ಈ ಕೊನೆಯ ಶುದ್ಧಸಾತ್ವಿಕ ಗುಣವೇ “ನಿರ್ಗುಣ”ವಾಗಿ ಸಹ ಬದಲಾಗುತ್ತದೆ”.

ತಮೋಗುಣ ಕರ್ಮಗಳನ್ನು ಮಾಡುವವರನ್ನು “ಶೂದ್ರರು” ಎಂದು, ರಜೋಗುಣ ಕರ್ಮಗಳನ್ನು ವಿಶೇಷವಾಗಿ ಮಾಡುವವರನ್ನು “ವೈಶ್ಯರು” ಎಂದು, ಸಾತ್ವಿಕಗುಣ ವಿಶೇಷವಾಗಿದ್ದು ಕರ್ಮಗಳನ್ನು ಆಚರಿಸುವವರನ್ನು “ಕ್ಷತ್ರಿಯರು” ಎಂದು ಸದಾ ಶುದ್ಧಸಾತ್ವಿಕ ಗುಣಗಳಿಂದ ಕರ್ಮಗಳನ್ನು ಆಚರಿಸುವವರನ್ನು “ಬ್ರಾಹ್ಮಣರು” ಎಂದು ಹೇಳುತ್ತೇವೆ.

ತಮೋಗುಣ ಪ್ರಧಾನವಾದ ಕಾಮ್ಯಕ ಪ್ರವೃತ್ತಿ ಮಾತ್ರವೇ ಇದ್ದರೆ “ಶೂದ್ರ”ನೆಂದು, ಕಾಮಪ್ರವೃತ್ತಿ+ಅರ್ಥಪ್ರವೃತ್ತಿ ಇದ್ದರೆ ವೈಶ್ಯನೆಂದು, ಕಾಮಪ್ರವೃತ್ತಿ+ಅರ್ಥಪ್ರವೃತ್ತಿ+ಧರ್ಮಪ್ರವೃತ್ತಿ ಮೂರೂ ಬೆರೆತಿದ್ದರೆ ಒಬ್ಬ ಕ್ಷತ್ರಿಯನಾಗಿಯೂ, ಕಾಮ+ಅರ್ಥ+ಧರ್ಮ+ಮೋಕ್ಷ ಪ್ರವೃತ್ತಿಗಳು ನಾಲಕ್ಕೂ ಸಹ ಬೆರೆತ್ತಿದ್ದರೇ “ಬ್ರಾಹ್ಮಣ”ನಾಗಿಯೂ ಜನ್ಮಗಳನ್ನು ಪಡೆಯುತ್ತಾ .. ನಾಲ್ಕು ರೀತಿಯಲ್ಲಿಯೂ ವ್ಯವಹಾರವನ್ನು ನಡೆಸುತ್ತಿರುತ್ತೇವೆ!

ಅಂತಿಮ ಸ್ಥಿತಿಯಾದ ಬ್ರಾಹ್ಮಣವರ್ಣದಲ್ಲಿ .. ಮೋಕ್ಷಸ್ಥಿತಿಯಲ್ಲಿ .. ನಿರ್ಗುಣ ಸ್ಥಿತಿಯಲ್ಲಿ ಸದಾ ಇರಬಲ್ಲವರಾದರೇ ಇನ್ನು ಪುನಃ ಮಾನವ ಜನ್ಮದಲ್ಲಿ ಜನಿಸಬೇಕಾದ ಅವಶ್ಯಕತೆ ಬರುವುದಿಲ್ಲ. ಅಲ್ಲಿಂದ ಮೇಲಿನ ಲೋಕಗಳಾದ ದೇವಲೋಕಗಳಿಗೆ ಹೋಗುತ್ತೇವೆ.

ನಾವು ಯಾವಾಗ “ಬ್ರಹ್ಮಜ್ಞಾನಾತಿ ಇತಿ ಬ್ರಾಹ್ಮಣಃ” ಎನ್ನುವ ಸ್ಥಿತಿಯಲ್ಲೇ ಇದ್ದು .. ನಾನು ದೇಹವೇ ಎನ್ನುವ ಸ್ಥಿತಿಯಿಂದ “ಅಹಂ ಬ್ರಹ್ಮಾಸ್ಮಿ “.. ಅಂದರೆ “ನಾನೇ ಎಲ್ಲದರ ಸೃಷ್ಟಿಕರ್ತ, ಸೃಷ್ಟಿ ಎಲ್ಲಾ ನಾನೇ” .. ಎನ್ನುವ ಸ್ಥಿತಿಗೆ ತಲುಪಿದ ಒಬ್ಬ ರಾಮನು, ಒಬ್ಬ ಕೃಷ್ಣನು, ಒಬ್ಬ ಬುದ್ಧನು, ಒಬ್ಬ ಮಹಾವೀರನು, ಒಬ್ಬ ಜೀಸಸ್, ಒಬ್ಬ ಮಹಮ್ಮದ್ ಪ್ರವಕ್ತ ಅವರಂತೆ, ಯಾವಾಗ ನಾವೂ ಸಹ ಬ್ರಾಹ್ಮಣೋತ್ತಮರಾಗಿ ಬೆಳೆಯುತ್ತೇವೆಯೋ ಆಗ ನಿರ್ಗುಣಸ್ಥಿತಿಗೆ ಅಥವ ಜನ್ಮರಾಹಿತ್ಯಸ್ಥಿತಿಗೆ ತಲುಪುತ್ತೇವೆ .. ಪೂರ್ಣಜ್ಞಾನದಿಂದ..

ಜೀವಾತ್ಮಗಳು, ಮೂಲಪುರುಷಾಂಶಗಳು ಪ್ರಾರಂಭದಲ್ಲಿ ತಾಮಸ ಪ್ರವೃತ್ತಿಯಿಂದ ಕೂಡಿದ ಶೂದ್ರವರ್ಣದಲ್ಲಿ ಜನ್ಮ ತಾಳಿದಾಗ “ಅಹಂ ದೇಹೋಸ್ಮಿ” ಎನ್ನುತ್ತಾ “ನಾನು ದೇಹವೇ” .. “ನಾನು ಈ ಶರೀರವೇ. ಇದಕ್ಕಿಂತಾ ಇನ್ನೇನೂ ಇಲ್ಲ”. ಎಂದುಕೊಳ್ಳುತ್ತಾರೆ. ಅವರಿಗೆ ಕಾಮಬೇಕು. “ಇನ್ನೂ ಚೆನ್ನಾಗಿ ತಿನ್ನಬೇಕು, ಇನ್ನೂ ಚೆನ್ನಾಗಿ ಮಲಗಬೇಕು ” ಎಂದುಕೊಳ್ಳುತ್ತಾ ಭೌತಿಕಪರವಾದ ಸುಖಗಳಿಗಾಗಿಯೇ ಜನ್ಮವನ್ನೆಲ್ಲಾ ಉಪಯೋಗಿಸುತ್ತಾರೆ. ಇದು ಆತ್ಮದ “ಶೈಶವಾತ್ಮ ಸ್ಥಿತಿ”.

ಇಂತಹ ಶೈಶವಾತ್ಮ ಸ್ಥಿತಿಯಿಂದ “ನಾನು ಒಂದು ದೇಹವಷ್ಟೇ ಅಲ್ಲ; ಒಂದು ಮನಸ್ಸು ಸಹ ಎಂದು ತಿಳಿದುಕೊಳ್ಳುತ್ತಾ ಒಂದು ಜನ್ಮದಲ್ಲಿ ಒಂದು ಮೆಟ್ಟಿಲು ಹತ್ತುತ್ತಾ ಕ್ರಮೇಣಾ ವೈಶ್ಯವರ್ಗದಲ್ಲಿ ಆತ್ಮ ಜನ್ಮ ಪಡೆಯುತ್ತದೆ. ಹೀಗೆ ಮನಸ್ಸನ್ನು ಉಪಯೋಗಿಸುತ್ತಾ ನಿಧಾನವಾಗಿ “ಒಳ್ಳೆಯದು ಏನು? ಕೆಟ್ಟದ್ದು ಏನು?” ಎನ್ನುವ ಅನುಭವಗಳನ್ನು ಪಡೆಯುತ್ತಾ “ಬಾಲಾತ್ಮ ಹಂತಕ್ಕೆ ತಲಪುತ್ತದೆ. ಅಲ್ಲಿಂದ ನಿಧಾನವಾಗಿ “ಬುದ್ಧಿಯನ್ನು ಉಪಯೋಗಿಸಿ .. ಒಳ್ಳೆಯದು, ಕೆಡಕುಗಳ ಧರ್ಮನಿರ್ಧಾರಣೆ ಮಾಡಿಕೊಳ್ಳುತ್ತಾ ನಿಧಾನಕ್ಕೆ “ದೇಹ+ಮನಸ್ಸು+ಬುದ್ಧಿ” ಬೆರೆತು ಕೆಲಸಮಾಡುವ ಹಂತದಲ್ಲಿರುವ ಕ್ಷತ್ರಿಯವರ್ಗದಲ್ಲಿ ಜನ್ಮ ಪಡೆಯುತ್ತದೆ. ಇದೇ “ಯೌವನಾತ್ಮ”ದ ಹಂತ.

ಹೀಗೆ ಕ್ರಮೇಣಾ ಕೆಲವು ಜನ್ಮಗಳಲ್ಲಿ ಅನುಭವವನ್ನು ಪಡೆದ ಪುರುಷಾತ್ಮ “ನಾನು ದೇಹವಷ್ಟೇ ಅಲ್ಲ, ಮನಸ್ಸು+ಬುದ್ಧಿ+ಆತ್ಮ” ಎಂದು ಕೂಡಾ ಅರಿತುಕೊಂಡು “ನಾನು ಅಂತರ್ಜ್ಯೋತಿ .. ನಾನು ಬ್ರಹ್ಮನು”, “ಮಮಾತ್ಮಾ ಸರ್ವಭೂತಾತ್ಮ” ಎಂದು ತಿಳಿದುಕೊಂಡು ಆತ್ಮಕ್ಷೇತ್ರದಲ್ಲಿ ಪ್ರವೇಶಿಸುತ್ತದೆ. “ಬ್ರಹ್ಮಜ್ಞಾನಾತಿ ಇತಿ ಬ್ರಾಹ್ಮಣಃ” ಎಂದಂತೆ “ನಾನೊಬ್ಬ ಬ್ರಾಹ್ಮಣ” ಎಂದು ತಿಳಿದುಕೊಳ್ಳುತ್ತದೆ. ಅದೇ “ಪ್ರೌಢಾತ್ಮ”ದ ಹಂತ.

ಅಂದರೆ, 100% ಕಾಮಪ್ರವೃತ್ತಿಯಲ್ಲೇ ಇರುತ್ತಾ “ಅಹಂ ಕಾಮಾಸ್ಮಿ” ಎನ್ನುವ ಸ್ಥಿತಿಯಿಂದ ಕ್ರಮೇಣಾ “ಅಹಂ ಕಾಮಾಸ್ಮಿ+ಅರ್ಥಾಸ್ಮಿ” 50%+50% ಪ್ರಕಾರ ಇರುತ್ತಾ ಅನುಭವಗಳನ್ನು ಪಡೆಯುತ್ತಾ ಕ್ರಮೇಣಾ “ಅಹಂ ಕಾಮಾಸ್ಮಿ+ಅರ್ಥಾಸ್ಮಿ+ಧರ್ಮಾಸ್ಮಿ” ಎನ್ನುತ್ತಾ 25%+25%+50% ಪ್ರಕಾರ ಇರುತ್ತಾ ಅನುಭವಗಳನ್ನು ಪಡೆಯುತ್ತಾ “ಅಹಂ ಕಾಮಾಸ್ಮಿ+ಅರ್ಥಾಸ್ಮಿ+ಧರ್ಮಾಸ್ಮಿ+ಮೋಕ್ಷಾಸ್ಮಿ “ಎನ್ನುತ್ತಾ ಉಳಿದ ಎಲ್ಲಾ ಗುಣಗಳಿಗೂ ಅತೀತವಾಗಿ 100% ಮೋಕ್ಷ ಸ್ಥಿತಿಯಲ್ಲಿದ್ದು ನಿರ್ಗುಣವಾಗಿ ಬದಲಾಗುತ್ತಾರೆ.

ಕಾಮದಿಂದ ತಮೋಗುಣ .. ಅರ್ಥದಿಂದ ರಜೋಗುಣ .. ಧರ್ಮದಿಂದ ಸಾತ್ವಿಕಗುಣ .. ಮತ್ತು ಮೋಕ್ಷದಿಂದ ಶುದ್ಧಸಾತ್ವಿಕ ಗುಣ ಉದ್ಭವಿಸುತ್ತವೆ.

ಆದ್ದರಿಂದ, ಮನುಷ್ಯನ ವಿವಿಧ ಗುಣಗಳ ಅನುಸಾರವಾಗಿಯೇ ಅಂತರಂಗದ ‘ಜೀನೋಟೈಪು’ ಮತ್ತು ಬಹಿರಂಗದ ‘ಫೀನೋಟೈಪು’ ಏರ್ಪಟ್ಟು ಆ ಎರಡರಿಂದಲೇ ಆತನು ಮಾಡುವ ವಿವಿಧ ಕರ್ಮಗಳಿರುತ್ತವೆ. ಆದ್ದರಿಂದ, ಮನುಷ್ಯ ಪರಿಪೂರ್ಣವಾಗಿ ಪರಿಣಿತಿ ಹೊಂದಬೇಕಾದರೆ ಕಾಮ+ ಅರ್ಥ+ಧರ್ಮ+ಮೋಕ್ಷ ನಾಲ್ಕೂ ಬೇಕಾಗಿದೆ.

ಕೆಲವರು “ಕಾಮ ಇರಲೇಬಾರದು” ಎನ್ನುತ್ತಾರೆ. ಪ್ರತಿಯೊಬ್ಬ ವ್ಯಕ್ತಿಗೂ ಮಾತನಾಡುವ ಹಕ್ಕು ಇದೆ. ಆದರೆ, ಆಡುವ ಮಾತಿನಲ್ಲಿ ಹಿಡಿತ ಇರಬೇಕು. ತಿಳಿಯದೇ ಇರುವವರು ಮಾತನಾಡುತ್ತಾರೆ; ಸ್ವಲ್ಪ ತಿಳಿದವರೂ ಮಾತನಾಡುತ್ತಾರೆ; ಸಂಪೂರ್ಣವಾಗಿ ತಿಳಿದವರು ಕೂಡಾ ಮಾತನಾಡುತ್ತಾರೆ.

ಆದರೆ, ಒಬ್ಬ ಬುದ್ಧನು ಮಾತನಾಡಿದರೆ .. ಅದು ಸರಿಯಾಗಿರುತ್ತದೆ .. ಮತ್ತು ಕೇಳಿಸಿಕೊಳ್ಳಲು ಹಿತವಾಗಿ ಇರುತ್ತದೆ. ಅದು “ಸತ್ಯಯುತ”ವಾಗಿ ಮತ್ತು “ಸೃಷ್ಟಿಗತ”ವಾಗಿ ಇದ್ದು ಲೋಕಕಲ್ಯಾಣಕ್ಕೆ ಕಾರಣವಾಗುತ್ತದೆ. ಅದೇ ಏನೂ ತಿಳಿಯದವನು, ಅಥವಾ ತಿಳಿದೂ ತಿಳಿಯದವನು ಮಾತನಾಡಿದರೆ ಅದು ವ್ಯಕ್ತಿಗತವಾಗಿಯೇ ಇರುತ್ತದೆ. ಆದರೆ, ಸಮುಷ್ಟಿಗತವಾಗಿ ಮಾತ್ರ ಇರುವುದೇ ಇಲ್ಲ.

“ಮೋಕ್ಷವು ಬೇಕಾದರೇ ಕಾಮಕ್ಕೆ, ಅರ್ಥಕ್ಕೆ, ಧರ್ಮಕ್ಕೆ ದೂರವಾಗಿ ಸಂಸಾರವನ್ನು ತ್ಯಜಿಸಿ ಹಿಮಾಲಯಕ್ಕೆ ಹೋಗಬೇಕು ಎನ್ನುತ್ತಾ ಹೇಳುವವರೆಲ್ಲಾ ಸಹ ಏನೇನೂ ತಿಳಿಯದವರು. ಯಾವ ಸ್ಥಿತಿಯಲ್ಲಿ ಜನ್ಮತಾಳಿದೆವೋ ಆ ಸಹಜಸ್ಥಿತಿಯನ್ನು “ಪ್ರಕೃತಿ” ಎಂದು ಮತ್ತು ಆ ಸ್ಥಿತಿಯನ್ನು ಕಡೆಗಣಿಸುವ ಅಸಹಜಸ್ಥಿತಿಯನ್ನು “ವಿಕೃತಿ” ಎಂದು ಅನ್ನುತ್ತೇವೆ. ಹೀಗೆ ಪ್ರಕೃತಿಗೆ ಯಾರು ಎದುರಿಸುತ್ತಾ ಮತ್ತು ವಿಪರೀತ ವ್ಯಾಖ್ಯಾನಗಳು ಮಾಡುತ್ತಾ ವಿಕೃತದಲ್ಲಿ ಇರುತ್ತಾರೋ ಅವರಿಗೆ ಪ್ರಗತಿ ಇರುವುದೇ ಇಲ್ಲ.

* * *

“ಕಾಮ” ಎನ್ನುವ ಅನಿವಾರ್ಯ ಪುರುಷಾರ್ಥವನ್ನು ಪ್ರಕೃತಿಪರವಾಗಿ ಅನುಭವಿಸುತ್ತಾ .. ಸುಖವಾಗಿರುತ್ತಾ ಕ್ರಮೇಣಾ ಆತ್ಮಪ್ರಗತಿಪಥದಲ್ಲಿ ಮುನ್ನಡೆಯುತ್ತಾ ‘ಮನಸ್ಸುಸ್ಥಿತಿ’ ಒಳಗೆ ಪ್ರವೇಶಿಸುತ್ತಾ ‘ಅರ್ಥ’ ಎನ್ನುವ ಇನ್ನೊಂದು ಅನಿವಾರ್ಯ ಪುರುಷಾರ್ಥವನ್ನು ತಪ್ಪದೇ ಸೇರುತ್ತೇವೆ.

ಅಲ್ಲಿ ಕಾಮಪ್ರವೃತ್ತಿ ಕ್ರಮೇಣಾ ಕುಗ್ಗುತ್ತಾ ವೈಶ್ಯಸ್ಥಿತಿಯಲ್ಲಿ ಇರುವ ಮಾನಸಿಕ ಬಯಕೆಗಳು .. ಅಂದರೆ .. “ಇತರರ ಮೇಲೆ ಆಧಿಪತ್ಯ ನಡೆಸಬೇಕು; ಕಾಪೊರೇಟರ್ ಆಗಬೇಕು; MLA ಆಗಬೇಕು” ಎನ್ನುವ ಮಾನಸಿಕ ಪರವಾದ ಬಯಕೆಗಳು ಬರುತ್ತವೆ. ಅಂದರೆ, ಶರೀರದ ಮೇಲೆ ಗಮನ ಕಡಿಮೆಯಾಗಿ ಮನಸ್ಸಿನ ಮೇಲೆ ಗಮನ ಕೇಂದ್ರೀಕೃತವಾಗಿ ಕಾಮಪರವಾದ ಬಯಕೆಗಳೊಂದಿಗೆ ಮಾನಸಿಕ ಪರವಾದ ಬಯಕೆಗಳು 50%+50% ಹಾಗೆ ಇರುತ್ತವೆ. ಇದೇ “ಅರ್ಥಪರವಾದ ಪುರುಷಾರ್ಥ”

ಹೀಗೆ ಕೆಲವು ಜನ್ಮಗಳು ಕಳೆಯುತ್ತಾ .. ದೇಹ+ಮನಸ್ಸು+ಬುದ್ಧಿಯನ್ನುಕೂಡಾ ಉಪಯೋಗಿಸಿಕೊಳ್ಳುವ “ಧರ್ಮ” ಸ್ಥಿತಿಗೆ ಬರುತ್ತೇವೆ. ಇದುವರೆಗು ಇರುವ ದೇಹ+ಮನಸ್ಸು ಸ್ಥಿತಿಯಲ್ಲಿ “ಭೌತಿಕಪರವಾದ ಸೈನ್ಸ್” ಉಪಯೋಗವಾಗುತ್ತದೆ. ಇನ್ನು ಇಲ್ಲಿ ಇದರ ಅವಶ್ಯಕತೆ ಸ್ವಲ್ಪವೂ ಇರುವುದಿಲ್ಲ. ಅಲ್ಲಿ ಎಲ್ಲಾ “ಆದಿಭೌತಿಕ” ಮತ್ತು “ಆಧ್ಯಾತ್ಮಿಕತೆ” ಕೆಲಸಮಾಡುತ್ತದೆ. ಒಳ್ಳೆಯದು ಕೆಟ್ಟದ್ದು ವಿಚಕ್ಷಣೆಮಾಡುವ “ಬುದ್ಧಿ” ಪ್ರವೇಶಿಸಿ ಕ್ಷತ್ರಿಯತ್ವ .. ಅಂದರೆ, ಧರ್ಮವನ್ನು ಪ್ರತಿಬಿಂಬಿಸುವ ಪ್ರಜಾಕ್ಷೇಮಕ್ಕೆ ಸಂಬಂಧಿಸಿದ ಕೆಲಸಗಳು ಇಲ್ಲಿ ನಡೆಯುತ್ತಿರುತ್ತವೆ. ಕಾಮಪರವಾಗಿ, ಅರ್ಥಪರವಾಗಿ 25%+25% ಪ್ರಕಾರ ಇರುತ್ತಾ ಕೂಡ ಧರ್ಮಪರವಾಗಿ 50% ಜೀವನ ನಡೆಸುತ್ತಾ ಕ್ರಮೇಣಾ ಆತ್ಮದ ಪ್ರಗತಿಪಥದಲ್ಲಿ ಇನ್ನೂ ಮುನ್ನಡೆಯುತ್ತೇವೆ.

ಹಾಗೆಯೇ ಕೆಲವು ಜನ್ಮಗಳು ಕಳೆದುಬಿಟ್ಟರೆ “ದೇಹ+ಮನಸ್ಸು+ಬುದ್ಧಿ”ಯನ್ನು ಉಪಯೋಗಿಸಿ ಕಾಮಪರವಾಗಿ, ಅರ್ಥಪರವಾಗಿ ಮತ್ತು ಧರ್ಮಪರವಾಗಿ ಕೆಲಸಗಳನ್ನು ಮಾಡುತ್ತಾ “ಅಹಂ ಬ್ರಹ್ಮಾಸ್ಮಿ” ಎನ್ನುವ ನಿಜಪ್ರಕೃತಿಯನ್ನು ಅರಿವಿಗೆ ತಂದುಕೊಳ್ಳುತ್ತಾ .. ಅಲ್ಲಿಂದ ಸಾಕ್ಷೀತತ್ವ ಪ್ರಾರಂಭವಾಗಿ .. “ಆಯಾಮಾತ್ಮಾ ಬ್ರಹ್ಮ” ಎಂದು ನಿಜವಾದ ವಿರಾಟಸ್ವರೂಪವನ್ನು ನೆನಪಿಗೆ ತಂದುಕೊಂಡು ಆ ಮೂಲಚೈತನ್ಯದ ಬಳಿ ತಲಪುತ್ತೇವೆ. ಇಲ್ಲೇ ಎಲ್ಲರಿಗೂ ವಿಸ್ತಾರವಾಗಿ “ಧ್ಯಾನ” ಬೇಕು .. ಮೆಡಿಟೇಷನ್ಬೇಕು; “ಸ್ವಾಧ್ಯಾಯ” ಬೇಕು ಮತ್ತು “ಸಜ್ಜನಸಾಂಗತ್ಯ” ಬೇಕು.

ಶ್ರೀಕೃಷ್ಣನ ಜೀವನವನ್ನು ನೋಡಿ. ಆತ ತನ್ನ ಕಾಮವನ್ನು ತಾನು ನೋಡಿಕೊಂಡಿದ್ದಾನೆ; ಹಾಯಾಗಿ ಅಷ್ಟಪತ್ನಿಯರ ಜೊತೆ ಸುಖಿಸಿದ್ದಾನೆ. ತನ್ನ ಅರ್ಥವನ್ನು ತಾನು ಅನುಸರಿಸಿದನು. ಬಹಳ ಸಂಪತ್ತನ್ನು ಕೂಡಿಹಾಕಿಕೊಂಡನು, ಚೆನ್ನಾಗಿ ರಾಜನಾಗಿ ರಾಜ್ಯವನ್ನು ಆಳಿದನು. ತನ್ನ ಧರ್ಮವನ್ನು ತಾನು ಪಾಲಿಸಿದನು; ಹೇಳಬೇಕಾದವರಿಗೆ ಹೇಳಬೇಕಾದ್ದನ್ನೆಲ್ಲಾ ಭಗವದ್ಗೀತೆಯ ಮೂಲಕ ಬೋಧಿಸಿ ಜಗದ್ಗುರುನಾದನು. ಹುಟ್ಟಿದಾಗಿನಿಂದಲೂ ಕೂಡ ಸದಾ ಮೋಕ್ಷಸ್ಥಿತಿಯಲ್ಲಿರುತ್ತಾ ಭಗವಂತನಾಗಿ ನಮ್ಮೆಲ್ಲರಿಗೂ ಮಹಾ ಆದರ್ಶಪುರುಷನಾದನು.

ಹೀಗೆ ಚತುರ್ವಿಧ ಪುರುಷಾರ್ಥಗಳನ್ನು ಸರಿಸಮವಾಗಿ ಆಚರಿಸುವವನನ್ನೇ “ಪುರುಷೋತ್ತಮ” ಎನ್ನುತ್ತೇವೆ..