ಆತ್ಮಸಾಕ್ಷಾತ್ಕಾರದಅಲೆಗಳಂಥಪರಿಣಾಮ

“ಒಬ್ಬ ವ್ಯಕ್ತಿಯು ತನ್ನ ಪರಿಶ್ರಮದಿಂದ ಪಡೆದ ಆತ್ಮಸಾಕ್ಷಾತ್ಕಾರದ ಸಹಾಯದಿಂದ ಇತರರು ತಮ್ಮ ಆತ್ಮಸಾಕ್ಷಾತ್ಕಾರವನ್ನು ಸುಲಭವಾಗಿ ಪಡೆಯಬಹುದು”.

ಸುಮಾರು ಮೂವತ್ತು ವರ್ಷಗಳ ಹಿಂದೆ ಒಬ್ಬ ವ್ಯಕ್ತಿಯು ಆತ್ಮಸಾಕ್ಷಾತ್ಕಾರವನ್ನು ಪಡೆದನು ಮತ್ತು ಆ ಕೂಡಲೇ ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟೀಸ್ ಮೂವ್‌ಮೆಂಟ್- (ಪಿಎಸ್‌ಎಸ್‌ಎಂ) ಆರಂಭಗೊಂಡಿತು.

ಒಬ್ಬ ವ್ಯಕ್ತಿಯು ಆತ್ಮಸಾಕ್ಷಾತ್ಕಾರ ಪಡೆದಾಗ, ಒಂದು ಹೊಸ ಆಂದೋಲನವು ಇಡಿಯಾಗಿ ಪ್ರಾರಂಭಗೊಳ್ಳುತ್ತದೆ:

ಮಹಾವೀರರು ಆತ್ಮಸಾಕ್ಷಾತ್ಕಾರವನ್ನು ಪಡೆದಾಗ, ಒಂದು ಆಂದೋಲನವು ಆರಂಭಗೊಂಡಿತು.

ಬುದ್ಧನಿಗೆ ಆತ್ಮಸಾಕ್ಷಾತ್ಕಾರವಾದಾಗ, ಒಂದು ಆಂದೋಲನವು ಆರಂಭಗೊಂಡಿತು.

ಆದಿಶಂಕರಾಚಾರ್ಯರು ಆತ್ಮಸಾಕ್ಷಾತ್ಕಾರವನ್ನು ಪಡೆದಾಗ, ಒಂದು ಆಂದೋಲನವು ಆರಂಭಗೊಂಡಿತು.

ಮಹಮ್ಮದರು ಆತ್ಮಸಾಕ್ಷಾತ್ಕಾರವನ್ನು ಪಡೆದಾಗ, ಒಂದು ಆಂದೋಲನವು ಆರಂಭಗೊಂಡಿತು.

ಹಾಗೆ, ಒಬ್ಬ ವ್ಯಕ್ತಿಯು ಆತ್ಮಸಾಕ್ಷಾತ್ಕಾರವನ್ನು ಪಡೆದ ಕಾರಣದಿಂದಲೇ ಈ ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟೀಸ್ ಮೂವ್‌ಮೆಂಟ್ ಎಂಬ ಆಂದೋಲನವೂ ಸಹ ಆರಂಭವಾಯಿತು. ಆ ವ್ಯಕ್ತಿಯೇ ಈ ಲೇಖನವನ್ನು ಬರೆಯುತ್ತಿರುವುದು.

* * *

ಹೊಸಯುಗದ ಆಧ್ಯಾತ್ಮಿಕತೆಯು ಮರುಹುಟ್ಟು ಪಡೆದು, ಪ್ರಸ್ತುತ, ವಿಶ್ವಾದ್ಯಂತ ಪ್ರಚಲಿತದಲ್ಲಿದೆ. ಈ ಹೊಸ ಯುಗದ ಆಧ್ಯಾತ್ಮಿಕತೆಯಲ್ಲಿ ಪಿಎಸ್‌ಎಸ್ ಆಂದೋಲನವು ಒಂದು ಅತ್ಯಂತ ಪ್ರಮುಖವಾದ ಭಾಗವಾಗಿದೆ. ಪಿಎಸ್‌ಎಸ್ ಆಂದೋಲನವು ವಿಶ್ವದಲ್ಲಿ ಅತ್ಯಂತ ವೇಗವಾಗಿ ಪಸರಿಸುತ್ತಿದೆ.

* * *

ಒಂದು ಕೊಳಕ್ಕೆ ನೀವು ಒಂದು ಕಲ್ಲನ್ನು ಹಾಕಿದಾಗ ಅಲೆಗಳು ಏಳಲಾರಂಭಿಸಿ, ಹೇಗೆ ಕೊಳದಲ್ಲೆಲ್ಲಾ ಹರಡುತ್ತವೆಯೋ, ಹಾಗೆಯೇ, ಸಾಮಾನ್ಯವಾಗಿ, ಒಬ್ಬ ವ್ಯಕ್ತಿಯು ಆತ್ಮಸಾಕ್ಷಾತ್ಕಾರ ಪಡೆದಾಗ, ಆತನ/ಆಕೆಯ ಸುತ್ತಾ ಒಂದು ಹೊಸ ಆಂದೋಲನವು ಇಡಿಯಾಗಿ ಆರಂಭಗೊಳ್ಳುತ್ತದೆ.

ಆತ್ಮಸಾಕ್ಷಾತ್ಕಾರಕ್ಕೂ ಮುನ್ನ, ಸತ್ಯಕ್ಕಾಗಿ ಅಲ್ಲೊಂದು ನಿರಂತರವಾದ ಹುಡುಕಾಟವು ಇದ್ದೇ ಇರುತ್ತದೆ.

ಸತ್ಯಕ್ಕಾಗಿ ನಡೆಸಿದ್ದ ಆ ನಿರಂತರ ಹುಡುಕಾಟವು ಕೊನೆಗೊಂಡು, ವೈಯಕ್ತಿಕವಾಗಿ ಸತ್ಯದರ್ಶನವಾಗುವುದನ್ನೇ ಆತ್ಮಸಾಕ್ಷಾತ್ಕಾರಎನ್ನಲಾಗಿದೆ.

ಸತ್ಯಕ್ಕಾಗಿ ಮೊದಲೇ ಹುಡುಕಾಟವು ಆರಂಭಗೊಂಡಿಲ್ಲ ಎಂದಾದರೆ ಆತ್ಕಸಾಕ್ಷಾತ್ಕಾರವೂ ಸಹ ಇಲ್ಲವೆಂದೇ ಅರ್ಥ.

* * *

ಸದಾ ಬಂದುಹೋಗುವ, ಪ್ರಾಪಂಚಿಕವಾದ – ವಸ್ತುಗಳು ಪದಾರ್ಥಗಳು, ಪ್ರಾಪಂಚಿಕ ಅನುಭವಗಳು, ಪ್ರಾಪಂಚಿಕ ಸ್ಥಿತಿಗಳು, ಪ್ರಾಪಂಚಿಕವಾದ ಹೆಸರು, ಕೀರ್ತಿಗಳು, ಪ್ರಾಪಂಚಿಕ ಯಶಸ್ಸು ಮತ್ತು ಸಾಧನೆಗಳು ಇವುಗಳೆಲ್ಲವುಗಳಿಂದ ನಮಗೆ ತೃಪ್ತಿ ಉಂಟಾಗುತ್ತಿಲ್ಲ ಎಂದಾಗಲೇ…. ಇವುಗಳೆಲ್ಲವೂ ನಮ್ಮಲ್ಲಿ ಒಂದು ಆಂತರಿಕವಾದ ತೃಪ್ತಿಯನ್ನು ತಂದುಕೊಡುತ್ತಿಲ್ಲ ಎಂದಾಗಲೇ ನಿಜವಾದ ಸತ್ಯದ ಹುಡುಕಾಟವು ತಕ್ಷಣದಿಂದಲೇ ಆರಂಭಗೊಳ್ಳುತ್ತದೆ.

ತೃಪ್ತಿ ಎಂಬುದು ಇವೆಲ್ಲವನ್ನೂ ಬಿಟ್ಟು ಬೇರೆಲ್ಲೋ ಇದೆ… ಬೇರೆ ಯಾವುದರಲ್ಲಿಯೋ ಇದೆ ಎಂಬುದನ್ನು ನಾವು ನಿಜಕ್ಕೂ ಅರ್ಥಮಾಡಿಕೊಳ್ಳುತ್ತೇವೆ.

ಆಗಲೇ, ಇದಕ್ಕೂ ಮೊದಲು ಆತ್ಮಸಾಕ್ಷಾತ್ಕಾರ ಪಡೆದ ಬೇರೆ ಬೇರೆ ಮಾಸ್ಟರ್‌ಗಳ ಚರಿತ್ರೆಗಳ ಪುಟಗಳನ್ನು ನಾವು, ತಿರುವಿಹಾಕಲು ಆರಂಭಿಸುತ್ತೇವೆ. ಆಗಲೇ, ಕೆಲವು ವ್ಯಕ್ತಿಗಳು ಆತ್ಮಸಾಕ್ಷಾತ್ಕಾರವನ್ನು ಪಡೆದುಕೊಳ್ಳುತ್ತಾರೆ… ಅಂಥವರಿಂದ ಬೃಹತ್ ಆಂದೋಲನಗಳು ಮರಳಿ ಆರಂಭಗೊಳ್ಳುತ್ತವೆ.

ನಾವು, ಶ್ರೇಷ್ಠ ಮಾಸ್ಟರ್‌ಗಳ ಚರಿತ್ರೆಯನ್ನು ಮುಂದುವರೆದು ಅಧ್ಯಯನ ಮಾಡಿದಾಗ, ’ಸತ್ಯದರ್ಶನಕ್ಕಾಗಿ ಅವರೆಲ್ಲರೂ ತಪ್ಪದೇ ಏಕಾಂತಕ್ಕೆ ತೆರಳಿದ್ದರು, ಧ್ಯಾನದಲ್ಲಿ ನಿರತರಾಗಿದ್ದರು ಎಂಬುದು ತಿಳಿದುಬರುತ್ತದೆ. ಅಂದರೆ, ಅವರೆಲ್ಲರೂ ಅವರವರ ಆಂತರ್ಯದೊಳಕ್ಕೆ ತೆರಳಿದ್ದರು ಎಂಬುದು ಇತಿಹಾಸದಿಂದ ಸ್ಪಷ್ಟವಾಗಿ ತಿಳಿದುಬರುತ್ತದೆ. ಅಷ್ಟೇ ಅಲ್ಲದೆ, ಸತ್ಯದ ಅನುಭವಗಳನ್ನು ಅವರು ಹಾಗೆ ಪಡೆದುಕೊಂಡರು ಎಂಬುದು ಅರಿವಾಗುತ್ತದೆ.

ಆಂತರ್ಯದೊಳಗಿರುವ ಏನನ್ನಾದರೂ ಪಡೆದುಕೊಳ್ಳಬೇಕು ಎಂದು ನೀವು ಬಯಸಿದರೆ, ಮೊದಲಿನ ಶ್ರೇಷ್ಠ ಮಾಸ್ಟರ್‌ಗಳು, ಸಂತರು ಪವಾಡಪುರುಷರು ಇವರೆಲ್ಲರೂ, ಅವರವರ ಕಾಲದಲ್ಲಿ ಏನೆಲ್ಲವನ್ನೂ ಹೇಳಿದರು, ಏನೆಲ್ಲವನ್ನು ಹೊರಗೆಡವಿದರು ಎಂಬುದನ್ನು ನೀವು ಪರಿಶೀಲಿಸಬೇಕು ಮತ್ತು ಪರಾಮರ್ಶಿಸಬೇಕು.

ಹಾಗೆ ಪರಿಶೀಲಿಸಿದಾಗ, ನಮಗೆ ಏನು ದೊರೆತಿದೆಯೋ ಅದನ್ನು ಮೆಲುಕುಹಾಕಬೇಕೆಂದರೆ: “ಏನೆಲ್ಲಾ ಸಂಘರ್ಷವನ್ನು ಅವರೆಲ್ಲಾ ಎದುರಿಸಿದರು, ಅವುಗಳನ್ನೆಲ್ಲಾ ನೀವೂ ಸಹ ಎದುರಿಸಬೇಕಾಗಿದೆಯೇ?” ಎಂಬ ಪ್ರಶ್ನೆ ನಮಗೂ ಎದುರಾಗುತ್ತದೆ.

ಅಂಥದೇ ಬಿಕ್ಕಟ್ಟಿನಲ್ಲಿ ನಾವೂ ಸಹ ಸಿಕ್ಕಿಹಾಕಿಕೊಂಡಿಲ್ಲವೇ ಎಂಬುದು ಆಶ್ಚರ್ಯವನ್ನುಂಟುಮಾಡುತ್ತದೆ.

ಮತ್ತು, ಅಂಥದ್ದೇ ಏಕಾಂತದೊಳಗೆ, ಅಂಥದ್ದೇ ಧ್ಯಾನದೊಳಗೆ ಮತ್ತು ಅಂಥದ್ದೇ ಆಂತರಂಗದೊಳಗೆ ನಾವೂ ಸಹ ಹೋಗಬೇಕಾದ ಸಮಯವು ಬಂದಿದೆಯೇ ಎಂಬುದು ಆಶ್ಚರ್ಯಕರವಾದ ಪ್ರಶ್ನೆಯು ಉದ್ಭವಿಸುತ್ತದೆ.

ಸತ್ಯಕ್ಕಾಗಿ ಅಂಥ ಚಲನಾತ್ಮಕ ಹುಡುಕಾಟವು ಆರಂಭಗೊಳ್ಳುತ್ತದೆ. ಆಗ ಶುರುವಾಗುವ ಹೊಸ ಜೀವನವನ್ನೇ “ಆಧ್ಯಾತ್ಮಿಕತೆ” ಎಂದು ಕರೆಯಲಾಗುತ್ತದೆ.

* * *

ಯಾವುದೇ ವ್ಯಕ್ತಿಯ ವೈಯಕ್ತಿಕ ಬದುಕಿನಲ್ಲಿ, ಸತ್ಯಕ್ಕಾಗಿ ಹುಡುಕಾಟವು ಆರಂಭಗೊಂಡಾಗ… ಮತ್ತು ಆತ/ಆಕೆ ಅಂತರ್ಮುಖಿಯಾದಾಗ… ಆತ/ಆಕೆ ಒಬ್ಬಂಟಿಯಾಗಿ ಕೂತು ತನ್ನ ಮನಸ್ಸಿನಲ್ಲಿ ನಡೆಯುತ್ತಿರುವ ಎಲ್ಲವನ್ನೂ ಗಮನಿಸಲು ಮತ್ತು ಮನಸ್ಸನ್ನು ಖಾಲಿಮಾಡಿಕೊಳ್ಳಲು ಬಯಸುತ್ತಾನೆ/ತ್ತಾಳೆ.

ಮನಸ್ಸಿನಲ್ಲಿ ಸದಾ ಒಂದು “ದೊಡ್ಡ ಪ್ರಪಂಚ”ವು ಇರುತ್ತದೆ… ಮನಸ್ಸು ಎಂಬುದು ಒಂದು “ದೊಡ್ಡಪ್ರಪಂಚ.”

ಮನಸ್ಸಿನಲ್ಲಿರುವ… ಆ “ದೊಡ್ಡ ಪ್ರಪಂಚ”… ಅದನ್ನು ಖಾಲಿಮಾಡುವುದೇ “ಧ್ಯಾನ”.

* * *

ಕಾಲ ಮತ್ತು ದೇಶ (ಆಕಾಶ) ಇವುಗಳಿಗೆ ಇರುವ ಮಿತಿಯನ್ನು ಯಾವುದು ದಾಟುತ್ತದೆಯೋ ಅದೇ ಸತ್ಯ. ಯಾವುದು ಎಂದೆಂದಿಗೂ … ಎಲ್ಲ ಕಾಲಕ್ಕೂ… ಎಲ್ಲ ಸ್ಥಳಗಳಲ್ಲಿಯೂ… ಎಲ್ಲ ಪರಿಸ್ಥಿತಿಗಳಲ್ಲಿಯೂ ಸ್ಥಿರವಾಗಿರುತ್ತದೆಯೋ ಅದೇ ಸತ್ಯ.

ಆದ್ದರಿಂದ, ಎಲ್ಲ ಕಾಲಗಳಲ್ಲಿ… ನೀವು ಎಲ್ಲೇ ಇರಲಿ… ಸತ್ಯಕ್ಕಾಗಿ ಹುಡುಕಾಟವು ಸದಾ ಇದ್ದೇಇರುತ್ತದೆ. ಯಾವುದು ವಿಶ್ವಾತ್ಮಕ ಅನುಭವವೋ, ಯಾವುದು ವಿಶ್ವಾತ್ಮಕವಾಗಿ ಸಿಂಧುವೊ, ಅದೇ ಸತ್ಯ.

* * *

ಯಾವ ವ್ಯಕ್ತಿಯು ಆತ್ಮಸಾಕ್ಷಾತ್ಕಾರ ಪಡೆಯುತ್ತಾನೆಯೋ, ಆತನ ಸುತ್ತಮುತ್ತ ಇರುವ ಪ್ರತಿಯೊಂದೂ ಸಹ ಬದಲಾಗಬೇಕು… ಆ ವ್ಯಕ್ತಿಯ ಸುತ್ತಲಿನ ಪ್ರತಿಯೊಂದು ಘಟನೆಯೂ ಸಹ ಹೊಸ ದಿಕ್ಕುಗಳಲ್ಲಿ ಸಾಗಬೇಕು.

ಆತ್ಮಸಾಕ್ಷಾತ್ಕಾರ ಪಡೆದ ವ್ಯಕ್ತಿಯೊಡನೆ ವ್ಯವಹರಿಸುವ ಇತರೆ ಪ್ರತಿಯೊಬ್ಬ ವ್ಯಕ್ತಿಯೂ ಸಹ ಹೇಗಾದರೂ ಮಾರ್ಪಾಡಾಗುತ್ತಾನೆ. ಪರಿಣಾಮವು ಉಂಟಾಗಲೇಬೇಕು, ಅಲೆಗಳಂಥಹ ಪರಿಣಾಮ. ಆಗಲೇ, ಮತ್ತೊಂದು ಗಮನಾರ್ಹ ಘಟನೆ ಸಂಭವಿಸುತ್ತದೆ: ಆತ್ಮಸಾಕ್ಷಾತ್ಕಾರ ಪಡೆದ ಒಬ್ಬ ನಿರ್ದಿಷ್ಟವಾದ ವ್ಯಕ್ತಿಯ ಸಂಪರ್ಕಕ್ಕೆ ಬಂದ ಯಾರಿಗೇ ಆದರೂ ತಮ್ಮೆದುರಲ್ಲಿ ತೆರೆದುಕೊಂಡಿರುವ ಎರಡು ಮಾರ್ಗಗಳು ಇವೆ ಎಂಬುದು ಅನುಭವಕ್ಕೆ ಬರುತ್ತದೆ:

1) ಆತ್ಮಸಾಕ್ಷಾತ್ಕಾರ ಪಡೆದ ವ್ಯಕ್ತಿಯಂತೆ ತಾನೂ ಆಗುವುದು.

2) ತತ್ಕಾಲಕ್ಕೆ… ಸುಮ್ಮನಿದ್ದು… ಆತ್ಮಸಾಕ್ಷಾತ್ಕಾರ ಪಡೆದ ವ್ಯಕ್ತಿಯನ್ನು ಇನ್ನೂ ಹತ್ತಿರದಿಂದ ಗಮನಿಸುವುದು.

ನಿಮ್ಮ ಆಯ್ಕೆಯು ಮೊದಲನೆಯ ಮಾರ್ಗವಾಗಿದ್ದರೆ, ಆ ವ್ಯಕ್ತಿಯ ಆತ್ಮಸಾಕ್ಷಾತ್ಕಾರವು, ಸರಳ ಮತ್ತು ಸುಲಭದ ರೀತಿಯಲ್ಲಿ ಸುಸಾಧ್ಯವಾದ ಅನುಕೂಲಗಳನ್ನು ನಿಮಗೆ ಕಲ್ಪಿಸಿಕೊಡುತ್ತದೆ.

ತಾನು ಕಷ್ಟಪಟ್ಟು ಗಳಿಸಿದ, ಒಬ್ಬ ವ್ಯಕ್ತಿಯ ಆತ್ಮಸಾಕ್ಷಾತ್ಕಾರದ ಸಹಾಯದಿಂದ ಎಲ್ಲರೂ ಸಹ ಸುಲಭವಾಗಿ ಆತ್ಮಸಾಕ್ಷಾತ್ಕಾರವನ್ನು ಸಾಧಿಸಬಹುದು.

* * *

ಮೂವತ್ತು ವರ್ಷಗಳ ಹಿಂದೆ… 1979ರ ಕೊನೆಯಲ್ಲಿ… ನಾನು ಆತ್ಮಸಾಕ್ಷಾತ್ಕಾರವನ್ನು ಪಡೆದೆ! ತಕ್ಷಣದಲ್ಲಿಯೇ ನನ್ನ ಮನಸ್ಸಿನಲ್ಲಿನ ಪ್ರತಿಯೊಂದೂ ಸಹ ನಿಚ್ಛಳವಾಯಿತು.

ನನಗೆ ಈ ಕೆಳಕಂಡಂತೆ ಅನಿಸಿತು:

“ಭೂಮಿಗೆ ನಾನು ಯಾವ ಉದ್ದೇಶ ಸಾಧನೆಗಾಗಿ ಬಂದಿದ್ದೇನೆ ಎಂಬುದು; ನನ್ನ ಜೀವನದ ಉಳಿದ ಅವಧಿಯಲ್ಲಿ ನಾನೇನು ಮಾತನಾಡಲಿದ್ದೇನೆ ಎಂಬುದು; ಮತ್ತು ನಾನೇನು ಮಾಡಲಿದ್ದೇನೆ ಎಂಬುದು ನನಗೆ ಈಗ ತಿಳಿದಿದೆ.

ಇಡೀ ಪ್ರಪಂಚದ ಒಟ್ಟಾರೆ ಕಲ್ಯಾಣಕ್ಕಾಗಿ…. ಜನಸಾಮಾನ್ಯರಿಗೆ ಧ್ಯಾನಶಾಸ್ತ್ರವನ್ನು ಬೋಧಿಸುವ ಮೂಲಕ….. ಆತ್ಮಸಾಕ್ಷಾತ್ಕಾರ ಕುರಿತು ಪ್ರಚುರಪಡಿಸುವುದಕ್ಕೇ ನನ್ನ ಜೀವಮಾನದ ಉಳಿದ ಕಾಲಾವಧಿಯು ಮೀಸಲಾಗಿದೆ.

ಬಹುತೇಕ ತಕ್ಷಣದಲ್ಲಿಯೇ ಎಲ್ಲವೂ ಸಹ ಸ್ಪಷ್ಟವಾಗಿಹೋಯಿತು. ಮತ್ತು ನನ್ನ ಕಾರ್ಯಯೋಜನೆಯೂ ಸಹ ಸ್ಪಷ್ಟವಾಯಿತು.

ಈ ಪ್ರಪಂಚದಲ್ಲಿ ನಾನು ನನ್ನ ಕನಿಷ್ಠ ಕರ್ತವ್ಯವನ್ನು ನಿರ್ವಹಿಸಲೇಬೇಕು. ನನ್ನ ಕುಟುಂಬಜೀವನದಲ್ಲಿ ನಾನು ಇರಲೇಬೇಕು. ಆದರೆ, ನನ್ನ ಜೀವನದ ಮಹೋದ್ದೇಶವೇನೆಂದರೆ, ಆತ್ಮಸಾಕ್ಷಾತ್ಕಾರ ಕುರಿತು ವಿವರಿಸುವುದು, ಆತ್ಮಸಾಕ್ಷಾತ್ಕಾರ ಕುರಿತಾಗಿ ಪ್ರಚಾರನಡೆಸುವುದು, ಮತ್ತು ನನ್ನ ದಿನನಿತ್ಯ ಜೀವನದಲ್ಲಿ ನನ್ನನ್ನು ಭೇಟಿಯಾದವರಿಗೆಲ್ಲಾ ಹಾಗೂ ಪ್ರತಿಯೊಬ್ಬರಿಗೂ ಸಹ ಆತ್ಮಸಾಕ್ಷಾತ್ಕಾರ ಎಂಬುದನ್ನು ತೆರೆದಿಡುವುದು.

ನೀವು ಆತ್ಮಸಾಕ್ಷಾತ್ಕಾರ ಪಡೆದುಕೊಂಡರೆ ಏನಾಗುತ್ತದೆ?

ನೀವು ದುಃಖದಿಂದ ಹೊರಬರುತ್ತೀರಿ. ನಿಮ್ಮ ಸೋಮಾರಿತನದಿಂದ ನೀವು ಹೊರಬರುತ್ತೀರಿ. ನಿರಾಸೆ, ಅತೃಪ್ತಿ ಇವುಗಳಿಂದ ನೀವು ಹೊರಬರುತ್ತೀರಿ. ವೈಫಲ್ಯದ ಭಯದಿಂದ ನೀವು ಹೊರಬರುತ್ತೀರಿ.

ಮತ್ತು, ಪರಿಶುದ್ಧವಾದ ಆಧ್ಯಾತ್ಮಿಕತೆ ಕುರಿತ ಸಾಮಾನ್ಯ ಜ್ಞಾನವನ್ನು (ಸ್ಪಿರಿಚ್ಯುಯಲ್ ಕಾಮನ್‌ಸೆನ್ಸ್) ನೀವು ಪಡೆದುಕೊಳ್ಳುತ್ತೀರಿ… ಮತ್ತು ಆಗಲೇ, ಅದರೊಂದಿಗೆ, ಸ್ಪಟಿಕದಷ್ಟೇ ಸ್ಪಷ್ಟವಾದ ವೈಜ್ಞಾನಿಕವಾದ ಒಂದು ಸಾಮಾನ್ಯ ಜ್ಞಾನವನ್ನು (ಸೈಂಟಿಫಿಕ್ ಕಾಮಸೆನ್ಸ್) ಸಹ ಪಡೆದುಕೊಳ್ಳುತ್ತೀರಿ.

ಈಗ, ನೀವು ಆಡುವ ಪ್ರತಿಯೊಂದೂ ಪದವನ್ನು ಕುರಿತಾದ ವಾಸ್ತವವಾದ ಎಚ್ಚರಿಕೆಯನ್ನು ನೀವು ಹೊಂದಿರುತ್ತೀರಿ… ನಿಮ್ಮ ಪ್ರತಿಯೊಂದೂ ಮಾತು, ಪ್ರತಿಯೊಂದೂ ಕೃತಿ ಮತ್ತು ಪ್ರತಿಯೊಂದರ ಹಿಂದಿರುವ ನಿಮ್ಮ ಉದ್ದೇಶ – ಇವುಗಳೆಲ್ಲವುಗಳ ವಿಚಾರದಲ್ಲಿ ನೀವು ವಾಸ್ತವವಾಗಿ ಹೆಚ್ಚು ಎಚ್ಚರಿಕೆಯಿಂದ ಇರುತ್ತೀರಿ. ಇವೆಲ್ಲವುಗಳನ್ನು ನೀವು ಅತ್ಯಂತ ಚೆನ್ನಾಗಿ ಒಗ್ಗೂಡಿ ಸಾಗುವಂತೆ ಮಾಡಬಲ್ಲಿರಿ… ಮತ್ತು ಹೆಚ್ಚು ಗಮನವನ್ನು ಇವುಗಳಿಗೆ ನೀಡಬಲ್ಲವರಾಗುತ್ತೀರಿ.

ಈಗ, ನಿಮ್ಮ ಸುತ್ತಮುತ್ತ ನಡೆಯುತ್ತಿರುವ ಎಲ್ಲವುಗಳ ಕುರಿತು ನಿಮಗೆ ಅವಗಾಹನೆ, ಅರಿವು ಇರುತ್ತದೆ. ನಿಮ್ಮ ಸುತ್ತಮುತ್ತ ಸಂಭವಿಸುತ್ತಿರುವ ಯಾವುದೆಲ್ಲಾ ಘಟನೆಗಳ ಕುರಿತಾದ ಸೂಕ್ಷ ಮತ್ತು ಅತಿಸೂಕ್ಷ ವಾದ ಅಂಶಗಳು ನಿಮ್ಮ ಅರಿವಿಗೆ ಬರುತ್ತವೆ.

* * *

ಝೆನ್‌ನಲ್ಲಿ ಒಂದು ಹೇಳಿಕೆ ಇದೆ:

ಪರ್ವತಗಳು ಪರ್ವತಗಳೇ ಮತ್ತು ನದಿಗಳು ನದಿಗಳೇ ಆಗಿರುತ್ತವೆ. ಮತ್ತು ನಂತರದಲ್ಲಿ, ಪರ್ವತಗಳು ಪರ್ವತಗಳಲ್ಲ ಮತ್ತು ನದಿಗಳು ನದಿಗಳಾಗಿ ಇರುವುದಿಲ್ಲ. ನಂತರ, ಮತ್ತೆ, ಪರ್ವತಗಳು ಪರ್ವತಗಳೇ ಮತ್ತು ನದಿಗಳು ನದಿಗಳೇ ಆಗಿರುತ್ತವೆ.

ಇದೊಂದು ಅತ್ಯುತ್ತಮ ಝೆನ್ ಉಕ್ತಿಯಾಗಿದೆ.

ಆತ್ಮಸಾಕ್ಷಾತ್ಕಾರ ಪಡೆಯುವ ಮಾರ್ಗದಲ್ಲಿ, ಪರ್ವತಗಳು ಪರ್ವತಗಳಲ್ಲ ಮತ್ತು ನದಿಗಳು ನದಿಗಳಾಗಿ ಇರುವುದಿಲ್ಲ. ಅಂದರೆ, ಪ್ರಪಂಚವು ನಿಮಗೆ ಹೇಗೆ ಕಾಣಿಸುತ್ತದೆಯೋ ಹಾಗೆ ಅದು ಇರುವುದಿಲ್ಲ.

ಆತ್ಮಸಾಕ್ಷಾತ್ಕಾರವು ಪರಿಪೂರ್ಣವಾಗಿ ದೊರೆತಾಗ… ಮತ್ತು ಅಖಂಡವಾಗಿರುವ ಸತ್ಯವನ್ನು ನೀವು ಇಡಿಯಾಗಿ ಅನುಭವಿಸಿದಾಗ, ಮತ್ತೆ ಮೊದಲು ಇದ್ದ ಸ್ಥಾನಕ್ಕೇ ಮರಳುತ್ತೀರಿ. ಅಂದರೆ, ಹಾಗೆ ಮರಳಿ, ಈ ಪ್ರಪಂಚದಲ್ಲಿ ಸಂತೋಷವಾಗಿ ಬದುಕುತ್ತೀರಿ. ಆಗ, ಪರ್ವತಗಳು ಪರ್ವತಗಳೇ ಮತ್ತು ನದಿಗಳು ನದಿಗಳೇ ಆಗಿರುತ್ತವೆ… ವ್ಯಕ್ತಿಗಳು ವ್ಯಕ್ತಿಗಳಾಗಿಯೇ ಇರುತ್ತಾರೆ… ಘಟನೆಗಳು ಘಟನೆಗಳಾಗಿಯೇ ಇರುತ್ತವೆ… ವಸ್ತುಗಳು ವಸ್ತುಗಳಾಗಿಯೇ ಇರುತ್ತವೆ. ಎಲ್ಲಾ ಜನರು ಮತ್ತು ಎಲ್ಲಾ ಘಟನೆಗಳು, ಅವುಗಳಿಗೆ ಈ ಹಿಂದೆ ಇದ್ದಂತಹ, ಮೂಲ ಪ್ರಾಮುಖ್ಯತೆಯನ್ನೇ ಮತ್ತೆ ಪಡೆದುಕೊಳ್ಳುತ್ತವೆ.

ನೀವು ಅದೇ ವ್ಯಕ್ತಿಗಳೊಂದಿಗೆ, ಅವೇ ಅನುಭವಗಳೊಂದಿಗೆ ಮತ್ತು ಅವೇ ಘಟನೆಗಳೊಂದಿಗೆ ಬದುಕುತ್ತೀರಿ… ಆದರೆ, ಅತ್ಯಂತ ಹೆಚ್ಚು ಸಂತೋಷದಾಯಕವಾದ ಮನಸ್ಥಿತಿಯಲ್ಲಿ…. ಮತ್ತು ಹರ್ಷದಾಯಕವಾಗಿ ಹಾಗೂ ಜ್ಞಾನೋದಯಗೊಂಡ ಸ್ಥಿತಿಯಲ್ಲಿ ಬದುಕುತ್ತೀರಿ.

ನಿಮ್ಮ ಜೀವನದಲ್ಲಿ ಮೊದಲಬಾರಿಗೆ… ನೀವು ಆತ್ಮಸಾಕ್ಷಾತ್ಕಾರವನ್ನು ಪಡೆದುಕೊಂಡಾಗ…. ನೀವು ಒಂದು ಸಂತೋಷವಾದ, ಆನಂದವಾದ ಸ್ಥಿತಿಯನ್ನು ಹೊಂದುತ್ತೀರಿ… ಆದರೆ, ಅದು ಹೇಗಿರುತ್ತದೆಂದರೆ, ಖಚಿತವಾಗಿ ಸಂತೋಷವಾದುದಲ್ಲ ಎಂಬಂತಿರುತ್ತದೆ. ಅದು ಖಚಿತವಾಗಿ ಆನಂದದಾಯಕವಲ್ಲದ ಸ್ಥಿತಿ ಎಂಬಂತಿರುತ್ತದೆ. ಅದು ಸಂತೋಷ/ಅಸಂತೋಷದ ಸ್ಥಿತಿ, ಆನಂದ/ಆನಂದವಿಲ್ಲದ ಸ್ಥಿತಿ ಎಂಬಂಥ ಅಥವಾ ಆ ರೀತಿಯಾದ, ಒಂದು ವಿಧವಾದ ಸ್ಥಿತಿಯಾಗಿರುತ್ತದೆ.

ಅದು ಹಿಂದೆಯೂ ಚಲಿಸದ ಅಥವಾ ಮುಂದೆಯೂ ಚಲಿಸದ, ಯಾವಾಗಲೂ ತಟಸ್ಥಸ್ಥಿತಿಯಲ್ಲಿಯೇ ಇರುವಂಥ ಸ್ಥಿತಿಯಾಗಿರುತ್ತದೆ. ಈ ಸ್ಥಿತಿಯಲ್ಲಿ… ನೀವು ಮಾತನಾಡಿದಾಗ… ನೀವು ಆಲೋಚಿಸಿದಾಗ… ನೀವು ಕಾರ್ಯವೆಸಗಿದಾಗ… ಏನೆಲ್ಲವೂ ತೆರೆದುಕೊಳ್ಳುತ್ತದೆಯೋ…. ಏನೆಲ್ಲವೂ ಪ್ರದರ್ಶನಗೊಳ್ಳುತ್ತದೆಯೋ… ಅದೆಲ್ಲವೂ ಸಹ ದೋಷರಹಿತವಾದ ತಟಸ್ಥತೆ ಆಗಿರುತ್ತದೆ… ಅದು ಯಾವುದೇ ವ್ಯಕ್ತಿಯ ಅಥವಾ ಯಾವುದರ ಪರವೂ ಅಲ್ಲದ್ದು ಅಥವಾ ವಿರುದ್ಧವೂ ಅಲ್ಲದ್ದು.

* * *

ನಿಮಗೆ ಆತ್ಮಸಾಕ್ಷಾತ್ಕಾರವಾದಾಗ, ಏನಾಗುತ್ತದೆ ಎಂದರೆ… ಆಧ್ಯಾತ್ಮಿಕ ವಿಜ್ಞಾನದ ಪ್ರಮುಖ ಭಾಗವು ವೈಭವಯುತವಾಗಿ ತೆರೆದುಕೊಳ್ಳುತ್ತದೆ. ಮೊತ್ತಮೊದಲ ಬಾರಿಗೆ, ನೀವು ಆಧ್ಯಾತ್ಮಿಕ ವಿಜ್ಞಾನದ ಮುಖ್ಯಭಾಗದ (ಮಧ್ಯಭಾಗದ) ವಿವಿಧ ರೂಪುರೇಖೆಗಳನ್ನು ಮತ್ತು ಸೌಂದರ್ಯವನ್ನು ನೋಡಲಾರಂಭಿಸುತ್ತೀರಿ.

* * *

ನಿಮಗೆ ಆತ್ಮಸಾಕ್ಷಾತ್ಕಾರವಾದಾಗ, ಈ ಹೊಸ ಆಧ್ಯಾತ್ಮಿಕ ವಿಜ್ಞಾನದ ಮಧ್ಯಭಾಗದಿಂದ ಹೊರಹೊಮ್ಮುತ್ತಿರುವ ಎಲ್ಲವನ್ನೂ ಜನರಿಗೆ ಬೋಧಿಸಲು ಹೆಚ್ಚಿನ ತುಡಿತದಿಂದ ನೀವು ಉತ್ಸುಕರಾಗಿರುತ್ತೀರಿ!

* * *

ಈಗ ನೀವು ಸ್ಪಷ್ಟವಾದ ಗುರಿಯನ್ನು ಇಟ್ಟುಕೊಂಡು ಕಾರ್ಯನಿರ್ವಹಿಸುತ್ತೀರಿ.

ಆ ಗುರಿ ಏನೆಂದರೆ; ನಿಮ್ಮ ವ್ಯಾಪ್ತಿಗೆ, ಸಂಪರ್ಕಕ್ಕೆ ಬರುವ ಎಲ್ಲರಿಗೂ, ಪ್ರತಿಯೊಬ್ಬರಿಗೂ ಸಹ ಆಧ್ಯಾತ್ಮಿಕ ವಿಜ್ಞಾನವನ್ನು ಬೋಧಿಸುವುದೇ ನಿಮ್ಮ ಗುರಿಯಾಗಿರುತ್ತದೆ.

* * *

ಪ್ರಾಪಂಚಿಕ ವಿಜ್ಞಾನ ಶಿಕ್ಷಣವನ್ನು ಪಡೆದು ವಿದ್ಯಾವಂತರಾಗುವಾಗ… ನೀವು ಭೌತಶಾಸ್ತ್ರವನ್ನು ಅಧ್ಯಯನ ಮಾಡುತ್ತೀರಿ… ಬೆಳಕನ್ನು ಕುರಿತು… ನ್ಯೂಟನ್‌ನ ಚಲನೆಯ ನಿಯಮವನ್ನು ಕುರಿತು… ಇತ್ಯಾದಿ ಇತ್ಯಾದಿಗಳನ್ನು ಅಧ್ಯಯನ ಮಾಡುತ್ತೀರಿ. ಹೊರಗಿನ ಭೌತಿಕ ಪ್ರಪಂಚದಲ್ಲಿನ ಕಾರ್ಯ-ಕಾರಣ ಸಂಬಂಧವನ್ನು ನೀವು ಅರ್ಥಮಾಡಿಕೊಳ್ಳುತ್ತೀರಿ.

ಈಗ, ಅದೇ ರೀತಿಯಲ್ಲಿ, ನೀವು ಆತ್ಮಸಾಕ್ಷಾತ್ಕಾರವನ್ನು ಪಡೆದ ನಂತರ, ಮನುಕುಲದ ಎಲ್ಲ ಜೀವನಪರಿಸ್ಥಿತಿಗಳನ್ನು ಮತ್ತು ಜೀವನಘಟನೆಗಳನ್ನು ನಿಭಾಯಿಸುವ ಕರ್ಮದ ಕಾರಣಗಳನ್ನು ಕುರಿತು ಅರ್ಥಮಾಡಿಕೊಳ್ಳುತ್ತೀರಿ.

ಕಾರ್ಯ-ಕಾರಣ ಸಂಬಂಧವಿರುವ ಈ ಕರ್ಮದ ತತ್ವಗಳು ಗಣಿತಾತ್ಮಕವಾದ ನಿಯಮಗಳನ್ನೇ ಯಥಾವತ್ತಾಗಿ ಅನುಸರಿಸುತ್ತವೆ. ಶಾಪದಾಯಕವಾದುದು ಅಥವಾ ಆಕಸ್ಮಿಕವಾದುದು ಎಂಬುದು ಯಾವುದೂ ಸಹ ಇಲ್ಲ.

ಈಗ, ಆತ್ಮಸಾಕ್ಷಾತ್ಕಾರವನ್ನು ಪಡೆದ ನಂತರ, ಪ್ರತಿಯೊಂದೂ ಸಹ ಆಕಸ್ಮಿಕವಾದುದೇನಲ್ಲ ಎಂಬುದನ್ನು ನಾವು ತಿಳಿಯುತ್ತೇವೆ. ಎಲ್ಲವನ್ನೂ ಮೊದಲೇ ಎಚ್ಚರಿಕೆಯಿಂದ ಯೋಜಿಸಿ ಅನುಷ್ಠಾನಗೊಳಿಸಿರುವುದು ಎಂಬುದನ್ನು ನಾವು ಈಗ ತಿಳಿಯುತ್ತೇವೆ. ಆದರೆ, ಇದು ಹೊರಗಿನ ಇಂದ್ರಿಯಗಳಿಗೆ, ತಾನಾಗಿಯೇ, ಸ್ವಯಂ ಗೋಚರಿಸುವುದಿಲ್ಲ. ಅಷ್ಟೇ.

ನೀವು ನಿಮ್ಮದೇ ಆಂತರ್ಯದೊಳಗೆ ಸ್ವಲ್ಪ ಪ್ರವೇಶವನ್ನು ಮಾಡಿದರೆ, ಆಗ ವಿಜ್ಞಾನದ… ಆಧ್ಯಾತ್ಮಿಕ ವಿಜ್ಞಾನದ…. ಇಡೀ ವಿಹಂಗಮ ಅಸ್ತಿತ್ವವು ನಿಮಗೆ ಅರ್ಥವಾಗುತ್ತದೆ.

* * *

ಎಲ್ಲರಿಗೂ ಮತ್ತು ಪ್ರತಿಯೊಬ್ಬರಿಗೂ ಸಹ ಆಧ್ಯಾತ್ಮಿಕ ವಿಜ್ಞಾನವನ್ನು ಬೋಧಿಸುವುದು ಹಾಗೂ ಎಲ್ಲೆಡೆಯಲ್ಲಿಯೂ ಆಧ್ಯಾತ್ಮಿಕ ವಿಜ್ಞಾನವನ್ನು ಪಸರಿಸುವುದು ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟೀಸ್ ಆಂದೋಲನದ ಉದ್ದೇಶವಾಗಿದೆ.

ಆಧ್ಯಾತ್ಮಿಕ ವಿಜ್ಞಾನ ಎಂಬುದು; ಜೈನ ಮತವಲ್ಲ. ಬೌದ್ಧ ಧರ್ಮವಲ್ಲ. ಹಿಂದೂ ಧರ್ಮವೂ ಅಲ್ಲ. ಕ್ರಿಸ್ತ ಧರ್ಮವೂ ಅಲ್ಲ ಅಥವಾ ಇಸ್ಲಾಂ ಧರ್ಮವೂ ಸಹ ಅಲ್ಲ. ಆದಾಗ್ಯೂ, ಎಲ್ಲ ಧರ್ಮಗಳ ಸಾರ-ಸತ್ವವನ್ನು ಇದು ತನ್ನ ತೆಕ್ಕೆಯಲ್ಲಿ ಸೇರಿಸಿಕೊಂಡಿದೆ.

* * *

ಆ ಶ್ರೇಷ್ಠ ಧರ್ಮಗಳನ್ನು ಸಂಸ್ಥಾಪಿಸಿದವರು, ಆ ಕಾಲದಲ್ಲಿ ಮಾತನಾಡಿದಾಗ, ಶುದ್ಧ ಮತ್ತು ಖಚಿತವಾದ ಆಧ್ಯಾತ್ಮಿಕ ವಿಜ್ಞಾನವನ್ನೇ ಹೊರಗೆಡಹಿದರು. ಆದಾಗ್ಯೂ, ಕಾಲಾನಂತರ, ಸಾರ್ವಜನಿಕರ ಮನಸ್ಸಿನಲ್ಲಿ ಅವರ ಬೋಧನೆಗಳು ನಿಸ್ಸಾರಗೊಂಡವು ಮತ್ತು ಅವೆಲ್ಲವೂ ಸಹ ಬೇರೆ ಬೇರೆ ಧರ್ಮಗಳಾಗಿ ಹೋದವು.

ಈಗ, ಆ ನಿಸ್ಸಾರಗೊಂಡ ಪ್ರಕ್ರಿಯೆಯು ಒಂದು ಮರುತಿರುವನ್ನು (ಯು-ಟರ್ನ್) ಪಡೆದುಕೊಳ್ಳಬೇಕಾಗಿದೆ. ಆ ಎಲ್ಲಾ ಧರ್ಮಗಳ ಸಂಸ್ಥಾಪಕರು ಮೂಲತಃ ಪ್ರತಿಪಾದಿಸಿದ ಶುದ್ಧ ಮತ್ತು ಖಚಿತ ಆಧ್ಯಾತ್ಮಿಕ ವಿಜ್ಞಾನದ ಕಡೆಗೆ ಎಲ್ಲರೂ ಸಹ ಮರಳಿ ಬರಬೇಕಾಗಿದೆ.

ಎಲ್ಲೆಡೆಯಲ್ಲಿಯೂ ಇರುವ, ಹೊಸಯುಗದ ಆಧ್ಯಾತ್ಮಿಕತೆಗೆ ಸೇರಿದ ಮಾಸ್ಟರ್‌ಗಳು ಮಾಡುತ್ತಿರುವ ಹಾಗೆಯೇ, ಈ ಮಹಾ ಮರುತಿರುವನ್ನು ಪಡೆದುಕೊಳ್ಳಲು, ಪಿಎಸ್‌ಎಸ್ ಆಂದೋಲನದ ಮಾಸ್ಟರ್‌ಗಳು, ಎಲ್ಲ ಜನರಿಗೆ ಅನುಕೂಲಗಳನ್ನು ಕಲ್ಪಿಸಿಕೊಡುತ್ತಿದ್ದಾರೆ.

ನಿಮಗೆ ಆತ್ಮಸಾಕ್ಷಾತ್ಕಾರ ಉಂಟಾದಾಗ, ನೀವು ಪ್ರಾಣಿಗಳನ್ನು ಕೊಂದುತಿನ್ನುವುದನ್ನು ನಿಲ್ಲಿಸುತ್ತೀರಿ. ಪ್ರಾಣಿಗಳನ್ನು ಕೊಂದು ಅವುಗಳ ಚರ್ಮವನ್ನು ಸುಲಿಯುವುದು… ಮಾಂಸವನ್ನು ತಿನ್ನುವುದು… ಇವುಗಳು ಎಂಥ ಘೋರ ಅಪರಾಧ ಎಂಬುದು ನಿಮಗೆ ಆಗ ಅರಿವಾಗುತ್ತದೆ. ಅಲ್ಲದೆ, ನಿಮ್ಮ ಹಿಂದಿನ ಜನ್ಮಗಳಲ್ಲಿ… ನೀವು ಎಷ್ಟೊಂದು ಇಂತಹ ಅಪರಾಧ ಕೃತ್ಯಗಳನ್ನು ಎಸಗಿದ್ದೀರಿ ಎಂಬುದು ತಿಳಿದು ಆಶ್ಚರ್ಯಚಕಿತರಾಗುತ್ತೀರಿ.

ನಿಮಗೆ ಆತ್ಮಸಾಕ್ಷಾತ್ಕಾರವಾದಾಗ ನೀವು ಮಾಡುವ ಮೊದಲ ಕೆಲಸವೇನೆಂದರೆ, ಸಸ್ಯಾಹಾರಿಯಾಗಿ ಬದಲಾಗುವುದು. ಇದೇ ಆತ್ಮಸಾಕ್ಷಾತ್ಕಾರದ ಮೊತ್ತಮೊದಲನೆಯ ಫಲಿತಾಂಶ.

ಪ್ರಾಣಿಗಳ ಮಾಂಸವನ್ನು ಏಕೆ ತಿನ್ನಬಾರದು ಎಂಬುದು ಆತ್ಮಸಾಕ್ಷಾತ್ಕಾರಕ್ಕೂ ಮುನ್ನ ನಿಮಗೆ ತಿಳಿದಿರಲಿಲ್ಲ. ಮತ್ತು ಹಾಗಾಗಿ, ಆಗ ವಾದಗಳು ಮತ್ತು ಕೇವಲ ವಾದಗಳೇ ಇದ್ದವು. ಆದರೆ, ಯಾವಾಗ ನೀವು ಧ್ಯಾನಕ್ಕೆ ಕುಳಿತುಕೊಂಡು ಆತ್ಮಸಾಕ್ಷಾತ್ಕಾರವನ್ನು ಮಾಡಿಕೊಂಡಿರೋ, ಆಗ, ಪ್ರೇಮ (ಕಂಪ್ಯಾಷನ್) ಕುರಿತಾದ ಇಡೀ ವಿಷಯವು ನಿಮಗೆ ಅರ್ಥವಾಯಿತು.

ಸತ್ಯದ ಹುಡುಕಾಟಕ್ಕೆ ಹೊರಡದೆ, ಕೇವಲ ಇಂದ್ರಿಯ ಸುಖಗಳಲ್ಲಿ ಮಗ್ನವಾಗಿ ಇದ್ದು, ನೀವು ಕೆಳದರ್ಜೆಯ ವ್ಯಕ್ತಿಯಾಗಿ ಎಲ್ಲಿಯವರೆವಿಗೂ ಉಳಿದಿರುತ್ತೀರೋ ಅಲ್ಲಿಯವರೆವಿಗೆ…. ಪ್ರೇಮ ಎಂದರೇನು, ಸಹಾಯಮಾಡುವುದು ಎಂದರೇನು, ಮಧ್ಯೆಪ್ರವೇಶಿಸದೆ ಇರುವುದು ಎಂದರೇನು – ಎಂಬುವನ್ನು ನೀವು ಅರ್ಥಮಾಡಿಕೊಳ್ಳಲಾರಿರಿ…

ಆಧ್ಯಾತ್ಮಿಕ ವಿಜ್ಞಾನದ ಮುಖ್ಯವೇದಿಕೆಗೆ ಬರಲು ಮತ್ತು ಪ್ರಪಂಚದ ಆಧ್ಯಾತ್ಮಿಕ ವಿಜ್ಞಾನಿಗಳೆಲ್ಲರ ಪುಸ್ತಕಗಳನ್ನು ಓದಲು ಪಿ.ಎಸ್.ಎಸ್. ಆಂದೋಲನವು ಎಲ್ಲರನ್ನೂ ಆಹ್ವಾನಿಸುತ್ತಿದೆ.

ಪ್ರಪಂಚದಲ್ಲಿ ಆಧ್ಯಾತ್ಮಿಕ ವಿಜ್ಞಾನಿಗಳಾಗಿ ಯಾರೆಲ್ಲರೂ, ಎಷ್ಟೆಲ್ಲಾ ಸಂಖ್ಯೆಯಲ್ಲಿ ಇರಬಹುದು. ನೀವು ಮಾರುಕಟ್ಟೆಗೆ ಹೋಗಿ ಅಥವಾ ಇಂಟರ್‌ನೆಟ್‌ನಲ್ಲಿ ಹುಡುಕಿ, ನಿಮ್ಮ ಅಧ್ಯಯನಕ್ಕೆ ಅಗತ್ಯವಾದ, ಯೋಗ್ಯವಾದ ಎಲ್ಲಾ ಪರಿಕರಗಳು ನಿಮಗೆ ಅಲ್ಲಿ ದೊರೆಯುತ್ತವೆ.

’ಹಳೆಯ ಯುಗ’ವನ್ನು ಧರ್ಮಗಳು ಪ್ರತಿನಿಧಿಸಿದ್ದವು. ಆಧ್ಯಾತ್ಮಿಕ ವಿಜ್ಞಾನಿಗಳೇ ಈ ’ಹೊಸಯುಗ’ವನ್ನು ಪ್ರತಿನಿಧಿಸುವವರು!

ನಾವೆಲ್ಲರೂ, ಪ್ರಸ್ತುತ, ಆಧ್ಯಾತ್ಮಿಕ ವಿಜ್ಞಾನದ ’ಹೊಸ ಯುಗ’ದೊಳಗೆ ಧಾವಿಸುತ್ತಿದ್ದೇವೆ. ಧರ್ಮಗಳ ’ಹಳೆಯ ಯುಗ’ವು ವೇಗವಾಗಿ ಕ್ಷೀಣಿಸುತ್ತಿದೆ ಮತ್ತು ’ಹೊಸ ಯುಗ’ವು ಎದ್ದುಕಾಣುವಂತೆ ಹೊರಹೊಮ್ಮಿದೆ.

’ಧ್ಯಾನವನ್ನು ಅಭ್ಯಾಸ ಮಾಡುವುದು’ ಮತ್ತು ’ಸಸ್ಯಾಹಾರೀ ಜೀವನ ಕ್ರಮವನ್ನು ಅಳವಡಿಸಿಕೊಳ್ಳುವುದು’ – ಇವೇ ಈ ಹೊಸ ಯುಗದ ಆಧ್ಯಾತ್ಮಿಕ ವಿಜ್ಞಾನದ ಪ್ರಮುಖ ತತ್ವಗಳು.

-ಬ್ರಹ್ಮರ್ಷಿ ಪತ್ರೀಜಿ