“ಅದ್ಭುತವಾದ ಆನಂದ ಸೂತ್ರ”

 

ಮನುಷ್ಯ ಸದಾ ಆನಂದವಾಗಿ ಜೀವಿಸಬೇಕು. ಆತನು ಒಬ್ಬ ಆನಂದವಾಹಿನಿ ಆಗಬೇಕು. ಅಲೆಗ್ಜಾಂಡರ್ ಪ್ರಪಂಚವನ್ನೆಲ್ಲಾ ಧ್ವಂಸ ಮಾಡಿ, ನಾನು ದೊಡ್ಡ ವಿಜಯವನ್ನು ಸಾಧಿಸಿದ್ದೇನೆ ಎಂದುಕೊಂಡು ತನ್ನ ಹಿಂದಿರುಗುವ ಪ್ರಯಾಣದಲ್ಲಿ ತನ್ನ ಸ್ವಂತ ದೇಶದ ಹತ್ತಿರವಾಗುತ್ತಿರುವ ಸಮಯದಲ್ಲಿ ಒಂದು ಕಡೆ ವಿಶ್ರಾಂತಿ ತೆಗೆದುಕೊಳ್ಳುತ್ತಿರುತ್ತಾನೆ. ವಿಶ್ರಾಂತಿ ತೆಗೆದುಕೊಳ್ಳುತ್ತಾ ಈ ಸುತ್ತಾಮುತ್ತಾ ನೋಡಲು ಸುಂದರವಾದ ಸ್ಥಳಗಳು ವಿಶೇಷಗಳೇನಾದರೂ ಇದೆಯಾ ? ಎಂದು ಕೇಳಿದಾಗ ಏನೂ ಇಲ್ಲ ಸ್ವಾಮಿ. ಆದರೆ, ಒಬ್ಬ ಮುದುಕ ಇದ್ದಾನೆ ‘ಡಯೋಜನೀಸ್’ ಎಂದು; ಮಹಾಯೋಗಿ ಅಂತೆ. ಅವರು ತುಂಬಾ ಖ್ಯಾತಿ ಇರುವವರು ಎಂದರು. ಆದರೆ, ಆತನನ್ನು ನನ್ನ ಹತ್ತಿರಕ್ಕೆ ಕರೆದುಕೊಂಡು ಬನ್ನಿ ನೋಡುತ್ತೇನೆ, ಮಾತನಾಡುತ್ತೇನೆ ಎಂದನು ಅಲೆಗ್ಜಾಂಡರ್. ಆತನು ನಿಮ್ಮ ಹತ್ತಿರ ಬರುವುದಿಲ್ಲ; ನೀವೇ ಅವರ ಹತ್ತಿರಕ್ಕೆ ಹೋಗಬೇಕು ಎಂದರು ಹೋಗಿದ್ದ ಬಂಟರು. ಆಗ ಅಲೆಗ್ಜಾಂಡರೇ ಆ ಡಯೊಜನೀಸ್ ಹತ್ತಿರಕ್ಕೆ, ಆ ವೃದ್ಧನ ಹತ್ತಿರಕ್ಕೆ ಹೋಗಿ ಡಯೋಜನೀಸ್, ಏನು ನಿನ್ನ ಪ್ರತ್ಯೇಕತೆ? ಎಂದು ಕೇಳಿದಾಗ ನಾನು ನಿನಗೆ ಉತ್ತರ ನೀಡುವುದಕ್ಕಿಂತಾ ಮುಂಚೆ ನಾನು ನಿನ್ನನ್ನು ಒಂದು ಪ್ರಶ್ನೆ ಕೇಳುತ್ತೇನೆ – ನೀನು ಈ ರಾಜ್ಯಗಳನ್ನೆಲ್ಲಾ ಏಕೆ ಕೊಳ್ಳೆ ಹೊಡಿದಿದ್ದೀಯಾ?

ನಾನು ಈ ಸಿರಿ ಸಂಪತ್ತುಗಳಿಂದ, ಹೆಸರು ಪ್ರತಿಷ್ಠೆಗಳಿಂದ ಮನೆಗೆ ಹೋಗಿ ಹಾಯಾಗಿ ಜೀವಿಸುತ್ತೇನೆ ಎಂದು ಹೇಳುತ್ತಾನೆ.

ಅಲೆಗ್ಜಾಂಡರ್, ಅವೆಲ್ಲಾ ಏನೂ ಇಲ್ಲದೇನೆ ನಾನು ಬಾಲ್ಯದಿಂದಲೂ ಆನಂದವಾಗಿದ್ದೇನೆ ಎಂದು ಡಯೋಜನೀಸ್ ಹೇಳುತ್ತಾನೆ. ಆನಂದವಾಗಿ ಜೀವಿಸಲಿಕ್ಕಾಗಿಯೇ ನೀನು ಇವೆಲ್ಲಾ ಸಂಪಾದಿಸಿರುವೆ. ಇಷ್ಟು ಕಷ್ಟಪಟ್ಟಿರುವೆ. ಆದರೆ, ನಾನು ಚಿಕ್ಕಂದಿನಿಂದಲೇ ಆನಂದವಾಗಿ ಜೀವಿಸುತ್ತಿದ್ದೇನೆ. ಇದೇ ನನ್ನ ಪ್ರತ್ಯೇಕತೆ. ಎನ್ನುತ್ತಾನೆ ಡಯೋಜನೀಸ್.

ಹಾಗೆಯೇ, ಸುತ್ತಾಮುತ್ತಾ ಇರುವವರು ಅನೇಕರು ಡಯೋಜನೀಸ್ ಹತ್ತಿರಕ್ಕೆ ಹೋಗಿ ನಿಮಗೆ ಸದಾ ಆನಂದವಾಗಿ ಹೇಗೆ ಇರಲಾಗುತ್ತಿದೆ ? ಎಂದು ಪ್ರಶ್ನಿಸಿದರು. ಆಗ ಡಯೋಜನೀಸ್ ಹೀಗೆ ಹೇಳಿದ – ಬೆಳಗ್ಗೆ ಎದ್ದ ತಕ್ಷಣ ನಾನು ಒಂದು ನಿರ್ಣಯ ತೆಗೆದುಕೊಳ್ಳುತ್ತೇನೆ – ‘ಈ ದಿನ ನಾನು ಆನಂದವಾಗಿರುತ್ತೇನೆ, ಏನಾದರೂ ಸರಿ’ ಎಂದು ದೃಢವಾಗಿ ನಿಶ್ಚಯಿಸಿಕೊಳ್ಳುತ್ತೇನೆ. ಆದ್ದರಿಂದ, ಆ ದಿನವೆಲ್ಲಾ ಆನಂದವಾಗಿ ಇರಲಾಗುತ್ತಿದೆ. ಬಿಸಿಲಾದರೂ, ಮಳೆಯಾದರೂ, ಸಿರಿತನವಾದರೂ, ಬಡತನವಾದರೂ, ಊಟ ಸಿಕ್ಕಿದರೂ ಸಿಗದೇ ಇದ್ದರೂ – ಆನಂದವಾಗಿ ಇರುತ್ತೇನೆ. ಏಕೆಂದರೆ, ನಿರ್ಣಯ ತೆಗೆದುಕೊಂಡಿದ್ದೇನೆ ಅದರಿಂದ ಅದೇ ರೀತಿಯಲ್ಲಿ ಪ್ರತಿದಿನ ಬೆಳಗ್ಗೆ ನಿರ್ಣಯ ಮಾಡಿಕೊಳ್ಳುತ್ತೇನೆ. ಆದ್ದರಿಂದಲೇ ಸದಾ ಆನಂದವಾಗಿ ಇರಲಾಗುತ್ತಿದೆ ಎಂದು ಉತ್ತರ ನೀಡಿದರು.

ಇದು ಅದ್ಭುತವಾದ ಆನಂದ ಸೂತ್ರ. ಆದ್ದರಿಂದ, ಏನಾದರೂ ಒಂದು ನಿರ್ಣಯಿಸಿಕೊಂಡರೆ, ಅಂದರೆ ನಾನು ಸಂಗೀತ ಕಲಿಯಬೇಕು ಎಂದು ನಿರ್ಣಯ ತೆಗೆದುಕೊಂಡಾಗ ಸಂಗೀತ ಕಲಿಯಲಾಗುತ್ತದೆ. ಆ ನಿರ್ಣಯವಿಲ್ಲದಿದ್ದರೆ ಮಾಡುತ್ತೇವೋ, ಮಾಡಲಾಗುವುದಿಲ್ಲವೋ ಎಂದು ಯೋಚಿಸಿದರೆ ಸಂಗೀತವಾಗಲಿ, ಇನ್ನೊಂದಾಗಲಿ ಯಾವುದು ಎಂದಿಗೂ ಬರುವುದಿಲ್ಲ. ಬರುವುದೇ ಇಲ್ಲ.

ನಾನು ಎಂತಹ ಪರಿಸ್ಥಿತಿ ಬಂದರೂ ಆನಂದವಾಗಿರಬೇಕು ಎಂದು ನಿರ್ಣಯ ತೆಗೆದುಕೊಂಡರೆ ಸದಾ ಆನಂದವಾಗಿರಬಹುದು. ನಾವು ‘ನಿರ್ಣಯ ತೆಗೆದುಕೊಂಡಿದ್ದೇವೆ’ ಆದ್ದರಿಂದ ಆನಂದವಾಗಿರುತ್ತೇವೆ. ಅದೇ ಸೂತ್ರ. ನಿರ್ಣಯ ತೆಗೆದುಕೊಳ್ಳಬೇಕು – ನಾನು ಈ ದಿನ ಎಂತಹ ಪರಿಸ್ಥಿತಿಯಲ್ಲಾದರೂ ಆನಂದವಾಗಿರುತ್ತೇನೆ. ಎಂದುಕೊಳ್ಳಬೇಕು.

ಆನಂದ ಶಾಸ್ತ್ರ

ಯಾವ ಕೆಲಸ ಮಾಡುವುದರಿಂದ ನಾವು ಸದಾ ಆನಂದವಾಗಿರುತ್ತೇವೊ, ಅದೇ ಮಾಡಬೇಕು. ಆನಂದ ಶಾಸ್ತ್ರವನ್ನು ಕುರಿತು ತಿಳಿದವರಿಂದ ಕೇಳಿ ತಿಳಿದುಕೊಳ್ಳಬೇಕು. ಏನು ಮಾಡುವುದರಿಂದ ಆನಂದವಾಗಿರುತ್ತದೆಯೋ ಅದನ್ನು ತಿಳಿಸುವ ಶಾಸ್ತ್ರವನ್ನೇ ಓದಬೇಕು. ಗ್ರಂಥಗಳನ್ನು ಓದಬೇಕು. ಒಳ್ಳೆಯ ಸಜ್ಜನ ಸಾಂಗತ್ಯ ಮಾಡಬೇಕು. ಎಲ್ಲರಿಂದಲೂ ಎಲ್ಲಾ ತಿಳಿದುಕೊಳ್ಳುತ್ತಿರಬೇಕು.

ಏನು ಮಾಡುವುದರಿಂದ ‘ಸದಾ’ ಆನಂದವಾಗಿರುತ್ತೇವೊ ತಿಳಿದುಕೊಳ್ಳಬೇಕು. ಕೆಲವರು ಚಿಕ್ಕ ಚಿಕ್ಕ ಲಾಭಕ್ಕಾಗಿ ಸುಳ್ಳನ್ನು ಹೇಳುತ್ತಿರುತ್ತಾರೆ. ಆದರೆ, Honesty is the best policy ಎಂಬುವುದು ಗೊತ್ತೇ ಇಲ್ಲ. ಸದಾ ತ್ರಿಕರಣಶುದ್ಧಿಯಿಂದ ಇರುವುದೇ ಸರಿಯಾದ ‘ಆನಂದ ಸೂತ್ರ’ … ಹೇಳಿದ್ದೇ ಮಾಡಬೇಕು. ಮಾಡಿದ್ದೇ ಹೇಳಬೇಕು. ಯೋಚಿಸಿದ್ದನ್ನೇ ಹೇಳಬೇಕು. ತ್ರಿಕರಣಶುದ್ಧಿಯಿಂದ ಇರುವುದು ಎಂದರೆ ‘ಮನಸಾ, ವಾಚಾ, ಕರ್ಮಣಾ’ ಏಕವಾಗಿರುವುದು. ತ್ರಿಕರಣಶುದ್ಧಿ ಇಲ್ಲದವನಿಗೆ ಆನಂದ ಬಹುದೂರ. ತ್ರಿಕರಣಶುದ್ಧಿ ಇರುವವರಿಗೆ ಆನಂದ ಲಭ್ಯ. ಆದ್ದರಿಂದ, ನೀನು ಆನಂದವಾಗಿರಬೇಕಾದರೆ ತ್ರಿಕರಣಶುದ್ಧಿಯಿಂದಿರು. ನಿನಗೆ ತಿಳಿಯದ ವಿಷಯ ಮಾತನಾಡಬೇಡ, ತಿಳಿದಿದ್ದೇ ಮಾತನಾಡು. ಮಾತನಾಡಿದ್ದೇ ಆಚರಿಸು. ಆಚರಿಸಿದ್ದೇ ಮಾತನಾಡು. ಮನಸ್ಸಿನಲ್ಲಿ ಒಂದಿಟ್ಟುಕೊಂಡು, ಬಾಯಿಂದ ಇನ್ನೊಂದು ಮಾತನಾಡಬೇಡ. ಇವೆಲ್ಲಾ ಆನಂದ ಸೂತ್ರಗಳು.

ಯಾರು ನಿಜಾಯಿತಿಯಿಂದ ಇರುತ್ತಾರೋ, ತ್ರಿಕರಣಶುದ್ಧಿಯನ್ನು ಹೊಂದಿರುತ್ತಾರೋ ಅವರೇ ನಿತ್ಯ ಆನಂದಮಯರಾಗಿರುತ್ತಾರೆ. ಇದೇ ಆನಂದಸೂತ್ರ, ಆದ್ದರಿಂದ, ಇದೇ ಮಕ್ಕಳಿಗೆ ಹೇಳಿಕೂಡಬೇಕು. ಇದೇ ಹಿರಿಯರಿಗೂ ಹೇಳಬೇಕು. ಇದೇ ಬಂಧು – ಮಿತ್ರರಿಗೆ ಹೇಳಬೇಕು. ಇದೇ ಶತ್ರುಗಳಿಗೂ ಹೇಳಬೇಕು.

ಪ್ರತಿ ವಿದ್ಯೆಯನ್ನು ಎಲ್ಲರಿಗೂ ಹೇಳಿಕೊಡುತ್ತಿರಬೇಕು. ಎಲ್ಲರಿಗೂ ಹೇಳಿಕೊಡುತ್ತಿರುವಾಗ ಸಿಗುವ ಆನಂದ ಅಷ್ಟಿಷ್ಟಲ್ಲ. ನಾನು ಅನೇಕರಿಗೆ ಧ್ಯಾನ ಹೇಳಿಕೊಟ್ಟಿದ್ದೇನೆ. ಧ್ಯಾನ ಹೇಳಿಕೊಡುವುದರಲ್ಲಿರುವ ಆನಂದ ಎಷ್ಟು ಅಂತ ಅದು ನನಗೇ ಗೊತ್ತಿದೆ. ಧ್ಯಾನ ವಿದ್ಯೆಯನ್ನು ಹೇಳಿಕೊಡದವರಿಗೆ ಆ ಆನಂದದರುಚಿ ಗೊತ್ತಿಲ್ಲ. ಎಲ್ಲರೂ ಧ್ಯಾನದಲ್ಲಿ ಅನೇಕ ಗಂಟೆಗಳಕಾಲ ಕುಳಿತುಕೊಂಡು, ಪುನಃ ನನ್ನ ಹತ್ತಿರ ಬರುತ್ತಾ, ನನಗೆ ಅಂತಹ ಅನುಭವ ಬಂದಿದೆ ; ನನಗೆ ತಲೆನೋವು ಹೋಗಿದೆ ; ನನಗೆ ಕೃಷ್ಣನು ಕಾಣಿಸಿದ ; ನಾನು ಗತ ಜನ್ಮಗಳನ್ನು ನೋಡಿಕೊಂಡಿದ್ದೇನೆ ಎಂದು ಹೇಳುತ್ತಿದ್ದರೆ ಎಷ್ಟು ಆನಂದವೊ. ಧ್ಯಾನದಿಂದ ಬರುವ ಆನಂದಕ್ಕಿಂತಾ, ಧ್ಯಾನ ಮಾಡಿಸಿದರೆ ಬರುವ ಆನಂದ ಸಾವಿರಪಾಲು ಮಹತ್ವವಾದದ್ದು.